ಶ್ರೀ ಪಂಜೆ ಮಂಗೇಶರಾಯರ ಜೀವನಚರಿತ್ರೆ

ಪಂಜೆ ಮಂಗೇಶರಾಯರು

ಪಂಜೆ ಮಂಗೇಶರಾಯರ “ಐತಿಹಾಸಿಕ ಕಥಾವಳಿ“, 1945 ಪುಸ್ತಕದ ಮುನ್ನುಡಿಯಲ್ಲಿರುವ ಲೇಖನ

ಇವರು ಕ್ರಿ. ಶ. 1874ರಲ್ಲಿ ಬಂಟವಾಳದಲ್ಲಿ ಜನ್ಮವೆತ್ತಿದರು. ಇವರು ಬಹಳ ಬಡ ಕುಟುಂಬದಲ್ಲಿ ಹುಟ್ಟಿದುದರಿಂದ ಬಾಲ್ಯದಿಂದಲೂ ಇವರಿಗೆ ಬಡಪತ್ತಿನ ಕಷ್ಟ ಸಂಕಷ್ಟಗಳ ತುಂಬಾ ಪರಿಚಯವಿತ್ತು. ಐದು ಜನ ಅಣ್ಣತಮ್ಮಂದಿರಲ್ಲಿ ಇವರು ಎರಡನೆಯವರಾದರೂ ಇವರ ಬಡ ತಂದೆಯು ಬೇಗನೆ ಮಡಿದುದರಿಂದ ಇವರು ಬಿ. ಎ. ಪಾಸು ಮಾಡುವ ಮೊದಲೆ ಕುಟುಂಬ ಸಂರಕ್ಷಣೆ ಮತ್ತು ತಮ್ಮಂದಿರ ವಿದ್ಯಾಭ್ಯಾಸದ ಭಾರವು ಇವರ ಮೇಲೆ ಬಿತ್ತು. ಇವರ ಹಿರಿಯಣ್ಣನು ಬಿ. ಎ. ಪಾಸು ಮಾಡಿದೊಡನೆ ದಕ್ಷಿಣ ಮಹಾರಾಷ್ಟ್ರದಲ್ಲಿ ಕಲೆಕ್ಟರ್ ಅಥವಾ ಡೆಪ್ಯುಟಿ ಕಮಿಶನ್ನರ ಕಚೇರಿಯಲ್ಲಿ ಗುಮಾಸ್ತರಾದರು. ಇವರ ಕಡಿಮೆ ಸಂಬಳೆದಿಂದ ಕುಟುಂಬದ ಸಂರಕ್ಷಣೆ ಸಾಧ್ಯವಾಗಲಿಲ್ಲ. ಶ್ರೀ।ಮಂಗೇಶರಾಯರು ಹೀಗಾಗಿ ಗಣಿತವನ್ನು ತೆಗೆದು ಕೊಂಡು ಬಿ. ಎ. ಪರೀಕ್ಷೆಗೆ ಮದ್ರಾಸಿಗೆ ಹೋಗಲಾರದೆ ಚರಿತ್ರೆಯನ್ನು ಐಚ್ಛಿಕವಾಗಿ ತೆಗೆದುಕೊಂಡು ಮಂಗಳೂರಿನ ಸೈಂಟ್‌ ಎಲ್ಫೊಸಿಯಸ್‌ ಕೊಲೇಜಿನಲ್ಲಿ ಇಂಗ್ಲೀಷ್ ಮತ್ತು ಕನ್ನಡ ಶಾಖೆಗಳಲ್ಲಿ ಪಾಸುಮಾಡಿ ಮಂಗಳೂರಿನ ಗವರ್ನಮೆಂಟ್ ಕಾಲೇಜಿನಲ್ಲಿ ಬರೆ ೨೦ ರೂಪಾಯಿ ಸಂಬಳದ ಮೇಲೆ ಕನ್ನಡ ಪಂಡಿತರಾಗಿ ಸೇರಿದರು. ಕುಟುಂಬದ ಉದರ ನಿರ್ವಾಣಕ್ಕೆ ಇವರು ವಿದ್ಯಾರ್ಥಿಗಳಿಗೆ ಗಣಿತ ಇತ್ಯಾದಿಗಳನ್ನು ಖಾಸಗಿ ಕಲಿಸತೊಡಗಿದರು. ಅವರ ಆಗಿನ ನೂತನ ರೀತಿಗಳನ್ನು ನಂತರ ಬಹಳ ಕಾಲದವರೆಗೂ ಅವರ ವಿದ್ಯಾರ್ಥಿಗಳು ಸ್ಮರಿಸುತ್ತಿದ್ದರು. ಹೀಗಾಗಿ ಸಾಧಾರಣವಾಗಿ ದಿನಕ್ಕೆ 16 ತಾಸುಗಳಷ್ಟು ಕಾಲ ದುಡಿಯಬೇಕಾಯಿತು. ಇವರು ಕನ್ನಡವನ್ನು ಕಲಿಸತೊಡಗಿದೊಡನೆ ಹಳೆ ಕಾವ್ಯ ಓದುವ ಕ್ರಮವು ಬಿದ್ದು ಹೋಗಿ ರಾಗಯುಕ್ತವಾಗಿ ಓದಲು ಪ್ರಾರಂಭವಾಗಿ ಕನ್ನಡ ಕಲಿಯುವವರಿಗೆ ಹೊಸಹುರುಪು ಬಂತು. ಅವರು ವಿದ್ಯಾರ್ಥಿಯಾಗಿರುವಾಗಲೂ ವಿಕಟ ಕವಿತ್ವವನ್ನು ಕುಳಿತಲ್ಲೆ ಮಾಡುತಿದ್ದುದರಿಂದ ಯಾವ ಕೂಟದಲ್ಲಿಯೂ ಮನೋರಂಜನೆಯನ್ನು ಮಾಡುತಿದ್ದರು. ಈ ಕಾಲದಲ್ಲಿ ಕೊಂಕಣಿಯಿಂದ ಒಂದೆರಡು ನಾಟಕಗಳೂ ಹಾಡುಗಳೂ ಮನರಂಜನೆ ಮಾಡುವುದನ್ನು ನೋಡಿ ನೂತನ ಕವಿತ್ವವನ್ನು ಬರೆಯಬೇಕೆಂಬ ಕುತೂಹಲವು ಇವರಲ್ಲಿ ಉಂಟಾಯಿತು. ಇವರ ಮೆದುಳಿನ ಸಾಮರ್ಥ್ಯವು ಬಹಳ ಚೆನ್ನಾಗಿದ್ದುದರಿಂದ ಇವರಿಗೆ ಓದಿದ ಯಾವ ಭಾಗವೂ ಫಕ್ಕನೆ ಬಾಯಿಪಾಠವಾಗುತಿತ್ತು. ಹೀಗಾಗಿ ಇವರು ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ತೊರವೆಯ ರಾಮಾಯಣ ಇತ್ಯಾದಿಗಳನ್ನು ಓದಿ ಹಲವಂಶವನ್ನು ಬಾಯಿಪಾಠವಾಗಿ ಹೇಳುತ್ತಿದ್ದರು, ಇದರೊಂದಿಗೆ ಹಳೆಗನ್ನಡದ ಅಭ್ಯಾಸವೂ ಇವರಿಗೆ ಚೆನ್ನಾಗಿ ಆಯಿತು.

