ತ್ರಿಪದಿ ಸಾಹಿತ್ಯ ಪ್ರಕಾರ

ತ್ರಿಪದಿ ಒಂದು ದೇಸಿ ಛಂದೋಪ್ರಕಾರ. “ಜನವಾಣಿ ಮಳೆ; ಕವಿವಾಣಿ ಹೊಳೆ’ ಎಂಬ ಡಾ. ಬೆಟಗೇರಿ ಕೃಷ್ಣಶರ್ಮರ ಮಾತಿನಂತೆ ಕನ್ನಡ ಸಾಹಿತ್ಯಕ್ಕೆ ಜನಪದ ಕವಿಗಳು ನೀಡಿದ ಅಪೂರ್ವ ಕೊಡುಗೆ. ಶಿಷ್ಟ ಕವಿಗಳ ಆದರಕ್ಕೂ ಒಳಗಾಗಿರುವ ಈ ಕಾವ್ಯ ಪ್ರಕಾರದ ಮೂಲವನ್ನು ಜನಪದರ “ಗರತಿಯ ಹಾಡು’ಗಳಲ್ಲಿ ಕಾಣಬಹುದಾಗಿದೆ. ಏಳನೆಯ ಶತಮಾನದ ಕಪ್ಪೆಅರಭಟ್ಟನ ಬಾದಾಮಿ ಶಾಸನದಲ್ಲಿ ಮೊದಲ ಬಾರಿಗೆ ಇದರ ಲಿಪಿ ರೂಪದ ರಚನೆ ಕ೦ಡು ಬಂದಿದೆ. ನಾಗವರ್ಮನ “ಛ೦ದೋಂಬುಧಿ’ಯಲ್ಲಿ ಇದರ ಸ್ವರೂಪ-ಲಕ್ಷಣಗಳು ಮೊದಲು ನಿರೂಪಿತವಾಗಿವೆ. ಹೆಸರೇ ಸೂಚಿಸುವಂತೆ ಮೂರು ಸಾಲಿನ ತ್ರಿಪದಿಯ ಕಾವ್ಯರೂಪವು ಅಂಶಗಣಗಳಿಂದಾದ ಹಾಡುಗಬ್ಬ. ಒಟ್ಟು ಹನ್ನೊಂದು ಗಣಗಳನ್ನು ಒಳಗೊಂಡಿರುವ ತ್ರಿಪದಿಯಲ್ಲಿ ಆರು ಮತ್ತು ಹತ್ತನೆಯ ಗಣಗಳು ಬ್ರಹ್ಮಗಣಗಳಾಗಿವೆ. ಉಳಿದವು ವಿಷ್ಣುಗಣಗಳು. ತ್ರಿಪದಿಯ ರೂಪವನ್ನು ಮಾತ್ರಾಗಣದಲ್ಲಿಯೂ ಕಾಣಬಹುದಾಗಿದೆ.

ತ್ರಿಪದಿಯನ್ನು ಹಾಡುವಾಗ ಮೊದಲ ಎರಡು ಸಾಲುಗಳಲ್ಲಿನ ಏಳು ಗಣಗಳವರೆಗೆ ಹಾಡಿ ಒಂದು ನಿಲುಗಡೆಯನ್ನು ಪಡೆಯಲಾಗುತ್ತದೆ. ನಂತರ ಎಂಟನೆಯ ಗಣದೊಂದಿಗೆ ಅದರ ಹಿಂದಿನ ಮೂರು ಗಣಗಳನ್ನು ಸೇರಿಸಿಕೊಂಡು ಪುನರಾವರ್ತನೆಯೊಂದಿಗೆ ಮೂರನೆಯ ಸಾಲನ್ನು ಹಾಡಲಾಗುತ್ತದೆ. ಇದು ತ್ರಿಪದಿಯನ್ನು ಹಾಡುವ ರೂಢಿಯ ಕ್ರಮವಾಗಿದೆ. ಆಧುನಿಕ ಕಾಲದಲ್ಲಿ ಇಡಿಯಾಗಿ ತ್ರಿಪದಿಯಲ್ಲಿಯೇ ರಚಿಸಲಾದ ಜಯದೇವಿ ತಾಯಿ ಲಿಗಾಡೆಯವರ “ಸಿದ್ಧರಾಮಪುರಾಣ’ ಮಹಾಕಾವ್ಯ ಇದೆಯಾದರೂ ಬಿಡಿ ಬಿಡಿಯಾದ ಭಾವನೆಗಳನ್ನು ಹೇಳಲು, ಚಿಕ್ಕ ಚಿಕ್ಕ ಸಂಗತಿಗಳನ್ನು ಕಟ್ಟಕೊಡಲು ತ್ರಿಪದಿ ಅನುಕೂಲವಾದ ಒಂದು ಕಾವ್ಯ ಪ್ರಕಾರ. ಈ ಅನುಕೂಲವನ್ನು ಸರ್ವಜ್ಞ ಕವಿಯು ಬಹು ಸಮರ್ಥವಾಗಿ ಬಳಸಿಕೊಂಡು ತ್ರಿಪದಿಯ ಸಾಧ್ಯತೆಯನ್ನು ಹೆಚ್ಚಿಸಿದ್ದಾನೆ.

