ಕಲ್ಯಾಣದ ಚಾಳುಕ್ಯರು (ಸಾ.ಶ. 973 – ಸಾ.ಶ. 1189)

ಕಲ್ಯಾಣದ ಚಾಳುಕ್ಯರು (ಸಾ.ಶ. 973 – ಸಾ.ಶ. 1189)

ಕಲ್ಯಾಣದ ಚಾಳುಕ್ಯರ ಕಾಲವು ಭಾರತದ ಚರಿತ್ರೆಯಲ್ಲಿಯೇ ಗೌರವಯುತವಾದ ಸ್ಥಾನವನ್ನು ಪಡೆದಿದೆ.

ಇವರು ಕಲೆ, ಸಾಹಿತ್ಯ, ಶಿಕ್ಷಣಗಳಿಗೆ ವಿಶೇಷ ಪ್ರೋತ್ಸಾಹ ನೀಡಿದರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿ ಅವಕಾಶಗಳನ್ನು ಕಲ್ಪಿಸಿಕೊಟ್ಟರು.

ಪ್ರಸಿದ್ಧ ಕನ್ನಡ ಕವಿಗಳಾದ ದುರ್ಗಸಿಂಹ, ರನ್ನ, ನಾಗಚಂದ್ರ, ಮುಂತಾದವರಿಗೆ ಆಶ್ರಯ ನೀಡಿದರು.

 

ಇದೇ ಕಾಲದಲ್ಲಿ ಬೆಳಕಿಗೆ ಬಂದದ್ದು ವಚನ ಸಾಹಿತ್ಯ.

 

ಕಲ್ಯಾಣವೆಂಬ ಹೊಸ ನಗರವನ್ನು ಕಟ್ಟಿ ರಾಜಧಾನಿಯನ್ನಾಗಿ ಮಾಡಿದ ಕೀರ್ತಿ ಒಂದನೇ ಸೋಮೇಶ್ವರನಿಗೆ ಸಲ್ಲುತ್ತದೆ.

ರಾಷ್ಟ್ರಕೂಟರ ಸಾಮಂತನಾಗಿದ್ದ ಎರಡನೇ ತೈಲಪನು ರಾಷ್ಟ್ರಕೂಟರ ರಾಜ ಎರಡನೇ ಕರ್ಕನನ್ನು ಪರಾಭವಗೊಳಿಸಿ ಮಾನ್ಯಖೇಟವನ್ನು ವಶಪಡಿಸಿಕೊಂಡು ಕಲ್ಯಾಣ ಚಾಳುಕ್ಯ ಸಾಮ್ರಾಜ್ಯ ಸ್ಥಾಪಿಸಿದನು. ಸುಮಾರು 24 ವರ್ಷಗಳ ಕಾಲ ಆಡಳಿತ ನಡೆಸಿದನು.

ಈ ವಂಶದ ಪ್ರಮುಖ ಅರಸರಲ್ಲಿ ಒಂದನೇ ಸೋಮೇಶ್ವರ ಪ್ರಮುಖನಾದವನು. ಕಲ್ಯಾಣವೆಂಬ ಹೊಸ ನಗರವನ್ನು ಕಟ್ಟಿಸಿ ರಾಜಧಾನಿಯನ್ನಾಗಿ ಮಾಡಿಕೊಂಡನು. ಇದೇ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಎನಿಸಿದೆ. ಈತನು ಅನೇಕ ಯುದ್ಧಗಳನ್ನು ಮಾಡಬೇಕಾಗಿ ಬಂದರೂ ಸಾಮ್ರಾಜ್ಯವು ಗಾತ್ರದಲ್ಲಿ ಕುಂದದಂತೆ ನೋಡಿಕೊಂಡನು. ಚೋಳರ ರಾಜಾಧಿರಾಜನನ್ನು ‘ಕೊಪ್ಪಂ’ ಎಂಬಲ್ಲಿ ಸೋಲಿಸಿದನು.

(ಸಾ.ಶ. 1076ರಲ್ಲಿ) ಒಂದನೇ ಸೋಮೇಶ್ವರನ ಮಗನಾದ ಆರನೆಯ ವಿಕ್ರಮಾದಿತ್ಯನು ಈ ವಂಶದ ಶ್ರೇಷ್ಠನಾದ ಅರಸ. ಅಸಾಧಾರಣ ವೀರ, ಉತ್ತಮ ಆಡಳಿತಗಾರ. ಇವನು ಸಾ.ಶ. 1076ರಲ್ಲಿ ಚಾಳುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು. ಇವನು ಹೊಯ್ಸಳರ ವಿಷ್ಣುವರ್ಧನನ ಬಂಡಾಯ ಅಡಗಿಸಿದನು. ಶ್ರೀಲಂಕೆಯ ಅರಸನಾದ ವಿಜಯಬಾಹುವಿನೊಂದಿಗೆ ಸಂಪರ್ಕ ಹೊಂದಿದ್ದನು.

ಆರನೇ ವಿಕ್ರಮಾದಿತ್ಯ ಹಾಗೂ ಮೂರನೇ ಸೋಮೇಶ್ವರನ ನಂತರ ಬಂದ ರಾಜರುಗಳ ಕಾಲದಲ್ಲಿ ಅದರಲ್ಲೂ ನಾಲ್ಕನೇ ಸೋಮೇಶ್ವರನ ಕಾಲದಲ್ಲಿ ರಾಜ್ಯವು ಕ್ಷೀಣಿಸಿ, ಕಲಚುರಿ ಬಿಜ್ಜಳನು ಕಲ್ಯಾಣವನ್ನು ಆಕ್ರಮಿಸಿ ಸ್ವತಂತ್ರವಾಗಿ ಆಳತೊಡಗಿದನು. ಇದೇ ಕಾಲದಲ್ಲಿ ಬೆಳಕಿಗೆ ಬಂದವರು ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನುಂಟು ಮಾಡಿದ ಶ್ರೀಜಗಜ್ಯೋತಿ ಬಸವೇಶ್ವರರು. ಇವರು ವೀರಶೈವ ಪಂಥದ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡರು.

 

ಇವನ ಕಾಲದಲ್ಲಿದ್ದ ವಿಜ್ಞಾನೇಶ್ವರನು (ಮಿತಾಕ್ಷರದ ಕರ್ತೃ) ಕ್ಷಿತಿ ತಲದಲ್ಲಿ ಕಲ್ಯಾಣದಂತಹ ನಗರ ಹಿಂದಿರಲಿಲ್ಲ, ಮುಂದಿರಲಾರದು. ವಿಕ್ರಮಾದಿತ್ಯನಂತಹ ದೊರೆಯನ್ನು ಕಂಡಿಲ್ಲ, ಕೇಳಿಲ್ಲ ಎಂದು ಹೇಳಿದ್ದಾನೆ.

 

ಬಸವೇಶ್ವರರು ಮೃದುವಾದ ಉಪದೇಶ, ಕಟುವಾದ ವಿಡಂಬನೆ (ಟೀಕೆ), ಉಗ್ರವಾದ ಎಚ್ಚರಿಕೆ ಎಂಬ ಮೂರು ಪ್ರಕಾರಗಳಲ್ಲಿ ಉಪದೇಶ ಮಾಡಿದರು. ಶಿವನಲ್ಲಿ ಅನನ್ಯ ಭಕ್ತಿಯಿಂದ ಶರಣು ಹೋಗುವುದೊಂದೇ ಮುಕ್ತಿಗೆ ಮಾರ್ಗ ಎಂದು ಬೋಧಿಸಿದರು. ಅಲ್ಲದೆ ಅವರು ‘ಕಾಯಕವೇ ಕೈಲಾಸ‘ಎಂದು ಸಾರಿದರು. ಅನುಭವ ಮಂಟಪವನ್ನು ಸಾ.ಶ. 1162ರಲ್ಲಿ ಸ್ಥಾಪಿಸಿದರು. ಜನರಿಗೆ ಮಾತನಾಡುವ ತಿಳಿಗನ್ನಡದಲ್ಲಿ ವಚನಗಳನ್ನು ರಚಿಸಿ ಮನಸ್ಸಿಗೆ ನಾಟುವಂತೆ ಮಾಡಿದರು.

 

ಕಲ್ಯಾಣ ಚಾಳುಕ್ಯರ ಕೊಡುಗೆಗಳು

 

ಕಲ್ಯಾಣದ ಚಾಲುಕ್ಯರು ಬಾದಾಮಿಯ ಚಾಲುಕ್ಯರಂತೆಯೇ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ರಾಜತ್ವವು ವಂಶಪಾರಂಪರ್ಯವಾಗಿತ್ತು. ರಾಜ್ಯವನ್ನು ಪ್ರಾಂತ್ಯಗಳಾಗಿಯೂ (ಮಂಡಲ) ಮತ್ತು ಕಿರು ಪ್ರಾಂತ್ಯಗಳಾಗಿಯೂ (ನಾಡುಗಳು) ವಿಂಗಡಿಸಲಾಗಿತ್ತು. ಇದಲ್ಲದೆ ಕಂಪಣಗಳು (ಈಗಿನ ಹೋಬಳಿ) ಇದ್ದು ಗ್ರಾಮಗಳ ಆಡಳಿತಕ್ಕೆ ಸಹಾಯಕವಾಗಿದ್ದವು.

ಭೂ ಕಂದಾಯವು ರಾಜ್ಯದ ಮೂಲಾದಾಯವಾಗಿತ್ತು. ಆದಾಯದ ಇತರೆ ಮೂಲಗಳಲ್ಲಿ ಮಾರಾಟ ತೆರಿಗೆ, ಸುಂಕ, ವೃತ್ತಿ ತೆರಿಗೆ ಸೇರಿದ್ದವು. ಭೂಕಂದಾಯದ ವ್ಯವಸ್ಥೆಗಾಗಿಯೇ ‘ಕಡಿತವೆರ್ಗಡೆ’ ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು.

