ಕನ್ನಡ ವ್ಯಾಕರಣ – ಸಮಾಸ

ಸಮಾಸಗಳು
ಸಮಾಸಗಳು

ಸಮಾಸಗಳು

— ಜಯಪುರದ ಅರಮನೆ ಸುಂದರವಾಗಿದೆ.

— ರಸ್ತೆಯ ವಿಸ್ತರಣೆಗಾಗಿ ಹೆದ್ದಾರಿಯ ಬದಿಯಲ್ಲಿರುವ ಮರಗಳನ್ನು ಕಡಿಯಲಾಗಿದೆ.

ಈ ಎರಡು ವಾಕ್ಯಗಳಲ್ಲಿರುವ ‘ಅರಮನೆ’ ‘ಹೆದ್ದಾರಿ’ ಎಂಬ ಎರಡು ಪದಗಳನ್ನು ಗಮನಿಸಿದಾಗ ‘ಅರಮನೆ’ ಎಂಬ ಪದ ‘ಅರಸನ ಮನೆ’ ಎಂಬ ಅರ್ಥವನ್ನೂ ‘ಹೆದ್ದಾರಿ’ ಎಂಬ ಪದ `ಹಿರಿದಾದ ದಾರಿ’ ಎಂಬ ಅರ್ಥವನ್ನೂ ಕೊಡುವ ಪದಗಳೆಂದು ತಿಳಿಯುತ್ತದೆ.

ಹೀಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕನುಸಾರ ಒಟ್ಟು ಸೇರಿ ಪೂರ್ವ ಪದದ ಅಂತ್ಯದಲ್ಲಿ ವಿಭಕ್ತಿ ಪ್ರತ್ಯಯವಿದ್ದರೆ ಅದು ಲೋಪವಾಗಿ ಒಂದೇ ಪದವಾಗುವುದೇ ಸಮಾಸ.

ಈ ರೀತಿ ಸಮಾಸವಾಗುವಾಗ ಸಂಸ್ಕೃತ ಪದದೊಂದಿಗೆ ಸಂಸ್ಕೃತ ಪದವೇ ಸೇರಬೇಕು.

ಕನ್ನಡ ಪದದೊಂದಿಗೆ ಕನ್ನಡ ಪದವೇ ಸೇರಬೇಕು. ಸಂಸ್ಕೃತ ಪದಕ್ಕೆ ಕನ್ನಡ, ಕನ್ನಡ ಪದಕ್ಕೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು.

ಒಂದು ವೇಳೆ ಇಂತಹ ಪದಗಳೊಂದಿಗೆ ಸಮಾಸವಾದರೆ ಅದನ್ನು `ಅರಿಸಮಾಸ’ ಎನ್ನುತ್ತಾರೆ.

ಆದರೆ ಪೂರ್ವದ ಕವಿಗಳು ಪ್ರಯೋಗಿಸಿದ್ದರೆ, ಬಿರುದಾವಳಿಗಳಾಗಿದ್ದರೆ ಮತ್ತು ಗಮಕ ಅಥವಾ ಕ್ರಿಯಾ ಸಮಾಸಗಳಾಗಿದ್ದರೆ ದೋಷವಿಲ್ಲ.

ಕನ್ನಡ ಭಾಷೆಯಲ್ಲಿ

  1. ತತ್ಪುರುಷ,
  2. ಕರ್ಮಧಾರಯ,
  3. ದ್ವಿಗು,
  4. ಅಂಶಿ,
  5. ದ್ವಂದ್ವ,
  6. ಬಹುವ್ರೀಹಿ,
  7. ಕ್ರಿಯಾ ಮತ್ತು
  8. ಗಮಕ

ಎಂಬ ಎಂಟು ವಿಧದ ಸಮಾಸಗಳು ಬಳಕೆಯಲ್ಲಿವೆ.

ಸಮಾಸ ಪದಗಳನ್ನು ಬಿಡಿಸಿ ಬರೆಯುವ ಕ್ರಮವನ್ನು ವಿಗ್ರಹವಾಕ್ಯ ಅಥವಾ ವಿಗ್ರಹಿಸುವುದು ಎನ್ನುತ್ತಾರೆ.

