ಕನ್ನಡ ವ್ಯಾಕರಣ – ತದ್ಧಿತಾಂತಗಳು

ತದ್ಧಿತಾಂತಗಳು
ತದ್ಧಿತಾಂತಗಳು

ತದ್ಧಿತಾಂತಗಳು

ಈ ವಾಕ್ಯಗಳನ್ನು ಗಮನಿಸಿ.

ಮೋಸವನ್ನು ಮಾಡುವವನು ಇದ್ದಾನೆ.
ಕನ್ನಡವನ್ನು ಬಲ್ಲವನು ಬಂದನು.

ಮೊದಲ ವಾಕ್ಯದಲ್ಲಿ ಇರುವ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬ ಅರ್ಥದಲ್ಲಿ ‘ಗಾರ’ ಎಂಬ ಪ್ರತ್ಯಯವನ್ನು ಸೇರಿಸಿ ಮೋಸಗಾರ ಎಂಬ ಪದವನ್ನು ಮಾಡಬಹುದು.

ಅಂದರೆ ಮೋಸವನ್ನು + (ಮಾಡುವವನು) + ಗಾರ = ಮೋಸಗಾರ ಎಂಬ ರೀತಿಯಲ್ಲಿ ಪದರಚನೆಯಾಗುತ್ತದೆ.

ಒಂದು ಪ್ರಕೃತಿ ಪದಕ್ಕೆ ಎರಡು ಪ್ರತ್ಯಯವನ್ನು ಸೇರಿಸುವ ಕ್ರಮವಿಲ್ಲ.

ಹಾಗಾಗಿ ಮೋಸ ಎಂಬ ಪ್ರಕೃತಿ ಪದದ ಜೊತೆಗೆ ಇದ್ದ ಅನ್ನು ಎಂಬ ಪ್ರತ್ಯಯವನ್ನು ತೆಗೆದು ಗಾರ ಎಂಬ ತದ್ಧಿತ ಪ್ರತ್ಯಯವನ್ನು ಮಾತ್ರ ಉಳಿಸಿಕೊಂಡು ಮೋಸಗಾರ ಎಂಬ ತದ್ಧಿತಾಂತ ಪದರಚನೆ ಮಾಡಲಾಗುವುದು.

ಎರಡನೆಯ ವಾಕ್ಯದಲ್ಲಿ ಕೂಡಾ ಇದೇ ರೀತಿಯ ಪ್ರಕ್ರಿಯೆ ನಡೆದು ಕನ್ನಡವನ್ನು (ಪ್ರಕೃತಿಪದ) + ಇಗ (ತದ್ಧಿತ ಪ್ರತ್ಯಯ) = ಕನ್ನಡಿಗ ಎಂಬ ತದ್ಧಿತಾಂತ ಪದರಚನೆಯಾಗಿದೆ.

ತದ್ಧಿತಾಂತ : ನಾಮಪದಗಳ ಮೇಲೆ ಬೇರೆಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ಇಕ ಮುಂತಾದ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳಾಗುತ್ತವೆ.

ಹೀಗೆ ರಚನೆಯಾಗುವ ತದ್ಧಿತ ಪ್ರತ್ಯಯಗಳಲ್ಲಿ ಮೂರು ವಿಭಾಗಗಳಿವೆ.

  1. ತದ್ಧಿತಾಂತನಾಮ,
  2. ತದ್ಧಿತಾಂತಭಾವನಾಮ ಮತ್ತು
  3. ತದ್ಧಿತಾಂತ ಅವ್ಯಯಗಳು

ತದ್ಧಿತಾಂತ ನಾಮಗಳು :

ನಾಮಪದಗಳಿಗೆ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳೇ ತದ್ಧಿತಾಂತನಾಮಗಳು.

ಉದಾ:-
— (ಪುಲ್ಲಿಂಗರೂಪದಲ್ಲಿ)
ಬಳೆಯನ್ನು + ಮಾರುವವನು = ಬಳೆಗಾರ
ಕೋಲನ್ನು + ಹಿಡಿಯುವವನು = ಕೋಲುಕಾರ
ಕನ್ನಡವನ್ನು + ಬಲ್ಲವನು = ಕನ್ನಡಿಗ
ಸಿರಿಯನ್ನು + ಉಳ್ಳವನು = ಸಿರಿವಂತ
ಪ್ರಮಾಣವನ್ನು + ಉಳ್ಳವನು = ಪ್ರಾಮಾಣಿಕ

— (ಸ್ತ್ರೀಲಿಂಗರೂಪದಲ್ಲಿ)
ಬಳೆಯನ್ನು + ಮಾರುವವಳು = ಬಳೆಗಾರ‍್ತಿ
ಕೋಲನ್ನು + ಹಿಡಿಯುವವಳು = ಕೋಲುಕರ‍್ತಿ
ಕನ್ನಡವನ್ನು + ಬಲ್ಲವಳು = ಕನ್ನಡಿತಿ
ಸಿರಿಯನ್ನು + ಉಳ್ಳವಳು = ಸಿರಿವಂತೆ

ಹೀಗೆ__
ಇತಿ, ಇತ್ತಿ, ಗಿತ್ತಿ, ತಿ, ಎ ಇತ್ಯಾದಿ ಸ್ತ್ರೀಲಿಂಗ ರೂಪದ ತದ್ಧಿತ ಪ್ರತ್ಯಯಗಳು ಸೇರಿ ಸ್ತ್ರೀಲಿಂಗದ ತದ್ಧಿತಾಂತಗಳಾಗುತ್ತವೆ.


