ವಿಜ್ಞಾನವೂ ವಿಜ್ಞಾನಿಗಳೂ

ಎನ್‌. ಕೆ. ನರಸಿಂಹಮೂರ್ತಿಯವರ ‘ವಿಜ್ಞಾನಿಗಳ ಕಥೆಗಳು (1938) ‘ ಪುಸ್ತಕದಿಂದ ಆರಿಸಿದ ಲೇಖನ

ವಿಜ್ಞಾನವೂ ವಿಜ್ಞಾನಿಗಳೂ

ವಿಜ್ಞಾನಮೇಕಂ ನಿಜಕರ್ಮ ಭೇದ!
ವಿಭಿನ್ನ ಚಿತ್ತೈರ್ಬಹುಧಾಭ್ಯುಪೇತಂ ॥

ವಿಜ್ಞಾನಿಗಳ ಕಥೆಗಳನ್ನು ಓದುವ ಮೊದಲು ವಿಜ್ಞಾನವೆಂದರೇನು, ಎಂಬುದನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. “ವಿಜ್ಞಾನ” ಎಂಬ ಶಬ್ದಕ್ಕೆ ವಿಶೇಷ ಜ್ಞಾನ ಅಧವಾ ಅಸಾಮಾನ್ಯವಾದ ತಿಳುವಳಿಕೆ ಎಂದು ಅರ್ಥವಾಗುವುದು. ನಮ್ಮ ನಿತ್ಯ ಕಾರ್ಯಗಳಿಗಾಗಿ ಅನೇಕ ವಿಷಯಗಳ ಜ್ಞಾನವು ಬೇಕಾಗುತ್ತದೆ. ಅವುಗಳಲ್ಲಿ ವಿಶೇಷವಾದುವನ್ನು ವಿಜ್ಞಾನವೆಂದು ಕರೆಯಬಹುದು. ಉದಾಹರಣೆಗಾಗಿ, ಬಟ್ಟೆಯೊಗೆಯಲು ನೀರು ಬೇಕೆಂದು ಯಾರಿಗೆ ಗೊತ್ತಿಲ್ಲ? ನೀರು ಕೆರೆ, ಕಟ್ಟೆ, ಬಾವಿ ಮೊದಲಾದುವುಗಳಿಂದ ದೊರೆಯುವುದೆಂದು ಎಲ್ಲರೂ ತಿಳಿದಿದ್ದಾರೆ. ಇದು ಸಾಧಾರಣವಾದ ಜ್ಞಾನ. ಆದರೆ ಬಾವಿಯಲ್ಲಿ ನೀರು ಹೇಗೆ ಬಂದಿತು? ನಲ್ಲಿಯಿಂದ ಸೀರು ಬರಲು ಕಾರಣವೇನು? ಎಂದು ಎಷ್ಟು ಮಂದಿ ಬಲ್ಲರು? ಈ ಪ್ರಶ್ನೆಗಳ ಉತ್ತರವು ವಿಜ್ಞಾನದ ಎಲ್ಲೆಗೆ ಸೇರಿದುದು.

ಸಾಮಾನ್ಯಜ್ಞಾನಕ್ಕೂ (Common Sense) ವಿಜ್ಞಾನಕ್ಕೂ (Science) ಇರುವ ವ್ಯತ್ಯಾಸವು ಅಲ್ಪವೆಂದು ಇದರಿಂದ ಗೊತ್ತಾಗುವುದಲ್ಲದೆ, ಕಾಲಾನುಕ್ರಮದಲ್ಲಿ ವಿಜ್ಞಾನವು ಸಾಮಾನ್ಯ ಜ್ಞಾನವಾಗುವುದೆಂದೂ ಸಿದ್ಧವಾಗುವುದು. ಮಗುವಿಗೆ ನೀರು ಇಂತಹ ಕಡೆಯಿ೦ದ ಬರುವುದೆಂದು ತಿಳಿಯುವುದೇ ವಿಜ್ಞಾನವಾಗಿರುವುದು; ಆದರೆ ಅದು ನಮ್ಮ ದೃಷ್ಟಿಯಿಂದ ಸಾಮಾನ್ಯಜ್ಞಾನ, ಹೀಗೆಯೇ ಒಂದು ಯುಗದಲ್ಲಿ ವಿಜ್ಞಾನದ ದರ್ಜೆಗೇರಿದ್ದ ತಿಳುವಳಿಕೆಯು ಕಾಲಾಂತರದಲ್ಲಿ ಸಾಮಾನ್ಯವಾಗಿ ಬಿಡುವುದು. ದೇಶಭೇದದಿಂದಲೂ ಇದೇ ರೀತಿಯ ವ್ಯತ್ಯಾಸವನ್ನು ಕಾಣಬಹುದು. ವಿದ್ಯುದ್ಧೀಪಮಲೆಗಳನ್ನು ಕಂಡರಿಯದವನು ಅಕಸ್ಮಾತ್ತಾಗಿ ನವರಾತ್ರಿ ಕಾಲದಲ್ಲಿ ಮೈಸೂರಿಗೆ ಬಂದರೆ, ನಕ್ಷತ್ರಗಳೆಲ್ಲ ಮಹಾರಾಜರವರ ದರ್ಬಾರಿಗೆ ಬಂದಿರುವುವೋ ಎಂಬ ಭ್ರಾಂತಿ ಬಂದು, ಆಮೇಲೆ ಎಣ್ಣೆ ಬತ್ತಿಗಳಿಲ್ಲದ ದೀಪಗಳೂ ಇರಬಹುದೆಂಬ ವಿಜ್ಞಾನವು ಹುಟ್ಟುವುದು. ಆದರೆ ಹುಟ್ಟಿದಂದಿನಿಂದ ಮೈಸೂರಿನಲ್ಲಿದ್ದವನಿಗೆ ಆದು ವಿಶೇಷ ಜ್ಞಾನವಾಗಲಾರದು.

ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ ಹೊಸ ವಿಷಯಗಳನ್ನು ಕಂಡುಹಿಡಿದವರ ಮಹತ್ವವು ಗೊತ್ತಾಗುವುದು. ನಿತ್ಯವೂ ವಿದ್ಯುದ್ಧೀಪಗಳನ್ನು ನೋಡುತ್ತಿರುವವನಿಗೆ ಇನ್ನೂರು ವರ್ಷಗಳ ಹಿಂದೆ ಅಂತಹ ದೀಪಗಳಿರಲ್ಲಲ್ಲವೆಂದು ಕೇಳಿದರೆ ಆಶ್ಚರ್ಯವಾಗಬಹುದು. ಅವನು ” ಅದೇನ, ಆಗಿನ ಜನರು ಅಷ್ಟು ಹೆಡ್ಡರೇ? ಅನಾಗರಿಕರೇ? ಇಂತಹ ದೀಪಗಳೂ ಇಲ್ಲದ ಅವರದು ಎಂತಹ ಬಾಳು!” ಎಂದರೂ ಆಶ್ಚರ್ಯವಲ್ಲ. ಆದರೆ ಎಂದೂ ಆ ತರಹದ ದೀಪಗಳನ್ನು ಕಾಣದವನು ಈಗ ನೋಡಿ, ಇಂತಹ (ದೀಪಗಳು ಸುಮಾರು ಐವತ್ತು ವರ್ಷಗಳಿಂದಲೂ ಇವೆಯೆಂದು ಕೇಳಿದರೆ ಆಶ್ಚರ್ಯಪಟ್ಟು ” ಅಬ್ಬಬ್ಬಾ, ಇಂತಹ ದೀಪಗಳನ್ನು ಸೂರ್ಯನ ಮರಿಗಳಂತಿರುವ ದೀಪಗಳನ್ನು ಮಾಡಿದವನು ಎಂತಹ ಬುದ್ದಿವಂತನಾಗಿರಬೇಕು! ಇಷ್ಟು ದಿನಗಳಾದರೂ ನಾನು ಇವನ್ನು ನೋಡಿರಲಿಲ್ಲ. ಮನುಷ್ಯನು ಇನ್ನೂ ಏನೇನು ಮಾಡಿಬಿಡುವನೋ!” ಎಂದು ಹೇಳಬಹುದು. ಆದುದರಿಂದ ಪ್ರತಿಯೊಂದು ವಿಷಯಕ್ಕೂ ಕಾಲದೇಶಾನು ಗುಣವಾದ ಮಹತ್ವವುಂಟು. ಹಾಗೆಯೇ ವಿಜ್ಞಾನ ಶಬ್ದಕ್ಕೆ ಕಾಲಾನುಗುಣವಾದ ವ್ಯಾಖ್ಯಾನವೂ ಉಂಟು,

ಮೊದಮೊದಲು ಜೀವನಯಾತ್ರೆಯನ್ನು ಜರುಗಿಸಲು ಅಗತ್ಯವಾದ ತಿಳುವಳಿಕೆಯು ಸಾಮಾನ್ಯ ಜ್ಞಾನವೆಂದೂ, ನಮ್ಮನ್ನೂ ನಾವಿರುವ ಪ್ರಪಂಚವನ್ನೂ ಸೃಷ್ಟಿಸಿದ ಪರಮಾತ್ಮನ ವಿಷಯದ ತಿಳುವಳಿಕೆಯು ವಿಜ್ಞಾನವೆಂದೂ ಕರೆಯಲ್ಪಡುತ್ತಿದ್ದುವು. “ವಿಜ್ಞಾನವೇ ಬ್ರಹ್ಮ” ಮುಂತಾದ ಉಪನಿಷದ್ವಾಕ್ಯಗಳಲ್ಲಿ ವಿಜ್ಞಾನ ಶಬ್ದದಿಂದ ಪರಬ್ರಹ್ಮ ವಿಷಯಕವಾದ ತತ್ವಜ್ಞಾನವೇ ನೀರೂಪಿತವಾಗಿದ್ದಿತು. ಪರಬ್ರಹ್ಮನ ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಲು ಆವನ ಕಾರ್ಯಗಳು ಸಹಕಾರಿಯಾದುದರಿಂದ ಸೃಷ್ಟಿಯಲ್ಲಿನ ಇತರ ಅದ್ಭುತ ವಿಷಯಗಳ ಜ್ಞಾನವೂ ಕ್ರಮವಾಗಿ ವಿಜ್ಞಾನದ ಎಲ್ಲೆಗೊಳಗಾಯಿತು. ಆಗ ಈ ಎರಡರ ವ್ಯತ್ಯಾಸವನ್ನು ವ್ಯಕ್ತಪಡಿಸಲು ಎರಡನೆಯದನ್ನು ಪ್ರಕೃತಿ ವಿಜ್ಞಾನ (Natural Philosophy) ವೆಂದು ಕರೆದರು. ಮೊನ್ನೆ ಮೊನ್ನೆಯವರಿಗೆ ವಿಜ್ಞಾನಿಗಳನ್ನು ಪ್ರಕೃತಿ ತತ್ವಜ್ಞ ರೆಂದೇ ಕರೆಯುವ ರೂಢಿಯಿದ್ದಿತು.

ಈಗ ವಿಜ್ಞಾನವು ಬಹುಮುಖವಾಗಿ ಬೆಳೆದು ಹೋಗಿದೆ. ಮನುಷ್ಯನಿಗೆ ಅನೆಕ ವಿಧದಲ್ಲಿ ತಿಳುವಳಿಕೆ ಹೆಚ್ಚಿದೆ. ಹೀಗೆ ಸರ್ವತೋಮುಖವಾಗಿ ಬೆಳೆದಿರುವ ವಿಜ್ಞಾನವನ್ನು ಕೆಲವು ಸ್ಪಷ್ಟವಾದ ರಾಶಿಗಳಾಗಿ ವಿಭಾಗಿಸಿದ್ದಾರೆ. ಗಣಿತವು ಎಣಿಕೆಯಿಂದ ಆರಂಭವಾಗಿ, ಅನೇಕ ವಿಧ ಹೊಸ ಸಂಖ್ಯೆ ಗಳಸ್ಟೂ ಅವುಗಳ ಪರಿಕರ್ಮಗಳನ್ನೂ (Operations) ಕುರಿತು ಚರ್ಚಿಸುವುದು. ಭೌತಶಾಸ್ತ್ರವು (Physics) ಪ್ರಕೃತಿಯಲ್ಲಿನ ಶಕ್ತಿ ಗಳ ಪ್ರಭಾವದಿಂದ ಹುಟ್ಟುವ ಗತಿವಿಶೇಷಗಳು, ಶಬ್ದ, ಬೆಳಕೇ ಮುಂತಾದುವು ಪ್ರಸರಿಸುವ ಕ್ರಮಾದಿಗಳನ್ನು ತಿಳಿಸುವುದು. ರಸಾಯನಶಾಸ್ತ್ರವು (Chemisty) ಪಾರ್ಧಿವ ಪದಾರ್ಥಗಳ ಮೂಲರೂಪ, ಪರಸ್ಪರ ಸಂಭಂದಗಳನ್ನು ಕುರಿತು ವಿಚಾರಮಾಡುವುದು.ಸಸ್ಯಗಳ ವರ್ಗಿಕರಣ (Classification), ಅವು ಆಹಾರವನ್ನು ಸ್ವೀಕರಿಸುವ ಕ್ರಮ, ವಂಶಾಭಿವೃದ್ಧಿ ಮಾಡಿಕೊಳ್ಳುವ ಬಗೆ ಮುಂತಾದುವನ್ನು ವನಸ್ಪತಿಶಾಸ್ತ್ರ (Botany) ದಿಂದ ಕಲಿಯಬಹುದು. ಪ್ರಾಣಿಶಾಸ್ತ್ರವು (Zoology) ಒಗೆ ಬಗೆಯ ಪ್ರಾಣಿಗಳ ರೀತಿ ನೀತಿಗಳನ್ನು ಪರೀಕ್ಷಿಸುವುದು. ಭೂಗರ್ಭಶಾಸ್ತ್ರ (Geology)ದಿಂದ ಆನೇಕ ವಿಧ ಶಿಲೆಗಳ ಉತ್ಪತ್ತಿಕ್ರಮ, ಧಾತುಗಳನ್ನೊಳಗೊಂಡ ಶಿಲೆಗಳ ಸ್ವರೂಪ ಮೊದಲಾದುವು ಗೊತ್ತಾಗುವುದು. ಗ್ರಹ ಉಪಗ್ರಹಾದಿ ಗಗನಚಾರಿಗಳ ವಿಷಯವನ್ನು ಖಗೋಳಶಾಸ್ತ್ರವು (Astronomy) ತಿಳಿಸುವುದು.