ಉದಾ: ತೈಲದ ಬಿಂದುಗಳು = ತೈಲ ಬಿಂದುಗಳು.


1. ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗುಳ್ಳ ಸಮಾಸವೇ ತತ್ಪುರುಷ ಸಮಾಸ

ಬೆಟ್ಟದ + ತಾವರೆ > ಬೆಟ್ಟದಾವರೆ (ಷಷ್ಠೀ ತತ್ಪುರುಷ)
ವಯಸ್ಸಿನಿಂದ + ವೃದ್ಧ > ವಯೋವೃದ್ಧ (ತೃತೀಯಾ ತತ್ಪುರುಷ)
ಹಗಲಿನಲ್ಲಿ + ಕನಸು > ಹಗಲುಗನಸು (ಸಪ್ತಮೀ ತತ್ಪುರುಷ)

ಕೊಟ್ಟಿರುವ ಪದಗಳನ್ನು ಗಮನಿಸಿದಾಗ ಎರಡೆರಡು ಪದಗಳು ಸೇರಿ ಒಂದು ಪದವಾಗಿರುವುದು, ಪೂರ್ವಪದದ ಅಂತ್ಯದಲ್ಲಿ ವಿಭಕ್ತಿಪ್ರತ್ಯಯವಿದ್ದು ಸಮಾಸವಾಗುವಾಗ ಆ ಪ್ರತ್ಯಯಗಳು ಲೋಪವಾಗಿರುವುದು ಕಂಡುಬರುತ್ತದೆ.

ಯಾವ ವಿಭಕ್ತಿಪ್ರತ್ಯಯ ಲೋಪವಾಗಿದೆಯೋ ಅದರ ಆಧಾರದಿಂದ ಸಮಾಸವನ್ನು ಹೆಸರಿಸುವರು.

ಹೀಗೆ – ಪೂರ್ವೋತ್ತರ ಪದಗಳು ನಾಮಪದಗಳಾಗಿದ್ದು ಪೂರ್ವಪದದ ಅಂತ್ಯದಲ್ಲಿರುವ ವಿಭಕ್ತಿಪ್ರತ್ಯಯ ಸಮಾಸವಾಗುವಾಗ ಲೋಪವಾದರೆ ಅದೇ ತತ್ಪುರುಷ ಸಮಾಸ.

ಇದರಲ್ಲಿ ಉತ್ತರಪದದ ಅರ್ಥ ಪ್ರಧಾನ.

ಉದಾ: ಕಣ್ಣಿನಿಂದ + ಕುರುಡ = ಕಣ್ಗರುಡ
ತಲೆಯಲ್ಲಿ + ನೋವು = ತಲೆನೋವು


2. ಕರ್ಮಧಾರಯ ಸಮಾಸ

ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ – ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವೇ ಕರ್ಮಧಾರಯ ಸಮಾಸ.

ಹಿರಿದು + ಮರ > ಹೆಮ್ಮರ
ಮೆಲ್ಲಿತು + ನುಡಿ > ಮೆಲ್ನುಡಿ
ದಿವ್ಯವಾದ + ಪ್ರಕಾಶ > ದಿವ್ಯಪ್ರಕಾಶ

ಇಲ್ಲಿ ಹಿರಿದು, ಮರ, ಮೆಲ್ಲಿತು, ನುಡಿ ಎಂಬ ನಾಲ್ಕು ಪದಗಳು ಕನ್ನಡದವು.

ದಿವ್ಯ, ಪ್ರಕಾಶ ಎಂಬ ಎರಡು ಪದಗಳು ಸಂಸ್ಕೃತ ಪದಗಳು. ಮೂರೂ ಸಮಾಸಗಳ ಪೂರ್ವಪದಗಳು ವಿಶೇಷಣಗಳಾಗಿವೆ.

ದಿವ್ಯ’ ಸಂಸ್ಕೃತ ಪದವಾದ ಕಾರಣ ಅರ್ಥ ಸ್ಪಷ್ಟತೆಗಾಗಿ ಆದ’ ಎಂಬ ಪದ ಪೂರ್ವಪದಕ್ಕೆ ಸೇರಿ `ದಿವ್ಯವಾದ’ ಎಂಬ ಪದ ರಚನೆಯಾಗಿದೆ. ಕನ್ನಡ ಪದಗಳಲ್ಲಿ ಹೀಗಿರುವುದಿಲ್ಲ.

