ಕಥನ ಕವನ ಸಾಹಿತ್ಯ ಪ್ರಕಾರ

ಒಂದು ವಸ್ತುವನ್ನು ತೆಗೆದುಕೊಂಡು, ಆ ವಸ್ತುವಿನ ಕಥೆಯನ್ನು ಕವನ ರೂಪದಲ್ಲಿ ಸುಂದರವಾಗಿ ಮೂಡಿಸುವುದೇ ‘ಕಥನ ಕವನ’. ಈ ಕವನದಲ್ಲಿ ಕಥೆಯು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಈ ರೀತಿಯ ಕವನಗಳಲ್ಲಿ ಛಂದಸ್ಸಿಗಿ೦ತ ಕಥೆಗೇ ಹೆಚ್ಚು ಮಹತ್ವ. ಕಥೆಯ ವಸ್ತುವಿಗೆ ಅನುಗುಣವಾಗಿ ಅರ್ಥ ಪರಿಣಾಮದ ಕಡೆಗೆ ಗಮನವಿಟ್ಟು ಛಂದಸ್ಸು ರೂಪಿತವಾಗುತ್ತದೆ. ಜನಪದ ಸಾಹಿತ್ಯದಲ್ಲೂ ಉತ್ತಮ ಕಥನ ಕವನಗಳಿವೆ.

ಡಾ. ಬೆಟಗೇರಿ ಕೃಷ್ಣಶರ್ಮರು ಸಂಪಾದಿಸಿದ ‘ಜನಪದ ಕಥನ ಕವನ’, ‘ಗೋವಿನ ಕಥೆ’ ಇದಕ್ಕೆ ಉದಾಹರಣೆ. ನವೋದಯ ಕವಿಗಳಲ್ಲಿ ಪಂಜೆ ಮಂಗೇಶರಾಯ, ಗೋವಿಂದ ಪೈ, ಕಡೆಂಗೋಡ್ಲು ಶಂಕರಭಟ್ಟ, ಪು.ತಿ.ನ., ಕುವೆಂಪು, ಮಾಸ್ತಿ ಮುಂತಾದವರು ಕಥನ ಕವನಗಳನ್ನು ಬರೆದಿದ್ದಾರೆ. ಭಕ್ತಿ, ಶೃಂಗಾರ, ನೀತಿ, ಸಾಹಸ, ವೀರರ ಚರಿತೆಗಳು ಸಾಮಾನ್ಯವಾಗಿ ಕಥನ ಕವನದಲ್ಲಿ ಸೇರಿರುತ್ತವೆ. ಕುವೆ೦ಪು ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’, ಉತ್ತಮ ಕಥನ ಕವನ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಸು.ರಂ. ಎಕ್ಕುಂಡಿಯವರ ಕಥನ ಕವನಗಳೂ ಸ್ಪಷ್ಟ ಸೇರ್ಪಡೆ.

ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ
ಇಲಿಗಳು ಬಡಿದವು ನಾಯಿಗಳ ಇಲಿಗಳು ಕಡಿದವು ಬೆಕ್ಕುಗಳ
ಕೆಲವನು ಕೊಂದವು ಕೆಲವನು ತಿಂದವು ಕೆಲವನು ಬೆದರಿಸಿ ಹಿಂಬಾಲಿಸಿದವು

ಕುವೆ೦ಪು ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’

ಕಥನ ಕವನದ ಪ್ರಮುಖ ಲಕ್ಷಣಗಳು

  • ಕನ್ನಡದಲ್ಲಿ ಲಾವಣಿ ಅಥವಾ ಕಥನ ಕವನ ಎ೦ದು ಕರೆಯಲಾಗುವ ಪ್ರಕಾರವೇ ಇಂಗ್ಲಿಷಿನ ‘ಬ್ಯಾಲೆಡ್‌’ (ballad).
  • ವಿಶ್ವದ ಎಲ್ಲ ಭಾಷೆಗಳಲ್ಲೂ ಕಾಣಸಿಗುವ ಲಾವಣಿಗಳು ನಾಟಕೀಯ ಗುಣಗಳನ್ನು ಹೊಂದಿರುತ್ತವೆ.
  • ಸರಳ ಛಂದಸ್ಸು ಹಾಗೂ ಲಯಗಳಿಂದ ಕೂಡಿರುತ್ತವೆ. ಇವುಗಳ ಮುಖ್ಯ ಉದ್ದೇಶ ಓದುಗರಿಗೆ ಅರ್ಥ ಮಾಡಿಸುವುದಾಗಿದೆಯೆ ಹೊರತು ವೈಯಕ್ತಿಕ ವಿಚಾರ ಮಂಡನೆಯಲ್ಲ.
  • ಸಾಮಾನ್ಯವಾಗಿ ಯುದ್ಧ, ಸೋಲು-ಗೆಲವು, ಹಾಸ್ಯ, ತ್ಯಾಗ, ಬಲಿದಾನ, ಮಾಯೆ, ಅತಿಮಾನುಷ ಶಕ್ತಿ, ನಿಷ್ಠೆ ಪ್ರೇಮ, ಸಾವು ಮುಂತಾದ ವಸ್ತುಗಳನ್ನು ಹೊಂದಿರುತ್ತವೆ.
  • ಕವನದ ಉದ್ದಕ್ಕೂ ಕೆಲವು ಸಾಲುಗಳು ಪುನರುಕ್ತಿಯಾಗುತ್ತವೆ.
  • 19ನೇ ಶತಮಾನದ ವೇಳೆಗೆ ಬ್ಯಾಲೆಡ್‌ಗಳನ್ನು ಸಾಹಿತ್ಯ ಕೃತಿಗಳೆಂದು ರೊಮ್ಯಾಂಟಿಕ್‌ ಕವಿಗಳು ಕರೆದರು.
  • ಕಥನ ಕವನಗಳನ್ನು ಸಾಂಪ್ರದಾಯಿಕ ಕಥನ ಕವನ ಮತ್ತು ಸಾಹಿತ್ಯಕ ಕವನ ಕಥನ ಎಂದು ವಿಭಾಗಿಸಲಾಗಿದೆ.
  • ಈ ಕಥನ ಕವನಗಳು ಯಾವುದೋ ಕಾಲದಲ್ಲಿ ಒಬ್ಬನಿ೦ದ ಹುಟ್ಟಿ ಬಾಯಿಯಿಂದ ಬಾಯಿಗೆ ರವಾನೆಗೊಂಡು ಸೃಷ್ಟಿಕರ್ತ ಅನಾಮಧೇಯನಾಗುತ್ತಾನೆ. ಬಾಯಿಯಿ೦ದ ಬಾಯಿಗೆ ರವಾನೆಯಾಗುವಾಗ ಹೊಸ ಹೊಸ ಅ೦ಶಗಳು ಸೇರಿಕೊಂಡು ಮುಂದುವರೆಯುತ್ತವೆ.
  • 19ನೇ ಶತಮಾನದಲ್ಲಿ ಶಿಷ್ಟ ಕವಿಗಳಿಂದ ರಚನೆಗೊಂಡು ಪ್ರಾಚೀನ ಜನಪದೀಯ ರೂಪವನ್ನು ಹೊಂದಿದೆ.

Spread the Knowledge

You may also like...

Leave a Reply

Your email address will not be published. Required fields are marked *