ಇನರು 1902ರಲ್ಲಿ ಬಿ. ಎ. ಪಾಸು ಸಂಪೂರ್ಣವಾಗಿ ಮಾಡಿ ಸೈದಾಪೇಟೆಯ ಟ್ರೈನಿಂಗ್ ಕಾಲೇಜಿನಲ್ಲಿ ಆರೇ ತಿಂಗಳು ವ್ಯಾಸಂಗ ಮಾಡಿ ಎಲ್‌. ಟಿ. ಪರೀಕ್ಸೆ ಯನ್ನು 1905ರಲ್ಲಿ ಮುಗಿಸಿದರು. ಗವರ್ನಮೆಂಟ ಕಾಲೇಜಿನಲ್ಲಿ ಕೆಲವು ತಿಂಗಳು ಅಧ್ಯಾಪಕರಿದ್ದಾಗಲೆ, ಇವರಿಗೆ ಹೊಸತಾಗಿ ಏರ್ಪಟ್ಟ ಮಂಗಳೂರು ರೇಂಜಿನ ಡೆಪ್ಯುಟಿ ಇನ್ಸ್‌ಪೆಕ್ಟರರಾಗಿ(ಆಗ ಸಬ್‌ ಅಸಿಸ್ಟೆಂಟ್ ಇನ್ಸ್‌ಪೆಕ್ಟರರು) ನೇಮಕವಾಯಿತು . ಅವರ ಭಾಷಾನುಭವ, ಶಿಕ್ಷಣಜ್ಞಾನಗಳನ್ನು ಪರಿಶೀಲಿಸಿ ಮನಗಂಡ ಮಿ. ಪಿ.ಪಿ. ಬ್ರೆತ್‌ವೈಟ್‌ (ಶಾಲಾ ಇನ್ಸ್‌ಸೆಕ್ಟರ)ರ ಸಹಾಯದಿಂದ ಇವರಿಗೆ ಮಿ. ಇ. ಮಾರ್ಸಡೆನರ ಪರಿಚಯವಾಯಿತು. ಇವರು ಬಾಸೆಲ್‌ ಮಿಶನಿಗೋಸ್ಕರ ಒಂದೆರಡು ರೀಡರುಗಳನ್ನು ತಯಾರಿಸಿದ್ದನ್ನು ಕಂಡು ಮಾರ್ಸಡೆನರು ಇವರನ್ನು ತಮ್ಮ ಕೈಕೆಳಗೆ ಮೆಕಮಿಲ್ಲನ್(Macmillan) ಕಂಪೆನಿಯ ರೀಡರುಗಳನ್ನು ಬರೆಯುವುದಕ್ಕೆ ಪ್ರೋತ್ಸಾಹಿಸಿದರು. ಆಗ ಇವರಿಗೆ ಹಳೆ ರೀಡರು, ಹಳೆ ಕಾವ್ಯಪುಂಜ ಇತ್ಯಾದಿಗಳಲ್ಲಿ ಇರುವ ಪದ್ಯಗಳು ಎಷ್ಟರ ಮಟ್ಟಿಗೆ ಚಿಕ್ಕ ಮಕ್ಕಳಿಗೆ ಉಕ್ಕಿನ ಕಡಲೆಗಳು ಆಗಿವೆ ಎಂಬ ಭಾವನೆಯು ಮೂಡಿತ್ತು. ಮೈಸೂರಿನ ಪದ್ಯಸಾರವೂ ಅವರಿಗೆ ರುಚಿಸಲಿಲ್ಲ; ಆಗ ಇವರೇ ಚಿಕ್ಕ ಕಾವ್ಯಗಳನ್ನು ಬರೆದು ಹಾಡುತಿದ್ದರು. ಅದಕ್ಕಿಂತ ಮೊದಲೆ “ಸುವಾಸಿನಿ”ಯ ಪ್ರಮುಖ ಲೇಖಕರಾಗಿದ ಇವರ ಚಿಕ್ಕ ಹಾಡುಗಳೂ ಹಾಸ್ಕಮಯವಾದ ಚಿಕ್ಕ ಕಥೆಗಳೂ (ನನ್ನ ಚಿಕ್ಕತಾಯಿ, ಚಿಕ್ಕವ್ವ, ಭಾರತ ಶ್ರವಣ ಇತ್ಯಾದಿ ಭಾರತ ಸ್ತ್ರೀರತ್ನಗಳನ್ನು ಕುರಿತು ಚಿಕ್ಕ ಕಾದಂಬರಿಗಳೂ ಹೊರಬಿದ್ದಿದ್ದುವು (ದುರ್ಗಾವತಿ, ಶೈಲಿನಿ ಇತ್ಯಾದಿ). “ಸುವಾಸಿನಿ” ಬಿದ್ದುಹೋದ ಅನೆಂತರ ಇವರ ಅನುಕರಣದಿಂದಲೇ ದಕ್ಷಿಣ ಮಹಾರಾಷ್ಟ್ರದಲ್ಲಿ ಚಿಕ್ಕದೊಂದು ಮಾಸಿಕ ವಹಿಯು ಹೊರಟಿತು. ಆದರೆ ಸಾಕಷ್ಟು ಪ್ರೋತ್ಸಾಹ ಸಿಗದೆ ಅದೂ ಬಿದ್ದುಹೋಯಿತು. “ಶ್ರೀನಿವಾಸ”ರು ಇನ್ನೂ ವಿದ್ಯಾರ್ಥಿಗಳಾಗಿರುವಾಗಲೇ ಈ ಚಿಕ್ಕ ಸಾಹಿತ್ಯದ ಕಥೆಗಳು ಹೊರಬಿದ್ದುದರಿಂದ ಪಿತಾಮಹರೆಂದು ಶ್ರೀಃ ಹೇಳಬಹುದಾಗಿದೆ. ಅನಂತರ ಅವರು ಬರೆದ ಚಿಕ್ಕ ಕಾವ್ಯಗಳು “ಕವಿಶಿಷ್ಯ’ ಎಂಬ ಹೆಸರಿನಿಂದ ಬಾಸೆಲ ಮಿಶ್ಶನಿನವರ ಒಂದನೆ, ಎರಡನೆ, ಮೂರನೆ ಪದ್ಯಪುಸ್ತಕಗಳಲ್ಲಿ ಪ್ರಕಟವಾಗಿವೆ. ತಮ್ಮ ಕಾವ್ಯವನ್ನು ತಾವೇ ಶಾಲೆಗಳಲ್ಲಿ ಪ್ರಚಾರಮಾಡುವುದು ಶ್ರೀ । ಮೆಂಗೇಶರಾಯರಿಗೆ ಅನುಚಿತವಾಗಿ ಕಂಡಿತು. ಹೀಗಾಗಿ ವ್ಯಾಪಾರದೃಷ್ಟಿಯಿಂದ ನೋಡಿದರೆ, ಅದರ ಅನಂತರ ಹೊರಟ ನೂರಾರು ಪದ್ಯಪುಸ್ತಕಗಳು ಪಠ್ಯಪುಸ್ತಕವಾಗಿ ಮಾರಾಟವಾಗಿದ್ದರೂ ಈ ಮೂರು ಪುಸ್ತಕಗಳ ಸ್ಥಾನದಲ್ಲಿ ಇದುವರೆಗೆ ನಿಲ್ಲಲಿಲ್ಲವಂಬುದು ಖಂಡಿತ. ಆ ಪದ್ಯಗಳ ಹುರುಳೇನೆಂದು ತಿಳಿಯದೆ “ಹಾವೊಳು ಹೂವೆ ಹೂವೊಳು ಹಾವೇ! ಏನು ಪದ್ಯಗಳಿವು” ಎಂದು ಹೊಟ್ಟೆ ಉರಿಯಿಂದ ಮೊರೆ ಸುರುಳಿ ಮಾಡಿ ನಕ್ಕವರುಂಟು. ಅಂಥವರಿಗೆ ಮಕ್ಕಳ ಹೃದಯದ ಪರಿಚಯವೇ ಇಲ್ಲವೆಂಬುದೊಂದು ವಿಷಾದ.

