ಚಂಪೂ ಸಾಹಿತ್ಯ ಪ್ರಕಾರ

ಚಂಪೂ ಸಾಹಿತ್ಯ ಪ್ರಕಾರ
ಚಂಪೂ ಸಾಹಿತ್ಯ ಪ್ರಕಾರ

“ಚಂಪೂ’ ಇದೊಂದು ಬರೆಯುವ ಶೈಲಿಗೆ ಸಂಬಂಧಿಸಿದ ಪರಿಭಾಷೆ. ಭಾರತೀಯ ಭಾಷೆಗಳಲ್ಲಿ ಪ್ರಾಚೀನವಾದ, ಪ್ರಸಿದ್ಧವಾದ ಹಾಗೂ ವಿಶಿಷ್ಟವಾದ ಒಂದು ಕಾವ್ಯ ಪ್ರಕಾರ. ಕನ್ನಡದ ಆರಂಭದ ಬಹುತೇಕ ಕವಿಗಳು ಇದನ್ನು ಯಶಸ್ವಿಯಾಗಿ ಬಳಸಿದ್ದಾರೆ.

ಚಂಪೂ ಪ್ರಧಾನವಾಗಿ ಪದ್ಯ-ಗದ್ಯಗಳಿ೦ದ ಕೂಡಿರುತ್ತದೆ. “ಚಂಪೂ’ ಎನ್ನುವುದಕ್ಕೆ ಸುಂದರವಾದದ್ದು, ಮನೋಹರವಾದದ್ದು ಎ೦ಬ ಅರ್ಥವಿದೆ. ಕನ್ನಡದಲ್ಲಿ ಚಂಪೂ ಸಾಹಿತ್ಯವನ್ನು ವಸ್ತುಕ, ಓದುಗಬ್ಬ. ಮಾರ್ಗಕವಿತ್ವ ಎಂದೂ ಹೇಳುವುದುಂಟು. ಈ ಪ್ರಕಾರದ ಕಾವ್ಯಗಳಲ್ಲಿ ಪ್ರತಿಪಾದಿತವಾಗುವ ವಸ್ತು ಲೌಕಿಕ, ಧಾರ್ಮಿಕ, ಐತಿಹಾಸಿಕ ಎಂದಾಗಿರುತ್ತದೆ ಅಥವಾ ಈ ಮೂರೂ ಸಂಗತಿಗಳ ಮಿಶ್ರಣವೂ ಆಗಿರುತ್ತದೆ. ರಾಮಾಯಣ, ಮಹಾಭಾರತ, ವೈದಿಕ, ಜೈನ ಪುರಾಣಗಳು, ಕಲ್ಪಿತ ಕಥಾವಸ್ತುವುಳ್ಳ ಕಾವ್ಯಗಳು, ಐತಿಹಾಸಿಕ ವೃತ್ತಾಂತಗಳು ಚ೦ಪೂ ಸಾಹಿತ್ಯದ ಪ್ರಮುಖ ವಸ್ತುಗಳಾಗಿವೆ. ಉದಾತ್ತ ನಾಯಕನ ನಿರ್ಮಾಣ, ನಾಯಕ-ಪ್ರತಿನಾಯಕರ ಸ೦ಘರ್ಷ, ಮತ ಪ್ರಸಾರ, ತತ್ವಪ್ರಸಾರ, ಧಾರ್ಮಿಕ ಕಥನ, ಮನರಂಜನೆ ಈ ಕಾವ್ಯಗಳಲ್ಲಿ ಕ೦ಡುಬರುತ್ತವೆ. ಕಥೆಗಿ೦ತಲೂ ವರ್ಣನೆ, ರಸಭಾವಗಳಿಗೆ, ಶಬ್ದಾರ್ಥ, ಅಲ೦ಕಾರಗಳಿಗೆ ಈ ಕಾವ್ಯಗಳಲ್ಲಿ ವಿಶೇಷ ಪ್ರಾಶಸ್ತ್ಯ. ಕನ್ನಡ-ಸಂಸ್ಕೃತ ಬೆರೆತ ಶೈಲಿ ಅಲಂಕಾರಿಕ ಪದರಚನೆಗಳನ್ನು ಇಲ್ಲಿ ಕಾಣುತ್ತೇವೆ.

ಈ ಕಾವ್ಯಗಳಲ್ಲಿ ಗದ್ಯ-ಪದ್ಯಗಳಿದ್ದರೂ ಗದ್ಯಕ್ಕಿಂತ ಪದ್ಯ ಹೆಚ್ಚು. ಪದ್ಯಗದ್ಯಗಳು ಇಂತಿಷ್ಟೇ ಬರಬೇಕೆಂಬ ನಿಯಮವೇನೂ ಇಲ್ಲ. ಆದರೆ ವರ್ಣನೆ, ಇತಿವೃತ್ತ ಕಥೆಯ ಓಟಕ್ಕೆ ಅಗತ್ಯವಾದ ಅಂಶಗಳು ಗದ್ಯದಲ್ಲಿರುತ್ತವೆ. ಈ ಕಾವ್ಯದಲ್ಲಿ ಇಡೀ ಕಥೆಯನ್ನು “ಆಶ್ವಾಸ’ಗಳಾಗಿ ವಿಂಗಡಿಸಲಾಗುತ್ತದೆ. ಆರು ವರ್ಣವೃತ್ತಗಳು ಹೆಚ್ಚಾಗಿ ಬಳಕೆಯಾಗಿದ್ದು: ತ್ರಿಪದಿ, ಅಕ್ಕರ, ರಗಳೆಗಳು ಅಲ್ಲಲ್ಲಿ ಪ್ರಯೋಗಗೊಂಡು, ಕಂದ ಪದ್ಯಗಳಿಂದ ಕೂಡಿರುತ್ತವೆ. ಧರ್ಮ ಮತ್ತು ಕಾವ್ಯಧರ್ಮಗಳೆರಡನ್ನೂ ಒಟ್ಟಿಗೆ ಅಭಿವ್ಯಕ್ತಿಸಿದ ಪ್ರಾಚೀನ ಕನ್ನಡ ಕವಿಗಳ ಪ್ರತಿಭಾಶಕ್ತಿಗೆ ದ್ಯೋತಕವಾಗಿ ಚಂಪೂ ಪ್ರಕಾರ ಇಂದಿಗೂ ಅಭ್ಯಾಸಯೋಗ್ಯವಾಗಿದೆ.

