ಶತಕ ಸಾಹಿತ್ಯ ಪ್ರಕಾರ

ಸಾಹಿತ್ಯದ ಪ್ರಕಾರಗಳಲ್ಲಿ ಶತಕ ಸಾಹಿತ್ಯವೂ ಒಂದು. ಇದಕ್ಕೆ ಪ್ರಾಚೀನ ಹಿನ್ನೆಲೆಯಿದೆ ಮತ್ತು ಆಧುನಿಕ ಯುಗದವರೆಗೆ ಅದರ ಮುನ್ನೋಟವಿದೆ. ಇದೊಂದು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಸಾಹಿತ್ಯ ಪ್ರಕಾರ. ಶತಕವೆಂದರೆ ನೂರು ಪದ್ಯಗಳ ಚಿಕ್ಕ ಕಾವ್ಯ. ನೂರು ಪದ್ಯಗಳ ಗುಚ್ಚಕ್ಕೆ ಶತಕವೆಂದು ಕರೆದಿದ್ದರೂ ನೂರೇ ಎಂಬ ನಿರ್ದಿಷ್ಟತೆ ಇದ್ದಂತಿಲ್ಲ. ೧೦೦ ರಿಂದ ೧೨೮ ಪದ್ಯಗಳವರೆಗೂ ಇರುವುದುಂಟು. ಅದರ ಪ್ರತಿ ಪದ್ಯವೂ ಮುಕ್ತವೆನಿಸಿದ್ದು ಕವಿಯ ಇಷ್ಟ ದೈವದ ಅಂಕಿತವನ್ನು ಹೊಂದಿರುತ್ತದೆ.

ಕನ್ನಡದಲ್ಲಿ ಶತಕ ಸಾಹಿತ್ಯ ನಡೆದು ಬಂದದಾರಿ ಸುಧೀರ್ಘವಾಗಿದೆ. ಹರಿಹರನಿಂದ ಆರಂಭಿಸಿ, ಆಧುನಿಕ ಕವಿಗಳವರೆಗೆ ಒಂದು ಸಾವಿರ ವರ್ಷಗಳ ನಡೆ ಅದರದು. ಸುಮಾರು ನಾಲ್ಕುನೂರಕ್ಕೂ ಹೆಚ್ಚಿನ ಶತಕಗಳು ನಮಗೆ ದೊರಕುತ್ತವೆ. ಮೊದಲು ಸಂಸ್ಕೃತದ ವೃತ್ತ ಕಂದಗಳಲ್ಲೇ ರಚನೆಯಾಗುತ್ತಿದ್ದ ಶತಕಗಳು ಕ್ರಮೇಣ ತ್ರಿಪದಿ, ಷಟ್ಪದಿ, ಸಾಂಗತ್ಯ ಮೊದಲಾದ ಲಿಖಿತ ಛಂದಸ್ಸಿನಲ್ಲಿ ಮೂಡಿಬಂದವು. ಇದರಿಂದ ಶತಕಕಾರರ ಒಲವು ದೇಶೀಯತೆ ಮತ್ತು ಸಾಮಾನ್ಯ ಜನರ ಪರವಾಗಿ. ಹೊರಳಿರುವುದು ಕಂಡುಬರುತ್ತದೆ.

