ನಾಟಕ ಕಲೆಯ ಇತಿಹಾಸ – ನಾಟಕಪ್ರಪಂಚ ಮತ್ತು ನಾಟಕ ಪ್ರೇಮಿಗಳು
ನಾಟಕಪ್ರಪಂಚ ಮತ್ತು ನಾಟಕ ಪ್ರೇಮಿಗಳು
ನಾಟಕಪ್ರೇಮಿಗಳು ಸಾಧಾರಣವಾಗಿ ಪ್ರಪಂಚದ ಮೂರೂ ಮುಖ್ಯ ನಾಟಕ ಸಾಹಿತ್ಯಗಳನ್ನು ನೋಡಬೇಕು. ಅವು ಯಾವುವೆಂದರೆ – ಸಂಸ್ಕೃತ, ಗ್ರೀಕ್ ಮತ್ತು ಇಂಗ್ಲಿಷ್. ಈ ಗ್ರಂಥದಲ್ಲಿ ಸಂಸ್ಕೃತ ನಾಟಕದ ಉತ್ಪತ್ತಿ ಮತ್ತು ಚರಿತೆಗಳನ್ನೂ, ನಾಟಕಕವಿಗಳ ಕಾಲ ಜೀವನಚರಿತೆ ಮತ್ತು ವಿಮರ್ಶೆಗಳನ್ನೂ ಸಾಧ್ಯವಾದಷ್ಟು ಸಂಕ್ಷೇಪವಾಗಿ ತಿಳಿಸಿದೆ.
ಗ್ರೀಕ್ ನಾಟಕ ಕಾಲಕ್ರಮದಲ್ಲಿ ಮೊದಲು ಬರುತ್ತದೆ. ಕ್ರಿಸ್ತ ಪೂರ್ವ ೫ನೆಯ ಶತಮಾನದಲ್ಲಿ ಪಾರಸಿಕರ(Persians) ಸೋಲಿನಿಂದ ಜೀವಕಳೆಯೇರಿದ ಅಭ್ಯುಧಯ ಕಾಲದಲ್ಲಿ, ಪೆರಿಕ್ಲೀಸನ (Pericles) ಹೊನ್ನಿನ ಯುಗದ ರಾಜ್ಯಭಾರದಲ್ಲಿ, ಅಥೆನ್ಸಿನ(Athens) ದಿವ್ಯನಾಗರಿಯಲ್ಲಿ ಹೊಮ್ಮಿ ಅರಳಿ, ಹಿರಿಯರಾದ ಮೂವರ ಪ್ರತಿಭೆಯಿಂದ ಪ್ರಕಾಶಿಸಿ, ಈ ನಾಟಕಪುಷ್ಪ ಬಹು ಬೇಗ ಉದುರಿ ಹೋಯಿತು. ಈಸ್ಕಿಲೀಸ್ (Aeschylus ), ಸಾಪೋಕ್ಲಿಸ್ (Sophocles), ಯೂರಿಪಿಡಿಸ್(Euripides) – ಇವರು ಗ್ರೀಕ್ ರುದ್ರನಾಟಕಗಳ (tragedy) ರತ್ನತ್ರಯಗಳು.
ಗ್ರೀಕರ ಯುದ್ಧವಿಜಯವನ್ನು ಸಾರುವ ಈಸ್ಕಿಲೀಸ್ ನ “ಪಾರಸಿಕರು” ಎಂಬ ನಾಟಕ ಕನ್ನಡದ ರಂಗಸ್ಥಳದಲ್ಲಿ ಈಗಾಗಲೇ ನಾಟ್ಯ ಮಾಡಿದೆ. ಈಸ್ಕಿಲೀಸ್ ನ ನಾಟಕಗಳು 7, ಸಾಪೋಕ್ಲಿಸ್ ನವು 7, ಯೂರಿಪಿಡಿಸ್ ನವು 19; ಇವುಗಳ ಜೊತೆಗೆ ಪ್ರಹಸನ (Comedy)ಗಳನ್ನು ಬರೆದಿರುವ ಅರಿಸ್ಟೋಫೇನೀಸ್ (Aristophanes) ನ ನಾಟಕಗಳು 11. ಹೀಗೆ ಒಟ್ಟು ಉಳಿದಿರುವ ಗ್ರೀಕ್ ನಾಟಕಗಳು 44. ಇವು ಗ್ರೀಕ್ ನಾಟಕದ ಕಾಯ ಮತ್ತು ಲಕ್ಷ್ಯ.
