ಕದಂಬರ ಮಯೂರವರ್ಮ
ಕದಂಬ ವಂಶದ ಪ್ರಸಿದ್ಧ ಅರಸ ಮಯೂರವರ್ಮ. ಈತನ ಮೊದಲಿನ ಹೆಸರು ಮಯೂರಶರ್ಮ. ಇವನ ತಂದೆ ರಾಜಶರ್ಮ, ತಾಯಿಯ ಹೆಸರು ಪುಷ್ಪಾವತಿ . ರಾಜಶರ್ಮನಿಗೆ ಇಬ್ಬರು ಹೆಂಡತಿಯರು. ಚಿಕ್ಕ ಹೆಂಡತಿಯ ಮಾತು ಕೇಳಿ ಹಿರಿ ಹೆಂಡತಿಯಾದ ಪುಷ್ಪಾವತಿಯನ್ನು ಹೊರಗೆ ಹಾಕಿದನು. ಆಗ ಆಕೆ ತುಂಬು ಗರ್ಭಿಣಿಯಾಗಿದ್ದಳು. ಈಕೆಯ ಮಗನೇ ಮಯೂರನು. ಇವರ ಮನೆಯ ಮುಂದೆ ಕದಂಬ (ತಾಳೆ ) ಮರವಿತ್ತಂತೆ . ಆದರಿಂದ ಇವರ ಮನೆತನಕ್ಕೆ ಕದಂಬ ಎಂಬ ಅಡ್ಡ ಹೆಸರು ಬಂದಿತು.
ಮಯೂರನು ಚಿಕ್ಕವನಿದ್ದಾಗ ಸಿಂಹದ ಮರಿಯಂತೆ ಇದ್ದನು. ಅವನ ಬುದ್ಧಿ ಬಲು ಚುರುಕು; ಎದೆಯು ಉಕ್ಕಿನಂತಹುದು. ಸಂಸ್ಕೃತ ಅಭ್ಯಾಸ ಮಾಡಲಿಕ್ಕೆಂದು ಪಲ್ಲವ ರಾಜರ ರಾಜಧಾನಿಯಾದ ಕಂಚೀ ಪಟ್ಟಣಕ್ಕೆ ಹೋದನು. ಒಂದು ದಿನ ಅಭ್ಯಾಸ ತೀರಿಸಿಕೊಂಡು ತನ್ನ ಓರಗೆಯ ಬಾಲಕರ ಜೊತೆ ಬೀದಿಯಲ್ಲಿ ಹೋಗುತ್ತಿರವಾಗ ಅರಸನ ಸವಾರನೊಬ್ಬನು ಇವನ ಮೇಲೆ ಕುದುರೆಯನ್ನಿ ಹಾಯಿಸಿದನು. ಸವಾರನ ಈ ಸೊಕ್ಕಿನ ನಡತೆಯನ್ನು ಕಂಡು, ಅವನು ಕೆಂಡದಂತಾಗಿ ಧೈರ್ಯದಿಂದ ಅರಸನ ಎದುರಿಗೆ ಹೋಗಿ ತನ್ನ ದೂರನ್ನು ಅರಿಕೆ ಮಾಡಿಕೊಂಡನು. ಅರಸನು ಹುಡುಗನ ಮಾತನ್ನು ಕಿವಿಗೊಟ್ಟು ಕೇಳದೆ, ಅವನನ್ನೇ ಬೆದರಿಸಿ ಓಲಗದಿಂದ ಹೊರಗೆ ಹಾಕಿಸಿದನು. ಮಯೂರನು ಒಬ್ಬ ವೀರ ಧೀರ; ಆಡಿದಂತೆ ಮಾಡಿಯೇ ತೋರಿಸುವವನು. ‘ಈ ಅರಸನ ಸೊಕ್ಕು ಮುರಿಯದಿದ್ದರೆ ನನ್ನ ಹೆಸರು ಮಯೂರನಲ್ಲ’ ಎಂದು ಎದೆಗೆ ಕೈ ಹಚ್ಚಿಕೊಂಡು ಹೇಳಿ ಕಿಡಿಕಿಡಿಯಾಗಿ ಹೊರಟನು.