ಶ್ರೀ । ಮೆಂಗೇಶರಾಯರು ಮಹಾಕಾವ್ಯಗಳನ್ನು ಬರೆಯುವ ಹವ್ಯಾಸಕ್ಕೆ ಹೋಗಲಿಲ್ಲ. ಕುಮಾರವ್ಯಾಸ ಭಾರತದಿಂದ ಅವರು ಹೆಕ್ಕಿದ ‘ಕರ್ಣಚರಿತ’, ಜೈಮಿನಿ ಭಾರತದಿಂದ ತೆಗೆದ ‘ಚಂದ್ರಹಾಸನ ಕಥೆ’ ಇವು ಈ ಎರಡು ಉದ್ಗ್ರಂಥಗಳ ಸವಿಯನ್ನು ಮಕ್ಕಳಿಗೆ ಹತ್ತಿಸಲಿಕ್ಕೆ ಅನುಕೂಲವಾಗಿದೆ. ಚಿಕ್ಕಮಕ್ಕಳಲ್ಲಿ ಯಾವ ಕಾವ್ಯವು ಮನೋರಂಜಕವಾಗುತ್ತದೆಂದು ಚೆನ್ನಾಗಿ ಶೋಧಿಸಿ ಸಾಹಸಮಾಡಿದವರಲ್ಲಿ ಅವರು ಅಗ್ರಗಣ್ಯರೆಂದು ಕಂಠೋಕ್ತವಾಗಿ ಹೇಳಿದರೆ ಯಾರೂ ಅಸೂಯೆಪಡಲು ಕಾರಣವಿಲ್ಲ.