4ನೆಯ ಶತಮಾನದ ತತ್ವಜ್ಞಾನಿಗಳ ಶಿರೋಮಣಿಗಳಾದ ಪ್ಲೇಟೋ ಮತ್ತು ಆತನ ಶಿಷ್ಯ ಅರಿಸ್ಟಾಟಲ್ – ಇವರಿಬ್ಬರೂ ಈ ನಾಟಕಗಳ ಚರಿತ್ರೆ ಮತ್ತು ಗುಣಪರಿಶೀಲನೆಗಳನ್ನು ಗಮನಿಸಿದ್ದಾರೆ. ಕವಿತಾವೇಶದಿಂದಾಗುವ ಸೃಷ್ಟಿಯ ಸೌಂದರ್ಯವನ್ನು ಬಲ್ಲವನಾದರೂ ಪ್ಲೇಟೋ ತತ್ವದೃಷ್ಟಿಯ ಆವೇಶದಲ್ಲಿ ನಾಟಕಪ್ರಪಂಚ ಮಿಥ್ಯಾಪ್ರಪಂಚವೆಂದೂ ರಾಗದ್ವೇಷಾದಿ ಮನಸ್ಸಿನ ಚಾಂಚಲ್ಯಗಳನ್ನು ಪ್ರತಿಬಿಂಬಿಸಿ ಮನುಷ್ಯನ ಚರಿತ್ರಶುದ್ಧಿಗೆ ಅಡ್ಡಿಬರುವುದರಿಂದ ಉತ್ತಮ ರಾಜ್ಯದಲ್ಲಿ ನಾಟಕಕ್ಕೂ ಕಾವ್ಯಕ್ಕೂ ಬಹಿಷ್ಕಾರ ಹಾಕಬೇಕೆಂದೂ ಅಭಿಪ್ರಾಯಪಟ್ಟಿದ್ದಾನೆ – “ಕಾವ್ಯಾಲಾಪಾಂಶ್ಚ ವರ್ಜಯೇತ್” ಎಂದು ನಮ್ಮವರು ಹೇಳಿದಂತೆ.
ಈ ದೃಷ್ಟಿಯನ್ನು ಪ್ರತಿಭಟಿಸಿ, ನಾಟಕದ ಅನುಕರಣದ “ಆಟ“ಮಿಥ್ಯೆಯ ಮತ್ತು ಮಾಯೆಯ ಮೂಲಕ ಜೀವನದ ಸತ್ಯವನ್ನು ತಿಳಿಸುವ ದಿವ್ಯಕಾಲವೆಂದೂ, ರಾಗ ದ್ವೇಷ ಮುಂತಾದ ಮಾನವಹೃದಯದ ಪರಿವರ್ತನೆಗಳನ್ನು ಎತ್ತಿ ತೋರಿಸುವುದರಿಂದ ನೋಟಕರಲ್ಲಿ ಈ ಭಾವಗಳನ್ನು ಹೊಮ್ಮಿಸಿ, ರಸಗಳನ್ನು ಕೆರಳಿಸಿ, ವೈದ್ಯನು ಮದ್ದಿಕ್ಕಿ ಪ್ರವೃತ್ತಿಯನ್ನುಂಟುಮಾಡಿಸಿ ಕಲ್ಮಷವನ್ನು ಕಳೆಯುವಂತೆಯೇ ನಾಟಕಕವಿಯೂ ಚಿತ್ತಶುದ್ಧಿಯನ್ನುಂಟುಮಾಡಿ, ಜನರನ್ನು ತಮ್ಮ ಅಲ್ಪವಾದ ಸ್ವಾರ್ಥ ಪ್ರಪಂಚದಿಂದ ಹೊರಕ್ಕೆಳೆದು, ಮಹಾಪುರುಷರ ದೊಡ್ಡ ಬಾಳಿನ ಅಮೋಘವಾದ ಸುಖದುಃಖ ಪ್ರವಾಹದಲ್ಲಿ ಮೀಯಿಸಿ, ಆನಂದವನ್ನೂ ಅನುಕಂಪವನ್ನೂ ಸಹಾನುಭೂತಿಯನ್ನೂ ಪಾಪಭೀತಿಯನ್ನೂ ವಿಶ್ವಪ್ರೇಮವನ್ನೂ ಕಲಿಸತಕ್ಕ ತತ್ವಜ್ಞಾನಿಯೇ ಸರಿ, ಬೋಧಕನೇ ಸರಿ ಎಂದೂ ಅರಿಸ್ಟಾಟಲ್ ಕಾವ್ಯವನ್ನೂ ನಾಟಕವನ್ನೂ ಸಮರ್ಥಿಸಿದ್ದಾನೆ – ನಮ್ಮವರು “ನಾನೃಷಿಃ ಕುರಿತೇ ಕಾವ್ಯಂ” ಎಂದು ಹೇಳಿರುವಂತೆ. ಗುರುವಿಗೆ ತಕ್ಕ ಶಿಷ್ಯ!