ಹೀಗೆ-ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು ವಿಶೇಷಣ-ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವೇ ಕರ್ಮಧಾರಯ ಸಮಾಸ.

ಇದರಲ್ಲಿ ಉತ್ತರ ಪದದ ಅರ್ಥವೇ ಪ್ರಧಾನ.

ಕರ್ಮಧಾರಯ ಸಮಾಸದಲ್ಲಿ ನಾಲ್ಕು ವಿಧಗಳಿವೆ.

  • ವಿಶೇಷಣ ಪೂರ್ವಪದ ಕರ್ಮಧಾರಯ,
  • ಉಪಮಾನ ಪೂರ್ವಪದ ಅಥವಾ ಉಪಮಾನ ಪರಪದ ಕರ್ಮಧಾರಯ,
  • ಸಂಭಾವನಾ ಪೂರ್ವಪದ ಕರ್ಮಧಾರಯ,
  • ಅವಧಾರಣಾ ಪೂರ್ವಪದ ಕರ್ಮಧಾರಯ ಸಮಾಸ

3. ದ್ವಿಗು ಸಮಾಸ

ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರ ಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ

ಮೂರು + ಮಡಿ > ಮುಮ್ಮಡಿ
ನಾಲ್ಕು + ದೆಸೆ > ನಾಲ್ದೆಸೆ
ಪಂಚಗಳಾದ + ಇಂದ್ರಿಯ >ಪಂಚೇಂದ್ರಿಯ

ಈ ಮೂರು ಸಮಾಸಗಳಲ್ಲಿ ಪೂರ್ವಪದ ಸಂಖ್ಯಾವಾಚಕಗಳಾಗಿವೆ.

ಮೂರನೆಯದಾದ ಪಂಚೇಂದ್ರಿಯ ಎಂಬ ಪದದಲ್ಲಿ ಎರಡೂ ಪದಗಳು ಸಂಸ್ಕೃತವಾದುದರಿಂದ ಆದ ಎಂಬ ಪದ ಪೂರ್ವಪದದೊಂದಿಗೆ ಸೇರಿಕೊಂಡಿದೆ.

ಹೀಗೆ-ಪೂರ್ವಪದ ಸಂಖ್ಯಾವಾಚಕವಾಗಿದ್ದು ಉತ್ತರಪದ ನಾಮಪದವಾಗಿದ್ದರೆ ಅದು ದ್ವಿಗು ಸಮಾಸ.

ಉದಾ:
ಎರಡು + ಮಡಿ = ಇಮ್ಮಡಿ
ಮೂರು + ಗಾವುದ = ಮೂಗಾವುದ


4. ಅಂಶಿಸಮಾಸ

ದೈನಂದಿನ ಜೀವನದಲ್ಲಿ ಮಾತನಾಡುವಾಗ ಅಂಗೈ, ಮುಂದಲೆ, ಕೊನೆಹುಬ್ಬು ಇತ್ಯಾದಿ ಪದಗಳನ್ನು ಬಳಸುತ್ತೇವೆ. ಈ ಪದಗಳ ರಚನೆ ಇಂತಿವೆ:
ಉದಾ.:
ಕೈಯ + ಅಡಿ > ಅಂಗೈ
ತಲೆಯ + ಮುಂದು > ಮುಂದಲೆ
ಹುಬ್ಬಿನ + ಕೊನೆ > ಕೊನೆಹುಬ್ಬು


ನಮೂದಿತ ಉದಾಹರಣೆಗಳನ್ನು ಗಮನಿಸಿದಾಗ ಪೂರ್ವಪದವು ಅನೇಕ ಅಂಶಗಳನ್ನು ಹೊಂದಿರುವ ಅಂಶಿಯೂ ಪರಪದವು ಅಂಶಿಯ ಒಂದು ಅಂಶವನ್ನೂ ಸೂಚಿಸುವುದು.

