ಭವಭೂತಿ – ಕವಿ ಪರಿಚಯ

ಶತೃಘ್ನನು ಲವ ಮತ್ತು ಕುಶ ರಾಮನ ಕಥೆಯನ್ನು ಹಾಡುವುದನ್ನು ಕೇಳುತ್ತಾನೆ – ಉತ್ತರರಾಮಚರಿತೆ ಕತೆ

ಭವಭೂತಿ ಸುಮಾರು 7ನೆಯ ಶತಮಾನದ ಅಂತ್ಯ, 8ನೆಯ ಶತಮಾನದ ಆರಂಭದಲ್ಲಿದ್ದ ಪ್ರಸಿದ್ಧ ಸಂಸ್ಕೃತ ನಾಟಕಕಾರ. ಈತನ ನಾಟಕಗಳು ತಮ್ಮ ಭಾವನಾತ್ಮಕತೆ, ಶೈಲಿ, ಮತ್ತು ಪಾತ್ರನಿರ್ವಹಣೆಯಿಂದಾಗಿ ಪ್ರಸಿದ್ಧವಾಗಿವೆ. ಭವಭೂತಿಯ ನಾಟಕಗಳು ಈಗಲೂ ಸಹ ಭಾರತೀಯ ನಾಟಕರಂಗದಲ್ಲಿ ಹೆಚ್ಚು ಪ್ರದರ್ಶಿಸಲ್ಪಡುವ ನಾಟಕಗಳಾಗಿವೆ.

ಭವಭೂತಿಯು ಷಟ್ಶಾಸ್ತ್ರಗಳಲ್ಲಿ ಪಂಡಿತನಾಗಿದ್ದನು. ಈತನ ನಾಟಕಗಳಲ್ಲಿ ಈತನ ಪಾಂಡಿತ್ಯದ ಪ್ರತಿಬಿಂಬವನ್ನು ನೋಡಬಹುದು. ಈತನ ನಾಟಕಗಳು ಭಾರತೀಯ ನಾಟಕಕಲೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

ಭವಭೂತಿಯ ನಾಟಕಗಳಲ್ಲಿ ಭಾವನೆಗಳ ಅಭಿವ್ಯಕ್ತಿಯು ತುಂಬಾ ಶಕ್ತಿಯುತವಾಗಿದೆ. ಈತನ ನಾಟಕಗಳಲ್ಲಿನ ಪಾತ್ರಗಳು ಆಳವಾದ ಭಾವನೆಗಳನ್ನು ಅನುಭವಿಸುತ್ತವೆ, ನೋಡುಗರ ಮನಸ್ಸನ್ನು ತಲುಪಿ ಅವರನ್ನು ಭಾವನಾತ್ಮಕವಾಗಿ ಸ್ಪರ್ಶಿಸುತ್ತವೆ.

ಭವಭೂತಿಯು ಮೂರು ನಾಟಕಗಳನ್ನು ಬರೆದಿದ್ದಾನೆ:

  • ಮಹಾವೀರಚರಿತೆ: ಈ ನಾಟಕವು ರಾಮಾಯಣದ ಕಥೆಯ ಆಧಾರದ ಮೇಲೆ ರಚಿಸಲ್ಪಟ್ಟಿದೆ.
  • ಮಾಲತೀ ಮಾಧವ: ಈ ನಾಟಕವು ಶೃಂಗಾರ ರಸವನ್ನು ಆಧರಿಸಿದೆ.
  • ಉತ್ತರರಾಮಚರಿತೆ: ಈ ನಾಟಕವು ರಾಮಾಯಣದ ಉತ್ತರಕಾಂಡದ ಕಥೆಯ ಆಧಾರದ ಮೇಲೆ ರಚಿಸಲ್ಪಟ್ಟಿದೆ.

ಕೆ. ಕೃಷ್ಣಮೂರ್ತಿ ಯವರ “ಭವಭೂತಿ” ಪುಸ್ತಕದಿಂದ

ವಂಶ, ಪಾಂಡಿತ್ಯ ಮತ್ತು ಜೀವನ

ಸಾಮಾನ್ಯವಾಗಿ ಸಂಸ್ಕೃತ ಕವಿಗಳ ಕಾಲದೇಶಾದಿಗಳ ವಿಷಯ ವಾದಗ್ರಸ್ತವೇ ಅಗಿರುತ್ತದೆ. ಆದರೆ ಭವಭೂತಿ ಮಾತ್ರ ಈ ಸಾಮಾನ್ಯನಿಯಮಕ್ಕೆ ಅಪವಾದದಂತಿದ್ದಾನೆ. ತನ್ನ ಬಗೆಗೆ ಮೌನವನ್ನು ತಾಳದೆ ಕೆಲವೊಂದು ವಿಷಯಗಳನ್ನು ತಿಳಿಸಿ ಉಪಕಾರ ಮಾಡಿದ್ದಾನೆ.

