ಕನ್ನಡ ವ್ಯಾಕರಣ – ಲೇಖನ ಚಿಹ್ನೆಗಳು
ಲೇಖನ ಚಿಹ್ನೆಗಳು
ಬರವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಪ್ರಮುಖವಾದುದು. ಲೇಖನ ಚಿಹ್ನೆಗಳಿಲ್ಲದ ಬರವಣಿಗೆಯು ಸ್ಪಷ್ಟಾರ್ಥವನ್ನು ಕೊಡದೆ ಅನೇಕ ತೊಡಕುಗಳಿಗೆ ಕಾರಣವಾಗುತ್ತದೆ. ಆದುದರಿಂದ ಲೇಖನ ಚಿಹ್ನೆಗಳ ಕಡೆಗೆ ಗಮನಕೊಡುವುದು ಆವಶ್ಯಕ. ಬರವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಉಪಯೋಗಿಸುವುದರಿಂದ ಬರವಣಿಗೆಗೊಂಡು ಬೆಲೆ ಬರುತ್ತದೆ.
೧. ಪೂರ್ಣವಿರಾಮ-(.) ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ‘.’ ಈ ಚಿಹ್ನೆಯನ್ನು ಉಪಯೋಗಿಸಬೇಕು.
ಉದಾ :- ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ.
೨. ಅರ್ಧವಿರಾಮ-(;) ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ, ಉಪ ವಾಕ್ಯಗಳು ಮುಗಿದಲ್ಲೆಲ್ಲ ಅರ್ಧವಿರಾಮದ ‘;’
ಈ ಚಿಹ್ನೆಯನ್ನು ಉಪಯೋಗಿಸಬೇಕು.
ಉದಾ :- ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.
೩. ಅಲ್ಪವಿರಾಮ-(,) ಇವು ಮುಖ್ಯವಾಗಿ ಅಲ್ಪವಿರಾಮ ಬರುವ ಸ್ಥಳಗಳಲ್ಲಿ ಬಳಸಬೇಕು.
ಉದಾ :- ಬಟ್ಟೆಗಿರಣಿ, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ.
೪. ಪ್ರಶ್ನಾರ್ಥಕ ಚಿಹ್ನೆ-(?) ಪ್ರಶ್ನಾರ್ಥಕ ಪದ ಮತ್ತು ವಾಕ್ಯಗಳ ಮುಂದೆ ‘?’ ಈ ಚಿಹ್ನೆಯನ್ನು ಹಾಕಬೇಕು.
ಉದಾ :- ದಾಶರಥಿ ಯಾರು ?
೫. ಭಾವ ಸೂಚಕ ಚಿಹ್ನೆ-(!) ಆಶ್ಚರ್ಯ, ಸಂತೋಷ, ವಿಷಾದ, ದುಃಖ, ಕೋಪ, ಆನಂದಇತ್ಯಾದಿ ಭಾವಸೂಚಕ ಶಬ್ದಗಳ ಮುಂದೆ ‘!’ ಈ ರೀತಿಯ ಚಿಹ್ನೆ ಬರೆದರೆ ಆ ಮಾತುಗಳ ಅರ್ಥ ಸ್ಪಷ್ಟವಾಗುವುದು.
ಉದಾ :- ಅಯ್ಯೋ! ಹೀಗಾಗಬಾರದಿತ್ತು!
೬. ಉದ್ಧರಣ ಚಿಹ್ನೆ -(“ ”) – ಇನ್ನೊಬ್ಬರು ಹೀಗೆ ಹೇಳಿದರೆಂದು ಒಬ್ಬರ ಮಾತನ್ನು ಉದ್ಧರಿಸಿ ಬರೆಯುವಾಗ ಅಥವಾ ಇನ್ನೊಬ್ಬರ ನೇರ ಮಾತುಗಳನ್ನು ತೋರಿಸುವಾಗ “ ” ಈ ಚಿಹ್ನೆಯನ್ನು ಉಪಯೋಗಿಸಬೇಕು.
ಉದಾ :- “ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ದ ಹಕ್ಕಾಗಬೇಕು” ಎಂದು ಸರ್ ಎಂ. ವಿಶ್ವೇಶ್ವರಯ್ಯನವರು ಹೇಳಿದರು.
೭. ವಾಕ್ಯವೇಷ್ಟನ ಚಿಹ್ನೆ (ಏಕ ಉದ್ಧರಣ ಚಿಹ್ನೆ)-(‘’)-ಬರವಣಿಗೆಯಲ್ಲಿ ಪಾರಿಭಾಷಿಕ ಪದಗಳನ್ನು, ವಿಶಿಷ್ಟಪದಗಳನ್ನು ಬಳಸಿದಾಗ ‘’ ಈ ಚಿಹ್ನೆಯನ್ನು ಬಳಸಬೇಕು.
ಉದಾ :- ಕನ್ನಡ ಭಾಷೆಯಲ್ಲಿ ‘ಇಂಗ್ಲಿಷ್’, ‘ಪರ್ಷಿಯನ್’, ‘ ಪೋರ್ಚ್ ಗೀಸ್’ ಭಾಷೆಗಳ ಪದಗಳನ್ನು ಬಳಸಲಾಗುತ್ತದೆ.
೮. ಆವರಣ ಚಿಹ್ನೆ : ( ) ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಉದಾ :- ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್) ಜಲಜನಕ (ಹೈಡ್ರೋಜನ್)ಗಳು ಉತ್ಪತ್ತಿಯಾಗುತ್ತವೆ.
೯. ವಿವರಣಾತ್ಮಕ ಚಿಹ್ನೆ : (:) ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಉದಾ :- ಪಂಚಮಹಾವಾದ್ಯಗಳು : ತಾಳ, ಹಳಗ, ಗಂಟೆ, ಮೌರಿ, ಸನಾದಿ.
Nice