ವಿಜ್ಞಾನವನ್ನು ಆಧಿದೈವಿಕ, ಆಧ್ಯಾತ್ಮಕ, ಆಧಿಭೌತಿಕಗಳೆಂಬ ವಿಭಾಗಗಳಲ್ಲಿ ವಿಂಗಡಿಸಿದರೆ ಈಗ ಹೇಳಿರುವುವು ಕಡೆಯ ವರ್ಗಕ್ಕೆ ಸೇರುವುವು. ಯೋಗಶಾಸ್ತ್ರ, ಮನಃಶಾಸ್ತ್ರಗಳಿಂದ ಆತ್ಮೋನ್ನತಿಯನ್ನು ಸಾಧಿಸಿಕೊಳ್ಳಲು ಅನುಕೂಲವಾಗುವುದರಿಂದ. ಅವನ್ನು ಆಧ್ಯಾತ್ಮಿಕ ವಿಜ್ಞಾನದಲ್ಲಿ ಸೇರಿಸಬಹುದು. ಆಧಿಭೌತಿಕ, ಆಧ್ಯಾತ್ಮಿಕ ವಿಚಾರಗಳಿಂದ ಪಕ್ವವಾದ ಮನಸ್ಸನ್ನು ಪರಮಾತ್ಮನ ವಿಚಾರಕ್ಕೆ ತಿರುಗಿಸಿ ಯತಾರ್ಥ ಜ್ಞಾನವನ್ನು ಪಡೆಯಲು ಯತ್ನಿಸಿದರೆ, ಅಂತಹ ವಿಜ್ಞಾನವನ್ನು ಆಧಿದೈವಿಕವೆಂದು ಹೇಳಬಹುದು. ಪ್ರಕೃತದಲ್ಲಿ, ನಾವು ವಿಚಾರಮಾಡುವುದೆಲ್ಲ ಆಧಿಭೌತಿಕ ವಿಜ್ಞಾನವೇ ಆಗಿರುವುದು.

ವಿಜ್ಞಾನವನ್ನು ಪಡೆದವರು ವಿಜ್ಞಾನಿಗಳು. ಆದರೆ ಎಲ್ಲ ವಿಷಯಗಳನ್ನೂ ಅರಿತ ಸರ್ವಜ್ಞರು ಯಾವ ಕಾಲದಲ್ಲಿಯೂ ಇರಲು ಸಾಧ್ಯವಿಲ್ಲ. ಆದುದರಿಂದ ವಿಜ್ಞಾನಿಗಳೂ ಕೂಡ ಪೂರ್ಣ ಜ್ಞಾನಿಗಳಲ್ಲ. ಯಾರು ವಿಜ್ಞಾನವವೆನಿಸಿಕೊಳ್ಳಬಹುದಾದ ತಿಳುವಳಿಕೆಯ ಸ್ವಲ್ಪ ಅಥವಾ ಹೆಚ್ಚಾದ ಭಾಗವನ್ನು ಪಡೆದಿರುವರೋ ಅವರನ್ನೇ ವಿಜ್ಞಾನಿಗಳೆಂದು ಕರೆಯುವ ವಾಡಿಕೆಯಿದೆ. ಈ ಗ್ರಂಥದಲ್ಲಿ ಉಕ್ತರಾಗಿರುವ ವಿಜ್ಞಾನಿಗಳೆಲ್ಲ ಆಂತಹವರೇ ಆಗಿರುವರು; ಮತ್ತು ಅವರು ತಮ್ಮ ಕಾಲದಲ್ಲಿ ಪ್ರಚುರವಾಗಿದ್ದ ವಿಜ್ಞಾನವನ್ನು ವೃದ್ಧಿಗೊಳಿಸಲು ಯಾವ ರೀತಿ ಪ್ರಯತ್ನಪಟ್ಟರು, ಎಷ್ಟರ ಮಟ್ಟಿಗೆ ಸಫಲರಾದರು ಎಂಬುದನ್ನೇ ಅವರ ಕಥೆಗಳು ತಿಳಿಸುವುವು.

ವಿಜ್ಞಾನಿಗಳಿಗೆ ಕೆಲಸಮಾಡಲು ತಕ್ಕ ಅನುಕೂಲಗಳೂ ಯಂತ್ರೋಪಕರಣಗಳೂ ಇರಬೇಕು. ಅನೇಕ ವಿಜ್ಞಾನಗಳು ಪ್ರಯೋಗಾಧೀನವಾದುವು. ಆದುದರಿಂದ ಪ್ರಯೋಗಶಾಲೆಗಳೂ (Laboratories) ಯಂತ್ರೋಪಕರಣಗಳೂ ವೃದ್ಧಿಯಾದಂತೆಲ್ಲ ವಿಜ್ಞಾನವು ಮುಂದುವರಿಯುವುದು. ಆಯಾ ಶಾಸ್ತ್ರಾನುಗುಣವಾದ ಯಂತ್ರೊಪಕರಣಗಳು ಬೇಕಲ್ಲದೆ, ವಿಜ್ಞಾನವು ಬೆಳದಂತೆ ಮತ್ತು ಮಾನವನ ಬುದ್ಧಿಶಕ್ತಿಯ ವಿಕಾಸಹೊಂದಿದಂತೆ, ಯಂತ್ರಗಳು ಹೆಚ್ಚು ಸೂಕ್ಷ್ಮವೂ ಪರಿಷ್ಕೃತವೂ ಆಗಬೇಕಾಗುತ್ತವೆ. ಹೀಗೆ ಯಂತ್ರಗಳನ್ನು ಕಾಲ ಕಾಲಕ್ಕೆ ಸುಧಾರಿಸಲು ತಕ್ಕ ದ್ರವ್ಯಾನುಕೂಲವೂ ಇರಬೇಕಲ್ಲವೇ? ವಿಜ್ಞಾನದ ಬಾಲ್ಯಾವಸ್ಥೆಯಲ್ಲಿ ರಾಜರುಗಳ ಆಶ್ರಯವೇನೋ ದೊರಕಿದ್ದಿತು. ಅದಕೆ ಈಗೆ ಅಷ್ಟೇ ಸಾಲದು. ಇಂದಿನ ಯಂತ್ರೋಪಕರಣಗಳು, ಅವುಗಳನ್ನಿಟ್ಟು ಕೆಲಸಮಾಡಲು ಅನುಕೂಲವಾಗಿರುವ ಪ್ರಯೋಗಶಾಲೆಗಳು ಮತ್ತು ವೇಧಶಾಲೆಗಳು (Observatories) ಇವುಗಳಿಗಾಗಿ ತಗಲುವ ವೆಚ್ಚವನ್ನು ಯಾವ ರಾಜನೂ ಕೊಡಲಾರನು. ಆದುದರಿಂದ ಕೆಲವು ರಾಜಕೃಪಾಪೋಷಿತಗಳಾಗಿಯೂ, ಕಲವು ಉತ್ಸಾಹಿಗಳಾದ ವಿಜ್ಞಾನಿಗಳ ಸಂಪಾದನೆಯಿಂದ ಸ್ಥಾಪಿತವಾದವುಗಳಾಗಿಯೂ, ಇನ್ನು ಕೆಲವು ಸಾರ್ವಜನಿಕ ಸಂಸ್ಥೆಗಳಾಗಿಯೂ ಇರುವುವು.

