ಕನ್ನಡ ವ್ಯಾಕರಣ – ಕೃದಂತಗಳು
ಕೃದಂತಗಳು
ನಮ್ಮ ಮಾತುಗಳಲ್ಲಿ ಮಾಡಿದ, ಹೋಗುವ, ಬರೆಯುವ ಮುಂತಾದ ಪದಗಳನ್ನು ಬಳಸುತ್ತೇವೆ.
ಇಲ್ಲಿ ಮಾಡಿದ ಎಂಬ ಪದವನ್ನು ಬಿಡಿಸಿದಾಗ ಮಾಡು+ದ+ಅ
ಹಾಗೆಯೇ ‘ಹೋಗುವ’ ಪದದಲ್ಲಿ ಹೋಗು+ವ+ಅ,
‘ಬರೆಯುವ’ ಪದದಲ್ಲಿ ಬರೆ+ಉವ+ಅ,
ಎಂಬ ಭಾಗಗಳನ್ನು ನೋಡಬಹುದು.
ಇಲ್ಲಿ ಮೊದಲನೆಯದು ‘ಧಾತು’ ಎಂತಲೂ ಎರಡನೆಯದು ಮೂರನೆಯದು ಪ್ರತ್ಯಯಗಳೆಂತಲೂ ಕರೆಯಲ್ಪಡುತ್ತವೆ.
ಧಾತುಗಳಿಗೆ ಈ ಪ್ರತ್ಯಯಗಳು ಸೇರದ ರೂಪವನ್ನು ನಾಮಪ್ರಕೃತಿಗಳೆಂದು ಕರೆಯುತ್ತಾರೆ.
ಇವುಗಳನ್ನು ಕೃದಂತನಾಮಪ್ರಕೃತಿಗಳೆಂದು ಕರೆಯಲಾಗುವುದು.
ಈ ಕೃದಂತ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳು ಕೃದಂತನಾಮಪದಗಳೆನಿಸುತ್ತವೆ.
ಈ ಉದಾಹರಣೆಗಳ ಕೊನೆಯಲ್ಲಿರುವ ‘ಅ’ ಎಂಬುದೇ ಕೃತ್‌ಪ್ರತ್ಯಯ.
ಸೂತ್ರ : ಧಾತುಗಳಿಗೆ ಕೃತ್‌ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ. ಇದಕ್ಕೆ ಕೃನ್ನಾಮಗಳೆಂಬ ಹೆಸರೂ ಇದೆ.
ಕೃದಂತಗಳಲ್ಲಿ ಮೂರು ವಿಧಗಳಿವೆ.
1. ಕೃದಂತನಾಮ,
2. ಕೃದಂತಭಾವನಾಮ,
3. ಕೃದಂತಾವ್ಯಯಗಳೆಂದು
ಕೃದಂತನಾಮಗಳು :-
ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ ‘ಅ’ ಎಂಬ ಕೃತ್‌ಪ್ರತ್ಯಯ ಬರುವುದು. ಧಾತುವಿಗೂ ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ಕಾಲಸೂಚಕ ಪ್ರತ್ಯಯಗಳು ಸೇರಿಕೊಳ್ಳುತ್ತವೆ. ಇವುಗಳನ್ನೇ ಕೃದಂತನಾಮಗಳೆನ್ನುವರು.
ಉದಾ :
ವರ್ತಮಾನಕೃದಂತಕ್ಕೆ :
ಓಡು+ವ+ಅ = ಓಡುವ
ಬಾಳು+ವ+ಅ = ಬಾಳುವ
ಬರೆ+ಉವ+ಅ = ಬರೆಯುವ
ಭೂತಕಾಲಕ್ಕೆ :
ಓಡು+ದ+ಅ = ಓಡಿದ
ಬಾಳು+ದ+ಅ = ಬಾಳಿದ
ಬರೆ+ದ+ಅ = ಬರೆದ
ನಿಷೇಧ ಕೃದಂತಕ್ಕೆ:
ಓಡು+ಅದ+ಅ = ಓಡದ
ಬಾಳು+ಅದ+ಅ = ಬಾಳದ
ಬರೆ+ಅದ+ಅ = ಬರೆಯದ
ಇವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಲಿಂಗಗಳಿಗನುಗುಣವಾಗಿ ಆಗುವ ಬದಲಾವಣೆಗಳನ್ನು ಗಮನಿಸಿ.
