ಕನ್ನಡ ವ್ಯಾಕರಣ – ಅಲಂಕಾರ

ಅಲಂಕಾರ

ಮನುಷ್ಯ ತನ್ನ ದೇಹದ ಸೌಂರ‍್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವೈವಿಧ್ಯಪೂರ್ಣ ಬಟ್ಟೆ, ಆಭರಣ ಇತ್ಯಾದಿ ಸೌಂದರ್ಯ ಸಾಧನಗಳನ್ನು ಬಳಸುತ್ತಾನೆ. ಹೀಗೆ ಅಲಂಕಾರ ಮಾಡಿಕೊಂಡ ವ್ಯಕ್ತಿ ಇತರರಿಂದ ಆಕರ್ಷಿಸಲ್ಪಡುತ್ತಾನೆ. ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅಲಂಕಾರ ಮಾಡಿಕೊಂಡಂತೆ ಮನುಷ್ಯ ತನ್ನ ಮಾತೂ ಇತರರಿಗೆ ಇಂಪಾಗಿ ಕೇಳುವಂತೆ ಮಾಡುವ ಸಲುವಾಗಿ ಚಮತ್ಕಾರದಿಂದ ಮಾತನಾಡುತ್ತಾನೆ.

ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತನಾಡುವುದನ್ನು ಅಲಂಕಾರ ಎನ್ನುತ್ತಾರೆ. ಕವಿ-ಕಾವ್ಯ-ಸಹೃದಯ ಈ ಕುರಿತು ವಿಚಾರ ಮಾಡುವ ಶಿಸ್ತಿಗೆ ನಮ್ಮಲ್ಲಿ “ಅಲಂಕಾರಶಾಸ್ತ್ರ” ಅಥವಾ “ಕಾವ್ಯ ಮೀಮಾಂಸೆ” ಎಂಬ ಹೆಸರಿದೆ. ಇದು ಹಲವಾರು ಶತಮಾನಗಳಷ್ಟು ಹಳೆಯದು. ಈ ಬಗೆಯ ಗ್ರಂಥರಚನೆ ಮಾಡಿದವರನ್ನು “ಅಲಂಕಾರಿಕರು’, “ಅಲಂಕಾರ ಶಾಸ್ತ್ರಜ್ಞರು”, “ಕಾವ್ಯಮೀಮಾ೦ಸಕರು” ಎಂಬ ಹೆಸರುಗಳಿಂದ ಕರೆಯುವುದುಂಟು.

ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಚಮತ್ಕಾರಿಕ ಮಾತುಗಳೇ ಅಲಂಕಾರಶಾಸ್ತ್ರ.

ಕಾವ್ಯದ ಸೌಂದರ್ಯಕ್ಕೆ ಕಾರಣವಾಗುವ ಶಬ್ದ ಹಾಗೂ ಅರ್ಥಗಳ ವೈಚಿತ್ರ್ಯವನ್ನು ಇವರು ‘ಅಲಂಕಾರ’ ಎ೦ದು ಕರೆದರು. ಅಲ೦ಕಾರಗಳಲ್ಲಿ “ಶಬ್ದಾಲಂಕಾರ‘ ಹಾಗೂ “ಅರ್ಥಾಲಂಕಾರಗಳು‘ ಎಂದು ಎರಡು ವಿಧಗಳು.

1. ಶಬ್ದಾಲಂಕಾರಗಳು :ಶಬ್ದ ಅಥವಾ ಅಕ್ಷರಗಳ ಜೋಡಣೆಯ ಚಮತ್ಕಾರದಿಂದ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿದರೆ ಅದೇ ಶಬ್ದಾಲಂಕಾರ.
2. ಅರ್ಥಾಲಂಕಾರಗಳು : ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದನ್ನು ‘ಅರ್ಥಾಲಂಕಾರ’ಗ ಳೆಂದು ಕರೆಯುವರು.


ಶಬ್ದಾಲಂಕಾರ :

ಶಬ್ದಗಳ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೌಂದರ್ಯ ಹೆಚ್ಚಿದರೆ ಅದನ್ನು ಶಬ್ದಾಲಂಕಾರ ಎನ್ನುತ್ತಾರೆ.

ಈ ಶಬ್ದಾಲಂಕಾರದಲ್ಲಿ ಮೂರು ಪ್ರಧಾನ ವಿಭಾಗಗಳಿವೆ; ಅನುಪ್ರಾಸ, ಯಮಕ ಮತ್ತು ಚಿತ್ರಕವಿತ್ವ ಅನುಪ್ರಾಸವನ್ನು ವೃತ್ತ್ಯನುಪ್ರಾಸ, ಛೇಕಾನುಪ್ರಾಸವೆಂದು ವಿಂಗಡಿಸಲಾಗಿದೆ.

 1. ಅನುಪ್ರಾಸ – ಅಂದರೆ ಅಕ್ಷರಗಳ ಆವೃತ್ತಿ.
  • ವೃತ್ತ್ಯನುಪ್ರಾಸ : ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಪುನರಾವರ್ತಿತವಾಗಿದ್ದರೆ ಅದು ವೃತ್ತ್ಯನುಪ್ರಾಸ. ಉದಾ : ಬಲ್ಲವನೇ ಬಲ್ಲ ಬೆಲ್ಲದ ರುಚಿಯ. ಇಲ್ಲಿ “ಬ’ಕಾರ ಮತ್ತು “ಲ’ಕಾರಗಳು ಪುನರಾವರ್ತಿತಗೊಂಡಿವೆ.
  • ಛೇಕಾನುಪ್ರಾಸ : ಎರಡು ವ್ಯಂಜನಗಳಿಂದ ಕೂಡಿದ ಪದ ಪುನರಾವರ್ತಿತವಾದರೆ ಅದು ಛೇಕಾನುಪ್ರಾಸ. ಉದಾ : ಉಗುಳಿ ಉಗುಳಿ ರೋಗ; ಹಾಡಿ ಹಾಡಿ ರಾಗ; ನೀಡಿ ನೀಡಿ ಕೆಟ್ಟರು.
 2. ಯಮಕಾಲಂಕಾರ – ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.
  • ಉದಾ :
   ಅಲ್ಲಿಗಲ್ಲಿಗೆ ಬೆಳೆದಬೆಳೆಗಳಿ೦ ಮೆಳೆಗಳಿ೦
   ದಲ್ಲಿಗಲ್ಲಿಗೆ ವನಸ್ಥಳಗಳಿಂ ಕೊಳಗಳಿಂ
   ದಲ್ಲಿಗಲ್ಲಿಗೆ ರನ್ನದೆರೆಗಳಿಂ ಕೆರೆಗಳಿಂ ಪರಿವ ಪರಿಕಾಲ್ಗಳಿಂದೆ
   ಅಲ್ಲಿಗಲ್ಲಿಗೆ ತೋರ್ಪ ಗಿರಿಗಳಿ೦ ಕರಿಗಳಿ೦
   ದಲ್ಲಿಗಲ್ಲಿಗೆ ನೆರೆದ ಶುಕಗಳಿಂ ಪಿಕಗಳಿಂ
   ದಲ್ಲಿಗಲ್ಲಿಗೆ ಗವಾಸ್ಪದಗಳಿಂ ನದಿಗಳಿಂದಾದೇಶಮೊಪ್ಪಿರ್ದುದು.
   ವಿರೂಪಾಕ್ಷ ಪಂಡಿತ ಬರೆದ “ಚೆನ್ನಬಸವಪುರಾಣ’ದಲ್ಲಿನ ಪದ್ಯವಿದು. ಪ್ರಭುದೇವರು ಸಿದ್ಧರಾಮಯ್ಯನೊಡನೆ ಕಲ್ಯಾಣಕ್ಕೆ ಬರುತ್ತಿದ್ದಾಗ ಕಂಡ ನಾಡಸಿರಿಯನ್ನು ಇಲ್ಲಿ ಬಣ್ಣಿಸಿದೆ. ಈ ಪದ್ಯದಲ್ಲಿ ಪ್ರತಿ ಸಾಲಿನ ಆದಿಯಲ್ಲಿ ಅಲ್ಲಿಗಲ್ಲಿಗೆ ಪದ ನಿಯತವಾಗಿ ಬಂದಿರುವುದನ್ನು ಕಾಣಬಹುದು.
 1. ಚಿತ್ರ ಕವಿತ್ವ – ಅಕ್ಷರಗಳನ್ನು, ಪದಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ಇತರ ಶಬ್ದ ವೈಚಿತ್ರಕ್ಕೆ ‘ಚಿತ್ರಕವಿತ್ವ‘ ಎನ್ನುತ್ತಾರೆ. ಇದನ್ನು ಶಬ್ದವೈಖರಿ, ಅಭ್ಯಾಸಬಲ, ಬುದ್ಧಿ ಸಾಮರ್ಥ್ಯ ಇವು ಇದ್ದ ಹಾಗೆಲ್ಲಾ ಕಲ್ಪಿಸಿ ರಚಿಸಬಹುದು.

