ಸಂಚಿಯ ಹೊನ್ನಮ್ಮ ಕವಿ ಪರಿಚಯ

ಸಂಚಿಯ ಹೊನ್ನಮ್ಮ

ಕವಿ-ಕಾವ್ಯ ಪರಿಚಯ:

ಚಿಕ್ಕದೇವರಾಜ ಒಡೆಯರ (1672-1704) ಆಸ್ಥಾನದಲ್ಲಿ ಸಂಚಿಯ ಹೊನ್ನಮ್ಮ, ಶೃಂಗಾರಮ್ಮ ಎಂಬ ಕವಯಿತ್ರಿಯರಿದ್ದರು.

ಸಂಚಿಯ ಹೊನ್ನಮ್ಮ ಹದಿನೇಳನೆಯ ಶತಮಾನದ ಪ್ರಮುಖ ಕಮಯಿತ್ರಿ. ಈಕೆ ಚಿಕ್ಕದೇವರಾಯನ ರಾಣಿವಾಸದಲ್ಲಿದ್ದ ಒಬ್ಬ ಸಾಮಾನ್ಯ ಊಳಿಗದ ಹೆಣ್ಣುಮಗಳು. ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರಿನವಳು. ಮೈಸೂರಿನ ಚಿಕ್ಕ ದೇವರಾಯನ ಪಟ್ಟಮಹಿಷಿಯಾದ ದೇವರಾಜಮ್ಮಣ್ಣಿಯ ಪ್ರೀತಿಗೆ ಪಾತ್ರಳಾಗಿದ್ದುದರಿಂದ ಈಕೆ ಮೈಸೂರು ರಾಜ ಕುಟುಂಬಕ್ಕೆ ಹತ್ತಿರವಾದಳು.

ಬಾಲ್ಯದಿ೦ದಲೇ ಹೊನ್ನಮ್ಮಳಿಗೆ ಸಾಹಿತ್ಯ ಸಂಪರ್ಕ, ಅರಮನೆಯ ವಿದ್ವತ್‌ ಸಭೆಯ ಒಡನಾಟ ದೊರೆಯಿತು. ಅಳಸಿ೦ಗಾರ್ಯರಿಂದ ಕನ್ನಡ ಮತ್ತು ಸಂಸ್ಕೃತ ಭಾಷೆ ಹಾಗೂ ಕಾವ್ಯಗಳ ಬಗ್ಗೆ ಪರಿಣತಿಯು ದೊರೆಯಿತು. ಈ ಹಿನ್ನೆಲೆಯಲ್ಲಿ ಹಳಗನ್ನಡ ಕಾವ್ಯಗಳ ಗಂಭೀರ ಅಧ್ಯಯನದ ಕಡೆ ಅವಳ ಮನಸ್ಸು ವಾಲಿತು. ಅವಳ ನಡೆ ನುಡಿಯಲ್ಲಿದ್ದ ಜಾಣ್ಮೆಯನ್ನು ಗುರುತಿಸಿದ ಮಹಾರಾಣಿ. ಕಾವ್ಯ ಬರೆಯಲು ಪ್ರೇರೇಪಿಸಿದಂತೆ ಕಾಣುತ್ತದೆ. ಈ ಬಗೆಯ ಪೂರ್ವಸಿದ್ಧತೆಯಿಂದ ಹೊನ್ನಮ್ಮ ಸಾಂಗತ್ಯ ಪ್ರಕಾರದಲ್ಲಿ “ಹದಿಬದೆಯ ಧರ್ಮ’ ಬರೆದಳೆಂದು ಹೇಳಲಾಗುತ್ತದೆ.

ಸಂಚಿಯ ಹೊನ್ನಮ್ಮ ಹದಿಬದೆಯ ಧರ್ಮ ಎಂಬ ಕಾವ್ಯವನ್ನು ಸಾಂಗತ್ಯದಲ್ಲಿ ರಚಿಸಿದ್ದಾಳೆ. ಈಕೆ ಸಮಾಜದಲ್ಲಿಯ ಪುರುಷ ಪ್ರಾಧಾನ್ಯವನ್ನು ಸಂಪುರ್ಣ ಒಪ್ಪಿಕೊಂಡು, ಪುರುಷನ ಸುಖ- ಸಂತೋಷಗಳಿಗಾಗಿ ಹೆಣ್ಣು ದುಡಿದರೆ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಸುಖ-ನೆಮ್ಮದಿಗಳಿರುತ್ತವೆ ಎಂಬ ಅಬಿಪ್ರಾಯವನ್ನೇ ತನ್ನ ಕೃತಿಯ ಉದ್ದಕ್ಕೂ ಹೇಳಿಕೊಂಡು ಬಂದಿದ್ದಾಳೆ.

ಕುವರನಾದರೆ ಬಂದ ಗುಣವೇನದರಿಂದ
ಕುವರಿಯಾದೊಡೆ ಕುಂದೇನು;
ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು;
ಪೆಣ್ಣು ಪೆತ್ತವರು ಪೆಚುರ್ಚ್‌ವರು;
ಪೆಣ್ಣ ನಿಂದಿಸಲೇಕೆ ಪೆರರು;
ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು –

ಹೀಗೆ ಸ್ತ್ರೀಪರವಾದ ಚಿಂತನೆಯ, ಹೆಣ್ಣು ಕೀಳಲ್ಲ ಎಂಬ ಭಾವನೆಯ ತಣ್ಣಗಿನ, ಮೆಲುದನಿಯ ಪ್ರತಿಭಟನೆಯ ದನಿಯನ್ನು ನಾವು ಇವಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?

Spread the Knowledge

You may also like...

Leave a Reply

Your email address will not be published. Required fields are marked *