ಗ್ರೀಕ್ ನಾಟಕ ವಿಮರ್ಶೆಗೆ, ಯೂರೋಪಿನ ಸಾಹಿತ್ಯವಿಮರ್ಶೆಗೆ ಅಡಿಗಲ್ಲು, ಮೂಲಾಧಾರ, ಅರಿಸ್ಟಾಟಲಿನ “ಕಾವ್ಯಮೀಮಾಂಸೆ (Poetics)“. ಈ ಸಣ್ಣ ಗ್ರಂಥದಲ್ಲಿ ಗ್ರೀಕ್ ನಾಟಕದ ಉತ್ಪತ್ತಿ, ಸ್ವರೂಪ, ರುದ್ರನಾಟಕ ಮತ್ತು ಪ್ರಹಸನಗಳ ಲಕ್ಷಣ, ನಾಟಕದಲ್ಲಿ ಮೇಳ, ನಾಟ್ಯ, ಗೀತಾ (Chorus, ಗ್ರೀಕ್ ನಾಟಕದ ವೈಶಿಷ್ಟ್ಯ) – ಇವುಗಳ ಸ್ಥಾನ, ಕಾರ್ಯ (Action , fable or Plot), ಪಾತ್ರರಚನೆ(Characterization), ಶೈಲಿ, ಇತಿಹಾಸ ಕಾವ್ಯಕ್ಕೂ (Epic ) ರುದ್ರನಾಟಕಕ್ಕೂ ಪರಸ್ಪರ ತಾರತಮ್ಯ – ಈ ಅಂಶಗಳನ್ನು ಬಹು ಸೂಕ್ಷ್ಮ ರೀತಿಯಲ್ಲಿ ಚರ್ಚಿಸಿದ್ದಾನೆ.
ಆತನ ಹೇಳಿಕೆಯಂತೆ ರುದ್ರನಾಟಕ ಘನವಾದ, ಉದಾತ್ತವಾದ, ಗಂಭೀರವಾದ ಕಾರ್ಯದ ಅನುಕರಣ; ಕಥನವಲ್ಲ,ನಟನ ಅಭಿನಯ;ಕಾರ್ಯ ಸಂಪೂರ್ಣವಾಗಿರಬೇಕು; ತಕ್ಕ ಗಾತ್ರವುಳ್ಳದಾಗಿರಬೇಕು. ಮೇಳದ ಗೀತಗಳು, ಪಾತ್ರಗಳ ಸಂವಾದಗಳು ಸುಂದರವಾದ ಶೈಲಿಯಲ್ಲಿರಬೇಕು. ಸಹಾನುಭೀತಿಯಿಂದ ಕನಿಕರವನ್ನೂ,ಭಯವನ್ನೂ ಎಬ್ಬಿಸಿ, ಈ ರಸಗಳನ್ನು ಪರಿಶುದ್ಧಿಗೊಳಿಸಬೇಕು. ರುದ್ರ ನಾಟಕದಲ್ಲಿ ಮನುಷ್ಯಸ್ವಭಾವದ ಅಳವನ್ನು ನೋಡಬಹುದು; ರುದ್ರನಾಯಕನು ಮಹಾಪುರುಷನಾಗಿ ಆನೇಕ ಸದ್ಗುಣಗಳಿಂದ ನಮ್ಮ ಮೆಚ್ಚುಗೆಯನ್ನೂ ಸಹಾನುಭೂತಿಯನ್ನೂ ಪಡೆದವನಾಗಿ, ಯಾವುದೋ ಒಂದು ದೋಷದಿ೦ದ, ಲೋಪ ದಿಂದ, ಮದದಿಂದ, ಕ್ರೂರವಿಧಿಯಿಂದ ಕಷ್ಟಕ್ಕೂಳಗಾಗಿ ಸತ್ತುಹೋಗುವನು. ಆತನ ಗತಿಯನ್ನು ನೋಡಿ ಭಯವೂ, ಪೂಜ್ಯತೆಯನ್ನು ನೋಡಿ “ಅಯ್ಯೋ ವಾಪ” ಎ೦ಬ ಮರುಕವೂ ಉಂಟಾಗುವುವು.