ಓಡುವ+ಅವನು+ಉ = ಓಡುವವನು
ಓಡುವ+ಅವನು+ಇಂದ = ಓಡುವವನಿಂದ
ಓಡುವ+ಅವಳು+ಅಲ್ಲಿ = ಓಡುವವಳಲ್ಲಿ
ಓಡುವ+ಉದು+ಅನ್ನು = ಓಡುವುದನ್ನು
ಕೃದಂತಭಾವನಾಮ :
ಈ ವಾಕ್ಯಗಳನ್ನು ಗಮನಿಸಿ.
ಆತನ ಓಟ ಚೆನ್ನಾಗಿತ್ತು
ಗಡಿಗೆಯ ಮಾಟ ಸೊಗಸಾಗಿದೆ
ಅದರ ನೆನಪು ಇಲ್ಲ
ಇದರ ಕೊರೆತ ಹಸನಾಗಿದೆ.
ಈ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳು ವಿಶೇಷ ರೀತಿಯ ಅರ್ಥಗಳನ್ನು ನೀಡುತ್ತವೆ.
ಓಡುವ ರೀತಿಯೇ – ಓಟ – ಓಡು + ಟ
ಮಾಡಿರುವ ರೀತಿಯೇ – ಮಾಟ – ಮಾಡು + ಟ
ನೆನೆಯುವ ರೀತಿಯೇ – ನೆನಪು – ನೆನೆ + ಪು
ಕೊರೆದಿರುವಿಕೆಯೇ – ಕೊರೆತ – ಕೊರೆ + ತ
ಇವೆಲ್ಲವೂ ಕ್ರಿಯೆಯ ಭಾವವನ್ನು ತಿಳಿಸುವುದರಿಂದ ಇವುಗಳನ್ನು ಕೃದಂತ ಭಾವನಾಮ ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾವಕೃದಂತಗಳೆಂದೂ ಕರೆಯುವ ರೂಢಿ ಇದೆ.
ಸೂತ್ರ :- ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿದಾಗ ಕೃದಂತ ಭಾವನಾಮಗಳಾಗುತ್ತವೆ.
ಉದಾ :-
ಹೀಗೆ… ಉದು, ವಿಕೆ, ಇಕೆ, ಇಗೆ, ಅವು, ವು, ತ, ಟ, ವಳಿ, ಪು, ಅಲು, ಎ, ಅಕೆ, ವಳಿಕೆ, ವಣಿಗೆ ಎಂಬ ಕೃತ್‌ಪ್ರತ್ಯಯಗಳು ಭಾವಾರ್ಥದಲ್ಲಿ ಧಾತುಗಳಿಗೆ ಸೇರುವ ಮೂಲಕ ಕೃದಂತ ಭಾವನಾಮಗಳಾಗುತ್ತವೆ.
ಕೃದಂತಾವ್ಯಯಗಳು
ಧಾತುಗಳಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂತಹ ಪದಗಳನ್ನು ಕೃದಂತಾವ್ಯಯಗಳು ಅಥವಾ ಅವ್ಯಯಕೃದಂತಗಳೆಂದು ಕರೆಯಲಾಗುತ್ತದೆ.
ಉದಾ :-
ಉಣ್ಣದೆ, ಬರುತ್ತ, ಬರೆದು, ಹೋಗಲಿಕ್ಕೆ.
ಸೂತ್ರ :- ಧಾತುಗಳ ಮೇಲೆ ಉತ್ತ, ಅದೆ, ದರೆ, ಅಲು, ಅಲಿಕೆ, ಅ, ಇ, ದು ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳಾಗುತ್ತವೆ.
ಉದಾ :-
ಮಾಡು + ಉತ್ತ = ಮಾಡುತ್ತ
ಮಾಡು + ಅದೆ = ಮಾಡದೆ
ಮಾಡು + ಅಲು = ಮಾಡಲು
ಮಾಡು + ಅಲಿಕ್ಕೆ = ಮಾಡಲಿಕ್ಕೆ
ಮಾಡು + ಅ = ಮಾಡ
ಮಾಡು + ಇ = ಮಾಡಿ
ಬರೆ + ದು = ಬರೆದು
Super and helpfull
Thank you for the feedback