ಅನುಪ್ರಾಸವನ್ನು ವೃತ್ಯನುಪ್ರಾಸ ಮತ್ತು ಛೇಕಾನುಪ್ರಾಸ ಎಂದು ವಿಭಾಗಿಸಲಾಗಿದೆ.


ಅರ್ಥಾಲಂಕಾರ :

ಕಾವ್ಯದಲ್ಲಿ ಬಳಸಲಾದ ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಸೌಂದರ್ಯ ಹೆಚ್ಚಾದರೆ ಅದನ್ನು ಅರ್ಥಾಲಂಕಾರ ಎನ್ನುತ್ತಾರೆ.

ಇದರಲ್ಲಿ ನೂರಕ್ಕೂ ಮಿಕ್ಕಿದ ಅಲಂಕಾರಗಳಿವೆ.

ಪ್ರಮುಖವಾದುವುವಂದರೆ ಎಂಟು ವಿಧ, ಅವುಗಳೆಂದರೆ :-

 1. ಉಪಮಾಲಂಕಾರ
 2. ದೀಪಕಾಲಂಕಾರ
 3. ರೂಪಕಾಲಂಕಾರ
 4. ಉತ್ಪ್ರೇಕ್ಷಾಲಂಕಾರ
 5. ಅರ್ಥಾಂತರನ್ಯಾಸ ಅಲಂಕಾರ
 6. ಅತಿಶಯೋಕ್ತಿ ಅಲಂಕಾರ
 7. ಶ್ಲೇಷಾಲಂಕಾರ
 8. ಸ್ವಭಾವೋಕ್ತಿ ಅಲಂಕಾರ

ಇವುಗಳಲ್ಲಿ ಬರುವ ಉಪಮೇಯ ಉಪಮಾನಗಳ ಸಹಾಯದಿಂದ ಅದು ಯಾವ ಅಲಂಕಾರ ಎಂದು ನಿರ್ಧರಿಸಲಾಗುವುದು.

ಉಪಮೇಯ :

ಉಪಮೇಯವನ್ನು ವರ್ಣ್ಯ ಎಂತಲೂ ಕರೆಯುವರು.

ಆಲಂಕಾರಿಕ ವಾಕ್ಯದಲ್ಲಿ ಯಾವ ವಸ್ತುವನ್ನು ಕುರಿತು ವರ್ಣಿಸಲಾಗುತ್ತದೆಯೋ, ಅದೇ ವರ್ಣ್ಯ ಅಥವಾ ಉಪಮೇಯ.

ಉಪಮಾನ :

ಉಪಮಾನವನ್ನು ಅವರ್ಣ್ಯ ಎಂತಲೂ ಕರೆಯುವರು.

ಯಾವ ವಸ್ತುವನ್ನು ಆಧರಿಸಿ ಅಥವಾ ಮಾನವಾಗಿಟ್ಟುಕೊಂಡು ವರ್ಣಿಸಲಾಗುತ್ತದೆಯೋ ಅದೇ ಅವರ್ಣ್ಯ ಅಥವಾ ಉಪಮಾನ.