ಅಥೆನ್ಸ್ ರಾಜ್ಯ ನಾಶವಾದ ಮೇಲೆ ಅಲೆಕ್ಸಾಂಡರ್ ಮಹಾವೀರನ ವಿಜಯಗಳ ಪರಿಣಾಮವಾಗಿ, ಅಲೆಕ್ಸಾಂಡ್ರಿಯಾ ಪಟ್ಟಣ ಗ್ರೀಕ್ ನಾಗರಿಕತೆಯ ಕೇಂದ್ರವಾಯಿತು (ಕ್ರಿ. ಪೂ. ೩ನೆಯ ಶತಮಾನದಿಂದ). ಅಲ್ಲಿ ಅನೇಕ ವಿದ್ವಾಂಸರು ಸೇರಿ ಸಾಹಿತ್ಯ ಮಥನ ಮಾಡಿ ವ್ಯಾಕರಣ, ಛಂದಸ್ಸು, ಅಲಂಕಾರ ಮುಂತಾದ ಶಾಸ್ತ್ರಗಳನ್ನೂ ಹೊಸ ಸಾಹಿತ್ಯರೂಪಗಳನ್ನೂ ಬೆಳೆಸಿದರು. ಆದರೆ ಇದು ಒಟ್ಟಿನ ಮೇಲೆ ಲಕ್ಷಣಯುಗ, ಸೃಷ್ಠಿಯುಗವಲ್ಲ. ಆಗ ಅರಿಸ್ಟಾಟಲಿನ ಉದಾತ್ತ ತತ್ತ್ವಗಳು ಕಣ್ಮರೆಯಾಗಿ, ಪಾಂಡಿತ್ಯದ ಕೂದಲುಸೀಳಿಕೆ ಬಲವಾಗಿ, ಗ್ರೀಕ್ ಸಾಹಿತ್ಯ ಸೂರ್ಯ ಅತಿಚರ್ಚೆಯ ಮಂಜಿನ ಮಬ್ಬಿನಲ್ಲಿ ಮುಳುಗಿಹೋಯಿತು.
ಆದರೆ ಸಂಜೆಗೆಂಪಿನ ಬೆಳಕು ಇಷ್ಟು ಹೊತ್ತಿಗೆ ಸಾಮ್ರಾಜ್ಯವನ್ನು ಕಟ್ಟುತ್ತಿದ್ದ ರೋಮ್ ನಗರಕ್ಕೆ ಹಬ್ಬಿತು. ಗೆದ್ದ ರೋಮನ್ ಜನಕ್ಕೆ ಸೋತ ಗ್ರೀಕ್ ಜನರು ಗುರುಗಳಾದರು. ತತ್ತ್ವ, ಕಲೆ, ಸಾಹಿತ್ಯ, ನಾಗರೀಕತೆ ಎಲ್ಲದರಲ್ಲಿಯೂ ಗ್ರೀಕರ ಪಡಿಯಚ್ಚಾದರು ರೋಮನರು. ಗ್ರೀಕ್ ರುದ್ರನಾಟಕ ಮತ್ತು ಪ್ರಹಸನಗಳನ್ನು ಭಾಷಾಂತರಮಾಡಿ, ರೂಪಾಂತರಮಾಡಿ, ಸಂಕಲಿಸಿ, ಅನುಕರಿಸಿ, ಲ್ಯಾಟಿನ್ ನಾಟಕ ತೃಪ್ತಿಹೊಂದಿತು (ಕ್ರಿ. ಪೂ. ೨ನೆಯ ಶತಮಾನ – ಕ್ರಿ.ಶ. ೧ನೆಯ ಶತಮಾನ). ಈ ಲ್ಯಾಟಿನ್ ನಾಟಕ ಸತ್ತು ಮತ್ತೆ ೧೬ನೆಯ ಶತಮಾನದ ಯೂರೋಪಿನ ಪುನರುಜ್ಜೀವನದಲ್ಲಿ ಮಾರ್ಗದರ್ಶಿಯಾಯಿತು.