ಎಂತಹ ಉತ್ತಮ ಸಯೋಗಶಾಲೆ, ಉಪಕರಣಗಳಿದ್ದರೂ ಸತ್ವಶಾಲಿಯಾದ ವಿಜ್ಞಾನಿಯಿಲ್ಲದಿದ್ದ ರೆ ವಿಜ್ಞಾನವೇನು ಬೆಳದೀತು? “ಆದುದರಿಂದಲೇ ಯಂತ್ರಗಳಲ್ಲೆಲ್ಲ “ಧೀ ಯಂತ್ರ” ವೇ ಶ್ರೇಷ್ಠವಾದುದು ಎಂದು ನಮ್ಮ ದೇಶದ ಗಣಿತಾಚಾರ್ಯರಾದ ಭಾಸ್ಕರರು ಹೇಳಿರುವುದು. ಪ್ರತಿಭಾ ಸಂಪನ್ನತೆಯು ಅವಶ್ಯಕವಾದ ಗುಣವಾಗಿದ್ದರೂ, ವಿಜ್ಞಾನಿಗೆ ಅಷ್ಟೇ ಸಾಲದು. ಕಲಾಕುಶಲನಿಗೂ ವಿಜ್ಞಾನಿಗೂ ಇರುವ ವ್ಯತ್ಯಾಸವಾದರೂ ಈ ಇತರ ಗುಣಗಳ ಹಂಚಿಕೆಯಲ್ಲಿ ಎಂದು ಹೇಳಬಹುದು.

ವಿಜ್ಞಾನಿಗೆ ಮುಖ್ಯವಾಗಿ ಜ್ಞಾನತೃಷ್ಣೆಯಿರಬೇಕು. ತಿಳಿದ ವಿಷಯಗಳಿಂದಲೇ ತೃಪ್ತಿಪಟ್ಟುಕೊಳ್ಳುವುದು ವಿಜ್ಞಾನಿಯ ಲಕ್ಷಣವಲ್ಲ. ಸೃಷ್ಟಿ ವೈಚಿತ್ರ್ಯಗಳನ್ನು ವಿಮರ್ಶಿಸಿ ಅರ್ಥಮಾಡಿಕೊಳ್ಳಲು, ಅವನು ಆತುರ ಪಡುತ್ತಿರುವನು. ಅವನ ಕುತೂಹಲವು ಅಸಾಧಾರಣವಾದುದು. ಅವನದು ಉಚ್ಚಧ್ಯೇಯಗಳಿಗೆ ಹೊಂದಿಕೆಯಾದ ಸರಳಜೀವನ. ಸಾಮಾನ್ಯ ಜನರು ದ್ರವ್ಯಾರ್ಜನೆ, ಭೋಗಗಳಿಗೆ ಕಳೆಯುವ ಕಾಲವನ್ನು ಅವನು ಜ್ಞಾನಾರ್ಜನೆ, ಜ್ಞಾನ ಪ್ರಚಾರಗಳಿಗಾಗಿ ಉಪಯೋಗಿಸುವನು. ಅವನಿಗೆ ಅದರಿಂದಲೇ ಸುಖ– ಅದರಿಂದಲೇ ಜೀವನಕ್ಕೊಂದು ಮಹತ್ವ.

ಯಧಾರ್ಧ ಜ್ಞಾನವೇ ಉಪಯುಕ್ತವಾದುದು ; ಅಜ್ಞಾನ, ಅನ್ಯಜ್ಞಾನಗಳಿಂದ ತೊಂದರೆಗಳು ಸಂಭವಿಸಬಹುದು. ಆದುದರಿಂದ ವಿಜ್ಞಾನವನ್ನು ಪಡೆಯಬೇಕೆಂದಿರುವವನಿಗೆ ಆಗ್ರಹವು ಸರ್ವಥಾ ಸಲ್ಲದು. ತಾನು ತಿಳಿದಿರುವ ವಿಷಯವು ಪ್ರಯೋಗಾದಿಗಳಿಂದ ಪ್ರತ್ಯಕ್ಷ ಸಿದ್ಧವಾಗಿದ್ದರೂ ಅದು ದೇಶ ಕಾಲಾನುಗುಣವಾದುದು ಎಂದು ಮಾತ್ರ ತಿಳಿಯಬೇಕು. ದೇಶಾಂತರದಲ್ಲಿ ಅಥವಾ ಕಾಲಾಂತರದಲ್ಲಿ ವಿಪರೀತ ದೃಷ್ಟಾಂತಗಳು ಒದಗಿ ತನ ಮತಕ್ಕೆ ಹಾನಿಬಂದರೂ ಅದಕ್ಕಾಗಿ ವಿಜ್ಞಾನಿಯು ವ್ಯಥೆ ಪಡದೆ ಯುಕ್ತಿ ಸಮ್ಮತವಾದ ಸಿದ್ಧಾಂತವನ್ನು ಸ್ವೀಕರಿಸಬೇಕು. ತನ್ನ ಅಭಿಪ್ರಾಯಗಳೇ ಸರ್ವಧಾ ಸತ್ಯವೆಂದು ಹಟತೊಟ್ಟು ಸಾಧಿಸಲಾಗದು. ವಿಪರೀತ ದೃಷ್ಟಾಂತಗಳು ಬರುವವರೆಗೆ ತನ್ನ ತಾತ್ಕಾಲಿಕ ಸಿದ್ಧಾಂತಗಳನ್ನು ವಾದ (Theory)ಗಳೆಂದು ಕರೆದು ಅವುಗಳಿಂದ ವಿಜ್ಞಾನಾಭಿವೃದ್ಧಿ ಮಾಡಬಹುದು. ಉದಾಹರಣೆಗಾಗಿ, ಸಾರ್ವತ್ರಿಕಾಕರ್ಷಣ ನಿಯಮದಿಂದಲೇ (Law of Universal Gravitation) ಗ್ರಹೋಪಗ್ರಹಗಳ ಗತಿಗಳನ್ನು ಕಂಡುಹಿಡಿಯಬಹುದೆಂದು ನ್ಯೂಟನ್ನನು ಸಾಧಿಸಿದಾಗ ಮೊದಲು ಅನೇಕರು ಆದನ್ನು ಒಪ್ಪಲಿಲ್ಲ. ಕ್ರಮವಾಗಿ ಅವರವರ ಅನುಭವಕ್ಕೆ ಒಂದಂತೆಲ್ಲ ಅವರು ಅದನ್ನು ಒಪ್ಪಿದರು. ಈ ಶತಮಾನದ ಆದಿಭಾಗದವರೆಗೆ ಈ ವಿಶ್ವವೆಲ್ಲ ಆ ನಿಯಮಕ್ಕೊಳಪಟ್ಟು ಯಂತ್ರದಂತೆ ಚಲಿಸುತ್ತಿದೆ ಎಂದು ಸರ್ವಸಮ್ಮತವಾಗಿದ್ದಿತು. ಆದರೆ ಈಗ ಅದರಲ್ಲಿ ಸ್ವಲ್ಪ ಪರಿವರ್ತನೆಯಾಗಬೇಕೆಂದು ಐನ್‌ಸ್ಟೈನ್‌ ಎಂಬ ಆಧುನಿಕ ವಿಜ್ಞಾನಿಯು ಎಲ್ಲರೂ ಒಪ್ಪುವ ರೀತಿಯಲ್ಲಿ ಸಮರ್ಧಿಸಿರುವನು. ಕೆಲವು ವಿಷಯಗಳಲ್ಲಿ ವಿಶ್ವದ ಅನಿಯತತ್ವ (ಅನಿರ್ದಿಷ್ಟತೆ) (Indeterminacy)ವನ್ನೂ ಒಪ್ಪಿಕೊಳ್ಳಬೇಕೆಂದು ಈಗಿನ ಮತ. ಆದರೆ ಇದೇ ಸಾರ್ವಕಾಲಿಕ ಸಿದ್ಧಾಂತವಾಗುವುದೆಂದು ಹೇಗೆ ಹೇಳುವುದು? ಆದುದರಿಂದ ವಿಜ್ಞಾನಿಯು ಆತುರಗಾರನೂ ಆಗ್ರಹಿಯೂ ಆಗದೆ ಸತ್ಯಕಾಮನಾಗಿರಬೇಕು.