ಉಪಮಾಲಂಕಾರ :

ಉಪಮಾ ಎಂದರೆ ಹೋಲಿಕೆ ಎಂದರ್ಥ.
ಎರಡು ವಸ್ತುಗಳಲ್ಲಿ ಪರಸ್ಪರ ಇರುವ ಹೋಲಿಕೆಯನ್ನು ವರ್ಣಿಸುವುದೇ ಉಪಮಾಲಂಕಾರವೆನಿಸುತ್ತದೆ.

ಯಾವ ಅಲಂಕಾರದಲ್ಲಿ ಉಪಮೇಯ ಉಪಮಾನಗಳೊಳಗೆ ಉಪಮಾ (ಹೋಲಿಕೆ) ಇರುತ್ತದೆಯೋ ಆ ಅಲಂಕಾರವೇ ಉಪಮಾಲಂಕಾರ.

ಉದಾ : ಮನೋರಮೆಯ ಹಣೆ ಬಾಲಚಂದ್ರನಂತೆ ಆಕರ್ಷಣೀಯವಾಗಿತ್ತು.

ಇಲ್ಲಿ ಮನೋರಮೆಯ ಹಣೆ ಅರ್ಧಚಂದ್ರಾಕೃತಿಯಲ್ಲಿದೆ ಎಂದು ಹೇಳುವ ಬದಲಿಗೆ ಬಾಲಚಂದ್ರನಂತೆ ಆಕರ್ಷಣೀಯವಾಗಿತ್ತು, ಎಂದು ಹೇಳಲಾಗಿದೆ.

— ಮನೋರಮೆಯ ಹಣೆಯನ್ನು ವರ್ಣಿಸುತ್ತಿರುವುದರಿಂದ ಮನೋರಮೆಯ ಹಣೆ ಎಂಬುದು ಉಪಮೇಯವಾಯ್ತು.

— ಬಾಲಚಂದ್ರನನ್ನು ಆಧಾರವಾಗಿಟ್ಟುಕೊಂಡು ಮನೋರಮೆಯ ಹಣೆಯನ್ನು ವರ್ಣಿಸುತ್ತಿರುವುದರಿಂದ ಬಾಲಚಂದ್ರ ಎಂಬುದು ಉಪಮಾನವಾಯ್ತು.

— ಉಪಮೇಯಕ್ಕೂ ಉಪಮಾನಕ್ಕೂ ಹೋಲಿಕೆಯನ್ನು ಹೇಳುವಂತಹ ಅಂತೆ, ವೋಲ್, ವೊಲ್ ಮುಂತಾದ ಪದಗಳೇ ವಾಚಕ ಪದಗಳು. ಇಲ್ಲಿ ಅಂತೆ, ಎಂಬುದು ವಾಚಕ ಪದ.

— ಉಪಮೇಯಕ್ಕೂ ಉಪಮಾನಕ್ಕೂ ಸಮಾನವಾಗಿ ಹೊಂದಿಕೆಯಾಗುವ ಕ್ರಿಯಾಪದವೇ ಸಮಾನಧರ್ಮ. ಇಲ್ಲಿ ಆಕರ್ಷಣೀಯವಾಗಿತ್ತು ಎಂಬುದು ಸಮಾನಧರ್ಮ.

— ಉಪಮೇಯಕ್ಕೂ ಉಪಮಾನಕ್ಕೂ ಹೋಲಿಕೆಯನ್ನು ಹೇಳಿರುವುದರಿಂದ ಇದು ಉಪಮಾಲಂಕಾರ.

ಉಪಮಾಲಂಕಾರದಲ್ಲಿ ಎರಡು ವಿಧಗಳಿವೆ.

 1. ಪೂರ್ಣೋಪಮಾಲಂಕಾರ,
 2. ಲುಪ್ತೋಪಮಾಲಂಕಾರ

ಪೂರ್ಣೋಪಮಾಲಂಕಾರ :

ಯಾವ ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ವಾಚಕ ಪದ, ಸಮಾನಧರ್ಮ ಎಂಬ ನಾಲ್ಕು ಅಂಶಗಳು ಇರುತ್ತವೆಯೋ ಅದೇ ಪೂರ್ಣೋಪಮಾಲಂಕಾರ.