ಅಲೆಕ್ಸಾಂಡರಿನ ವಿಜಯಯಾತ್ರೆ ಪೂರ್ವಕ್ಕೂ ವ್ಯಾಪಿಸಿತ್ತು; ಪಾರಸಿಕರನ್ನು ಸೋಲಿಸಿ, ಭಾರತಭೂಮಿಗೆ ಅಡಿಯಿಟ್ಟು, ಸಿಂಧು ಪ್ರಾಂತವನ್ನು ವಶಪಡಿಸಿಕೊಂಡಿತು – ಕ್ಷಣಕಾಲಮಾತ್ರ. ಆದರೆ ಅದರ ಪರಿಣಾಮವಾಗಿ ಗ್ರೀಕರು (‘ಯವನ‘ರೆಂದು ನಮ್ಮಲ್ಲಿ ಪ್ರಸಿದ್ಧ) ವಾಯುವ್ಯ ಪ್ರಾಂತದಲ್ಲಿ, ಉಜ್ಜಯಿನಿಯವರೆಗೆ ಮತ್ತೆ ರಾಜ್ಯಕಟ್ಟಿ, ಸುಮಾರು ಮೂರು ಶತಮಾನಗಳು ಆಳಿದರು. ಈ ಕಾಲದಲ್ಲಿ ‘ಹೆಲೆನಿಸಮ್ ‘ ಎಂಬ ಗ್ರೀಕ್ ಕಲೆ ಸಾಹಿತ್ಯ ತತ್ತ್ವಶಾಸ್ತ್ರಗಳನ್ನೊಳಗೊಂಡ ನಾಗರೀಕತೆ ನಮ್ಮ ಭಾರತೀಯರ ಮೇಲೆಯೂ ಪ್ರಭಾವವನ್ನು ಬೀರಿರಬಹುದೇ? ಎಂಬ ವಿಚಾರ ಚರಿತ್ರಪರಿಶೋಧಕರಲ್ಲಿ ಹುಟ್ಟುವುದು ಸಹಜವಾಗಿದೆ. ಈ ದೃಷ್ಟಿಯಲ್ಲಿ ಸಂಸೃತ ನಾಟಕದ ಮೇಲೆಯೂ (ಇದು ಈಗ ಸಿಕ್ಕಿರುವ ಮಟ್ಟಿಗೆ ಸುಮಾರು ಕ್ರಿಸ್ತಶಕ ೧ನೆಯ ಶತಮಾನದಿಂದ ಆರಂಭವಾಗುವುದರಿಂದ) ಗ್ರೀಕ್ ನಾಟಕದ ಪ್ರಭಾವ ಬಿದ್ದಿರಬಹುದೇ ಎಂಬ ಚರ್ಚೆಗೆ ಅವಕಾಶವುಂಟು. ಈ ವಿಷಯವನ್ನು ಈ ಗ್ರಂಥದಲ್ಲಿ ಚರ್ಚಿಸಿದೆ.
ಸಂಸ್ಕೃತ ನಾಟಕ, ೧-೬ನೆಯ ಶತಮಾನಗಳಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಕ್ರಮವಾಗಿ ಕ್ಷೀಣವಾಗುತ್ತ ಸುಮಾರು ೮-೧೦ನೆಯ ಶತಮಾನಗಳ ಹೊತ್ತಿಗೆ ಕ್ಷೀಣವಾಗಿ ಹೋಯಿತು. ಆ ಮೇಲೆ ನಾಟಕಗಳನ್ನು ಪಂಡಿತರು ಬರೆಯುತ್ತಲೇ ಇದ್ದರೂ ಅದು ಕೇವಲ ಅಂಧಾನುಕರಣ, ಕೂಳೆ ಬೆಳೆ. ಗ್ರೀಕರ ಅಲೆಕ್ಸಾಂಡ್ರಿಯಾ ಸಾಹಿತ್ಯದಂತೆ ಲಕ್ಷಣ ಬಂಧನದ್ದು; ಚಮತ್ಕಾರ ಶಬ್ದಾಡಂಬರ ಪ್ರದರ್ಶನದ್ದು.
