ಕನ್ನಡ ವ್ಯಾಕರಣ – ವಾಕ್ಯ ರಚನೆ ಮತ್ತು ವಾಕ್ಯಪ್ರಭೇದಗಳು

ವಾಕ್ಯ ರಚನೆ
ವಾಕ್ಯ ರಚನೆ

ಪದಗಳು

ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸಿದಾಗ ಪದರಚನೆಯಾಗುತ್ತದೆ. ಕೆಲವೊಮ್ಮೆ ಒಂದೇ ಅಕ್ಷರವೂ ಪದವೆಂದು ಕರೆಯಲ್ಪಡುತ್ತದೆ. ಉದಾ : ಆ ಮನೆ, ಈ ತೋಟ ಇಲ್ಲಿರುವ ಆ, ಈ ಎಂಬ ಅಕ್ಷರಗಳು ಪದಗಳೇ ಆಗಿರುತ್ತವೆ.

ಮಾತು ಪದಗಳಿಂದ ಆರಂಭವಾಗುತ್ತದೆ.

ಆದರೆ ಅದು ವಿಕಾಸಗೊಳ್ಳುವುದು ವಾಕ್ಯಗಳ ಮೂಲಕ.

ಹಾಗಾಗಿ ಪದಗಳ ಅರ್ಥಪೂರ್ಣ ಸಮೂಹವೇ ವಾಕ್ಯ.

ಹಾಗೆಂದ ಮಾತ್ರಕ್ಕೆ ಅದೊಂದು ಪದಗಳ ಗುಂಪು ಎಂದು ಹೇಳಲಾಗದು. ಆ ಪದಗಳು ಒಂದು ನಿರ್ದಿಷ್ಟ ರೀತಿಯಲ್ಲಿ (ಅರ್ಥವತ್ತಾದ) ಜೋಡಣೆಯಾದಾಗ ಮಾತ್ರ ವಾಕ್ಯ ಎನಿಸಿಕೊಳ್ಳುತ್ತದೆ.

ಈ ವಾಕ್ಯಗಳನ್ನು ಗಮನಿಸಿ

  • ಜಿಂಕೆ ಹುಲ್ಲನ್ನು ತಿಂದಿತು.
  • ಕೃಷ್ಣ ಧೇನುಕಾಸುರನನ್ನು ಕೊಂದ.


ಈ ಎರಡೂ ವಾಕ್ಯಗಳು ಸಂಪೂರ್ಣ ಅರ್ಥವನ್ನು ಕೊಡುತ್ತವೆ. ಆದರೆ ಪ್ರತಿಯೊಂದು ವಾಕ್ಯದಲ್ಲಿರುವ ಯಾವುದಾದರೂ ಒಂದು ಪದ ಇಲ್ಲವಾದಲ್ಲಿ ಆ ವಾಕ್ಯ ಪೂರ್ಣ ಅರ್ಥ ಕೊಡದೆ
ಪ್ರಶ್ನೆ ಮೂಡುವಂತೆ ಮಾಡುತ್ತದೆ.

ಉದಾ : ಮೊದಲ ವಾಕ್ಯದಲ್ಲಿರುವ
— ‘ಜಿಂಕೆ‘ ಪದ ಇಲ್ಲವಾದರೆ ಹುಲ್ಲನ್ನು ತಿಂದುದು ಯಾವುದು? ಎಂಬ ಪ್ರಶ್ನೆ ಮೂಡುತ್ತದೆ.
— ‘ಹುಲ್ಲನ್ನು’ ಪದ ಇಲ್ಲವಾದರೆ ಜಿಂಕೆ ಏನನ್ನು ತಿಂದಿತು ಎಂಬ ಪ್ರಶ್ನೆ ಮೂಡುತ್ತದೆ.
— ‘ತಿಂದಿತು’ ಪದ ಇಲ್ಲವಾದರೆ ಜಿಂಕೆ ಹುಲ್ಲನ್ನು ಏನು ಮಾಡಿತು ಎಂಬ ಪ್ರಶ್ನೆ ಮೂಡುವಂತೆ ಮಾಡುತ್ತದೆ.

ಇಲ್ಲಿ
— ‘ಜಿಂಕೆ’ ಎಂಬುದು ‘ಕರ್ತೃಪದ’;
— ‘ಹುಲ್ಲು’ ಎಂಬುದು ಕರ್ಮಪದ’;
— ‘ತಿಂದಿತು’ ಎಂಬುದು `ಕ್ರಿಯಾಪದ’.

ಅರ್ಥಪೂರ್ಣ ವಾಕ್ಯ ಎಂದರೆ ಕರ್ತೃ, ಕರ್ಮ, ಕ್ರಿಯಾಪದಗಳಿಂದ ವ್ಯವಸ್ಥಿತವಾಗಿ ಕೂಡಿರುವ ಪದಸಮೂಹ.

ಆದರೆ ಕೆಲವು ಕ್ರಿಯಾಪದಗಳು ಕರ್ಮಪದವನ್ನು ಅಪೇಕ್ಷಿಸುವುದಿಲ್ಲ.

ಅಂತಹ ಕ್ರಿಯಾಪದದ ಜತೆಗೆ ಕರ್ತೃಪದ ಇದ್ದರೆ ಅರ್ಥಪೂರ್ಣ ವಾಕ್ಯವಾಗುತ್ತದೆ.