ಉದಾ.: ಬಿರುಗಾಳಿಗೆ ತುತ್ತಾದ ಮರಗಿಡಗಳು ಬೀಳುವಂತೆ ಭರತಕುಲದ ನೂರೈವರು ಬಾಲಕರು ಬಿದ್ದರು.

ಉಪಮೇಯ : ಭರತಕುಲದ ನೂರೈವರು ಬಾಲಕರು
ಉಪಮಾನ : ಬಿರುಗಾಳಿಗೆ ತುತ್ತಾದ ಮರಗಿಡಗಳು
ವಾಚಕಪದ : ಅಂತೆ
ಸಮಾನಧರ್ಮ : ಬೀಳುವುದು
ಅಲಂಕಾರ : ಉಪಮಾಲಂಕಾರ (ಪೂರ್ಣೋಪಮಾಲಂಕಾರ)
ಸಮನ್ವಯ : ಉಪಮೇಯವಾದ ಭರತಕುಲದ ನೂರೈವರು ಬಾಲಕರು ಬಿದ್ದಿರುವುದನ್ನು ಉಪಮಾನವಾದ ಬಿರುಗಾಳಿಗೆ ತುತ್ತಾದ ಮರಗಿಡಗಳಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರ.

ಈ ಅಲಂಕಾರದಲ್ಲಿ ಉಪಮೇಯ, ಉಪಮಾನ, ವಾಚಕಪದ, ಸಮಾನಧರ್ಮ ಎಂಬ ನಾಲ್ಕು ಅಂಶಗಳಿರುವುದರಿಂದ ಇದು ಪೂರ್ಣೋಪಮಾಲಂಕಾರವೂ ಹೌದು.

ಲುಪ್ತೋಪಮಾಲಂಕಾರ:

ಇದು ಉಪಮಾಲಂಕಾರದ ಇನ್ನೊಂದು ಪ್ರಭೇದ.

ಪೂರ್ಣೋಪಮಾಲಂಕಾರವಾಗಬೇಕಾದರೆ ಇರಬೇಕಾದ ನಾಲ್ಕು ಅಂಶಗಳಲ್ಲಿ ಯಾವುದಾದರೂ ಅಂಶ ಇಲ್ಲವಾದರೆ ಅದು ಲುಪ್ತೋಪಮಾಲಂಕಾರವಾಗುತ್ತದೆ.

ಯಾವ ಅಂಶ ಲುಪ್ತವಾಗಿದೆಯೋ ಅದೇ ಹೆಸರಿನಿಂದ ಆ ಅಲಂಕಾರವನ್ನು ಕರೆಯಲಾಗುತ್ತದೆ.

ಅಂದರೆ ಉಪಮೇಯ ಇಲ್ಲವಾದರೆ ಅದು ಉಪಮೇಯ ಲುಪ್ತೋಮಾಲಂಕಾರ.

ಹಾಗೆಯೇ

 • ಉಪಮಾನಲುಪ‍್ತೋಪಮಾಲಂಕಾರ,
 • ವಾಚಕಲುಪ‍್ತೋಪಮಾಲಂಕಾರ,
 • ಧರ್ಮಲುಪ‍್ತೋಪಮಾಲಂಕಾರ,
 • ವಾಚಕಧರ್ಮಲುಪ‍್ತೋಪಮಾಲಂಕಾರ,

ಇತ್ಯಾದಿ ಲುಪ್ತೋಪಮಾಲಂಕಾರಗಳಿವೆ.


ರೂಪಕಾಲಂಕಾರ

ಶಾಲೆಗೆ ಈ ವಿದ್ಯಾರ್ಥಿಯೊಂದು ರತ್ನ.
ಮನೆಯೇ ಧರ್ಮಾಶ್ರಮ.
ಮೊದಲ ವಾಕ್ಯದಲ್ಲಿ ವಿದ್ಯಾರ್ಥಿ ಎಂಬುದು ಉಪಮೇಯ. ರತ್ನ ಎಂಬುದು ಉಪಮಾನ.
ಎರಡನೆಯ ವಾಕ್ಯದಲ್ಲಿ ಮನೆ ಎಂಬುದು ಉಪಮೇಯ. ಧರ್ಮಾಶ್ರಮ ಎಂಬುದು ಉಪಮಾನ.
ಎರಡೂ ವಾಕ್ಯಗಳಲ್ಲಿ ಉಪಮೇಯಕ್ಕೂ ಉಪಮಾನಕ್ಕೂ ಯಾವುದೇ ಭೇದವಿಲ್ಲದಂತೆ ವರ್ಣಿಸಲಾಗಿದೆ.