ವ್ಯಾಪಾರದಲ್ಲಿ ಹಾಗೂ ವ್ಯವಹಾರಗಳಲ್ಲಿ ವಿವಿಧ ಶ್ರೇಣಿಗಳಿದ್ದವು.

ಚಾಲುಕ್ಯರ ಕಾಲದಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು. ಜೈನ ವಿದ್ವಾಂಸರ ನೆರವಿನಿಂದ ಕನ್ನಡ ಸಾಹಿತ್ಯವು ಅಭಿವೃದ್ಧಿ ಹೊಂದಿತು.

ರನ್ನನು ಬರೆದ ‘ಗದಾಯುದ್ಧ’ (ಸಾಹಸಭೀಮ ವಿಜಯ), ದುರ್ಗಸಿಂಹನ ‘ಪಂಚತಂತ್ರ’, ಬಿಲ್ಹಣನ ‘ವಿಕ್ರಮಾಂಕದೇವ ಚರಿತ’, ನಯಸೇನನ ‘ಧರ್ಮಾಮೃತ’ ಹಾಗೂ ವಿಜ್ಞಾನೇಶ್ವರನು ಬರೆದ ಕಾನೂನು ಗ್ರಂಥ ‘ಮಿತಾಕ್ಷರ’ ಮುಖ್ಯವಾದ ಗ್ರಂಥಗಳಾಗಿವೆ. ರಾಜ ಮೂರನೆಯ ಸೋಮೇಶ್ವರನು ಬರೆದ ‘ಮಾನಸೋಲ್ಲಾಸ’ ಸಂಸ್ಕೃತ ವಿಶ್ವಕೋಶವೆನಿಸಿದೆ.

ಚಾಲುಕ್ಯರ ಕಾಲದ ವಿಶಿಷ್ಠ ಕೊಡುಗೆ ವಚನ ಸಾಹಿತ್ಯ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಾಚಯ್ಯ ಮುಂತಾದವರು ಗಣ್ಯವಚನಕಾರರಾಗಿದ್ದರು.

ಗದ್ಯಾಣ, ಪಣ, ದ್ರುಮ್ಮ, ಪೊನ್, ಸುವರ್ಣ ಎಂಬ ನಾಣ್ಯಗಳನ್ನು ಟಂಕಿಸಲು ಲಕ್ಕುಂಡಿ ಹಾಗೂ ಸೂಡಿ ಎಂಬಲ್ಲಿ ಟಂಕಸಾಲೆಗಳನ್ನು ಸ್ಥಾಪಿಸಿದರು.

ಸಾಹಿತ್ಯಾಭಿಮಾನಿಗಳಾದ ಚಾಳುಕ್ಯರು ಕಲಾರಾಧಕರಾಗಿದ್ದರು. ಕಲೆಯ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ.

ಲಕ್ಕುಂಡಿಯ ಕಾಶಿವಿಶ್ವೇಶ್ವರ, ಇಟಗಿಯ ಮಹಾದೇವ ದೇವಾಲಯ, ಕುರುವತ್ತಿಯ ಮಲ್ಲಿಕಾರ್ಜುನ ಮಂದಿರ, ಗದಗಿನ ತ್ರಿಕೂಟೇಶ್ವರ ಮುಂತಾದ ಪ್ರಸಿದ್ಧ ದೇವಾಲಯಗಳು ಇವರ ಕೊಡುಗೆಯಾಗಿವೆ. ಈ ವಂಶದ ಅರಸರು ನೂರಾರು ದೇವಾಲಯಗಳನ್ನು ನಿರ್ಮಿಸಿ ಕನ್ನಡ ನಾಡನ್ನು ಕಲೆಗಳ ಬೀಡನ್ನಾಗಿ ಪರಿವರ್ತಿಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಇವರ ಕಾಲದಲ್ಲಿ ಸಂಗೀತ ನೃತ್ಯಗಳೂ ಅಭಿವೃದ್ಧಿಗೊಂಡವು. ಸಂಗೀತ, ನೃತ್ಯ ಸೇವೆಗೆ ಕಲಾವಿದರನ್ನು ನೇಮಿ ಸುತ್ತಿದ್ದರು.

ಮಹಾರಾಣಿ ಚಂದ್ರಲೇಖೆಯು ಅನೇಕ ಸಂಗೀತ ವಿದ್ವಾಂಸರಿಗೆ ಮತ್ತು ನೃತ್ಯಗಾರ್ತಿಯರಿಗೆ ಆಶ್ರಯ ನೀಡಿದ್ದಳು. ಸಂಗೀತ, ನೃತ್ಯ, ಕಲೆ, ಆಭರಣ ಮುಂತಾದ ವಿಷಯಗಳು ‘ಮಾನಸೋಲ್ಲಾಸ’ ಹಾಗೂ ಎರಡನೆಯ ಜಗದೇಕಮಲ್ಲನ ‘ಸಂಗೀತ ಚೂಡಾಮಣಿ’ ಗ್ರಂಥಗಳಲ್ಲಿ ವ್ಯಕ್ತವಾಗಿವೆ .

 

 

You may also like...