ಸೂತ್ರ : ಪೂರ್ವೋತ್ತರ ಪದಗಳು ಅಂಶಾಂಶಿ ಭಾವಸಂಬಂಧದಿಂದ ಸೇರಿ ಪೂರ್ವಪದದ ಅರ್ಥ ಪ್ರಧಾನವಾಗುಳ್ಳ ಸಮಾಸವೇ ಅಂಶಿಸಮಾಸ. ಈ ಸಮಾಸವನ್ನು ಅವ್ಯಯೀಭಾವ ಸಮಾಸವೆಂತಲೂ ಕರೆಯುವರು.

ಉದಾ.: ಅಂಗಾಲು, ಮುಂಗಾಲು, ಹಿಂದಲೆ, ಮುಂಬಾಗಿಲು.


5. ದ್ವಂದ್ವಸಮಾಸ

ಕೆರೆಯೂ ಕಟ್ಟೆಯೂ ಬಾವಿಯೂ – ಕೆರೆಕಟ್ಟೆಬಾವಿಗಳು
ಆನೆಯೂ ಕುದುರೆಯೂ ಒಂಟೆಯೂ – ಆನೆಕುದುರೆಒಂಟೆಗಳು
ಗಿಡವೂ ಮರವೂ ಬಳ್ಳಿಯೂ -ಗಿಡಮರಬಳ್ಳಿಗಳು

ಈ ಉದಾಹರಣೆಗಳನ್ನು ಗಮನಿಸಿದಾಗ ಬೇರೆ ಸಮಾಸಗಳಲ್ಲಿದ್ದಂತೆ ಪೂರ್ವಪದ ಮತ್ತು ಪರಪದ ಎಂಬ ವಿಭಾಗಗಳು ಇಲ್ಲವೆಂಬುದು ಗೋಚರಿಸುತ್ತದೆ. ಅಲ್ಲದೆ ಅರ್ಥ ಪ್ರಾಧಾನ್ಯದಲ್ಲೂ ಒಂದೇ ಪದಕ್ಕೆ ಅಂದರೆ ಪೂರ್ವಪದ ಅಥವಾ ಪರಪದಕ್ಕೆ ಸೀಮಿತವಾಗಿಲ್ಲದೆ ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುತ್ತದೆ.

ಸೂತ್ರ : ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿ ಇರುವ ಸಮಾಸವೇ ದ್ವಂದ್ವಸಮಾಸ.

ಉದಾ.: ಗುಡುಗುಸಿಡಿಲುಮಿಂಚುಗಳು, ಗಿರಿವನದುರ್ಗಗಳು, ಸೂರ್ಯಚಂದ್ರನಕ್ಷತ್ರಗಳು, ಕರಿತುರಗರಥಗಳು.


6. ಬಹುವ್ರೀಹಿ ಸಮಾಸ

ಮೂರು ಕಣ್ಣು ಉಳ್ಳವನು = ಮುಕ್ಕಣ್ಣ = ಶಿವ
ಹಣೆಯಲ್ಲಿ ಕಣ್ಣುಳ್ಳವನು = ಹಣೆಗಣ್ಣ = ಶಿವ

ಈ ಪದಗಳಲ್ಲಿ ಪೂರ್ವಪದದ ಅರ್ಥವಾಗಲೀ ಪರಪದದ ಅರ್ಥವಾಗಲೀ ಪ್ರಧಾನವಾಗಿಲ್ಲದೇ ಬೇರೊಂದು ಪದವಾದ ಶಿವ ಪದದ ಅರ್ಥವೇ ಪ್ರಧಾನವಾಗಿದೆ.

ಸೂತ್ರ : ಎರಡು ಅಥವಾ ಅನೇಕ ಪದಗಳು ಸೇರಿ ಸಮಾಸವಾದಾಗ ಬೇರೊಂದು (ಅನ್ಯಪದ) ಪದದ ಅರ್ಥವು ಪ್ರಧಾನವಾಗಿರುವ ಸಮಾಸವೇ ಬಹುವ್ರೀಹಿ ಸಮಾಸ.

