ಕನ್ನಡ ವ್ಯಾಕರಣ – ನಾಮಪದ

ಕನ್ನಡ ವ್ಯಾಕರಣ – ನಾಮಪದ
ಕನ್ನಡ ವ್ಯಾಕರಣ – ನಾಮಪದ

ಕ್ರಿಯೆಯ ಅರ್ಥವನ್ನು ಕೊಡದೆ ಇರುವ ಎಲ್ಲಾ ನಾಮವಾಚಕಪದಗಳನ್ನು ನಾಮಪದಗಳೆನ್ನವರು.

ನಾಮಪದ ಪರಿಚಯಾತ್ಮಕ ವಿವರ

— ಭೀಮನು ಚೆನ್ನಾಗಿ ಹಾಡಿದನು.

— ರಾಗಿಣಿಯು ನೃತ್ಯ ಸ್ಪರ್ಧೆಯಲ್ಲಿ ಪ್ರಥಮಸ್ಥಾನವನ್ನು ಪಡೆದಳು.

ಈ ಎರಡು ವಾಕ್ಯಗಳನ್ನು ಗಮನಿಸಿದಾಗ ಬೇರೆ ಬೇರೆ ಬಗೆಯ ಪದಗಳು ಬಳಕೆಯಾಗಿರುವುದನ್ನು ಕಾಣಬಹುದು. ವ್ಯಾಕರಣದ ಪ್ರಕಾರ ಇಂತಹ ಪದಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ.

ಭೀಮನು, ರಾಗಿಣಿಯು, ನೃತ್ಯ ಸ್ಪರ್ಧೆಯಲ್ಲಿ, ಪ್ರಥಮಸ್ಥಾನವನ್ನು – ನಾಮಪದಗಳು.

ಹಾಡಿದನು, ಪಡೆದಳು – ಕ್ರಿಯಾಪದಗಳು.

ಚೆನ್ನಾಗಿ – ಅವ್ಯಯ.

ಹೀಗೆ ನಾವು ಆಡುವ ಮಾತುಗಳನ್ನು ಮುಖ್ಯವಾಗಿ ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬ ಮೂರು ಗುಂಪುಗಳನ್ನಾಗಿ ಮಾಡಬಹುದು.

ಭೀಮನು, ಭೀಮನನ್ನು, ಭೀಮನಿಂದ, ಭೀಮನಿಗೆ, ಭೀಮನ ದೆಸೆಯಿಂದ, ಭೀಮನ, ಭೀಮನಲ್ಲಿ ಇವೆಲ್ಲವೂ ನಾಮಪದಗಳೇ ಆಗಿರುತ್ತವೆ.

ಇವುಗಳಲ್ಲಿ ಭೀಮ ಎಂಬುದು ಮೂಲರೂಪವಾಗಿದೆ. ಇದೇ ನಾಮಪ್ರಕೃತಿ.

ಹೀಗೆ – ನಾಮಪದದ ಮೂಲರೂಪವೇ ನಾಮಪ್ರಕೃತಿ.

ಇಲ್ಲಿ ಭೀಮ ಎಂಬ ನಾಮಪ್ರಕೃತಿಯ ಜೊತೆಗೆ ಉ, ಅನ್ನು, ಇಂದ, ಗೆ, ದೆಸೆಯಿಂದ, ಅ, ಅಲ್ಲಿ ಎಂಬ ಏಳು ತೆರನಾದ ನಾಮವಿಭಕ್ತಿಪ್ರತ್ಯಯಗಳು ಸೇರಿವೆ.

ಹೀಗೆ –ನಾಮಪ್ರಕೃತಿಗಳಿಗೆ ನಾಮವಿಭಕ್ತಿಗಳು ಸೇರಿ ಆಗುವ ಪದವೇ ನಾಮಪದ.


ನಾಮವಿಭಕ್ತಿಗಳು :

ಕ್ರಿಯಾಪದದೊಂದಿಗೆ ನಾಮಪದದ ಸಂಬಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ ಮುಂತಾದುವು ಕಾರಕಾರ್ಥಗಳು.

ಕಾರಕಾರ್ಥವನ್ನು ವಿಭಜಿಸಿ ಹೇಳುವ ಪ್ರತ್ಯಯಗಳೇ ವಿಭಕ್ತಿಪ್ರತ್ಯಯಗಳು.