ಸೂತ್ರ : ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ.

ಉದಾ.: ಸೀತೆಯ ಮುಖ ಕಮಲ ಅರಳಿತು
ಉಪಮೇಯ – ಸೀತೆಯ ಮುಖ
ಉಪಮಾನ – ಕಮಲ
ಅಲಂಕಾರ – ರೂಪಕಾಲಂಕಾರ
ಸಮನ್ವಯ – ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ. ಹಾಗಾಗಿ ಇದು ರೂಪಕಾಲಂಕಾರ.


ದೃಷ್ಟಾಂತಾಲಂಕಾರ

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ.
ಮಾತಿನ ಮಹತ್ವ ತಿಳಿದವನಿಗೆ ಜಗಳ ಮಾಡಬೇಕಾದ ಪ್ರಮೇಯವಿಲ್ಲ. ಊಟದ ಮರ್ಮ ಅರಿತವನಿಗೆ ರೋಗದ ಭಯವಿಲ್ಲ ಎಂಬ ಅರ್ಥ ಈ ಎರಡೂ ಹೇಳಿಕೆಗಳಿಂದ ತಿಳಿದುಬರುತ್ತದೆ. ಇಲ್ಲಿ ಒಂದು ಹೇಳಿಕೆ ಮತ್ತೊಂದು ಹೇಳಿಕೆಯಲ್ಲಿ ಬಿಂಬ- ಪ್ರತಿಬಿಂಬ ಭಾವಗಳಂತೆ ವ್ಯಕ್ತವಾಗಿದೆ.

ಸೂತ್ರ : ಎರಡು ಬೇರೆ ಬೇರೆ ವಾಕ್ಯಗಳು ಅರ್ಥಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರ.

ಉದಾ.:
೧. ದುರ್ಜನರು ನಿಂದಿಸುವರೆಂಬ ಭಯದಿಂದ ಸತ್ಕವಿಯಾದವನು ತನ್ನ ಕೃತಿಯನ್ನು ರಚಿಸದಿರುವನೇ?
೨. ಕತ್ತಲೆಯ ಭಯದಿಂದ ಸರ‍್ಯ ತನ್ನ ಕಿರಣವನ್ನು ಪಸರಿಸದಿರುವನೇ?

ಸಮನ್ವಯ
ದುರ್ಜನರು ನಿಂದಿಸುತ್ತಾರೆಂಬ ಹೆದರಿಕೆಯನ್ನು ಗಣನೆಗೆ ತೆಗೆದುಕೊಳ್ಳದೇ ಒಳ್ಳೆಯ ಕವಿಯಾದವನು ಕೃತಿಯನ್ನು ರಚಿಸಿಯೇ ರಚಿಸುತ್ತಾನೆಂಬ ಮಾತಿಗೂ ಕತ್ತಲೆಯ ಹೆದರಿಕೆಯಿಂದ ಸರ‍್ಯನು ಸುಮ್ಮನಿರದೆ ಕಿರಣವನ್ನು ಪಸರಿಸಿಯೇ ಪಸರಿಸುತ್ತಾನೆ ಎಂಬ ಮಾತಿಗೂ ಅರ್ಥ ಸಾದೃಶ್ಯದಿಂದ ಬಿಂಬ- ಪ್ರತಿಬಿಂಬ ಭಾವವು ಉಪಮೇಯ ಉಪಮಾನಗಳೆರಡರಲ್ಲೂ ವ್ಯಕ್ತವಾಗುವುದರಿಂದ ಇದು ದೃಷ್ಟಾಂತಾಲಂಕಾರ.


Spread the Knowledge

You may also like...

4 Responses

Leave a Reply

Your email address will not be published. Required fields are marked *