“ದಕ್ಷಿಣಾಪಥದಲ್ಲಿ ಪದ್ಮಪುರವೆಂಬ ಊರುಂಟು. ಅಲ್ಲಿ ವೇದವೇದಾಂತಪಾರಂಗತರೂ, ಪಂಕ್ತಿಪಾವನರೂ ಆದ ತೈತ್ತಿರೀಯಶಾಖೆಯ ಕಾಶ್ಯಪಗೋತ್ರದ ಉದುಂಬರ ಬ್ರಾಹ್ಮಣ ವಂಶ. ಅವರ ವೇದಾಧ್ಯಯನ ತತ್ವವಿನಿಶ್ಚಯಕ್ಕೆ ಮೀಸಲು, ಹಣ ಯಾಗಕ್ಕೆ; ವಿವಾಹ ಪುತ್ರಪ್ರಾಪ್ತಿಗೆ; ಆಯುಸ್ಸು ತಪಸ್ಸಿಗೆ. ಆ ವಂಶದಲ್ಲಿ ವಿಖ್ಯಾತನಾದ ಗೋಪಾಲಭಟ್ಟನ ಮೊಮ್ಮಗ; ಪ್ರಸಿದ್ಧನಾದ ನೀಲಕಂಠನ ಮಗ; ಶ್ರೀಕಂಠನೆಂಬ ಬಿರುದುಳ್ಳವನು; ಪದ-ವಾಕ್ಯ-ಪ್ರಮಾಣ ಶಾಸ್ತ್ರಗಳನ್ನು ಬಲ್ಲವನು; ಜತುಕರ್ಣಿ ತಾಯಿ; ಹೆಸರು ಭವಭೂತಿ; ಗುರು ಯಥಾರ್ಥ ನಾಮಧೇಯನಾದ ಜ್ಞಾನನಿಧಿ” – ಇದು ಭವಭೂತಿಯೇ ತಿಳಿಸುವ ವಿಷಯ. ಶ್ರೀಕಂಠನೆಂಬುದೇ ಇಟ್ಟ ಹೆಸರು; ಭವಭೂತಿಯೆಂಬುದು ಬಿರುದು – “ಸಾಂಬಾ ಪುನಾತು ಭವಭೂತಿಪವಿತ್ರಮೂರ್ತಿಃ” ಎಂದು ಈತನು ಮಾಡಿದ ಪಾರ್ವತೀ ಸ್ತೋತ್ರವನ್ನು ಮೆಚ್ಚಿದವರು ಕೊಟ್ಟುದು – ಎನ್ನುವವರೂ ಇದ್ದಾರೆ. ಭಟ್ಟ ಉಮ್ವೇಕನೆಂಬ ಮೀಮಾಂಸಕನೂ ಈತನೂ ಒಬ್ಬನೇ ಎಂಬುದು ಈಗಿನ ಪಂಡಿತರಲ್ಲಿ ಕೆಲವರ ಮತ.

ಭವಭೂತಿಯ ಮಾಲತೀಮಾಧವ ನಾಟಕವನ್ನು ಮೊದಲು ಆಡಿದುದು ಉಜ್ಜಯಿನಿಯ ಕಾಲಪ್ರಿಯಾನಾಥ ಅಥವಾ ಮಹಾಕಾಲನ “ಯಾತ್ರೆ”ಯಲ್ಲಿ. ಕಾಶ್ಮೀರದ ಅರಸನಾದ ಲಲಿತಾದಿತ್ಯನು (ಕ್ರಿ. ಶ. 693-729) ಕಾನ್ಯಕುಬ್ಜದ ದೊರೆಯಾದ ಯಶೋವರ್ಮನನ್ನು ಸೋಲಿಸಿದನೆಂದೂ, ಈ ಯಶೋವರ್ಮನು ವಾಕ್ಪತಿರಾಜ, ಭವಭೂತಿ ಮೊದಲಾದ ಕವಿಗಳಿಗೆ ಆಶ್ರಯದಾತನಾಗಿದ್ದನೆಂದೂ ಕಾಶ್ಮೀರದ ಚರಿತ್ರೆಯನ್ನು ವರ್ಣಿಸುವ ರಾಜತರಂಗಿಣಿಯಲ್ಲಿ ಹೇಳಿದೆ (4-145). “ಗಉಡವಹೋ” ಎಂಬ ಪ್ರಾಕೃತಮಹಾಕಾವ್ಯಕಾರನಾದ ವಾಕ್ಪತಿರಾಜನೂ ಭವಭೂತಿಯನ್ನು ಹೊಗಳುತ್ತಾನೆ. ಹೀಗೆ ಭವಭೂತಿಯ ಕಾಲವು ಕ್ರಿ.ಶ. 7ನೆ ಶತಮಾನದ ಅಂತ್ಯ ಮತ್ತು ಕ್ರಿ. ಶ. 8ನೆ ಶತಮಾನದ ಆದಿಭಾಗವೆಂದು ನಿರ್ಧರಿಸಬಹುದು.