ಸತ್ಯಕಾಮನಾದವನಿಗೆ ಲೋಕದ ಭಯವೆಲ್ಲಿಯದು? ಪ್ರಿಯವಾದ ಸತ್ಯವನ್ನೇ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು, ಎಂಬ ನೀತಿಯು ವಿಜ್ಞಾನಿಗೆ ಅನ್ವಯಿಸುವುದಿಲ್ಲ. ತಾನು ತಿಳಿದುದನ್ನು ಲೋಕಕ್ಕೆ ಘಂಟಾಘೋಷವಾಗಿ ತಿಳಿಸಿ, ಅದರಿಂದ ತನಗಾಗಬಹುದಾದ ಅಪಾಯಗಳಿಗೆ ಎದೆಗೆಡದಿರುವುದು ವಿಜ್ಞಾನಿಯ ಲಕ್ಷ್ಮಣ. ಸಾಮಾನ್ಯವಾಗಿ ವಿಜ್ಞಾನಿಯು ದೇಶಕಾಲಗಳ ದೃಷ್ಟಿಯಿಂದ ಅಪೂರ್ವ ವಸ್ಟುವಾಗಿರುವನು. ಬಹುಕಾಲದ ಹಿಂದೆ ಗೆಲಿಲಿಯೋ ಮುಂತಾದ ದೊಡ್ಡ ವಿಜ್ಞಾನಿಗಳಿಗೆ ಮಾತ್ರ ತಿಳಿದಿದ್ದ ವಿಷಯಗಳು ಈಗ ಅನೇಕರಿಗೆ ಗೊತ್ತಿರುವುವು. ದೂರದೃಷ್ಟಿಯಿಲ್ಲದ ಸಾಮಾನ್ಯ ಜನತೆಯು ವಿಜ್ಞಾನಿಯನ್ನು ಆಗ ನಂಬದೆ ಹೋಗಬಹುದು, ಹಾಸ್ಯಮಾಡಬಹುದು, ಸಮಾಜ ಬಹಿಷ್ಕೃತನನ್ನಾಗಿ ಮಾಡಬಹುದು, ಕೊನೆಗೆ ರೋಷಾವೇಶದ ಸಂದರ್ಭಗಳಲ್ಲಿ ಪ್ರಾಣಾಪಾಯಗಳಿಗೂ ಗುರಿ ಮಾಡಒಹುದು. ಆದರೆ ವಿಜ್ಞಾನಿಯು ಮಾತ್ರ ಐಹಿಕ ಸುಖದುಃಖಗಳನ್ನು ಲೆಕ್ಕಿಸದೆ ಧ್ಯೇಯವನ್ನು ಸಾಧಿಸುತ್ತಾ ಹೋಗುವನು.

ಪ್ರತ್ಯಕ್ಷವಾದುದನ್ನೂ ಪರೀಕ್ಷಿಸಬೇಕೆಂಬುದು ವಿಜ್ಞಾನಿಯ ಪ್ರಿಯ ನಿಯಮ, ಅನೇಕ ವಿಷಯಗಳು ಕಣ್ಣಿಗೆ ಕಾಣುವುದಕ್ಕೂ, ವಾಸ್ತವವಾಗಿರುವುದಕ್ಕೂ ವ್ಯತ್ಯಾಸವನ್ನು ಹೊಂದಿರುವುವು. ಆದುದರಿಂದ ನಿಜವಾದ ವಿಜ್ಞಾನಿಯು ಸ್ವಲ್ಪಮಟ್ಟಿಗೆ ಸಂಶಯಾತ್ಮನಾಗಿದ್ದು ಎಂತಹ ಆಪ್ತವಾಕ್ಯಗಳನ್ನೂ ಸ್ವಾನುಭವವೆಂಬ ಒರೆಗಲ್ಲಿಗೆ ಹಚ್ಚಿ ಸತ್ಯವನ್ನು ಕಂಡುಹಿಡಿಯಬೇಕು. ಯಾವುದನ್ನೂ ನಂಬಲಾಗದ ಸ್ಥಿತಿಯೂ ವಿಜ್ಞಾನಿಗೆ ಬರಬಹುದು. ಆಗ ಅವನು ಸೂಕ್ಷ್ಮವಾಗಿ ವಿಷಯವನ್ನು ಪರಿಶೀಲಿಸಿ ಸತ್ಯವಾವುದೆಂಬುದನ್ನು ಅರಿತುಕೊಳ್ಳಬಹುದು. ಹಾಗಲ್ಲದೆ ಸಂಶಯವೇ ಹುಟ್ಟದೆ ತಾನು ಭಾವಿಸಿದುದೇ ಸರಿ, ಎಂದು ದೃಢಮನಸ್ಕನಾದರೆ ವಿಜ್ಞಾನಾಭಿವೃದ್ಧಿಯನ್ನು ಮಾಡಿಕೊಳ್ಳ ಲು ಅವಕಾಶವೆ ಇರುವುದಿಲ್ಲ.

