ಸರ್ವಜ್ಞ ಕವಿ ಪರಿಚಯ
ಕವಿ ಪರಿಚಯ :
ಸರ್ವಜ್ಞನು ಕ್ರಿ.ಶ. ಸುಮಾರು ಹದಿನೇಳನೆಯ ಶತಮಾನದ ಕವಿ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು ಇವನ ಜನ್ಮಸ್ಥಳ. ವಿಸ್ತಾರವಾದ ಲೋಕಾನುಭವ, ವಿಶಾಲವಾದ ಜೀವನ ದೃಷ್ಟಿಯನ್ನು ಪಡೆದ ಇವನು “ಸರ್ವಜ್ಞ” ಎಂಬ ಅಂಕಿತದಿಂದ ಮುಕ್ತಾಯವಾಗುವ ತ್ರಿಪದಿಗಳನ್ನು ರಚಿಸಿದ್ದಾನೆ.
ಯಾರ ಹಂಗಿಗೂ ಒಳಗಾಗದೆ ಸ್ವತಂತ್ರವಾಗಿ ಬದುಕಿದ ಸರ್ವಜ್ಞನು ‘ಹಿ೦ಡನಗಲಿದ ಸಲಗ’ನ೦ತೆ ಊರೂರು ಸುತ್ತುತ್ತ ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ ಪರ್ವತವಾಗಿ ಉಲಿದವನು. ಕಣ್ಣಿಗೆ ಕಂಡ ಸತ್ಯಗಳನ್ನು, ಮನಸ್ಸಿಗೆ ತಟ್ಟಿದ ಸಂಗತಿಗಳನ್ನು ಕುರಿತು ನಿರ್ಭಿಡೆಯಿಂದ ಪ್ರತಿಕ್ರಿಯಿಸಿದ ಆಶುಕವಿ. ಧರ್ಮ, ನೀತಿ, ಜ್ಞಾನ ಮೊದಲಾದ ಅನೇಕ ವಸ್ತು ವಿಷಯಗಳನ್ನೊಳಗೊಂಡ ಬಿಡಿ ಚಿತ್ರಗಳಂತೆ ತೋರುವ ಇವನ ವಚನಗಳಲ್ಲಿ ಆ ಕಾಲದ ಸಾಮಾಜಿಕ. ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ವಿಮರ್ಶೆ, ವಿಶ್ಲೇಷಣೆ, ವಿಡಂಬನೆಗಳು ಪರಿಣಾಮಕಾರಿಯಾಗಿ ಪ್ರಕಟಗೊಂಡಿವೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಭಾವಕೋಶದಲ್ಲಿ ವಿಶಿಷ್ಟ ಗುರುತಾಗಿ ಉಳಿದುಬಂದಿರುವ ಇವನ ತ್ರಿಪದಿಗಳು ಸಾರ್ವಕಾಲಿಕ ಮಹತ್ವದಿಂದ ಗಮನ ಸೆಳೆಯುತ್ತವೆ.