ಭವಭೂತಿಗೆ ವಾಲ್ಮೀಕಿಯಲ್ಲಿ ಎಲ್ಲರಿಗಿಂತಲೂ ಹೆಚ್ಚು ಭಕ್ತಿ, ಗೌರವ. ಪ್ರಾಚೇತಸೋ “ಮುನಿವೃಷಾ ಪ್ರಥಮಃ ಕವೀನಾಂ” ಎಂದು ಒಂದೆಡೆ. ಹೇಳಿದರೆ, ಜಗನ್ಮಾತೆಯಂತೆ, ಗಂಗೆಯಂತೆ, “ಈ ಕಥೆಯು ಪಾಪಗಳನ್ನು ತೊಳೆಯುತ್ತದೆ ಮತ್ತು ಶ್ರೇಯಸ್ಸನ್ನು ಕೊಡುತ್ತದೆ. ಇದು ಮಂಗಲಕರ ಮತ್ತು ಮನೋಹರ; ಶಬ್ದಬ್ರಹ್ಮವನ್ನು ತಿಳಿದ ಪರಿಣತಪ್ರಜ್ಞನಾದ ಆ ಮಹರ್ಷಿಯ ವಾಣಿಯನ್ನೇ ಅಭಿನಯಯೋಗ್ಯವಾಗುವಂತೆ ನಾನು ಮಾಡಿದ್ದೇನೆ. ವಿಬುಧರು ಪರಿಶೀಲಿಸಬೇಕು” ಎಂದು ಉತ್ತರರಾಮಚರಿತವನ್ನು ಮುಗಿಸುತ್ತಾನೆ.

ತನ್ನ ಯೋಗ್ಯತೆಯನ್ನು ಅರಿಯಲಾರದ ಕ್ಷುದ್ರ ನಿಂದಕರನ್ನು ಕುರಿತು ನಿಸ್ಸಂಕೋಚವಾಗಿ ಸಾರುತ್ತಾನೆ– “ನಿಮ್ಮ ರಸಿಕತೆ ಇನ್ನೂ ಬೆಳೆಯಲಿಲ್ಲ; ನೀವು ನನ್ನ ಕೃತಿಯಿಂದ ದೂರವಿರಿ, ನಿಮಗಾಗಿ ನಾನು ಬರೆಯಲಿಲ್ಲ. ನನಗೆ ಸಮಾನ ಧರ್ಮನಾದವನು ಯಾರೊಬ್ಬನಾದರೂ ಎಂದಾದರೂ ಹುಟ್ಟುತ್ತಾನೆ. ಕಾಲ ನಿರವಧಿ; ಪೃಥ್ವಿ ಸುವಿಪುಲ” ಎಂದು :

ಯೇ ನಾಮ ಕೇಚಿದಿಹ ನಃ ಪ್ರಥಯಂತ್ಯವಜ್ಞಾಂ
ಜಾನನ್ತಿ ತೇ ಕಿಮಪಿ ತಾನ್‌ ಪ್ರತಿ ನೈಷ ಯತ್ನಃ।
ಉತ್ಪತ್ಸ ತೇಸ್ತಿ ಮಮ ಕೋಪಿ ಸಮಾನಧರ್ಮಾ
ಕಾಲೋ ಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವೀ
।।