ಕನ್ನಡದ ಪ್ರಾಚೀನ ಕಾಲದಲ್ಲಿ ಚ೦ಪೂ ಸಾಹಿತ್ಯ ರಚಿತವಾಗಿರಬಹುದು. ಆದರೆ ಅದಾವುದೂ ನಮಗೆ ದೊರೆತಿಲ್ಲ. ದೊರೆತಿರುವ ಕಾವ್ಯ ಕೃತಿಗಳಲ್ಲಿ ಹತ್ತನೆಯ ಶತಮಾನದಲ್ಲಿದ್ದ ಪಂಪನ “ಆದಿಪುರಾಣ’, “ವಿಕ್ರಮಾರ್ಜುನ ವಿಜಯಂ’ ಕೃತಿಗಳೇ ಅತ್ಯಂತ ಪ್ರಾಚೀನವಾದುವಾಗಿವೆ.

ಪಂಪ ಹಾಗೂ ನಂತರದ ಪ್ರಾಚೀನ ಕವಿಗಳು ಧರ್ಮದ ಪ್ರಸಾರಕ್ಕಾಗಿ ಒಂದು, ಲೌಕಿಕ ವಿಚಾರಕ್ಕಾಗಿ ಇನ್ನೊಂದು ಕಾವ್ಯಗಳನ್ನು ರಚಿಸಿರುವುದು ಕಾಣುತ್ತದೆ. ಪಂಪನ ನಂತರ ಬಂದ ರನ್ನ, “ಸಾಹಸಭೀಮ ವಿಜಯಂ’ ಹಾಗೂ “ಅಜಿತ ತೀರ್ಥಂಕರ ಪುರಾಣ ತಿಲಕಂ’ ಎಂಬ ಕಾವ್ಯಗಳನ್ನು ರಚಿಸಿದ್ದಾನೆ. ಇದೇ ರೀತಿ ಪೊನ್ನ “ಭುವನೈಕರಾಮಾಭ್ಯುದಯ’ ಹಾಗೂ “ಶಾಂತಿಪುರಾಣ’ವೆಂಬ ಕಾವ್ಯಗಳನ್ನು ರಚಿಸಿದ್ದಾನೆ. ನಾಗಚಂದ್ರ “ಶ್ರೀ ರಾಮಚಂದಚರಿತ ಪುರಾಣ’. “ಮಲ್ಲಿನಾಥ ಪುರಾಣ’ವೆಂಬ ಕೃತಿಗಳನ್ನು ರಚಿಸಿದ್ದಾನೆ. ಈ ರೀತಿಯ ದ್ವಿವಿಧ ಕಾವ್ಯಗಳಲ್ಲದೆ ಭಿನ್ನ ವಸ್ತುಗಳುಳ್ಳ ಕಾವ್ಯಗಳೂ ಇವೆ.

೧೦ನೇ ಶತಮಾನದಲ್ಲಿದ್ದ ನಾಗವರ್ಮನ “ಕರ್ನಾಟಕ ಕಾದಂಬರಿ’ಯು ಸಂಸ್ಕೃತ ಬಾಣಭಟ್ಟನ “ಕಾದಂಬರಿ’ ಆಧರಿಸಿ ರಚಿತವಾದ ರಮ್ಯ ಕೃತಿ. ನಯಸೇನ (ಸುಮಾರು ಹನ್ನೊಂದನೆಯ ಶತಮಾನ) “ಧರ್ಮಾಮೃತ’ ಚಿಕ್ಕ ಚಿಕ್ಕ ಕಥೆಗಳ ಮೂಲಕ ಜೈನಧರ್ಮದ ನೀತಿಸೂತ್ರಗಳನ್ನು ಹೇಳುವ ಕಾವ್ಯವಾಗಿದೆ. ದುರ್ಗಸಿಂಹನ “ಕರ್ನಾಟಕ ಪಂಚತಂತ್ರ’ ಹಲವು ನೀತಿ ಕಥೆಗಳನ್ನು ಚಂಪೂ ಮೂಲಕ ಹೇಳುವ ಕೃತಿಯಾಗಿದೆ. ಹೀಗೆ ಚಂಪೂವಿನಲ್ಲಿ ಹಲವಾರು ಕೃತಿಗಳು ರಚಿತವಾಗುತ್ತಾ ಬಂದಿವೆ.

Spread the Knowledge

You may also like...

Leave a Reply

Your email address will not be published. Required fields are marked *