ಕ್ರಿಯೆ ಯಾರಿಂದ ನಡೆಯಿತೋ ಅದು ‘ಕರ್ತೃ’ ಪದವಾಗುತ್ತದೆ.

ಕರ್ತೃವಿನಿಂದ ಯಾವ ಕ್ರಿಯೆ ನಡೆಯಿತೋ ಅದು ‘ಕರ್ಮಪದ’ ಎಂದು ಕರೆಸಿಕೊಳ್ಳುತ್ತದೆ.

ಹೀಗೆ ಕರ್ತೃ, ಕರ್ಮ ಹಾಗೂ ಕ್ರಿಯಾ ಪದಗಳಿಂದ ಕೂಡಿದ ಪದಸಮೂಹವನ್ನು ‘ವಾಕ್ಯ’ ಎಂದು ಹೇಳಲಾಗುತ್ತದೆ.


ವಾಕ್ಯಪ್ರಭೇದಗಳು

ವಾಕ್ಯಗಳನ್ನು ಸಾಮಾನ್ಯ, ಸಂಯೋಜಿತ ಮತ್ತು ಮಿಶ್ರವಾಕ್ಯ ಎಂಬುದಾಗಿ ಮೂರು ವಿಭಾಗ ಮಾಡಲಾಗಿದೆ.

  1. ಸಾಮಾನ್ಯವಾಕ್ಯ
  2. ಸಂಯೋಜಿತವಾಕ್ಯ
  3. ಮಿಶ್ರವಾಕ್ಯ

೧. ಸಾಮಾನ್ಯವಾಕ್ಯ :

— ಸುಬ್ರಹ್ಮಣ್ಯಮ್ ನಮ್ಮನ್ನು ವಿಶ್ವಾಸದಿಂದ ಸ್ವಾಗತಿಸಿದರು.

— ಹತ್ತನೆಯ ಶತಮಾನದವರೆಗೆ ಗಂಗರು ತಲೆಯೆತ್ತಿ ಬಾಳಿದರು.

ಈ ಎರಡೂ ವಾಕ್ಯಗಳು ಒಂದೊಂದು ಪೂರ್ಣ ಕ್ರಿಯಾಪದದೊಡಗೂಡಿ ಸ್ವತಂತ್ರ ವಾಕ್ಯಗಳಾಗಿವೆ.

ಹೀಗೆ – ಒಂದು ಪೂರ್ಣ ಕ್ರಿಯಾಪದದೊಡನೆ ಸ್ವತಂತ್ರ ವಾಕ್ಯವಾಗಿರುವ ವಾಕ್ಯಗಳೇ ಸಾಮಾನ್ಯವಾಕ್ಯಗಳು.


೨. ಸಂಯೋಜಿತವಾಕ್ಯ :

— ಪಾಂಡವರ ಯಜ್ಞ ತುರಗ ಮಣಿಪುರವನ್ನು ಪ್ರವೇಶಿಸಿತು ; ಆಗ ಬಭ್ರುವಾಹನನು ಅದನ್ನು ಕಟ್ಟಿ ಹಾಕಿದನು ; ಆದ್ದರಿಂದ ಬಭ್ರುವಾಹನನಿಗೂ ಅರ್ಜುನನಿಗೂ ಯುದ್ಧ ನಡೆಯಿತು.

ಇಲ್ಲಿ ಮೂರು ಸ್ವತಂತ್ರ ವಾಕ್ಯಗಳು. ‘ಆಗ’, ‘ಆದ್ದರಿಂದ’, ಪದಗಳ ಸಹಾಯದಿಂದ ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣಾರ್ಥದ ವಾಕ್ಯವಾಗಿದೆ.

ಹೀಗೆ – ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಎರಡು ಅಥವಾ ಹೆಚ್ಚು ಉಪವಾಕ್ಯಗಳು ಸೇರಿ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು ಸಂಯೋಜಿತ ವಾಕ್ಯ.


೩. ಮಿಶ್ರವಾಕ್ಯ :

— ಗಾಯತ್ರಿ ಗಾಯನಸ್ಪರ್ಧೆಯಲ್ಲಿ ಗೆದ್ದಳಾದರೂ ಅವಳಿಗೆ ಬಹುಮಾನ ಸ್ವೀಕರಿಸಲು ಸಾಧ್ಯವಾಗದಿದ್ದಾಗ ಆಕೆ ತುಂಬಾ ನೊಂದುಕೊಂಡಳು.

ಇಲ್ಲಿ ಆಕೆ ತುಂಬಾ ನೊಂದುಕೊಂಡಳು’ ಎಂಬ ಪ್ರಧಾನ ವಾಕ್ಯಕ್ಕೆಗಾಯತ್ರಿ ಗಾಯನ ಸ್ಪರ್ಧೆಯಲ್ಲಿ ಗೆದ್ದಳು’; ಅವಳಿಗೆ ಬಹುಮಾನ ಸ್ವೀಕರಿಸಲು ಸಾಧ್ಯವಾಗಲಿಲ್ಲ’ ಎಂಬ ಉಪವಾಕ್ಯಗಳು ಅಧೀನವಾಗಿಮಿಶ್ರವಾಕ್ಯ’ವಾಗಿದೆ.

ಹೀಗೆ – ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅಂತಹ ವಾಕ್ಯವೇ ಮಿಶ್ರವಾಕ್ಯ.


Spread the Knowledge

You may also like...

Leave a Reply

Your email address will not be published. Required fields are marked *