ಕನ್ನಡ ವೃತ್ತಗಳ ಗಾಯಿತ್ರಿ, ಜನಪದ ಸಾಹಿತ್ಯ ಜಾಹ್ನವಿ, ಕನ್ನಡ ಛಂದೋಗಂಗೆಯ ಗಂಗೋತ್ರಿ ಎ೦ಬ ವಿಶೇಷಣಗಳಿಂದ ನಿವೇದಿಸಲ್ಪಟ್ಟರುವ ಶ್ರಪದಿ ದೇಸಿಯ ಛಂದಸ್ಸಾಗಿದೆ. ಮೂರು ಸಾಲುಗಳಲ್ಲಿ ಬಳಕೆಗೊಂಡಿರುವುದರಿಂದ ಇದಕ್ಕೆ ತ್ರಿಪದಿ ಎಂಬ ಹೆಸರು ಬಂದಿದೆ. ತ್ರಿಪದಿಯು ತ್ರಿವಳಿ, ತ್ರಿವಿಡಿ, ತ್ರಿವುಡೆ, ತ್ರಿಪುಡೆ. ತ್ರಿಪದಿಕಾ ಮು೦ತಾದ ಹಲವು ಹೆಸರುಗಳಿಂದ ಇಂದಿನ ರೂಪ ಪಡೆದಿದೆ. ನಾಗವರ್ಮನಲ್ಲಿ ತಿವಿದಿ ಎಂಬ ರೂಪ ದೊರೆತಿದೆ. ಅವರೊಂದಿಗೆ ತ್ರಿವಳಿ, ತ್ರಿಪದಿಗಳು ದೊರೆತಿದೆ. ಕವಿರಾಜಮಾರ್ಗದಲ್ಲಿ ‘ತ್ರಿಪದಿ’ ಎ೦ದು ಬಳಕೆಗೊಂಡಿದೆ. ಜಯಕೀರ್ತಿ ತನ್ನ ಛ೦ದೋನುಶಾಸನದಲ್ಲಿ “ತ್ರಿಪದಿಕಾ” ಎ೦ಬ ಹೆಸರಿನಲ್ಲಿ ಹೇಳಿ ಬಳಸಿದ್ದಾನೆ. ನೇಮಿಚಂದ್ರ ತನ್ನ ‘ಲೀಲಾವತಿ ಪ್ರಬಂಧ’ದಲ್ಲಿ ‘ತ್ರಿವುಡೆ’ ಎಂದು ಬಳಸಿದ್ದಾನೆ. ಸುರಂಗ, ನೇಮಿಚಂದ್ರ, ಸೋಮರಾಜರು ‘ಒನಕೆವಾಡು’ ಎಂದು ಉಪಯೋಗಿಸಿದ್ದಾರೆ.

ತ್ರಿಪದಿಯ ಮೂಲರೂಪ

ತ್ರಿಪದಿಯ ಮೂಲ ರೂಪ ಕನ್ನಡ ಮತ್ತು ತಮಿಳಿನಲ್ಲಿ ಒಂದೇ ಮಟ್ಟಿನಲ್ಲಿ ಬಳಕೆಗೊಂಡಿದೆ. ಮೊದಲ ಚರಣದಲ್ಲಿ ನಾಲ್ಕು ವಿಷ್ಣುಗಣಗಳು, 2ನೇ ಚರಣದಲ್ಲಿ ಮೂರುಗಣಗಳಿದ್ದು. ವಿಷ್ಣು. ಬ್ರಹ್ಮ ವಿಷ್ಣು ಗಣಗಳನ್ನು ಈ ರೀತಿ ಹೊಂದಿರುತ್ತವೆ. ತಮಿಳಿನ ಪುರಾತನ ಕಾವ್ಯ ಕುಳಿಳ್‌ನಲ್ಲಿ ಇದೇ ಮಟ್ಟಿನ ಛಂದಸ್ಸು ಬಳಕೆಗೊಂಡಿದೆ. ಎರಡು ಚರಣಗಳ ಮಟ್ಟುಗಳನ್ನು ಕನ್ನಡ ಜಾನಪದ ಗೀತೆಯಾದ ಗರತಿ ಹಾಡುಗಳಲ್ಲಿ ಕಾಣಬಹುದಾಗಿದೆ.