ಶತಕಗಳ ವೈಶಿಷ್ಟ್ಯವೆಂದರೆ ಅವುಗಳ ವಸ್ತು ಕಥೆಯಲ್ಲ, ಪ್ರಸಂಗವಲ್ಲ, ಇದು ಆತ್ಮನಿಷ್ಠ ಹಾಗೂ ಭಾವನಿಷ್ಠ ಸಾಹಿತ್ಯ ಪ್ರಕಾರ. ಶತಕದ ಪದ್ಯಗಳು ಕವಿಯ ಅಂತರಂಗದ ಭಾವಗಳ ಕನ್ನಡಿಯಾಗುತ್ತವೆ. ಆದ್ದರಿಂದಲೇ ಅವನ್ನು ಪ್ರಾಚೀನ ಕಾಲದ ಭಾವಗೀತೆಗಳೆಂದು ಕರೆಯುವುದುಂಟು. ಈ ದೃಷ್ಟಿಯಿಂದಲೇ ಶತಕಗಳು ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಭಿನ್ನ ಇವು ಮೊದಲು ಮುಖ್ಯವಾಗಿ ಭಕ್ತಿಭಾವದ ಅಭಿವ್ಯಕ್ತಿಯ ಸಾಧನವಾಗಿದ್ದವು. ಕ್ರಮೇಣ ಸಮಾಜನೀತಿ, ಲೋಕಾನುಭವಗಳ ನಿರೂಪಣೆ ಮಾಡಿದವು. ಬಹುತೇಕ ಶತಕಗಳು ಧಾರ್ಮಿಕ ಹಾಗೂ ನೈತಿಕ ವಿಷಯಗಳಿಗೆ ಸಂಬಂಧಿಸಿರುತ್ತವೆ. ಅಪರೂಪವಾಗಿ ಅವು ಸ್ವಾನುಭವವನ್ನು, ಲೋಕಾನುಭವವನ್ನು ಸುಂದರವಾಗಿ ತಿಳಿಸುತ್ತವೆ. ಕಡಿಮೆ ಪದಗಳಲ್ಲಿ ಮಹತ್ವದ ಸಂಗತಿಗಳನ್ನು ನೇರವಾಗಿ. ನಿರೂಪಿಸುವುದು ಶತಕ ಪದ್ಯಗಳ ಗುರಿ. ಸರಳವಾಗಿ ಸಂಕ್ಷಿಪ್ತವಾಗಿ, ಆತ್ಮೀಯವಾಗಿ. ಹೇಳುವ ಇಂತಹ ಮಾಧ್ಯಮಕ್ಕೆ ಸ್ಪಂದಿಸಿದ ನಮ್ಮ ಕೆಲ ಕವಿಗಳು ಕಡಿಮೆ ಮಾತಿನಲ್ಲಿ ಹತ್ತು ಹಲವು ವಿಚಾರಗಳನ್ನು ಸಾರವತ್ತಾಗಿ ಹೇಳಲು ಮನಸ್ಸು ಮಾಡಿದರು. ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟುವಂತೆ ಮುಕ್ತಕಗಳಲ್ಲಿ ತಮ್ಮ ಜೀವನಾನುಭವಗಳನ್ನು, ತಮ್ಮ ದಾರ್ಶನಿಕ ಚಿಂತನಗಳನ್ನು ಹರಳುಗಟ್ಟಿಸಿ ಹೇಳುವ ತಂತ್ರವನ್ನು ನಮ್ಮ ಶತಕ ಕವಿಗಳು ರೂಢಿಸಿಕೊಂಡರು.

ಕನ್ನಡದಲ್ಲಿ ಶತಕ ಸಾಹಿತ್ಯಕ್ಕೆ ಹರಿಹರನ ಜೊತೆಗೆ ಒಂದು ಭದ್ರವಾದ ನೆಲೆಯನ್ನು, ಅತ್ಯಧಿಕ ಬೆಲೆಯನ್ನು ಕೊಟ್ಟ ಕೀರ್ತಿ ನಂತರ ಬಂದ ಉದಯಾದಿತ್ಯ, ಸೋಮನಾಥ, ಮಗ್ಗೆಯ ಮಾಯಿದೇವ, ರತ್ನಾಕರವರ್ಣಿ ಮೊದಲಾದ ಕವಿಗಳಿಗೆ ಸಲ್ಲುತ್ತದೆ.

ವಚನಕಾರನಂತೆ ಶತಕಕಾರನೂ ಅನುಭಾವಿಯೇ, ದಾರ್ಶನಿಕನೇ; ತನ್ನ ಅಪೂರ್ವವಾದ ಅನುಭಾವ ಸಿರಿಯಲ್ಲಿ ತನ್ನಂತೆ ಇತರರೂ ಪಾಲ್ಗೊಳ್ಳುವಂತೆ ಮಾಡುವುದೇ ಶತಕಕಾರನ ಉದ್ದೇಶ. ಜನಾಂಗವನ್ನು ನೀತಿ ಮಾರ್ಗದಲ್ಲಿ ಕರೆದೊಯ್ದು ಅವರಲ್ಲಿ ಸತ್ಯ ಧರ್ಮ, ಅಹಿಂಸೆ, ನಿಸ್ವಾರ್ಥ ಸೇವಾಮನೋಭಾವ ಮೊದಲಾದುವನ್ನು ಮೂಡಿಸುವ ಶತಕಗಳು ಸಮಾಜದ ‘ಆತ್ಮಪ್ರಗತಿಗೆ ಸೋಪಾನಗಳಾಗಿವೆ.

Spread the Knowledge

You may also like...

Leave a Reply

Your email address will not be published. Required fields are marked *