ಆದಿಕವಿ ಪಂಪ – ಕನ್ನಡ ಕವಿಗಳು
ಆದಿಕವಿ ಪಂಪನ ಪೂರ್ವಜರು ಬಳ್ಳಾರಿ ಕಡೆಯವರು. ಇವನ ತಂದೆ ಅಭಿರಾಮದೇವನು. ಹೂಟೆ ಹೊರಕೊಳ್ಳಲು ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿಯೇ ನೆಲೆಸಿದನು. ಲಕ್ಷ್ಮೇಶ್ವರಕ್ಕೆ ಆಗ ಪುಲಿಗೆರೆ ಎಂದು ಕರೆಯುತ್ತಿದ್ದರು. ಅಲ್ಲಿ ಚಾಲುಕ್ಯರ ವಂಶದ ಅರಿಕೇಸರಿ ಎಂಬ ಅರಸನು ಆಳುತ್ತಿದ್ದನು. ಆಗ ದೇವೇಂದ್ರಮುನಿ ಎಂಬುವರು ಜೈನ ಮಾತಾಡ್ದಲಿ ಒಳ್ಳೇ ವಿದ್ವಾಂಸರೆಂದು ಹೆಸರಾಗಿದ್ದರು. ಅಭಿರಾಮದೇವನು ತನ್ನ ಮಗ ಪಂಪನನ್ನು ಅವರ ಬಳಿಯಲ್ಲಿ ವಿದ್ಯಾಭ್ಯಾಸಕ್ಕಾಗಿ ಇಟ್ಟನು. ಪಂಪನು ಬಲು ಚುರುಕು ಬುದ್ಧಿಯವನೂ ಒಳ್ಳೆಯ ಸ್ವಭಾವದವನೂ ಇದ್ದನು. ಇದರಿಂದ ಅವನು ಗುರುಗಳಿಗೆ ಪ್ರೀತಿಯ ಶಿಷ್ಯನಾಗಿದ್ದನು. ಮುನಿಗಳು ಅರಿಕೇಸರಿಯ ಗುರುಗಳಾಗಿದ್ದರು. ಒಂದು ದಿನ ಮಾತಿಗೆ ಮಾತು ಹೊರಟಾಗ, ಮುನಿಗಳು ಅರಿಕೇಸರಿಗೆ ಪಂಪನ ವಿದ್ಯಾಬುದ್ಧಿಗಳ ಬಗೆಗೂ ಸ್ವಭಾವದ ಬಗೆಗೂ ಹೇಳಿದ್ದರು. ಕಲಿಯುವುದೆಲ್ಲ ಮುಗಿದ ಮೇಲೆ ಪಂಪನು ಬನವಾಸಿಯಲ್ಲಿ ಬಹುದಿನ ಇದ್ದನು. ವಿದ್ವಾಂಸನಿದ್ದಷ್ಟೂ ಶೂರನೂ ಇದ್ದನು. ಕೆಲವು ಯುದ್ಧಗಳನ್ನಾಡಿ ಅನುಭವವನ್ನು ಪಡೆದಿದ್ದನು.
ಅರಿಕೇಸರಿಯು ಬನವಾಸಿಯ ನಾಡನ್ನು ಗೆದ್ದನು. ಆಗ ಅರಿಕೇಸರಿಗೂ ಪಂಪನಿಗೂ ಸ್ನೇಹವಾಗಿ ಅದು ದಿನದಿನಕ್ಕೆ ಬೆಳೆಯಹತ್ತಿತು. ಪಂಪನ ವಿದ್ಯಾಬುದ್ಧಿಗಳಿಗೂ ಗುಣಗಳಿಗೂ ಮೆಚ್ಚಿ ಅರಸನು ಅವನಿಗೆ ರಾಜಾಶ್ರಯವನ್ನು ಕೊಟ್ಟನು. ಅರಸನ ಮೆಚ್ಚುಗೆಯನ್ನು ಪಡೆಯಲು ಅವನನ್ನು ವರ್ಣಿಸುವ ‘ವಿಕ್ರಮಾರ್ಜುನ ವಿಜಯ’ ಎಂಬುದೊಂದು ಉತ್ತಮ ಕಾವ್ಯವನ್ನು ಕನ್ನಡದಲ್ಲಿ ಬರೆದಿದ್ದಾನೆ. ಅದನ್ನು ಓದಿದ ಎಲ್ಲರೂ ಅವನ ಪಾಂಡಿತ್ಯಕ್ಕೆ ತಲೆದೂಗುತ್ತಾರೆ. ‘ಆದಿ ಪುರಾಣ’ ಅಂಬಾ ಗ್ರಂಥವನ್ನೂ ಬರೆದಿದ್ದಾನೆ. ಬನವಾಸಿಯು ಬಲು ಸೊಗಸಿನ ನಾಡು. ಅಲ್ಲಿಯ ಸೃಷ್ಟಿಸೌಂದರ್ಯವನ್ನು ಬಹು ಸೊಗಸಾಗಿ ಬಣ್ಣಿಸಿದ್ದಾನೆ. ಪುಲಿಗೆರೆಯಲ್ಲಿದ್ದಾಗ ಮೇಲಿಂದ ಮೇಲೆ ಬನವಾಸಿಯನ್ನೂ ಅದರ ಸುತ್ತುಮುತ್ತಲಿನ ಸೌಂದರ್ಯವನ್ನೂ ನೆನೆನೆನಿಸಿ ಹಾಡಿಕೊಂಡಿರುವನು. ಮುಂದಿನ ಜನ್ಮದಲ್ಲಿ ತನ್ನನ್ನು ಆ ನಾಡಿನಲ್ಲಿ ಮರಿದುಂಬಿಯಾಗಿ ಇಲ್ಲವೇ ಕೋಗಿಲೆಯಾಗಿ ಹುಟ್ಟಿಸಬೇಕೆಂದು ದೇವರಿಗೆ ಬೇಡಿಕೊಂಡಿದ್ದಾನೆ! ಅವನು ನಿಜವಾಗಿಯೂ ದೊಡ್ಡ ಕವಿಯು. ಆದುದರಿಂದ ಅವನಿಗೆ ‘ಮಹಾಕವಿ ಪಂಪ’ ಎಂದೂ ಕರೆಯುತ್ತಾರೆ. ಮುಂದೆ ಮತ್ತೊಬ್ಬ ಅಭಿನವ ಪಂಪನೆಂಬ ಕವಿಯು ಆದುದರಿಂದ ಇವನಿಗೆ ;ಅಡಿ ಪಂಪ’ ಎಂದು ಕರೆಯುವ ರೂಢಿಯಿದೆ.