ಸಂಜೆ ಹೊಟ್ಟೆಗೆ ಮಾಡಿ ಗಂಜಿ ನೀರಿಗೆ ಹೋದ
ಗಂಗಮ್ಮ ತಾಯಿ ಕೊಡನೆತ್ತ

ಈ ಎರಡು ಚರಣಗಳ ಹಾಡು ಜಯಕೀರ್ತಿ ತನ್ನ ‘ಛಂದೋನುಶಾಸನ’ದಲ್ಲಿ ಹೇಳಿದ ಏಳೆಯ ರೂಪವನ್ನು ಹೋಲುತ್ತದೆ. ಇದರಿಂದ ತ್ರಿಪದಿ ಮೊದಲು ಏಳೆಯ ರೂಪದಲ್ಲಿರಬಹುದೆಂಬ ಅನುಮಾನವನ್ನು ಹುಟ್ಟಿಸುತ್ತದೆ.

ಕನ್ನಡದಲ್ಲಿ ದೊರೆತ ಅತಿ ಪ್ರಾಚೀನ ತ್ರಿಪದಿ 7ನೇ ಶತಮಾನಕ್ಕೆ ಸೇರಿದ ಬಾದಾಮಿಯ ಕಪ್ಪೆಅರಭಟ್ಟನ ಶಾಸನದ್ದಾಗಿದೆ.

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್‌
ಮಾಧವನೀತನ್‌ ಪೆರನಲ್ಲ

‘ಕವಿರಾಜಮಾರ್ಗ’ದಲ್ಲಿ ಚೆತ್ತಾಣ ಕಾವ್ಶ ಪದ್ಧತಿಯ ಸಂದರ್ಭದಲ್ಲಿ ತ್ರಿಪದಿ ಪ್ರಕಾರ ಕಂಡು ಬಂದಿದೆ. ಇದನ್ನು ನೋಡಿದರೆ ತ್ರಿಪದಿ 8ನೇ ಶತಮಾನದ ವೇಳೆಗಾಗಲೇ ಜನಪ್ರಿಯ ಮಟ್ಟಾದಂತೆ ತೋರುತ್ತದೆ. ಇನ್ನು ಅಚ್ಚಗನ್ನಡ ಮಟ್ಟುಗಳಾದ ಪಿರಿಯಕ್ಕರ, ಮೂಲಷಟ್ಪದಿ, ಸಾಂಗತ್ಯಗಳಿಗೆ ತ್ರಿಪದಿಯೇ ಮೂಲವಾಗಿರುವಂತೆ ಕಾಣುತ್ತದೆ.

ಪಿರಿಯಕ್ಕರದ ಲಕ್ಷಣ – ವಿ ವಿ ವಿ ವಿ ವಿ ಬ್ರ ರು
ಮೂಲಷಟ್ಟದಿ -ವಿ ವಿ ವಿ ವಿ ವಿ ಬ್ರ ರು

ಕನ್ನಡದಲ್ಲಿ ಪ್ರಾಸ ಕಡ್ಡಾಯವಾಗಲು ಜನಪದ ಸಾಹಿತ್ಯದಲ್ಲಿನ ಸೋಬಾನೆ ಪದಗಳು, ಕೋಲುಪದಗಳು, ಬೀಸುವ ಪದಗಳಲ್ಲಿನ ಲಾಲಿತ್ಯವೇ ಕಾರಣವಾಗಿರಬಹುದು. 12ನೇ ಶತಮಾನದ ವೇಳೆಗೆ ಅಂಶ ಗಣವಾಗಿದ್ದ ತ್ರಿಪದಿ ನಂತರದ ದಿನಗಳಲ್ಲಿ ಮಾತ್ರಾಗಣಗಳಾಗಿ ಪರಿವರ್ತನೆ ಹೊಂದಿದೆ. ಅಕ್ಕಮಹಾದೇವಿಯ ಯೋಗಾಂಗ ತ್ರಿಪದಿಯಲ್ಲಿ ಮಾತ್ರಾಗಣ ತ್ರಿಪದಿಯನ್ನು ನೋಡಬಹುದು.

ಅಷ್ಟದಳ ಕಮಲದಾ ಬಟ್ಟಬಯಲೊಳಗೊಂದು
ಮುಟ್ಟಬಾರದಾ ಘನವಿಹುದು ಮನದೊಳಗೆ
ದೃಷ್ಟಿಯಿಟ್ಟವನೆ ಕಡುಜಾಣ

ಇಂದಿಗೂ ತ್ರಿಪದಿ ಛಂದೋರೂಪದ ಕವಿತೆಗಳನ್ನು ಕವಿಗಳು ರಚಿಸುತ್ತಿರುವುದನ್ನು ಕಾಣಬಹುದು.

ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಎಲ್ಲರೋಳ್‌ ಒಂದೊಂದು ನುಡಿಗಲಿತು.
ವಿದ್ಯೆಯ ಪರ್ವತವೇ ಆದ ಸರ್ವಜ್ಞ

ಸರ್ವಜ್ಞ
Spread the Knowledge

You may also like...

Leave a Reply

Your email address will not be published. Required fields are marked *