ಭವಭೂತಿಯ ನಾಟಕತತ್ವ ಮತ್ತು ನಾಟಕಗಳು

ಭವಭೂತಿಯ ನಾಟಕಗಳನ್ನು ವಿಮರ್ಶಿಸುವ ಮೊದಲು ಆತನೇ ತನ್ನ ಕಲೆಯನ್ನು ಕುರಿತು ಹೇಳುವ ಮಾತುಗಳನ್ನು ಪರಿಶೀಲಿಸಬೇಕು. ಮಾಲತೀಮಾಧವದ ಪ್ರಥಮಪ್ರದರ್ಶನಕ್ಕೆ ನೆರೆದಿದ್ದ ವಿದ್ವಜ್ಜನರ ಪರಿಷತ್ತು “ಅಪೂರ್ವವಸ್ತು ಪ್ರಯೋಗ” ವನ್ನು ಬೇಡುತ್ತದೆ. “ಅಪೂರ್ವ”ವೆಂದರೆ ಹೇಗಿರಬೇಕೆಂದರೆ–.

ಭೂಮ್ನಾ ರಸಾನಾಂ ಗಹನಾಃ ಪ್ರಯೋಗಾಃ
ಸೌಹಾರ್ದಹೃದ್ಯಾನಿ ವಿಚೇಸ್ಟಿತಾನಿ ।
ಔದ್ಧತ್ಯಮಾಯೋಜಿತಕಾಮಸೂತ್ರಂ
ಚಿತ್ರಾಃ ಕಥಾ ವಾಚಿ ವಿದಗ್ಧತಾ ಚ ।।

“ರಸಗಳ ವೈಪುಲ್ಯ ಹಾಗೂ ಗಹನವಾದ ಸಂಯೋಜನೆ, ಸ್ನೇಹ ಬಂಧುರವಾದ ಪಾತ್ರಗಳ ಕ್ರಿಯೆ, ಸಾಹಸ, ಕಾಮಸೂತ್ರದ ಸಂಯೋಜನೆ, ವಿಸ್ಮಯಜನಕವಾದ ಘಟನೆಗಳು ಮತ್ತು ಸಂಭಾಷಣೆಯಲ್ಲಿ ಚಾತುರ್ಯ”,

ಹಿಂದಿನ ನಾಟಕಗಳಲ್ಲಿ ಪ್ರಾಯಿಕವಾಗಿ ಶೃಂಗಾರವು ಮುಖ್ಯರಸವಾಗಿದ್ದಾಗ ಅಷ್ಟಿಷ್ಟು ಪ್ರಮಾಣದಲ್ಲಿ ವಿದೂಷಕನ ಹಾಸ್ಯ, ಅದ್ಭುತ, ವೀರ, ಮುಂತಾದುವು ಬರುತಿದ್ದುವು. ಆದರೆ ಗಹನವಾದ ಉಳಿದ ರಸಗಳ ಸಂಯೋಜನೆಯನ್ನೂ ತರಬೇಕೆಂದು ಭವಭೂತಿಯ ಆಸೆ. ರಾಜರ ಬಹುಪತ್ನೀಪ್ರೇಮವು ಸರ್ವಸಹೃದಯ ಹೃದ್ಯವಲ್ಲವೆಂದು ಭವಭೂತಿಗೆ ತೋರಿರಬಹುದು. ಆದ್ದರಿಂದ ಸಾಮಾನ್ಯ ನಾಯಕ-ನಾಯಿಕೆಯರ ಪ್ರಣಯ ಜೀವನವನ್ನೇ ಭವಭೂತಿ ಆರಿಸಿಕೊಳ್ಳುತ್ತಾನೆ. ಸ್ನೇಹಿತರ ಸೌಹಾರ್ದವನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಾನೆ; ಭೃತ್ಯ ದಾಸಿಯರು ದೂರವಾಗುತ್ತಾರೆ, ರಾಜರ ಅರಮನೆಯ ಆವರಣದಲ್ಲಿ ಜನಪ್ರಿಯವಾದ ಸಾಹಸಪ್ರಸಂಗಗಳಿಗೆ ಹೆಚ್ಚು ಅವಕಾಶವಿರುತ್ತಿರಲಿಲ್ಲ. ಇದನ್ನು ಭವಭೂತಿ ತಸ್ಪಿಸುತ್ತಾನೆ. ಅನುರಾಗದ ವಿವಿಧಾವಸ್ಥೆಗಳನ್ನು ಕಾಮಶಾಸ್ತ್ರಕ್ಕೆ ಅನುಗುಣವಾಗಿ ಚಿತ್ರಿಸಲು ಬಯಸುತ್ತಾನೆ, ಕೃತ್ರಿಮತೆಯನ್ನು ತಪ್ಪಿಸಬೇಕೆಂಬ ಉದ್ದೇಶದಿಂದ. ಮುಂದೇನು? ಮುಂದೇನು? ಎಂಬ ಕುತೂಹಲ ಕಡಿಮೆಯಾಗದಂತಿರುವುದೇ ಕಥಾರಚನೆಯ ಮರ್ಮ. ನಾಟಕದ ಸಾರಸರ್ವಸ್ವವೇ ಸಂಭಾಷಣೆ. ಅದರಲ್ಲೇ ಕವಿಯ ಚಾತುರ್ಯವೆಲ್ಲ ವ್ಯಕ್ತವಾಗಬೇಕು.

ಪ್ರಕರಣದಲ್ಲಿ ಇವು ಗುಣಗಳಾದರೆ ನಾಟಕದಲ್ಲಿ ಘಟನೆಗಳ ಮಹತ್ವಕ್ಕಿಂತಲೂ ಪ್ರಧಾನರಸಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಮಹಾವೀರನ ಆದರ್ಶಚರಿತದಲ್ಲಿ ಸಾಹಸಕಾರ್ಯದಷ್ಟೇ, ಧ್ಯೇಯದ ಮಹತ್ವವೂ ಮುಖ್ಯ. ನಾಯಕನ ಸಾತ್ವಿಕ ಸಾಹಸಕ್ಕೆ, ಶೌರ್ಯಾವಷ್ಟಂಭಕ್ಕೆ, ಸನ್ನಿವೇಶಗಳು ಪ್ರತಿ ನಾಯಕನ ಪಕ್ಷದವರ ರಾಜಸಕಾರ್ಯದಿಂದಲೇ ಹುಟ್ಟುತ್ತಿರಬೇಕು, ವೀರರಸಪ್ರಧಾನವಾದ ನಾಟಕದಲ್ಲಿ ಪಕ್ಷಪ್ರತಿಪಕ್ಷ ಗಳ ದ್ವಂದ್ವವು ಸಾರ್ವಕಾಲಿಕರೂಪದಲ್ಲಿ ಚಿತ್ರಿತವಾಗಬೇಕು. ಪುರಾಣದಲ್ಲಿ ಬಂದ ಯಾರೋ ಇಬ್ಬರ ಕಾಳಗವಲ್ಲ; ಧರ್ಮಅಧರ್ಮಗಳ ಘರ್ಷಣವು ಬರಬೇಕು ಎಂಬ ಅಭಿಪ್ರಾಯವನ್ನು ಭವಭೂತಿ ಸ್ಪಷ್ಟವಾಗಿ ಘೋಷಿಸುತ್ತಾನೆ.

