ಕನ್ನಡ ವ್ಯಾಕರಣ – ಅವ್ಯಯಗಳು

ಅವ್ಯಯಗಳು
ಅವ್ಯಯಗಳು

ಅವ್ಯಯಗಳು

ಈ ವಾಕ್ಯಗಳನ್ನು ಗಮನಿಸಿ :

— ಅವನು ಸುತ್ತಲೂ ನೋಡಿದನು.
— ಅವಳು ಸುತ್ತಲೂ ನೋಡಿದಳು.
— ಅವರು ಸುತ್ತಲೂ ನೋಡಿದರು.
— ಅದು ಸುತ್ತಲೂ ನೋಡಿತು.

ಈ ನಾಲ್ಕು ವಾಕ್ಯಗಳಲ್ಲಿ ಬಂದಿರುವ ‘ಸುತ್ತಲೂ’ ಎಂಬ ಪದವನ್ನು ಗಮನಿಸಿದಾಗ ಅದು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲೂ ಏಕವಚನ, ಬಹುವಚನಗಳಲ್ಲೂ ಯಾವುದೇ ವ್ಯತ್ಯಾಸವನ್ನು ಹೊಂದದೆ ಏಕರೂಪದಲ್ಲಿರುವುದನ್ನು ನೋಡಬಹುದು. ‘ಸುತ್ತಲೂ’ ಎಂಬ ಪದದ ಮೇಲೆ ಯಾವುದೇ ಪ್ರತ್ಯಯವನ್ನು ಹಚ್ಚಲಾಗುವುದಿಲ್ಲ. ಇದು ನಾಮಪದ, ಕ್ರಿಯಾಪದಗಳ ಹಾಗೆ ರೂಪದಲ್ಲಿಯೂ ಯಾವ ಬದಲಾವಣೆಯನ್ನೂ ಹೊಂದುವುದಿಲ್ಲ ಎಂಬುದು ತಿಳಿಯುತ್ತದೆ.

ಹೀಗೆ_ ಲಿಂಗ, ವಚನ, ವಿಭಕ್ತಿಗಳಿಂದ ಯಾವ ವ್ಯತ್ಯಾಸವನ್ನೂ ಹೊಂದದ- ಚೆನ್ನಾಗಿ, ನೆಟ್ಟಗೆ, ಮೆಲ್ಲಗೆ, ಸುಮ್ಮನೆ, ತರುವಾಯ ಇತ್ಯಾದಿ ಪ್ರಯೋಗಿಸಲ್ಪಡುತ್ತವೆ. ಇಂತಹ ಪದಗಳೇ ಅವ್ಯಯಗಳು .

ಹಾಗಾಗಿ_ ‘ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳನ್ನು ಅವ್ಯಯಗಳು’ ಎಂದು ಕರೆಯಲಾಗಿದೆ.

ಈ ಅವ್ಯಯಗಳನ್ನು

1. ಸಾಮಾನ್ಯಾವ್ಯಯ,
2. ಅನುಕರಣಾವ್ಯಯ,
3. ಭಾವಸೂಚಕಾವ್ಯಯ,
4. ಕ್ರಿಯಾರ್ಥಕಾವ್ಯಯ,
5. ಸಂಬಂಧಾರ್ಥಕಾವ್ಯಯ,
6. ಕೃದಂತಾವ್ಯಯ,
7. ತದ್ಧಿತಾಂತಾವ್ಯಯ,
8. ಅವಧಾರಣಾರ್ಥಕಾವ್ಯಯ,
9. ಸಂಬೋಧಕಾವ್ಯಯ
,
10. ಪ್ರಶ್ನಾರ್ಥಕಾವ್ಯಯ

ಎಂಬ ಗುಂಪುಗಳಾಗಿ ವಿಂಗಡಿಸಬಹುದು.


1. ಸಾಮಾನ್ಯಾರ್ಥಕಾವ್ಯಯ :

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳೇ ಸಾಮಾನ್ಯಾವ್ಯಯಗಳು. ಇವು ಹೆಚ್ಚಾಗಿ ವಿಶೇಷಣಗಳಾಗಿರುತ್ತವೆ.

ಉದಾ:- ಬೇಗನೆ, ಮೆಲ್ಲಗೆ, ಸೊಗಸಾಗಿ, ಸುಮ್ಮನೆ, ತಟ್ಟನೆ, ತರುವಾಯ, ಹಾಗೆ, ಅಂತು, ಬೇರೆ, ಬಳಿಕ, ಕೂಡಲೆ, ಚೆನ್ನಾಗಿ ಇತ್ಯಾದಿಗಳು.

2. ಅನುಕರಣಾವ್ಯಯಗಳು :

ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳನ್ನು ‘ಅನುಕರಣಾವ್ಯಯಗಳೆಂದು’ ಕರೆಯುತ್ತಾರೆ.

ಉದಾ: ಚಟಚಟ, ಕರಕರ, ಚುರುಚುರು, ಧಗಧಗ, ರೊಯ್ಯನೆ, ಸುಯ್ಯನೆ, ಘುಳುಘುಳು, ದಡದಡ ಇತ್ಯಾದಿ ಪದಗಳು.