ಇವುಗಳ ಸ್ವರೂಪ ಮತ್ತು ಪರಸ್ಪರ ಸಂಬಂಧವನ್ನು ಕೊಟ್ಟಿರುವ ಕೋಷ್ಠಕದ ಸಹಾಯದಿಂದ ತಿಳಿಯೋಣ

ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯಗಳು

ಈ ವಿಭಕ್ತಿ ಪ್ರತ್ಯಯಗಳು ನಾಮಪ್ರಕೃತಿಗೆ ಬಂದು ಸೇರುವಾಗ ಹೆಚ್ಚಾಗಿ ‘ಅ’ ಕಾರಾಂತ ಪದಗಳಿಗೆ ‘ನ’ ಕಾರವೂ (ರಾಮನು, ರಾಮನನ್ನು, ರಾಮನಲ್ಲಿ ಇತ್ಯಾದಿ) ‘ಎ’ ಕಾರಾಂತ ಪದಗಳಿಗೆ ‘ಯ’ ಕಾರವೂ (ಮನೆಯು, ಮನೆಯಿಂದ, ಮನೆಯ, ಮನೆಯಲ್ಲಿ) ಆದೇಶವಾಗಿ ಬರುತ್ತವೆ.

ಆದರೆ ಇತ್ತೀಚೆಗೆ ಕೆಲವು ಪ್ರದೇಶಗಳ ಆಡು ಭಾಷೆಯ ಪ್ರಭಾವದಿಂದ ‘ಮನೆಯಲ್ಲಿ’ ಪದ ಮನೆನಲ್ಲಿ’ ಎಂತಲೂ ‘ಶಾಲೆಯಲ್ಲಿ’ ಪದ ಶಾಲೆನಲ್ಲಿ’ ಎಂತಲೂ ಪ್ರಯೋಗವಾಗುತ್ತಿದೆ.

ಇಲ್ಲಿ ‘ ನ’ ಕಾರ ಹೇಗೆ ಆಗಮವಾಯಿತೆಂದು ತಿಳಿಯದು. ಆದರೆ ಅದೇ ‘ಮನೆ’ ಎಂಬ ‘ಎ’ ಕಾರಾಂತ ಪದಕ್ಕೆ ಸಪ್ತಮೀವಿಭಕ್ತಿ ಬಿಟ್ಟು ಉಳಿದ ವಿಭಕ್ತಿಪ್ರತ್ಯಯಗಳು ಸೇರಿದಾಗ ಈ ಕ್ರಿಯೆ ಕಾಣಿಸುವುದಿಲ್ಲ. ಅಂದರೆ ಮನೆಯು, ಮನೆಯನ್ನು, ಮನೆಯಿಂದ, ಮನೆಯ’ ಪದಗಳಲ್ಲಿ ವ್ಯಾಕರಣ ನಿಯಮ ರೀತ್ಯಾ ‘ಯ’ ಕಾರವೇ ಆಗಮವಾಗಿದೆಯೇ ಹೊರತು ಮನೆನು, ಮನೆನನ್ನು, ಮನೆನಿಂದ, ಮನೆನ’ ಎಂಬ ರೂಪವನ್ನು ಹೊಂದಿಲ್ಲ.

ಸಪ್ತಮೀವಿಭಕ್ತಿ ಸೇರಿದಾಗ ಮಾತ್ರ ಇಂತಹ ಕ್ರಿಯೆ ಕಾಣುತ್ತದೆ.

ಹಾಗಾಗಿ’ ಮನೆಯಲ್ಲಿ’ ಪದದ ಬದಲಿಗೆ ಮನೆನಲ್ಲಿ’ ಎಂಬ ರೀತಿಯ (ಅಂದರೆ ಸಪ್ತಮೀ ವಿಭಕ್ತಿ ಸೇರಿದಾಗ ಆಗುವ ತಪ್ಪುಗಳು) ಪ್ರಯೋಗ ವ್ಯಾಕರಣರೀತ್ಯಾ ಸಮ್ಮತವಲ್ಲ.

ನಾಮಪದಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ಅನೇಕ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.


ನಾಮವಾಚಕದ ವಿಧಗಳು

  1. ವಸ್ತುವಾಚಕ
  2. ಗುಣವಾಚಕ
  3. ಸಂಖ್ಯಾವಾಚಕ
  4. ಸಂಖ್ಯೇಯ ವಾಚಕ
  5. ಭಾವನಾಮಗಳು
  6. ಪರಿಮಾಣವಾಚಕ
  7. ಪ್ರಕಾರವಾಚಕ
  8. ದಿಗ್ವಾಚಕ
  9. ಸರ್ವನಾಮಗಳು

1. ವಸ್ತುವಾಚಕ:

ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳೆಲ್ಲವೂ ವಸ್ತುವಾಚಕಗಳು ಎನಿಸುವುವು.

ಉದಾ: ಮನುಷ್ಯ, ಬಸವ, ಮುದುಕ, ಮರ, ಹಣ್ಣು, ಅಡವಿ, ಶಾಲೆ.

ವಸ್ತುವಾಚಕದಲ್ಲಿ ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಎಂದು ಮೂರು ಉಪ ವಿಭಾಗ ಮಾಡಬಹುದು.

