ಕನ್ನಡ ವ್ಯಾಕರಣ – ದ್ವಿರುಕ್ತಿ – ಜೋಡುನುಡಿ – ನುಡಿಗಟ್ಟು

ದ್ವಿರುಕ್ತಿ - ಜೋಡುನುಡಿ - ನುಡಿಗಟ್ಟು
ದ್ವಿರುಕ್ತಿ – ಜೋಡುನುಡಿ – ನುಡಿಗಟ್ಟು

ದ್ವಿರುಕ್ತಿ – ಜೋಡುನುಡಿ – ನುಡಿಗಟ್ಟು (ಪಡೆನುಡಿ)

ವಾಕ್ಯದಲ್ಲಿ ಪದವನ್ನು ಜೋಡಿಸುವ ಜಾಣ್ಮೆಯೇ ಶೈಲಿ. ಪದಗಳ ಆಯ್ಕೆ ಮತ್ತು ಜೋಡಣೆಯಲ್ಲಿ ಕೌಶಲ ಇದ್ದಾಗ ಶೈಲಿ ಸುಂದರವಾಗುತ್ತದೆ.

ಭಾಷೆಯಲ್ಲಿ ಸಹಜ-ಸ್ವಾಭಾವಿಕ ಪದಗಳೊಂದಿಗೆ ವಿಶಿಷ್ಟ ಅರ್ಥಬರುವಂತೆ ಕೆಲವು ಪದಗಳನ್ನು ಜೋಡಿಸಿ ಬಳಸುವುದುಂಟು.

ಅಂತಹ ಪದಗಳ ಜೋಡಣೆಯಲ್ಲಿ ದ್ವಿರುಕ್ತಿ, ಜೋಡುನುಡಿ, ನುಡಿಗಟ್ಟು ಅಥವಾ ಪಡೆನುಡಿ ಎಂಬುದಾಗಿ ಹಲವು ವಿಧಗಳಿವೆ.


ದ್ವಿರುಕ್ತಿ :

ಹೌದುಹೌದು, ಮನೆಮನೆ, ನಿಲ್ಲುನಿಲ್ಲು, ಬನ್ನಿಬನ್ನಿ, ಬೇಡಬೇಡ, ಓಡುಓಡು, -ಹೀಗೆ ಒಂದೇ ಪದ ಮಾತು ಇಲ್ಲವೇ ಬರೆವಣಿಗೆಯಲ್ಲಿ ಎರಡು ಸಾರಿ ಬಳಕೆಯಾದರೆ ಅದನ್ನು ‘ದ್ವಿರುಕ್ತಿ’ ಎನ್ನುತ್ತಾರೆ.

ಸೂತ್ರ :- ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ, ಎರಡೆರಡು ಬಾರಿ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ. ಇಂತಹ ಪದಗಳು ಬೇರೆ ಬೇರೆ ಅರ್ಥಗಳಲ್ಲಿ ಪ್ರಯೋಗಿಸಲ್ಪಡುತ್ತವೆ.

‘ದ್ವಿ’ ಎಂದರೆ ‘ಎರಡು’, ‘ಉಕ್ತಿ’ ಎಂದರೆ ‘ಹೇಳು’, ‘ದ್ವಿರುಕ್ತಿ’ ಎಂದರೆ ‘ಎರಡುಬಾರಿ ಹೇಳು’ ಎಂದು ಅರ್ಥ. ಸಾಮಾನ್ಯವಾಗಿ ಉತ್ಸಾಹ, ಅವಸರ, ದುಃಖ, ಇತ್ಯಾದಿ ಸಂದರ್ಭಗಳಲ್ಲಿ ಭಾವನೆಗಳ ತೀವ್ರತೆಯನ್ನು ವ್ಯಕ್ತಪಡಿಸುವಾಗ ದ್ವಿರುಕ್ತಿಗಳು ಬಳಕೆಯಾಗುತ್ತವೆ. ಕೆಲವೊಮ್ಮೆ ದ್ವಿರುಕ್ತಿಯಲ್ಲಿನ ಎರಡು ಪದಗಳು ಕೂಡಿದಾಗ ಮೊದಲ ಪದ ರೂಪಾಂತರಗೊಳ್ಳುವುದುಂಟು.

ಉದಾ :

  • ಕಡೆ + ಕಡೆ = ಕಟ್ಟಕಡೆ.
  • ಮೊದಲು + ಮೊದಲು = ಮೊತ್ತಮೊದಲು.
  • ಕೆಳಗೆ + ಕೆಳಗೆ = ಕೆಳಕೆಳಗೆ.
  • ಹೊಸದು + ಹೊಸದು = ಹೊಚ್ಚಹೊಸದು.
  • ತುದಿ + ತುದಿ = ತುತ್ತತುದಿ.
  • ಒಂದು + ಒಂದು = ಒಂದೊಂದು.

