ಸು. ರಂ. ಎಕ್ಕುಂಡಿ ಕವಿ ಪರಿಚಯ
ಕವಿ-ಕಾವ್ಯ ಪರಿಚಯ :
ಸು. ರಂ. ಎಕ್ಕುಂಡಿಯವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ 1927ರಲ್ಲಿ ಜನಿಸಿದರು. ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು. ಇವರ ಕೃತಿಗಳು ‘ಹಾವಾಡಿಗರು’, ‘ಕಥನ ಕವನಗಳು’, ‘ಬಕುಲದ ಹೂಗಳು’, ‘ಮತ್ಸ್ಯಗಂಧಿ’, ‘ಸ೦ತಾನ’, ‘ನೆರಳು’, ‘ಬೆಳ್ಳಕ್ಕಿಗಳು’ ಮುಂತಾದವು. ಕಥನ ಕವನ ಬರೆಯುವುದರಲ್ಲಿ ಇವರು ಸಿದ್ಧಹಸ್ತರು. ‘ರಾಜ್ಯ ಶಿಕ್ಷಕ ಪ್ರಶಸ್ತಿ’, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ’, “ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಹಾಗೂ ‘ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ’ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. 1995ರಲ್ಲಿ ಇವರು ನಿಧನರಾದರು.
ಅವರ “ಕಥನ ಕವನಗಳು’ ಎ೦ಬ ಸ೦ಕಲನದಲ್ಲಿ ಅನಾದಿ ಕಾಲದಿಂದಲೂ ಬಂದ ಸ್ತ್ರೀ ಸಹಜ ಭಯ ಮಗಳಿಗೆ ಅಂಟದಂತೆ, ಕತ್ತಲಲ್ಲಿ ಎಡವದಂತೆ, ಸಾಂಕೇತಿಕವಾಗಿ ದೀಪ ಹಚ್ಚಿಡಲು ತಾಯಿ ಮಗಳಿಗೆ ಹೇಳುತ್ತಾಳೆ. ಆದರೆ ಪರಂಪರಾಗತ ನಿಯಮಗಳನ್ನು ದಾಟಿ ನಿಲ್ಲುವ ನಾಗಿ, ಪ್ರಕೃತಿಪರ ಪ್ರೀತಿಯಲ್ಲಿ ತನ್ನ ಹಾದಿಯನ್ನು ಕಂಡುಕೊಳ್ಳುತ್ತಾಳೆ. ‘ಬೆಕ್ಕು’, ‘ಹಾದಿ’, ‘ಪ್ರೀತಿ’ ಇವು ಸಾರ್ಥಕ ಸಂಕೇತಗಳಾಗಿ ಬಳಕೆಯಾಗಿವೆ. ನೀಲಿ, ಹಸಿರು, ಜರಿ ಸೀರೆಗಳ ಆಕರ್ಷಣೆಗೆ ಒಳಗಾಗಿದ್ದ ನಾಗಿ ಬಣ್ಣದ ಬದುಕಿಗೆ ತನ್ನನ್ನು ತೆರೆದುಕೊಳ್ಳುತ್ತಾಳೆ. ಇಂದ್ರಧನುವಿನಂತೆ ಹೊಳೆವ ರವಿಕೆ, ಚಿತ್ತ ಚಾಂಚಲ್ಯತೆಗೆ ಸಂಕೇತವಾಗಿ ನಿಲ್ಲುತ್ತದೆ. ಹಾಲಿಗಾಗಿ ಹೊಂಚು ಹಾಕುವ ಬೆಕ್ಕು, ಸಪ್ಪಳವನ್ನು ಮಾಡದೇ ತನ್ನ ಕೃತ್ಯವನ್ನು ಸಾಧಿಸಿ ಬಿಡುತ್ತದೆ. ಸುಪ್ತವಾದ ನೆಲೆಗಳಲ್ಲಿ ಪ್ರೀತಿ ಹುಟ್ಟಿ ಯಾರಿಗೂ ಸುಳಿವು ಕೊಡದೆ. ತನ್ನ ಸುಳಿಯಲ್ಲಿ ಸಿಲುಕಿಸಿಕೊಳ್ಳುತ್ತದೆ. ಒಳಗುದಿ ಹೊತ್ತು. ಊರು ಕೇರಿಗಳಲ್ಲಿ ಮಗಳಿಗಾಗಿ ಹಂಬಲಿಸುವ ತಂದೆ-ತಾಯಿಗಳ ಹುಡುಕಾಟದೊಂದಿಗೆ ಕಥನ ಕವನ ಮುಕ್ತಾಯಗೊಳ್ಳುತ್ತದೆ. “ನಾಗಿ’ ಏನಾದಳು? ಎಂಬ ನಿಗೂಢ ಪಶ್ನೆಯನ್ನು ಕವಿ ಓದುಗರಿಗೆ ಬಿಟ್ಟುಬಿಡುತ್ತಾರೆ. ಶಬ್ದ ಪ್ರಪಂಚದ ನವಿರುಗಾರಿಕೆ ಹಾಗೂ ಕಥನ ಕವನಕ್ಕೆ ಇರಬೇಕಾದ ಎಲ್ಲ ಲಕ್ಷಣಗಳನ್ನು ಕವನ ಉಳಿಸಿಕೊಂಡಿದೆ.