ಇಡೀ ಕರ್ಣಾಟಕದಲ್ಲಿ ಇವರು ಈ ವಿಷಯದಲ್ಲಿ ಅಪ್ರತಿಮರು, ಕನ್ನಡವು ಮಾತೃ ಭಾಷೆಯಲ್ಲದ ಈ ಜಿಲ್ಲೆಯಲ್ಲಿ ಕನ್ನಡದ ಮೇಲೆ ಅಭಿಮಾನ ಹುಟ್ಟಿಸಿ, ಹಳ್ಳಿಪಳ್ಳಿಗಳಲ್ಲಿ ಸರ್ಕೀಟು ಬೆಳೆಯಿಸುವಾಗ ಅಲ್ಲಲ್ಲಿ ಕನ್ನಡ ಓದಿದವರ ವರಿಚಯ ಮಾಡಿಕೊಂಡು, ಅವರೊಡನೆ ಹಳೇ ಕಾವ್ಯಗಳ ನಿಜವಾದ ವೈಷಿಷ್ಟ್ಯವೇನು, ಈ ಕಾಲಕ್ಕೆ ತಕ್ಕ ಸಾಹಿತ್ಯವು ಹೇಗಿರಬೇಕು, ಸಾಯಬಾರದ ಸಾಹಿತ್ಯವೆಂದರೆ ಅದರ ಲಕ್ಷ್ಮಣಗಳೇನಿರಬೇಕು ಎಂದು ನಿರ್ದಾಕ್ಸಿಣ್ಯದಿಂದ ಚರ್ಚಿಸುವ ಸಾಹಸ ಮಾಡಿದವರಲ್ಲಿ ಇವರೇ ಮೊದಲಿಗರೆಂದು ಸ್ಮರಣೆ ಮಾಡಬೇಕಾಗಿದೆ. ಇವರು ಈ ಆಧುನಿಕ ಸಾಹಿತ್ಯವನ್ನು ಸಾಧ್ಯವಿದ್ದ ಮಟ್ಟಿಗೆ ಎತ್ತಿಹಿಡಿಯಬೇಕೆಂದು ಎಂದು ಯತ್ನಿಸುವಾಗ, ಸಂಪ್ರದಾಯವಾದಿಗಳೂ , ಪೂರ್ವ ಕವಿಗಳ ಮೇಲೆ ಅಂಧಭಕ್ತಿಯುಳ್ಳವರೂ ಇವರ ವಿಕಾಸವಾದವನ್ನು ಖಂಡಿಸಿ, ಇವರು ಆಧುನಿಕ ಗ್ರಂಥಗಳ ಅಂಧಭಕ್ತರು ಎಂದು ಭಾವಿಸುತ್ತಾರೆ. ಆದರೆ ಇವರಿಗೆ ಪಾಚೀನ ಕವಿಗಳ ಮೇಲೆ ಅಭಿಮಾನವೇನೂ ಕಡಿಮೆಯಿಲ್ಲ. ಎಲ್ಲಾ ಪ್ರಾಚೀನ ಕವಿಗಳು ವಂದ್ಯರು, ಎಲ್ಲಾ ಆಧುನಿಕ ಕವಿಗಳು ನಿಂದ್ಯರು ಎಂಬ ಈ ತೀರ್ಮಾನಕ್ಕೆ ಮಾತ್ರ ಇವರು ಬಗ್ಗುವುದಿಲ್ಲ. ಸಾಹಿತ್ಯವು ಉಳಿಯಬೇಕಾದರೆ ಅದು ಬೆಳೆಯಬೇಕು, ಇದಕ್ಕೆ ತೀರಾ ಸಂಸ್ಕೃತದ ಬೆಂಬಲವೇ ಸಾಲದು, ಆಧುನಿಕ ಸಂಸ್ಕೃತಿಯ ಭಾಷೆಗಳ ವರ್ಚಸ್ಸು ಕನ್ನಡದ ಮೇಲೆಯೂ ಬೀಳಬೇಕು; ಇದು ಭಾವಿ ಬೆಳವಣಿಗೆಗೆ ನೈಸರ್ಗಿಕವಾದ ಮಾರ್ಗ ಎಂಬುದು ಇವರ ಪ್ರತಿಪಾದನೆ.