ಜೋಡುನುಡಿ :

ಮೇಲ್ನೋಟಕ್ಕೆ ದ್ವಿರುಕ್ತಿಗಳ ಹಾಗೆ ಕಂಡುಬರುವ ಕೆಲವು ಪದಗಳಿವೆ. ಆದರೆ ಅವುಗಳನ್ನು ದ್ವಿರುಕ್ತಿಗಳೆಂದು ಹೇಳುವ ವಾಡಿಕೆಯಿಲ್ಲ. ಅವುಗಳನ್ನು ಜೋಡುನುಡಿಗಳೆಂದು ಕರೆಯಲಾಗುತ್ತದೆ.

ದ್ವಿರುಕ್ತಿಯಲ್ಲಿ ಒಂದೇಪದ ಎರಡು ಬಾರಿ ಬಂದರೆ, ಇಲ್ಲಿ ಬೇರೆ ಬೇರೆ ಪದಗಳು ಜೊತೆಯಾಗಿರುತ್ತವೆ.

ಹೀಗೆ ಜೊತೆಯಾಗಿ ಬರುವ ಪದಗಳಲ್ಲಿ ಎರಡು ವಿಧದ ಪದಗಳಿರುತ್ತವೆ.
೧. ಎರಡೂ ಪದಗಳಿಗೆ ಬೇರೆ ಬೇರೆ ಅರ್ಥವಿರುತ್ತದೆ.
೨. ಎರಡು ಪದಗಳಲ್ಲಿ ಮೊದಲ ಪದಕ್ಕೆ ನಿರ್ದಿಷ್ಟ ಅರ್ಥವಿದ್ದು, ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.

ಅರ್ಥವಿರುವ ಪದದೊಂದಿಗೆ ಸಮಾನಾರ್ಥ, ವಿರುದ್ಧಾರ್ಥ ಇಲ್ಲವೇ ಅರ್ಥರಹಿತ ಪದಗಳನ್ನು ಜೋಡಿಸಿ ಬಳಸುವುದುಂಟು. ಇವುಗಳನ್ನೇ ‘ಜೋಡುನುಡಿ’ ಎಂದು ಕರೆಯಲಾಗುತ್ತದೆ.

ಉದಾಹರಣೆಗಳು :

  1. ಸಮಾನಾರ್ಥಕ ಜೋಡುನುಡಿ : ಉಡುಗೆತೊಡುಗೆ, ಅವಳಿಜವಳಿ, ಟಾಪ್‌ಮೇಲೆ.
  2. ವಿರುದ್ಧಾರ್ಥಕ ಜೋಡುನುಡಿ : ಸಿಹಿಕಹಿ, ನೋವುನಲಿವು, ಆದಿಅಂತ್ಯ.
  3. ಎರಡನೇ ಪದ ಅರ್ಥ ರಹಿತವಾಗಿರುವ ಜೋಡುನುಡಿ : ಕೂಲಿನಾಲಿ, ಗಿಡಗಂಟೆ, ಕಾಳುಕಡ್ಡಿ, ಹುಳುಹುಪ್ಪಟೆ.


ಪಡೆನುಡಿ-ನುಡಿಗಟ್ಟು :

ವಿಶೇಷಾರ್ಥ ನೀಡುವ ಪದ ಪುಂಜವನ್ನು ‘ಪಡೆನುಡಿ’ ಅಥವಾ ‘ನುಡಿಗಟ್ಟು’ ಎಂದು ಕರೆಯಲಾಗುತ್ತದೆ. ಇಲ್ಲಿ ಪದಗಳ ಬಾಹ್ಯ ಅರ್ಥಕ್ಕಿಂತ ಸೂಚ್ಯಾರ್ಥ ಇಲ್ಲವೇ ಒಳ ಅರ್ಥ ಪ್ರಧಾನವಾಗಿರುತ್ತದೆ.

ಉದಾ:

  • ಕತ್ತಿಮಸೆ – ದ್ವೇಷ ಸಾಧಿಸು.
  • ಕೈಕೊಡು – ಮೋಸ ಮಾಡು,
  • ಬೆನ್ನುತಟ್ಟು – ಪ್ರೋತ್ಸಾಹಿಸು.
  • ಹೊಂಚುಹಾಕು – ಸಮಯ ಸಾಧಿಸು.
  • ನಾಯಿಜನ್ಮ – ಹೀನಬಾಳು
  • ತಲೆದೂಗು – ಮೆಚ್ಚುಗೆ ಸೂಚಿಸು

Spread the Knowledge

You may also like...

2 Responses

  1. ಲಕ್ಷ್ಮವ says:

    ಕನ್ನಡ ವ್ಯಾಕರಣ

Leave a Reply to The Mind Cancel reply

Your email address will not be published. Required fields are marked *