ಇಲ್ಲಿ ಒಂದು ಉದಾಹರಣೆಯನ್ನು ಕೊಡಬಹುದು. ಕೆಲವು ದಿನಗಳ ಹಿಂದೆ ಒಬ್ಬ ಜ್ಯೋತಿಷ ವಿದ್ವಾಂಸರು ದೂರದರ್ಶಕದಲ್ಲಿ ಶನಿಗ್ರಹದ ಸುತ್ತಲೂ ಇರುವ ವಲಯ (Rings of Saturn) ವನ್ನು ನೋಡಿದರು. ತಾವು ತಮ್ಮ ಶಾಸ್ತ್ರಗಳಿಂದ ಆ ಬಗೆಯ ಅರಿವನ್ನು ಪಡೆದಿರಲಿಲ್ಲವಾದುದರಿಂದ ಅವರಿಗೆ ಅದನ್ನು ಕಂಡು ಆಶ್ಚರ್ಯವಾಯಿತು. ಆದರೂ ತಮ್ಮ ದೃಢಜ್ಞಾನವನ್ನು ಆವರು ಒದಲಾಯಿಸಲಿಲ್ಲ. ಯಂತ್ರವನ್ನು ತೋರಿಸಿದವರು “ನೋಡಿದಿರೋ, ಆಧುನಿಕ ಯಂತ್ರಗಳ ಮಹತ್ವವನ್ನು! ಇನ್ನು ಸಾವಿರ ವರ್ಷಗಳು ಕಳೆದಿದ್ದರೂ ಬರೇ ಕಣ್ಣಿನಿಂದ ಕಾಣಲಾಗದಿದ್ದ ಶನಿವಲಯಗಳನ್ನು ಈ ಯಂತ್ರದಿಂದ ಮುನ್ನೂರಿಪ್ಪತ್ತೈದು ವರ್ಷಗಳ ಕೆಳಗೆ ಗೆಲಿಲಿಯೋ ಎಂಬ ವಿಜ್ಞಾನಿಯು ಮೊದಲು ನೋಡಿದನು” ಎಂದು ಹೇಳಿದರು. ಅದರೆ ಆ ವಿದ್ವಾಂಸರು ಥಟ್ಟನೆ “ಅದಕ್ಕೇ ಇದನ್ನು ನಮ್ಮವರು ಉಪಯೋಗಿಸಲಿಲ್ಲ. ಯಧಾರ್ಧವಾಗಿ ಕಾಣುವುದನ್ನು ಬಿಟ್ಟು ಮತ್ತೇನನ್ನೋ ತೋರಿಸುವ ಈ ಯಂತ್ರದಿಂದ ನಮಗೇನಾಗಬೇಕು? ವಸ್ತುತಃ ವಲಯಗಳಿಲ್ಲದಿದ್ದರೂ ನಾನೀಗ ನೋಡಿದುದು ಯಂತ್ರದೋಷದಿಂದಲೇ?” ಎಂದು ಹೇಳಿ ಮುಂದೆ ವಾದಕ್ಕೆ ನಿಲ್ಲದೆ ಹೊರಟುಹೋದರು.

ಆ ವಿದ್ವಾಂಸರ ಅಭಿಪ್ರಾಯವು ಸರ್ವಥಾ ತಪ್ಪಲ್ಲ. ಯಂತ್ರದೋಷವಿರಬಾರದೇಕೆ, ಎಂಬ ಪ್ರಶ್ನೆಯು ಯುಕ್ತಿ ಸಮ್ಮತವಾದುದೇ. ಅದರೆ ತಾವು ನೋಡಿದುದಕ್ಕೆ ಯಂತ್ರದೋಷವೇ ಕಾರಣವೋ? ಹಾಗಿದ್ದರೆ ಮತ್ತೊಂದು ವಸ್ತುವನ್ನು ನೋಡಿದರೂ ಅದೇ ದೋಷವೇ ಪುನರಾವೃತ್ತವಾಗುವುದೋ? ಎಂದು ವಿಚಾರಮಾಡದೆ ಹೋದುದರಿಂದ ಅವರಿಗೆ ವೈಜ್ಞಾನಿಕ ಮನೋಭಾವವಿಲ್ಲವೆನ್ನಬಹುದು. ಹಿಂದೆ ಗೆಲಿಲಿಯೋ ಗ್ರಹಾದಿಗಳನ್ನು ನೋಡಿದಾಗ ಅವುಗಳ ಬಿಂಬಗಳು ವರ್ಣರಂಜಿತವಾಗಿದ್ದುವು. ಅವು ವಸ್ತುಗಳ ಬಣ್ಣಗಳಲ್ಲವೆಂದೂ, ಯಂತ್ರದೋಷದಿಂದ ಹಾಗೆ ಕಾಣುವುವೆಂದೂ, ಆ ದೋಷವು ಇಲ್ಲದಿರುವ ಬೇರೆ ಯಂತ್ರವನ್ನು ನಿರ್ಮಿಸಬೇಕೆಂದೂ ಆಲೋಚಿಸಿದ ನ್ಯೂಟನ್‌, ದೊಡ್ಡ ವಿಜ್ಞಾನಿಯೆನ್ನುವುದರಲ್ಲಿ ಸಂದೇಹವಿಲ್ಲ.