ಇವರ ಅಪ್ರತಿಮವಾದ ಶಿಕ್ಷಣ ಪರಿಚಯದ ಪರಿಣಾಮವಾಗಿ ಹುಟ್ಟಿದ “ಮಕ್ಕಳ ಕಥೆಗಳು” ಮಾತೃಭಾಷೆ ಕನ್ನಡವಲ್ಲದ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವುದಕ್ಕೆ ಸುಗಮವಾದ ದಾರಿಯೆಂಬುದು ಸ್ವಯಂ ಸಿದ್ಧವಾಗಿದೆ. ಅವರು ಅಜನ್ಮಭೋಧಕರು. ಯಾವುದೊಂದು ವಿಷಯವನ್ನೂ ಸುಲಭ ರೀತಿಯಲ್ಲಿ ಬೋಧಿಸುವುದಕ್ಕೆ ಯೋಗ್ಯತೆಯುಳ್ಳವರು. ಅವರ ಪ್ರಚಾರಕಾರ್ಯದ ಪರಿಣಾಮವು ಕನ್ನಡ ಸಾಹಿತ್ಯದ ಏಳ್ಗೆ ಯಲ್ಲಿ ಚಿರಸ್ಥಾಯಿಯಾಗಿ ನಿಲ್ಲುವುದೆಂಬದರಲ್ಲಿ ಸಂದೇಹವಿಲ್ಲ.

