ವಚನಕಾರ- ಘಟ್ಟಿವಾಳಯ್ಯ
ವಚನಕಾರ: ಘಟ್ಟಿವಾಳಯ್ಯ(1160) ಹನ್ನೆರಡನೇ ಶತಮಾನದ ವಚನಕಾರ ಹಾಗೂ ಶರಣ. ಮುದ್ದಣ್ಣ ಇವನ ಪೂರ್ವನಾಮಧೇಯ. ಶಿವಾನುಭವ ಸಾರುವ ನರ್ತನವೆ ಇವನ ಕಾಯಕ. ಕಪಟಿಗಳು ಇವನ ಸದಾಚಾರ ಪ್ರಭಾವದಿಂದಾಗಿ ನೈಜ ಜಂಗಮರಾದದ್ದು ಇವನ ವೈಶಿಷ್ಟ್ಯ. ಮದ್ದಳೆ ಬಾರಿಸುತ್ತಾ ನರ್ತಿಸುವಾಗಲೇ ಕೊನೆಯುಸಿರೆಳೆದನು.
ಘಟ್ಟಿವಾಳಯ್ಯ ಕನ್ನಡದಲ್ಲಿ ೧೪೭ ವಚನಗಳನ್ನು ರಚಿಸಿದ್ದಾನೆ. ಘಟ್ಟಿವಾಳಯ್ಯ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗಾ ಎಂಬ ಅಂಕಿತದಿಂದ ನೂರಾರು ವಚನಗಳನ್ನು ರಚಿಸಿದ್ದಾನೆ. ಇವನ ವಚನಗಳಲ್ಲಿ ಸತ್ಯನಿಷ್ಠುರತೆ ಮತ್ತು ಸದಾಚಾರಗಳು ಎದ್ದುಕಾಣುತ್ತವೆ.
ತನ್ನ ವಚನಗಳ ಮೂಲಕ ಭಕ್ತರ ಡಾಂಭಿಕ, ಅರ್ಥಹೀನ ನಡವಳಿಕೆಗಳೆಲ್ಲವನ್ನು ವ್ಯರ್ಥವೆಂದು ಹೇಳುತ್ತಾನೆ.ವೇಷಧಾರಿಗಳು ಭಕ್ತರಾಗುವುದಿಲ್ಲ ಅಷ್ಟೇ ಅಲ್ಲದೆ, ಶರಣರ ಗುಂಪಿನಲ್ಲಿ ಡಾಂಭಿಕ ಭಕ್ತಿಯ ವೇಷಧಾರಿಗಳು ಸೇರಲು ಅನರ್ಹರೆಂಬುದನ್ನು ತನ್ನ ವಚನದ ಮೂಲಕ ತಿಳಿಸಿದ್ದಾನೆ.
ಗುರು ಲಿಂಗ ಜಂಗಮ ಕಲ್ಪನೆಗೆ ಹೊಸ ಆಯಾಮವನ್ನು ನೀಡುವ ಮತ್ತು ಹೊಸ ವ್ಯಾಖ್ಯಾನ ನೀಡುವ ಇವನ ಧೈರ್ಯ ಪ್ರಶಂಸನೀಯ.
ಘಟ್ಟಿವಾಳಯ್ಯ ಅಂದಿನ ಶರಣರ ನಡುವೆ ಗಮನಾರ್ಹವಾದ ಸ್ಥಾನವನ್ನು ಗಳಿಸಿಕೊಂಡಿದ್ದ. ಅಲ್ಲಮಪ್ರಭು ಇವನನ್ನು ಕುರಿತು ಅಂಗದ ಮೇಲಣ ಲಿಂಗಕ್ಕಿಂಗ ಅಂಗದೊಳಗಣ ಲಿಂಗವ ಹಿಂಗದಂತಿರಬೇಕು, ಘಟ್ಟಿವಾಳಯ್ಯನಂತೆ – ಎಂದೂ ಚೆನ್ನಬಸವಣ್ಣ ಕೂಡಲ ಚೆನ್ನಸಂಗಾ, ನಿನ್ನ ಶರಣ ಘಟ್ಟಿವಾಳಯ್ಯನಲ್ಲದೆ ನೆರೆ ಅರಿವವರಾರೋ-ಎಂದೂ ಮೋಳಿಗೆಯ ಮಾರಯ್ಯ ಲೆಕ್ಕವಿಲ್ಲದ ಆಸೆ ಮನದೊಳಗೆ ಹೊಕ್ಕು ತಿರುಗಾಡುತಿಹ ಚಿಕ್ಕ ಮಕ್ಕಳಿಗೆಲ್ಲಿಯದೋ ನಿರ್ವಾಣ, ಘಟ್ಟಿವಾಳಂಗಲ್ಲದೆ-ಎಂದೂ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಅದೃಶ್ಯ ಕವಿ ಇವನನ್ನು ದೃಢಶರಣಸೀಮಂತ ಮಣಿ ಎಂದು ಕೊಂಡಾಡಿದ್ದಾನೆ.