ವಿಜ್ಞಾನಿಗೆ ಅಗತ್ಯವಾಗಿರಬೇಕಾದ ಮತ್ತೊಂದು ಗುಣವು ತಾಳ್ಮೆ. ಹೊಸ ವಿಷಯಗಳು ಒಂದೇ ದಿನದಲ್ಲಿ ಸ್ಫುರಿಸುವುದಿಲ್ಲ. ಬಹುಕಾಲ “ವ್ಯರ್ಥ ಪ್ರಯೋಗ”ಗಳನ್ನು ನಡೆಸಿ ಶ್ರಮಪಟ್ಟಮೇಲೆ ಸಫಲನಾಗುವ ಸಂಭವವುಂಟು. ಈಗ ಅತಿ ದೊಡ್ಡದಾಗಿರುವ ದೂರದರ್ಶಕಕ್ಕಾಗಿ ೧೦೦ ಅಂಗುಲ ಅಗಲದ ರಾವುಗನ್ನಡಿ (Concave mirror) ಯನ್ನು ಉಪಯೋಗಿಸುತ್ತಿದ್ದಾರೆ. ಇನ್ನೂ ದೂರವಿರುವ ಪ್ರದೇಶಗಳನ್ನು ಪರೀಕ್ಷಿಸಿಲು ೨೨೦ ಅಂಗುಲದ ಕನ್ನಡಿಯು ಸಿದ್ಧವಾಗುತ್ತಿದೆ. ಪ್ರತಿಬಿಂಬವನ್ನು ಸ್ವಚ್ಛವಾಗಿ ಪ್ರತಿಫಲಿಸಲು ಅದು ಅನೇಕ ಗುಣವಿಶಿಷ್ಟವಾಗಿರಬೇಕು. ನಯಮಾಡಲು ಬಹುಕಾಲ ಹಿಡಿಯುವುದು. ತಕ್ಕ ಹದಕ್ಕೆ ಆರಲು ತಿಂಗಳುಗಟ್ಟಲೆ ಕಾಯಬೇಕಾಗುವುದು. ಒಂದು ಯಂತ್ರವನ್ನು ಸಿದ್ಧಪಡಿಸಲು ದ್ರವ್ಯ ವ್ಯಯವಲ್ಲದೆ, ಒಂದೆರಡು ವರ್ಷಗಳ ಕಾಲವ್ಯಯವೂ ಆಗುವುದು. ಇಷ್ಟಾದರೂ ಅದರಲ್ಲಿ ಒಂದು ಗಾಳಿಯ ಗುಳ್ಳೆಯು ಸೇರಿಕೊಂಡರೆ ಅಥವಾ ಅದು ಒಡೆದು ಬಿರುಕುಬಿಟ್ಟರೆ ಶ್ರಮವೆಲ್ಲ ವ್ಯರ್ಥವಾಗಿ ಕೆಲಸವನ್ನು ಮೊದಲಿನಿಂದ ಆರಂಭಿಸಬೇಕಾಗುವುದು. ಆದುದರಿಂದ ತಾಳ್ಮೆಯಿಲ್ಲದ ವಿಜ್ಞಾನಿಗೆ ಕೀರ್ತಿ ಬರುವುದು ದುರ್ಲಭ.

ಉದ್ಯಮವು ಎಲ್ಲರಿಗೂ ಅಗತ್ಯವಾದುದು. ವಿಜ್ಞಾನಿಯು ಶಾರೀರ, ಮಾನಸಿಕ ಆಯಾಸಗಳನ್ನು ಲೆಕ್ಕಿಸದೆ ದುಡಿಯಬೇಕಾಗುವುದು. ಶರೀರದ ಮೇಲೆ ಮಮತೆಯಿದ್ದವನು ದೊಡ್ಡ ವಿಜ್ಞಾನಿಯಾಗಲಾರನು. ನಿಜವಾದ ವಿಜ್ಞಾನಿಯು ಜ್ಞಾನವೇ ತನ್ನ ದೇಹವೆಂದು ಭಾವಿಸುವನು. ಖಗೋಳಜ್ಞನು ರಾತ್ರಿ ಹಗಲೆನ್ನದೆ, ಚಳಿಗಾಳಿಗಳನ್ನು ಲೆಕ್ಕಿಸದೆ ಸಮೀಕ್ಷಣ ತತ್ಪರನಾಗಬೇಕಾಗುವುದು. ಸಸ್ಯಶಾಸ್ತ್ರಜ್ಞನು ಕಾಡುಮೇಡುಗಳಲ್ಲಿ ಅಲೆದು ವಿವಿಧ ವನಸ್ಪತಿಗಳ ಪರಿಚಯಮಾಡಿಕೊಳ್ಳಬೇಕು. ಪ್ರಾಣಿಶಾಸ್ತ್ರವನ್ನು ಕಲಿಯುವವನು ದುಷ್ಟಮೃಗಗಳು, ವಿಷಪ್ರಾಣಿಗಳನ್ನೆಲ್ಲ ಕೂಡಿಹಾಕಿ ಪರೀಕ್ಷಿಸಿ ವಿಜ್ಞಾನಾರ್ಜನೆ ಮಾಡಬೇಕಾಗುವುದು. ಭೌತಿಕ, ರಸಾಯನ ಶಾಸ್ತ್ರಜ್ಞರಲ್ಲಿ ಹೊಸ ವಿಧವಾದ ಶಕ್ತಿಗಳು, ವಿಷವಾಯುಗಳು ಮೊದಲಾದುವನ್ನು ಕಂಡುಹಿಡಿಯುವುದಕ್ಕಾಗಿ ಪ್ರಾಣವನ್ನು ಧಾರೆಯೆರೆದು ಕೊಟ್ಟಿರುವವರೂ ಇದ್ದಾರೆ.

ಊಹಾಶಕ್ತಿಯೂ ವಿಜ್ಞಾನಿಗೆ ಬೇಕಾಗಿರುವುದು. ಎಲ್ಲರಿಗೆ ಕಣ್ಣಿದ್ದರೂ ವಿಜ್ಞಾನಿಯು ಕಾಣುವ ವಸ್ತುಗಳನ್ನು ಇತರರು ಮೊದಲು ಕಂಡಿರುವುದಿಲ್ಲ. ಹೀಗೆಯೇ ತನ್ನ ಪ್ರತಿಭೆಯಿಂದ ಕಂಡ ವಿಷಯಗಳಿಗೆ ಪರಸ್ಪರ ಸಾಮ್ಯ ವೈಷಮ್ಯಗಳನ್ನು ಕಲ್ಪಿಸಿ ಎಲ್ಲವನ್ನೂ ಸಮನ್ವಯಮಾಡಿ ಸಿದ್ಧಾಂತವನ್ನು ಸಮರ್ಥಿಸುವುದು ವಿಜ್ಞಾನಿಗೇ ಸಾಧ್ಯವಾಗುವುದು. ಸಸ್ಯಗಳು ಪ್ರಾಣಿಗಳಂತೆಯೇ ಬೆಳೆದು ದೊಡ್ಡದಾಗುವುನ್ನು ಯಾರು ನೋಡಿಲ್ಲ? ಆದರೆ ಊಹಾಶಕ್ತಿಯಿಂದ ಇದನ್ನು ಪ್ರಬಲಮಾಡಿ, ಸಸ್ಯಗಳೂ ಪ್ರಾಣಿಗಳಂತೆಯೇ ಸುಖದುಃಖಾನುಭವಮಾಡಿ ಮನೋವಿಕಾರಗಳನ್ನು ಪಡೆಯುತ್ತವೆ ಎಂದು ನಿಶ್ಚಯಿಸಿ, ಅದನ್ನು ಪ್ರಯೋಗದಿಂದ ಪರೀಕ್ಷಿಸಿ ಅಳೆದು ತೋರಿಸಲು ಸರ್‌ ಜಗದೀಶಚಂದ್ರ ಬೋಸರಂತಹ ಶ್ರೇಷ್ಠ ವಿಜ್ಞಾನಿಗಳು ಬೇಕಾಯಿತು.