ಇವರ ವಿದ್ವತ್ತೆಯ ಪರಿಚಯ, ಇವರ ರಸಭರಿತವಾದ ಮತ್ತು ವಿನೋದಕರ ಸಂಭಾಷಣೆ ಇವುಗಳಿಂದ ಮೈಸೂರು, ದಕ್ಷಿಣ ಮಹಾರಾಷ್ಟ್ರಗಳಲ್ಲಿರುವ ಕನ್ನಡ ಸಾಹಿತಿಗಳ ಸ್ನೇಹವು ಅವರಿಗೆ ಆದದ್ದಲ್ಲದೆ, ಅವರೆ ಶಿಕ್ಷಣ ಸಾಮರ್ಥ್ಯವನ್ನು ಗೊತ್ತು ಹಚ್ಚಿದ ಧಾರವಾಡ ಜಿಲ್ಲೆಯ ಶಾಲಾ ಇನ್ಸ್‌ಪೆಕ್ಟರರಾಗಿದ್ದ ಮಿ. ವಕೀಲರ ಪ್ರಯತ್ನದಿಂದ ಜರುಗಿದ ಉಪಾಧ್ಯಾಯರ ಸಮ್ಮೇಲನದಲ್ಲಿ ಇಂಗ್ಲಿಷು, ಗಣಿತ ಮುಂತಾದ ವಿಷಯಗಳಲ್ಲಿ ಮಾದರಿ ಪಾಠಗಳನ್ನು ಶ್ರೀಯುತ ಪಂಜೆ ಮಂಗೇಶರಾಯರಿಂದ ಕೊಡಿಸಿ ಪ್ರಾಥಮಿಕ ಉಪಾಧ್ಯಾಯರಲ್ಲಿ ಹೊಸ ಹುರುಪು ಬರುವಂತೆ ಮಾಡಲಾಯಿತು.

