ಹರಿಹರ ಕವಿ ಪರಿಚಯ
ಕನ್ನಡ ಸಾಹಿತ್ಯದ ಶಿರೋರತ್ನಗಳಲ್ಲಿ ಒಬ್ಬನಾದ ಮಹಾಕವಿ ಹರಿಹರ ಅದರ ದಿಕ್ಕುದೆಸೆಗಳನ್ನು ಬದಲಿಸಿದ ಕ್ರಾಂತಿಕವಿ. ಸಾವವರ ಮೇಲೆ ಮನುಜರ ಮೇಲೆ, ಕನಿಷ್ಠರ ಮೇಲೆ ಕಾವ್ಯರಚನೆ ಮಾಡದೆ. ಶಿವಶರಣರನ್ನು ಕುರಿತು ರಗಳೆ ಛಂದಸ್ಸಿನಲ್ಲಿ ಕಾವ್ಯ ರಚಿಸಿ ಅದನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡ ಸಮರ್ಥಕವಿ. ಈತನ ಕಾಲ ಬಹುಮಟ್ಟಗೆ 13ನೇ ಶತಮಾನದ ಪೂರ್ವಭಾಗ.
ಈತನಿಗೆ ಹರೀಶ್ವರ, ಹರಿಯಣ್ಣ, ಹಂಪೆಯ ಹರಿಹರ ಮೊದಲಾದ ಹೆಸರುಗಳುಂಟು. ಈತನ ಜೀವನಕ್ಷೇತ್ರ ಹಾಗೂ ಕಾವ್ಯಕ್ಷೇತ್ರ ಹಂಪೆ. ಇಷ್ಟದೈವ ಹಂಪೆಯ ವಿರೂಪಾಕ್ವ. ಗುರು ಹಂಪೆಯ ಮಾಯಿದೇವ. ದೋರಸಮುದ್ರದಲ್ಲಿ ನರಸಿಂಹಬಲ್ಲಾಳನ ಆಸ್ಥಾನದಲ್ಲಿ ಕೆಲವು ಕಾಲ ಕರಣಿಕನಾಗಿದ್ದು, ಆನ೦ತರ ಹಂಪೆಗೆ ಬಂದು ಅಲ್ಲಿ ವಿರೂಪಾಕ್ಷನ ಅರ್ಚನೆ ಹಾಗೂ ಕಾವ್ಯ ರಚನೆಗಳಲ್ಲಿ ಹರಿಹರನು ತಲ್ಲೀನನಾದಂತೆ ತೋರುತ್ತದೆ. ಹಂಪೆಯ ವಿರೂಪಾಕ್ಷನಲ್ಲಿ ಹರಿಹರನಿಗಿದ್ದ ಅನನ್ಯ ಭಕ್ತಿಯೇ ಅವನ ಕಾವ್ಯದ ಸಲೆ ಮತ್ತು ನೆಲೆ.
ಅವನು ಜೀವನವನ್ನೇ ಕಾವ್ಯವಾಗಿಸಿಕೊಂಡ ಮಹಾನುಭಾವ. ಪ್ರಧಾನವಾಗಿ ಆತ ಭಾವುಕ ಕವಿ. ರೂಢಮೂಲವಾದ ಚಂಪೂ ಪರಂಪರೆಯಿಂದ ಬಿಡಿಸಿಕೊ೦ಡು ರಗಳೆ ಸಂಪ್ರದಾಯದ ಪ್ರವರ್ತಕನಾದುದು ಅವನ ವ್ಯಕ್ತಿವಿಶಿಷ್ಟತೆಯನ್ನು ಸಾರುತ್ತದೆ. ಆತನು ವಸ್ತು, ಭಾಷೆ. ರೂಪಗಳಲ್ಲಿ ಕ್ರಾಂತಿ ಮಾರ್ಗವೊಂದನ್ನು ತೆರೆದು ಪಸಿದ್ಧನಾದವನು.
ಹಿಂದಿನವರಂತೆ ರಾಮಾಯಣ. ಮಹಾಭಾರತ, ಪುರಾಣಾದಿಗಳಿಗೆ ಶರಣಾಗದೆ ಹತ್ತಿರದಲ್ಲೂ ದೂರದಲ್ಲೂ ಇದ್ದ ಶಿವಶರಣರ ಜೀವನವನ್ನು ವಸ್ತುವಾಗಿ ಆರಿಸಿಕೊಂಡದ್ದು ಹೊಸ ದೃಷ್ಟಿಗೆ ಸಾಕ್ಷಿಯಾಗಿದೆ. ಗಿರಿಜಾ ಕಲ್ಯಾಣ, ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ ಮತ್ತು ಶಿವಶರಣರ ರಗಳೆಗಳು- ಹರಿಹರನ ಕೃತಿಗಳು. ಅವನು 106 ರಗಳೆಗಳನ್ನು ಬರೆದ್ದಾನೆಂಬುದು ಬಹುಮಂದಿ ವಿದ್ವಾಂಸರ, ಸಂಶೋಧಕರ ಅಭಿಮತವಾಗಿದೆ.