ಇಷ್ಟೆಲ್ಲ ಇದ್ದರೂ ದೈವಾನುಕೂಲವು ಇರಬೇಕು. ನಮ್ಮ ದೇಶದಲ್ಲಿ ಅನೇಕ ಜನ ಯುವಕರು ಉಚ್ಚ ತರದ ವೈಜ್ಞಾನಿಕ ಶಿಕ್ಷಣವನ್ನು ಪಡೆದು ವಿಜ್ಞಾನಾಭಿವೃದ್ಧಿ ಮಾಡಲು ಸಮರ್ಥರಾಗಿದ್ದಾರೆ. ಆದರೆ ಮುಕ್ಕಾಲುಪಾಲು ಮಂದಿ ಜನರಿಗೆ ಮುಂದಿನೂಟದ ಚಿಂತೆಯು ಎಲ್ಲಕ್ಕೂ ತೊಡಕಾಗಿದೆ; ಅವರಿಂದ ಯಾವ ಕಾರ್ಯವು ತಾನೇ ಸಿದ್ಧವಾಗುವುದು? ಇತರ ದೇಶಗಳಲ್ಲಿ ಸ್ವಯಂ ವಿಜ್ಞಾನಿಗಳಲ್ಲದ ಧನಿಕರು, ಪೋಷಕರಾಗಿ ವಿಜ್ಞಾನಿಗಳಿಗೆ ಆಶ್ರಯವನ್ನು ಕೊಡುವರು. ಅನೇಕ ಸಾರ್ವಜನಿಕ ಸಂಸ್ಥೆಗಳು ಅಲ್ಲಿ ಏರ್ಪಟ್ಟು, ಪ್ರತಿಭಾಶಾಲಿಯಾದವನು ಕುಲಗೋತ್ರವರ್ಣಗಳ ಬಂಧನವಿಲ್ಲದೆ ಮುಂದಕ್ಕೆ ಬಂದು ಲೋಕೋತ್ತರ ಕೀರ್ತಿಯನ್ನು ಪಡೆಯಲು ಅನುಕೂಲವಿರುವುದು. ಆದುದರಿಂದ ಪ್ರಸಿದ್ದ ವಿಜ್ಞಾನಿಯಾಗುವವನಿಗೆ ದೈವಬಲವಿದ್ದೇ ಇರಬೇಕು.

ಈ ಕೆಲವು ಗುಣಗಳಿರಬೇಕೆಂದು ಹೇಳಿರುವುದೆಲ್ಲ ಆದರ್ಶ ವಿಜ್ಞಾನಿಯ ಮಾತಾಯಿತು. ಪ್ರತಿಯೊಬ್ಬ ವಿಜ್ಞಾನಿಯು ಈ ಎಲ್ಲ ಗುಣಗಳೂ ಇಲ್ಲದೆ ಇರಬಹುದು. ಆದರೂ ಇವುಗಳಲ್ಲಿ ಬಹು ಭಾಗವಿದ್ದೇ ತೀರಬೇಕು. ಹಣವಿದ್ದರೆ ಗುಣವಿಲ್ಲ, ಗುಣವಿದ್ದರೆ ರೂಪವಿಲ್ಲ, ರೂಪವಿದ್ದರೆ ರೂಪಾಯಿಯಿಲ್ಲ — ಎಂಬುದು ಸಾಮಾನ್ಯ ನಿಯಮವಾಗಿರುವುದರಿಂದ ಎಲ್ಲರೂ ಆದರ್ಶ ವಿಜ್ಞಾನಿಗಳಾಗಲಾರರು. ಸಾಧ್ಯವಾದ ಮಟ್ಟಿಗೆ ಪ್ರತಿಭೆ, “ಸತ್ಯಪ್ರಿಯತೆ, ತಾಳ್ಮೆ, ಆಸಕ್ತಿಗಳಿದ್ದರೆ, ಎಲ್ಲರಿಗೂ ಹೊಸ ವಿಷಯಗಳನ್ನು ಕಂಡುಹಿಡಿಯಲಾಗದಿದ್ದರೂ ವಿಷಯ ವಿಮರ್ಶೆಯನ್ನು ಸ್ವಾನುಭವದಿಂದಲೇ ಮಾಡಿಕೊಂಡು ದೃಢ ಜ್ಞಾನವನ್ನು ಪಡೆಯಲು ಸಾಧ್ಯವಾಗುವುದು.

ಮತ್ತೊಂದು ವಿಷಯವನ್ನು ಗಮನಿಸುವುದು ಆವಶ್ಯಕ. “ಲೋಕೋಭಿನ್ನರುಚಿಃ ” ಎಂಬ ನುಡಿಯು ವಿಜ್ಞಾನಿಗಳಿಗೆ ವಿಶೇಷವಾಗಿ ಅನ್ವಯಿಸುವುದು. ವಿಜ್ಞಾನಿಗಳು ಅನುಭವದಿಂದ ತಮಗಿರುವ ವ್ಯಕ್ತಿ ವೈಶಿಷ್ಟ್ಯ(Individuality)ವನ್ನು ಅರಿತುಕೊಳ್ಳುವವರೆಗೆ ಆವರಿಂದ ಮಹತ್ಕಾರ್ಯವಾಗುವುದಿಲ್ಲ. ವಿಜ್ಞಾನವು ಸರ್ವತೋಮುಖವಾಗಿರುವುದರಿಂದ ಅವರವರಿಗೆ ಬೇಕಾದ ಶಾಸ್ತ್ರಗಳನ್ನು ಅವರು ಕಲಿತು ವೃದ್ಧಿಪಡಿಸಬಹುದು. ಆದರೆ ಆಧುನಿಕ ಕಾಲದಲ್ಲಿ ಶಾಸ್ತ್ರಗಳಿಗೆ ಪರಸ್ಪರ ಸಂಭಂದವಿರುವುದು ಸ್ಪಷ್ಟವಾಗಿ ತಿಳಿಯಬರುವುದು. ಖಗೋಳಜ್ಞರಿಗೆ ಭೂಗರ್ಭಶಾಸ್ತ್ರದ ಪರಿಚಯವೂ, ಡಾರ್ವಿನ್ನನು ಪ್ರತಿಪಾದಿಸಿದ ಪರಿಣಾಮವಾದವೂ (Theory of Evolution) ಉಪಯುಕ್ತವಾಗಿವೆ. ಸಂತತಿ ಪರಂಪರೆಯಲ್ಲಿ ನಿಲ್ಲಬಹುದಾದ ಗುಣಾವಗುಣಗಳನ್ನು (Principles of Heredity) ವಿಮರ್ಶಿಸಲು ಗಣಿತವು ಬೇಕು. ಭೌತಿಕಶಾಸ್ತ್ರದ ಪರಮಾಣುಗಳ ಸ್ವರೂಪವನ್ನು ಧ್ಯಾನಿಸಲು ಖಗೋಳಶಾಸ್ತ್ರದ ಸೌರವ್ಯೂಹದ ಪರಿಚಯವಿರಬೇಕು, ಆದುದರಿಂದ ಆಧುನಿಕ ವಿಜ್ಞಾನಿಗಳಿಗೆ ತಕ್ಕಮಟ್ಟಿಗೆ ಇತರ ಶಾಸ್ತ್ರಗಳ ತಿಳುವಳಿಕೆಯೂ ಆವಶ್ಯಕವೆಂದು ಗೊತ್ತಾಗುವುದು.

Spread the Knowledge

You may also like...

Leave a Reply

Your email address will not be published. Required fields are marked *