ಹಾಗೆಯೆ, ಹಿಂದೆ ಎರಡು ಮೂರು ಸಲ ಬಂದ ಆಮಂತ್ರಣವನ್ನು ಶ್ರೀ। ಮಂಗೇಶರಾಯರ ತಮ್ಮ ಸ್ವಿಭಾನಿಕವಾದ ವಿಷಯದಿಂದ ಅಂಗೀಕರಿಸದೆ ಇದ್ದರೂ ರಾಯಚೂರಿನಲ್ಲಿ ಜರುಗಿದ ಇಪ್ಪತ್ತನೆಯ ಕರ್ನಾಟಕ ಪರಿಷತ್ತಿನ ಅಧಿವೇಶನದಲ್ಲಿ ಹಲವು ಕನ್ನಡ ಸಾಹಿತಿಗಳ ಒತ್ತಾಯದಿಂದ ಅವರು ಅಧ್ಯಕ್ಷ ಸ್ಥಾನವನ್ನು ಅಂಗೀಕರಿಸಿದರು. ಮತ್ತು ಅಲ್ಲಿ ಅವರು ಕೊಟ್ಟಿ ಅಧ್ಯಕ್ಷ ಭಾಷಣವು ಕನ್ನಡ ಸಾಹಿತ್ಯದ ದಿಗ್ದರ್ಶನ ಮಾಡುವುದರಲ್ಲಿ ಅಪೂರ್ಪವಾಗಿತ್ತು ಎಂದು ಅಂದಿನ ಕನ್ನಡಿಗರ ಅಭಿಪ್ರಾಯ.

ಇವರು ಮದ್ರಾಸು ಯುನಿವರ್ಸಿಟಿಯ ಕನ್ನಡ ಬೋರ್ಡಿನಲ್ಲಿ ಪ್ರಮುಖ ಮೆಂಬರರಾಗಿದ್ದು, ಪಠ್ಯಪುಸ್ತಕಗಳಲ್ಲಿ ಆಧುನಿಕ ಗ್ರಂಥಗಳಿಗೆ ನ್ಯಾಯವಾದ ಸ್ಥಾನ ಸಿಗುವಂತೆ ಸಾಹಸ ಮಾಡುತ್ತಿದ್ದರಲ್ಲದೆ, ಮೈಸೂರು ಯುನಿವರ್ಸಿಟಿಯವರು, ಮೈಸೂರು ಯುನಿವರ್ಸಿಟಿಯ ಕನ್ನಡ ಬೋರ್ಡಿನಲ್ಲಿ ಇವರಿಗೆ ಸ್ಥಾನ ಕೊಟ್ಟಿದ್ದರು, ಮತ್ತು ಕುಮಾರವ್ಯಾಸನ ಭಾರತವನ್ನು ಕಥಾಭಾಗವೂ ಕವಿಯ ಚಮತ್ಕೃತಿಯೂ ತೋರಿಬರುವಂತೆ ಸಂಕ್ಷೇಪಿಸಿ ಬರೆಯುವುದಕ್ಕೆ ಇವರನ್ನು ಎಡಿಟರ್ ಆಗಿ ನಿಯಮಿಸಿದ್ದರು. ಅನಂತಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಇವರು ಪರ್ಯಟನ ಮಾಡುತ್ತಿರುವಾಗ ಇವರಿಂದ ಕನ್ನಡ ಸಾಹಿತ್ಯದ ವಿಚಾರಗಳನ್ನು ಕುರಿತು ಭಾಷಣಗಳನ್ನು ಕೊಡಿಸಿ ಕನ್ನಡಿಗರಲ್ಲಿ ಸಾಹಿತ್ಯಾಭಿಮಾನವು ಕಳೆಯೇರುವುದಕ್ಕೆ ಪ್ರಯತ್ನಿಸಿದ್ದರು. ಈ ಸುಪ್ರಸಿದ್ಧ ಸಾಹಿತಿಗಳು 1937ರಲ್ಲಿ ದಿವಂಗತರಾದರು.

ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ

Spread the Knowledge

You may also like...

Leave a Reply

Your email address will not be published. Required fields are marked *