ಸೃಷ್ಟಿಶಕ್ತರಾದ, ಪ್ರತಿಭಾಪೂರ್ಣರಾದ, ಸ್ವಲ್ಪ ಲಕ್ಷಣದ ಸಂಪ್ರದಾಯಕ್ಕೆ ಕಟ್ಟುಬಿದ್ದರೂ ಸ್ವಾತಂತ್ರ್ಯದ ತೇಜಸ್ಸುಳ್ಳವರಾದ ಕಾಳಿದಾಸಾದಿ ನಾಟಕ ಕವಿಗಳ ನಾಟಕವೇ ಸಂಸ್ಕೃತದ ಉತ್ತಮ ನಾಟಕ.
ಇದರಲ್ಲಿ ಎದ್ದು ಹೊಳೆಯುವುವು
- ಅಶ್ವಘೋಷನ ಬುದ್ಧದೇವನ ಉಪದೇಶಗಳ ಪ್ರಚಾರ;
- ಭಾಸನ ವೈದಿಕ ಶ್ರದ್ಧೆ, ಅವನ ಶಕ್ತಿ , ಸರಳತೆ, ನಾಟಕೀಯತೆ;
- ಶೂದ್ರಕನ ಬೌದ್ಧ ವೈದಿಕ ಮಿಶ್ರವಾದ ಸಾಮಾಜಿಕ ಚಿತ್ರ, ಗ್ರೀಕ್ ಛಾಯೆ;
- ಕಾಳಿದಾಸನ ಪರಿಪೂರ್ಣತೆ, ಸೌಂದರ್ಯದರ್ಶನ, ಭೋಗ ಶೃಂಗಾರ, ವೇದಾಂತತತ್ತ್ವ , ಸಂಸಾರ ರಹಸ್ಯ, ಸಾತ್ವಿಕ ಪ್ರೇಮ; ಅಲ್ಲಲ್ಲಿ ಕೃತಕತೆ.
ಏಕೆಂದರೆ ಇಷ್ಟು ಹೊತ್ತಿಗೆ ಸಂಸ್ಕೃತನಾಟಕಸೂರ್ಯ ಆಕಾಶದ ಮಧ್ಯಕ್ಕೆ ಏರಿ ಇಳಿಮುಖವಾಗಲಾರಂಭಿಸಿತು. ಕಥಾರಚನ ಗೀತಕವನಗಳಲ್ಲಿ ನಿಸ್ಸೀಮನಾದ ಕಾಳಿದಾಸನ ಕೈಯಲ್ಲಿ ನಾಟಕಕ್ಕೂ ಈ ಕಾವ್ಯಗೀತ ಗುಣಗಳು ಹಬ್ಬಿ ನಾಟಕೀಯತೆ ಭಾಸನಿಗಿಂತ ಸ್ವಲ್ಪ ಕಡಮೆಯಾಯಿತು. ಈಚೆಗೆ ವಿಶಾಖದತ್ತನ ಚರಿತ್ರನಾಟಕದ ರಾಜಕೀಯ ತಂತ್ರಗಳೂ, ಕಾಳಿದಾಸನ ಮಾದರಿಯಲ್ಲಿ ಹರ್ಷನ ಶೃಂಗಾರ ನಾಟಕಗಳೂ (ಸ್ವಲ್ಪ ಬೌದ್ಧ ನಾಟಕದ ಸೋಂಕೂ), ಭವಭೂತಿಯ ಕರುಣಾರಸದ ಅಸಾಧ್ಯ ಪ್ರವಾಹವೂ, ಅದ್ಭುತ ಚಿತ್ರಗಳ ಜಟಿಲತೆಯೂ, ರಸಜ್ಞರು ಕಲೆಯ ರಹಸ್ಯ ‘ಅತಿ’ ಯಲ್ಲವೆಂದು ಸೂಚಿಸಿದರೆ – “ಉತ್ಪತ್ಸ್ಯತೇಸ್ತಿ ಮಮ ಕೋಪಿ ಸಮಾನಧರ್ಮಾ ಕಾಲೋಹ್ಯಯಂ ನಿರವಧಿರ್ವಿಪುಲಾ ಚ ಪಥ್ವೀ” ಎಂಬ ಕೆಚ್ಚು ಕೂಡ ಕಂಡುಬರುತ್ತದೆ.