ಕುವೆಂಪು ಕವಿ ಪರಿಚಯ
ಕೃತಿ-ಕರ್ತೃ ವಿಚಾರ : ಕುವೆಂಪು (1904-1994)
ಕುವೆಂಪು ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿ ಹೊಂದಿದವರು ಕುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯವರು. ತಮ್ಮ ಪ್ರೌಢ ಶಾಲಾ ಮತ್ತು ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ಬಳಿಕ ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
“ಶ್ರೀರಾಮಾಯಣ ದರ್ಶನಂ’ ಇವರ ಮಹಾಕಾವ್ಯ. ಇದಕ್ಕೆ 1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1968ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ, 1987ರಲ್ಲಿ ಪಂಪ ಪ್ರಶಸ್ತಿ ಲಭಿಸಿದೆ. 1957ರಲ್ಲಿ ಧಾರವಾಡದಲ್ಲಿ ನಡೆದ 39ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1964ರಲ್ಲಿ ರಾಷ್ಟಕವಿ ಗೌರವ, 1991ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ದೊರೆತವು. ಇದಲ್ಲದೆ ಮೈಸೂರು. ಕರ್ನಾಟಕ, ಬೆಂಗಳೂರು ಮತ್ತು ಗುಲಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್, 1992ರಲ್ಲಿ ‘ಕರ್ನಾಟಕ ರತ್ನ’ ಮುಂತಾದ ಗೌರವಗಳು ಸಂದಿವೆ.
ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಕವಿಗಳಲ್ಲಿ ಅಗ್ರಗಣ್ಯರಾದ ರಸಯಷಿ ಕುವೆಂಪು ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸಿದ್ದಾರೆ. ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ, ಕಬ್ಬಿಗನ ಕೈಬುಟ್ಟಿ, ಅಗ್ನಿಹಂಸ, ಕದರಡಕೆ ಮುಂತಾದ ಕವನ ಸ೦ಕಲನಗಳು; ನನ್ನ ದೇವರು ಮತ್ತು ಇತರ ಕಥೆಗಳು, ಸನ್ಯಾಸಿ ಮತ್ತು ಇತರ ಕಥೆಗಳು ಎ೦ಬ ಕಥಾಸ೦ಕಲನಗಳು; ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎ೦ಬ ಮಹಾ ಕಾದಂಬರಿಗಳು; ತಪೋನ೦ದನ, ರಸೋ ವೈಸಃ ಮುಂತಾದ ವಿಮರ್ಶಾ ಸ೦ಕಲನಗಳು; ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನ ಹಳ್ಳಿಯ ಕಿಂದರ ಜೋಗಿ ಮುಂತಾದ ಮಕ್ಕಳ ಪುಸ್ತಕಗಳು; ಜಲಗಾರ, ಯಮನ ಸೋಲು. ಬೆರಳ್ಗೆ ಕೊರಳ್ ಮುಂತಾದ ನಾಟಕಗಳು; “ನೆನಪಿನ ದೋಣಿಯಲ್ಲಿ’ ಎ೦ಬ ಆತ್ಮಕಥನ ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ.