ಕನ್ನಡ ವ್ಯಾಕರಣ – ಲಿಂಗಗಳು
ಲಿಂಗಗಳು
ಈ ಪ್ರಪಂಚದಲ್ಲಿ ಮನುಷ್ಯ ಜಾತಿ ಹಾಗೂ ಮನುಷ್ಯ ಜಾತಿಯನ್ನು ಹೊರತು ಪಡಿಸಿದ ಜೀವ ಜಗತ್ತು ಇದೆ.
ಮನುಷ್ಯ ಜಾತಿಯಲ್ಲಿ ಗಂಡು ಹೆಣ್ಣು ಎನ್ನವ ಭೇದವಿದೆ.
ಆದರೆ ಮಾನವೇತರ ಜೀವ ಜಗತ್ತಿನಲ್ಲಿ ಅದು ಸ್ಪಷ್ಟವಾಗಿಲ್ಲ. ಹೀಗಾಗಿ ನಾವು ಬಳಸುವ ಶಬ್ದಗಳಲ್ಲಿ ಅದು ಮಾನವ ಸಂಬಂಧಿ ಆಗಿದ್ದರೆ, ಗಂಡು ಇಲ್ಲವೇ ಹೆಣ್ಣು ಎಂದು ನಿರ್ಣಯಿಸಲು ಬರುತ್ತದೆ. ಮಾನವ ಸಂಬಂಧಿ ಪದ ಆಗಿರದಿದ್ದರೆ ಅದು ಹೆಣ್ಣೂ ಅಲ್ಲ, ಗಂಡೂ ಅಲ್ಲ ಎನ್ನುವ ನಿರ್ಣಯಕ್ಕೆ ಬರುತ್ತೇವೆ.
ಭಾಷೆಯಲ್ಲಿ ಲಿಂಗ ಅತಿ ಮುಖ್ಯವಾದ ಅಂಶ. ನಾವು ಯಾವುದೇ ಪದವನ್ನು ಬಳಸಿದಾಗ ನಮ್ಮ ಮನಸ್ಸಿಗೆ ಅದು ಗಂಡಸೆಂದಾಗಲಿ, ಹೆಂಗಸೆಂದಾಗಲಿ, ಅವೆರಡೂ ಅಲ್ಲದ್ದು ಎಂದಾಗಲೀ ಅಥವಾ ಅವೆರೆಡೂ ಆಗಿರಬಹುದಾದ್ದು ಎಂದಾಗಲಿ ಅನಿಸಲೇಬೇಕು.
ಈ ವಿಚಾರಗಳನ್ನು ಆಧರಿಸಿ ಕನ್ನಡ ಭಾಷೆಯಲ್ಲಿ ಮೂರು ಲಿಂಗಗಳನ್ನು ಗುರುತಿಸುತ್ತೇವೆ.
ಈ ರೀತಿಯ ಅನಿಸಿಕೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸುತ್ತೇವೆ. ಅವು ಯಾವುವೆಂದರೆ ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕ ಲಿಂಗ .
ಪುಲ್ಲಿಂಗ :
ಯಾವ ಪದಪ್ರಯೋಗ ಮಾಡಿದಾಗ ನಮ್ಮ ಮನಸ್ಸಿಗೆ ಮನುಷ್ಯವಾಚಕದಲ್ಲಿ ಗಂಡಸು ಎಂಬ ಅರ್ಥ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.
ಉದಾ: ಶಂಕರಾಚಾರ್ಯ, ಮುದುಕ, ಸೋದರ, ಅಪ್ಪ, ಜಟ್ಟಿ, ದೊಡ್ಡವನು, ಕವಿ ಇತ್ಯಾದಿ.
ಸ್ತ್ರೀಲಿಂಗ :
ಯಾವ ಪದಪ್ರಯೋಗ ಮಾಡಿದಾಗ ನಮ್ಮ ಮನಸ್ಸಿಗೆ ಮನುಷ್ಯವಾಚಕದಲ್ಲಿ ಹೆಂಗಸು ಎಂಬ ಅರ್ಥ ಹೊಳೆಯುವುದೋ ಅದು ಸ್ತ್ರೀಲಿಂಗ ಎನಿಸುವುದು.
ಉದಾ: ನೇತ್ರಾವತಿ, ಮುದುಕಿ, ಸೋದರಿ, ಅಮ್ಮ, ಕವಯಿತ್ರಿ, ರಾಣಿ, ಒಳ್ಳೆಯವಳು, ಅಧ್ಯಕ್ಷೆ, ಸಚಿವೆ ಇತ್ಯಾದಿ.
ನಪುಂಸಕ ಲಿಂಗ :
ಯಾವ ಪದಗಳನ್ನು ಪ್ರಯೋಗಮಾಡಿದಾಗ ಸ್ಪಷ್ಟವಾಗಿ ಹೆಂಗಸು ಅಥವಾ ಗಂಡಸು, ಎಂದು ವಿಭಜಿಸಲು ಸಾಧ್ಯವಾಗುವುದಿಲ್ಲವೋ ಅವೆಲ್ಲವೂ ನಪುಂಸಕಲಿಂಗ ಎನಿಸುವವು.
ಉದಾ: ಮನೆ, ತೋಟ, ಆಕಳು, ಇಟ್ಟಿಗೆ, ಜಲ, ನದಿ, ಪುಸ್ತಕ, ಕುದುರೆ, ಬೆಂಕಿ ಇತ್ಯಾದಿ.
(ಗಮನಿಸಿ: ಗಂಡು ಹೆಣ್ಣು ಎಂದು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿರುವ ಮಗು, ಕುದುರೆ, ಹೋರಿ, ಹಸು, ಎಮ್ಮೆ ಇತ್ಯಾದಿ ಪದಗಳೆಲ್ಲವೂ ನಪುಂಸಕ ಲಿಂಗದಲ್ಲಿಯೇ ಬರುತ್ತವೆ.)