3. ಭಾವಸೂಚಕಾವ್ಯಯಗಳು:-

ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ -ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಕೆಲವು ಪದಗಳನ್ನು ಬಳಸುತ್ತೇವೆ. ಅಂತಹ
ಪದಗಳನ್ನು ಭಾವಸೂಚಕ ಅವ್ಯಯಗಳೆಂದು ಕರೆಯುತ್ತಾರೆ.

ಉದಾ:- ಆಹಾ! ಭಳಿರೆ! ಅಯ್ಯೋ! ಓಹೋ! ಹೋ! , ಅಃ! ಆಃ, ಓ – ಇತ್ಯಾದಿ ಪದಗಳು, ಅಥವಾ ಪದರೂಪದ ಅಕ್ಷರಗಳು.

4. ಕ್ರಿಯಾರ್ಥಕಾವ್ಯಯಗಳು:

ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳನ್ನು ಕ್ರಿಯಾರ್ಥಕ ಅವ್ಯಯಗಳು ಎಂದು ಕರೆಯಲಾಗಿದೆ.

ಉದಾ:- ಅಹುದು, ಸಾಕು, ಅಲ್ಲ, ಹೌದು, ಬೇಡ, ಉಂಟು-ಇತ್ಯಾದಿ.

5. ಸಂಬಂಧಾರ್ಥಕಾವ್ಯಯಗಳು:

ಎರಡು ಪದಗಳನ್ನಾಗಲೀ ಹಲವು ಪದ ಸಮುಚ್ಛಯಗಳನ್ನಾಗಲೀ, ವಾಕ್ಯಗಳನ್ನಾಗಲೀ, ಜೋಡಿಸುವಂತಹ ಅಥವಾ ಸಂಬಂಧಗೊಳಿಸುವಂತಹ ಪದಗಳೇ ಸಂಬಂಧಾರ್ಥಕಾವ್ಯಯಗಳು.

ಉದಾ:- ಮತ್ತು, ಅಥವಾ, ಆದ್ದರಿಂದ, ಊ, ಉಂ, ಅಲ್ಲದೆ ಇತ್ಯಾದಿ.
ಪದಗಳ ಜೋಡಣೆ :- ರಾಮನೂ ಲಕ್ಷ್ಮಣನೂ ಸೀತೆಯೂ ಕಾಡಿಗೆ ಹೊರಟರು.
ಪದಸಮುಚ್ಚಯ ಜೋಡಣೆ:- ಅವನು ಬರುವುದೂ ಬೇಡ; ಆ ಕೆಲಸ ಆಗುವುದೂ ಬೇಡ.
ವಾಕ್ಯಗಳ ಜೋಡಣೆ:– ಅವನು ಬರಲಿಲ್ಲ ಆದ್ದರಿಂದ ನಾನೂ ಬರಲಿಲ್ಲ.

6. ಕೃದಂತಾವ್ಯಯ ಮತ್ತು
7. ತದ್ಧಿತಾಂತಾವ್ಯಗಳ ವಿವರವನ್ನು ಕೃದಂತ ಮತ್ತು ತದ್ಧಿತ ಪ್ರಕರಣಗಳ ವಿವರಣೆಯ ಸಂದರ್ಭದಲ್ಲಿ ತಿಳಿಯೋಣ.

8. ಅವಧಾರಣಾರ್ಥಕಾವ್ಯಯ:-

ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯವನ್ನು ಅವಧಾರಣಾರ್ಥಕ ಅವ್ಯಯ ಎಂದು ಕರೆಯುತ್ತಾರೆ. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭಧಲ್ಲಿ ಈ ಅವ್ಯಯವನ್ನು ಬಳಸಲಾಗುತ್ತದೆ.

ಉದಾ:- ಅವನೇ, ಅದುವೇ, ನೀನೇ, ಅವಳೇ, ಅವರೇ, ಇತ್ಯಾದಿ ಪದಗಳ ಕೊನೆಯಲ್ಲಿರುವ ‘’ ಎಂಬ ಅಕ್ಷರವೇ ಅವಧಾರಣಾರ್ಥಕ ಅವ್ಯಯ.

9. ಸಂಬೋಧಕಾವ್ಯಯಗಳು:-

ಕರೆಯುವಾಗ ಉಪಯೋಗಿಸು ಶಬ್ದಗಳು – ಎಲೋ, ಎಲಾ, ಎಲೇ, ಎಲೌ, ಓ.

10. ಪ್ರಶ್ನಾರ್ಥಕಾವ್ಯಯಗಳು:-

ಪ್ರಶ್ನೆಮಾಡುವಾಗ ಉಪಯೋಗಿಸುವ ಅವ್ಯಯಗಳು-ಎ, ಏ, ಓ, ಆ, ಏನು, ಅವನು ಬಂದನೇ.


Spread the Knowledge

You may also like...

Leave a Reply

Your email address will not be published. Required fields are marked *