ರೂಢನಾಮ:
ರೂಢಿಯಿಂದ ಬಂದ ನಾಮವಾಚಕಗಳು ರೂಢನಾಮಗಳು ಎನಿಸುವುವು.
ಉದಾಹರಣೆ: ನದಿ, ಪರ್ವತ, ದೇಶ, ಊರು, ಮರ. ಮನುಷ್ಯ, ಹುಡುಗ.

ಅಂಕಿತನಾಮ:
ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲಾ ಅಂಕಿತನಾಮಗಳು ಎನಿಸುವುವು.
ಉದಾಹರಣೆ: ಗಂಗಾ, ಬ್ರಹ್ಮಪುತ್ರ, ಹಿಮಾಲಯ, ಭಾರತ, ಬೇಲೂರು, ಬೇವು, ಸಲ್ಮ, ಗಾಂಧೀಜಿ.

ಅನ್ವರ್ಥನಾಮ:
ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲಾ ಅನ್ವರ್ಥನಾಮಗಳು ಎನಿಸುವುವು.
ಉದಾಹರಣೆ: ಯೋಗಿ, ವ್ಯಾಪಾರಿ, ಜಾಣ, ಇತ್ಯಾದಿ.


2. ಗುಣವಾಚಕಗಳು:

ವಸ್ತುಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳು ಎನಿಸುವುವು,

ಉದಾಹರಣೆ: ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕೆಟ್ಟ, ಒಳ್ಳೆಯ, ಕಿರಿಯ.


3. ಸಂಖ್ಯಾವಾಚಕಗಳು:

ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲವೂ ಸಂಖ್ಯಾವಾಚಕ ಎನಿಸುವುವು.

ಉದಾಹರಣೆ: ಒಂದು, ಎರಡು, ಹತ್ತು, ಸಾವಿರ, ಲಕ್ಷ.


4. ಸಂಖ್ಯೇಯವಾಚಕಗಳು:

ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳೆನಿಸುವುವು.

ಉದಾಹರಣೆ: ಒಂದನೆಯ, ಇಮ್ಮಡಿ, ಹತ್ತರಿಂದ ಮುಂತಾದವು.


5. ಭಾವನಾಮಗಳು:

ಭಾವನೆಗಳನ್ನು ಸೂಚಿಸುವ ಶಬ್ದಗಳೇ ಭಾವನಾಮಗಳು.

ಉದಾಹರಣೆ: ಓಹೋ, ಅಯ್ಯೋ, ಅಬ್ಬಬ್ಬ.


6. ಪರಿಮಾಣವಾಚಕಗಳು:

ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ-ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಗಳೆನ್ನುವರು.

ಉದಾಹರಣೆ : ಅಷ್ಟು, ಇಷ್ಟು, ಹಲವು, ಕೆಲವು, ಅನಿತು


7. ಪ್ರಕಾರವಾಚಕಗಳು:

ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು.

ಉದಾಹರಣೆ : ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ ಮಂತಾದವು.


8. ದಿಗ್ವಾಚಕಗಳು:

ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳು

ಉದಾಹರಣೆಗೆ: ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ ಇತ್ಯಾದಿ.


9. ಸರ್ವನಾಮಗಳು:

ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು

ಉದಾಹರಣೆ: ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.

ಸರ್ವನಾಮಗಳನ್ನು ಪುರುಷಾರ್ಥಕ, ಪ್ರಶ್ನಾರ್ಥಕ, ಆತ್ಮಾರ್ಥಕಗಳೆಂದು ವಿಂಗಡಿಸಲಾಗಿದೆ.

ಪುರುಷಾರ್ಥಕಗಳನ್ನು ಉತ್ತಮ, ಮಧ್ಯಮ, ಅನ್ಯ(ಪ್ರಥಮ) ಪುರುಷಗಳೆಂದು ವಿಭಾಗಿಸಿದೆ.

ಉತ್ತಮ ಪುರುಷ – ನಾನು, ನಾವು

ಮಧ್ಯಮ ಪುರುಷ – ನೀನು, ನೀವು

ಅನ್ಯಪುರುಷ (ಪ್ರಥಮಪುರುಷ) – ಅವನು, ಇವನು, ಅವರು, ಇವರು
ಅವಳು, ಇವಳು, ಅವರು, ಇವರು
ಅದು, ಇದು, ಅವು, ಇವು

ಪ್ರಶ್ನಾರ್ಥಕ – ಯಾರು?, ಏನು?, ಯಾವುದು?

ಆತ್ಮಾರ್ಥಕ – ತಾನು, ತಾವು, ತನ್ನ, ತಮ್ಮ


ವಿಭಕ್ತಿ ಪ್ರತ್ಯಯಗಳು


Spread the Knowledge

You may also like...

Leave a Reply

Your email address will not be published. Required fields are marked *