ಅಭ್ಯಾಸದ ಕಡೆಗೆ ಅವ್ನ ಮನಸು ಹೋಗದಂತಾಯಿತು. ಹೇಗಾದರೂ ಮಾಡಿ ತನಗೆ ಆದ ಅಪಮಾನದ ಸೇಡು ತೀರಿಸಿಕೊಳ್ಳಬೇಕೆಂಬ ವಿಚಾರವೇ ಅವನಲ್ಲಿ ಮನೆಮಾಡಿಕೊಂಡಿತು. ಅವನ ಸಾಹಸ, ಅಭಿಮಾನ, ಗಟ್ಟಿಗತನ ಮತ್ತು ಜಾಣತನಗಳನ್ನು ನೋಡಿ ಕೆಲವರು ಅವನನ್ನು ಹಿಂಬಾಲಿಸಿದರು. ಈ ಬೆಂಬಲಿಗರ ಸಹಾಯದಿಂದ ಕಂಚಿಯಲ್ಲಿಯೇ ಅರಸನ ವಿರುದ್ಧ ಬಂದು ಎಬ್ಬಿಸಿದನು. ಮಯೂರೇನೆ ಇದಕ್ಕೆಲ್ಲ ಮೂಲ ಎಂದು ಗೊತ್ತಾಗಿ ಅರಸನು ಅವನನ್ನು ಸೆರೆಹಿಡಿಯಲು ಆಜ್ಞಾಪಿಸಿದನು. ಮಯೂರನು ಯಾರ ಕೈಗೂ ಸಿಗದೇ ನೆರೆಯಲ್ಲಿರುವ ಅಡವಿಯಲ್ಲಿ ಅಡಗಿಕೊಂಡನು. ಅಲ್ಲಿಯ ಕಾಡು ಜನರ ಕೂಡ ಗೆಳೆತನ ಮಾಡಿ ಅವರನ್ನೆಲ್ಲ ಒಟ್ಟಿಗೆ ಸೇರಿಸಿ ಅವರಿಗೆ ತಾನೇ ಮುಖಂಡನಾದನು. ಅವರ ಬೆಂಬಲದಿಂದ ನೆರೆಹೊರೆಯ ಚಿಕ್ಕ ಚಿಕ್ಕ ಅರಸರ ರಾಜ್ಯದಲ್ಲಿ ಹಾವಳಿ ಎಬ್ಬಿಸಿ ಅವರಿಂದ ಕಪ್ಪಕಾಣಿಕೆ ಎತ್ತಲು ಆರಂಭಿಸಿದನು.
ಈ ಸುದ್ದಿಯು ಪಲ್ಲವರಾಜನ ಕಿವಿಗೆ ಹೋಗಿ ಮುಟ್ಟಿತು. ವೈರಿಯು ಚಿಕ್ಕವನೆಂದು ಅಲಕ್ಷಿಸಲಿಕ್ಕಾಗದೆಂದು ನೆನೆದು, ಪಲ್ಲವರಾಜನು ಮಯೂರನನ್ನು ಬಗ್ಗುಬಡಿಯಲಿಕ್ಕೆ ಅವನ ಮೇಲೆ ಏರಿ ಹೋದನು. ಪಲ್ಲವರಾಜನು ಸೋತು, ಅವನ ಸಂಗಡ ಒಪ್ಪಂದ ಮಾಡಿಕೊಂಡು, ಅವನನ್ನು ಬನವಾಸಿಯ ನಾಡಿಗೆ ಅರಸನನ್ನಾಗಿ ಮಾಡಿ, ತಾನೇ ಬನವಾಸಿಗೆ ಹೋಗಿ ಮಯೂರನಿಗೆ ಪಟ್ಟಗಟ್ಟಿದನು. ಅಂದಿನಿಂದ ಮಯೂರನು ಮಯೂರವರ್ಮನಾದನು. ಬನವಾಸಿಗೆ ವೈಜಯಂತೀ (ಗೆಲುವಿನ ಪಟ್ಟಣ ) ಎಂದು ಹೆಸರನ್ನಿಟ್ಟು ತಾನೇ ಅಳಲಾರಂಭಿಸಿದನು. ಇವನೇ ಕದಂಬರ ಮೂಲಪುರುಷ. ಇವರ ಕುಲದೇವರು ಬನವಾಸಿಯ ಮಧುಕೇಶ್ವರನು. ಹಲಸಿಗೆ ಮತ್ತು ಕಿತ್ತೂರಿನ ಹತ್ತಿರ ದೇಗಾವಿಗಳಲ್ಲಿ ಈ ವಂಶದ ರಾಜರು ಕಟ್ಟಿಸಿದ ಸುಂದರ ಗುಡಿಗಳಿವೆ. ಇವರ ವಂಶದವರು ಹಾನಗಲ್ಲು, ಹಲಸಿಗೆ, ಗೋವೆಗಳನ್ನು ರಾಜಧಾನಿಗಳನ್ನಾಗಿ ಮಾಡಿಕೊಂಡು ರಾಜ್ಯವಾಳುತ್ತಿದ್ದರು.