ರಾಮನನ್ನು ಧರ್ಮದ ಪ್ರತಿನಿಧಿಯೆಂದು ಸ್ವೀಕರಿಸಿದ ಮೇಲೆ ಅವನು ಪೂರ್ವಚರಿತದಲ್ಲಿ ಮಾತ್ರ ಧರ್ಮಪ್ರತಿನಿಧಿಯಾಗಿ ರಾವಣವಧೆಯಾದೊಡನೆಯೇ ಧರ್ಮಭ್ರಷ್ಟನಂತೆ ಪತ್ನಿಯನ್ನು ಕಾಡಿಗಟ್ಟಿದನೆಂದರೆ – ಇದೇ ರಾಮಾಯಣದ ಉತ್ತರಕಾಂಡದ ಕಥೆ- ವಾಲ್ಮೀಕಿಯ ಪ್ರತಿಭೆಗೆ ಕುಂದಿಟ್ವಂತಾಗುತ್ತದೆ. ಆ ಕುಂದನ್ನು ತಪ್ಪಿಸಲೆಂದೇ ಭವಭೂತಿಯು ಮೂರನೆಯ ನಾಟಕವಾದ ಉತ್ತರರಾಮಚರಿತೆಯನ್ನು ಬರೆದಿರುವುದು. ಶ್ರೀರಾಮನು ಸರ್ವದಾ ಎಲ್ಲರಿಗೂ ಮಾರ್ಗದರ್ಶಿಯಾಗಬೇಕಾದರೆ ಅವನ ವರ್ತನೆಯಲ್ಲಿ ಎಂದೂ ಕುಂದಿರಬಾರದು. ಈ ಕುಂದನ್ನು ಕೇವಲ ಘಟನೆಗಳ ಯೋಜನೆಯಿಂದ ತಪ್ಪಿಸುವುದು ಭವಭೂತಿಯ ಉದ್ದೇಶವಲ್ಲ. ಭಾಸನು ಕೈಕೆಯ ಕುಂದನ್ನು ಕಳೆದುದು ಹೀಗೆ. ವಿಭಿನ್ನ ರಸಗಳ ಸಮಾವೇಶದಿಂದ ಪಾತ್ರವನ್ನು ಉದಾತ್ತಗೊಳಿಸುವುದು ಭವಭೂತಿಯ ಉದ್ದೇಶ. ಇದು ಕಾಳಿದಾಸನ ಮಾರ್ಗ, ದುಷ್ಯಂತನನ್ನು ನಾವು ನಿರಪರಾಧಿಯೆನ್ನುವುದು ಅವನು ಶಾಪಗ್ರಸ್ತನಾಗಿದ್ದನೆಂಬ ಸಂಗತಿಯಿಂದ ಮಾತ್ರವೇ ಅಲ್ಲ; ಶಾಪ ಕಳೆದ ಮೇಲೆ ಅವನು ವಿರಹದಿಂದ ಪಡುವ ಪರಿತಾಪದ ಉತ್ಕಟತೆಯಿಂದಲೂ ಕೂಡ, ಕೈಕೆಗೆ ರಾಮನಲ್ಲಿರುವ ಪ್ರೇಮಾತಿಶಯವನ್ನು ಅಲ್ಲಲ್ಲಿ ಸಂಗ್ರಹವಾಗಿ ಸೂಚಿಸಿದರೂ ವಿಸ್ತಾರವಾಗಿ ಭಾಸನು ವರ್ಣಿಸಲಿಲ್ಲ. ಕಾಳಿದಾಸನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ವಿರಹವೇದನೆಗಿಂತಲೂ ತೀವ್ರತರವಾದ ಕರುಣರಸವನ್ನೇ ಭವಭೂತಿ ಪರಿಪೋಷಿಸುತ್ತಾನೆ.

ಹೀಗೆ ಭವಭೂತಿಯು ಬರೆದ ನಾಟಕಗಳು ಮೂರು- (೧) ಮಹಾವೀರ ಚರಿತ (೨) ಮಾಲತೀಮಾಧವ ಮತ್ತು (೩) ಉತ್ತರರಾಮಚರಿತ.

ಮೂರರಲ್ಲಿಯೂ ಭವಭೂತಿಗೆ ‘ಅಪೂರ್ವ’ ವಾದ ಕಥಾಸಂವಿಧಾನವನ್ನು, ರಸಸಮಾವೇಶವನ್ನು, ಪಾತ್ರಚಿತ್ರಣವನ್ನು ಮಾಡುವ ಉದ್ದೇಶವಿದ್ದುದು ಸ್ಪಷ್ಟ. ಕಥಾಯೋಜನೆಯಲ್ಲಿ ಭಾಸನ ಧೈರ್ಯವೂ, ರಸಸಿದ್ಧಿಯಲ್ಲಿ ಕಾಳಿದಾಸನ ಮೇಲ್ಮೆಯೂ, ನಾಟಕತಂತ್ರದಲ್ಲಿ ಶ್ರೀ ಹರ್ಷನ ನೈಪುಣ್ಯವೂ ತ್ರಿವೇಣೀಸಂಗಮದಂತೆ ಭವಭೂತಿಯ ಪ್ರತಿಭೆಯಲ್ಲಿ ಕೂಡಿ, ಮೂರು ಅಭೂತಪೂರ್ವವಾದ ನಾಟಕಗಳು ನಿರ್ಮಾಣವಾದುವು. ಹಿಂದಿನವರಲ್ಲಿಲ್ಲದ, ಸುಕುಮಾರತಮವಾದ ಕರುಣರಸಪ್ರೀತಿಯು ಭವಭೂತಿಯ ಉತ್ತರರಾಮಚರಿತೆಯನ್ನು “ಉತ್ತಮೋತ್ತಮ” ನಾಟಕವನ್ನಾಗಿ ಮಾಡಿತು. ಭವಭೂತಿಯು ನಾಟಕಗಳನ್ನು ಬರೆದ ಅನುಕ್ರಮವೂ ಮೇಲೆ ನಿರ್ದೇಶಿಸಿರುವಂತೆಯೇ ಇದ್ದಿರಬೇಕು.

Spread the Knowledge

You may also like...

Leave a Reply

Your email address will not be published. Required fields are marked *