ಉದಾ.:
ನಾಲ್ಕು ಮೊಗ ಉಳ್ಳವನು ಆವನೋ ಅವನು = ನಾಲ್ಮೊಗ = ಬ್ರಹ್ಮ
ಚಕ್ರವು ಪಾಣಿಯಲ್ಲಿ ಉಳ್ಳವನು ಆವನೋ ಅವನು = ಚಕ್ರಪಾಣಿ = ವಿಷ್ಣು
ಫಾಲದಲ್ಲಿ ನೇತ್ರ ಉಳ್ಳವನು ಆವನೋ ಅವನು = ಫಾಲನೇತ್ರ = ಶಿವ


7. ಕ್ರಿಯಾಸಮಾಸ

ಮನೆಯನ್ನು + ಕಟ್ಟಿದನು > ಮನೆಕಟ್ಟಿದನು
ಮೈಯನ್ನು + ಮರೆತು > ಮೈಮರೆತು
ಕೈಯಂ + ಪಿಡಿದು > ಕೈವಿಡಿದು

ಇಲ್ಲಿ ಪೂರ್ವಪದ ನಾಮಪದವಾಗಿದ್ದು ದ್ವಿತೀಯಾ ವಿಭಕ್ತಿಯಿಂದ ಕೂಡಿದ್ದು ಪರಪದವು ಕ್ರಿಯಾಪದವಾಗಿದೆ. ಕೆಲವೊಮ್ಮೆ ಪೂರ್ವಪದವು ಬೇರೆ ವಿಭಕ್ತಿಪ್ರತ್ಯಯದಿಂದಲೂ ಕೂಡಿರುವುದುಂಟು.

ಸೂತ್ರ: ಪೂರ್ವಪದ ಹೆಚ್ಚಾಗಿ ದ್ವಿತೀಯಾ ವಿಭಕ್ತö್ಯಂತ ನಾಮಪದವಾಗಿದ್ದು ಪರಪದವು ಕ್ರಿಯಾರೂಪದಿಂದ ಕೂಡಿರುವ ಸಮಾಸವೇ ಕ್ರಿಯಾಸಮಾಸ. ಈ ಸಮಾಸಕ್ಕೆ ಅರಿಸಮಾಸ ದೋಷವಲ್ಲ.

ಉದಾ.: ಮೈದಡವಿ, ಕಣ್ದೆರೆ, ಬಟ್ಟೆದೋರು (ಬಟ್ಟೆ ಎಂದರೆ ದಾರಿ ಎಂದರ್ಥ).


8. ಗಮಕಸಮಾಸ

ಅದು + ಮನೆ > ಆ ಮನೆ
ಇವನು + ಮನುಷ್ಯ > ಈ ಮನುಷ್ಯ

ಇಲ್ಲಿ ಪೂರ್ವಪದಗಳಾದ ಅದು ಮತ್ತು ಇವನು ಸರ್ವನಾಮಗಳಾಗಿದ್ದು, ಪರಪದಗಳಾದ ಮನೆ ಮತ್ತು ಮನುಷ್ಯ ನಾಮಪದಗಳಾಗಿವೆ.

ಸೂತ್ರ : ಪೂರ್ವಪದ ಸರ್ವನಾಮ ಅಥವಾ ಕೃದಂತವಾಗಿದ್ದು, ಉತ್ತರಪದ ನಾಮಪದವಾಗಿದ್ದು ಆಗುವ ಸಮಾಸವೇ ಗಮಕಸಮಾಸ.

ಉದಾ.:
ಪೂರ್ವಪದ ಸರ್ವನಾಮವಾಗಿರುವುದಕ್ಕೆ – ಆ ಹುಡುಗ, ಆ ಕಲ್ಲು, ಈ ಮುದುಕಿ, ಈ ಬೆಕ್ಕು.
ಪೂರ್ವಪದ ಕೃದಂತವಾಗಿರುವುದಕ್ಕೆ – ಮಾಡಿದಡುಗೆ, ತಿಂದಕೂಳು, ಸಿಡಿಮದ್ದು.


Spread the Knowledge

You may also like...

1 Response

Leave a Reply to Shivakumar Cancel reply

Your email address will not be published. Required fields are marked *