ತದ್ಧಿತಾಂತ ಭಾವನಾಮಗಳು :

ಈ ವಾಕ್ಯಗಳನ್ನು ಗಮನಿಸಿ.

ಬಡತನ, ಸಿರಿತನಗಳು ಶಾಶ್ವತವಲ್ಲ.
— ನಮಗೆ ಅದೊಂದು ಹಿರಿಮೆ.


ಈ ವಾಕ್ಯಗಳಲ್ಲಿರುವ ಬಡತನ, ಸಿರಿತನ, ಹಿರಿಮೆ ಎಂಬ ಪದಗಳನ್ನು ಗಮನಿಸಿದಾಗ ಬಡವನ ಭಾವ- ಬಡತನ ಸಿರಿವಂತನ ಭಾವ – ಸಿರಿತನ, ಹಿರಿದರ ಭಾವ – ಹಿರಿಮೆ ಎಂಬುದು ತಿಳಿಯುತ್ತದೆ.

ಇಲ್ಲಿರುವ ತನ, ಮೆ ಎಂಬ ಪದಗಳು ಭಾವಾರ್ಥದಲ್ಲಿ ಪ್ರಯೋಗವಾಗಿವೆ.


ಹೀಗೆ…
ಸಾಮಾನ್ಯವಾಗಿ ಷಷ್ಠೀ ವಿಭಕ್ತ್ಯಂತ ನಾಮಪದಗಳ ಮುಂದೆ ಭಾವಾರ್ಥದಲ್ಲಿ – ತನ,- ಇಕೆ, -ಪು, – ಮೆ ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಭಾವನಾಮಗಳೆನಿಸುವುವು.

ಉದಾ:-
ಜಾಣನ (ಭಾವ) ತನ – ಜಾಣತನ
ಚೆಲುವಿನ (ಭಾವ) ಇಕೆ – ಚೆಲುವಿಕೆ
ಕರಿದರ (ಭಾವ) ಪು – ಕಪ್ಪು
ಪಿರಿದರ (ಭಾವ) ಮೆ – ಪೆರ್ಮೆ


ತದ್ಧಿತಾಂತಾವ್ಯಯಗಳು

ಈ ವಾಕ್ಯಗಳನ್ನು ಗಮನಿಸಿ.
ಇವನು ಭೀಮನಂತೆ ಬಲಶಾಲಿ.
ಶಾಲೆಯ ತನಕ ಬನ್ನಿ.
ಆಕೆಗಿಂತ ಚಿಕ್ಕವಳು.

ಈ ವಾಕ್ಯಗಳಲ್ಲಿರುವ ಭೀಮನಂತೆ, ಶಾಲೆಯತನಕ, ಆಕೆಗಿಂತ ಎಂಬ ಪದಗಳನ್ನು ಬಿಡಿಸಿದಾಗ
ಭೀಮನ + ಅಂತೆ,
ಶಾಲೆಯ + ತನಕ,
ಆಕೆಗೆ + ಇಂತ

ಎಂದಾಗುವುದು.

ಹೀಗೆ….
ನಾಮಪದಗಳ ಮುಂದೆ ಅಂತೆ, ವೊಲ್, ವೋಲು, ತನಕ, ವರೆಗೆ, ಇಂತ, ಆಗಿ, ಓಸುಗ ಮುಂತಾದ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳಾಗುತ್ತವೆ. ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿ ಪ್ರತ್ಯಯಗಳು ಲೋಪವಾಗುವುದಿಲ್ಲ.

ಉದಾ:
ಅಂತೆ : ಚಂದ್ರನಂತೆ, ಅವನಂತೆ
ವೊಲ್ : ಚಂದ್ರನವೊಲ್, ಅವನವೊಲ್
ವೊಲು : ನನ್ನವೊಲು, ಅವಳವೊಲು
ವೋಲು : ಮನೆಯವೋಲು, ಇದರವೋಲು
ವೋಲ್ : ಕರಡಿಯವೋಲ್, ನದಿಯವೋಲ್
ತನಕ : ಮನೆಯತನಕ, ಹಿಮಾಲಯದತನಕ
ವರೆಗೆ : ಶಾಲೆಯವರೆಗೆ, ಪಟ್ಟಣದವರೆಗೆ
ಮಟ್ಟಿಗೆ : ಇವಳಮಟ್ಟಿಗೆ, ಸುಂದರನಮಟ್ಟಿಗೆ
ಓಸ್ಕರ : ನನಗೋಸ್ಕರ, ಬೆಕ್ಕಿಗೋಸ್ಕರ
ಸಲುವಾಗಿ : ಅರ್ಜುನನ ಸಲುವಾಗಿ, ಕಟ್ಟಡದ ಸಲುವಾಗಿ
ಇಂತ : ರಾಧೆಗಿಂತ, ಅದಕ್ಕಿಂತ
ಆಗಿ : ನಿನಗಾಗಿ, ಇದಕ್ಕಾಗಿ
ಓಸುಗ : ಮದುವೆಗೋಸುಗ, ಕಾಗೆಗೋಸುಗ


Spread the Knowledge

You may also like...

Leave a Reply

Your email address will not be published. Required fields are marked *