ನಾಟಕ ಸಾಹಿತ್ಯ ಪ್ರಕಾರ

ಕುವೆಂಪುರವರ ಜಲಗಾರ ನಾಟಕದಿಂದ
ಕುವೆಂಪುರವರ ಜಲಗಾರ ನಾಟಕದಿಂದ

ಪೀಠಿಕೆ:

“ಕಾವ್ಯೇಷು ನಾಟಕಂ ರಮ್ಯಂ’ – ಎಂಬುದು ಭರತ ಖಂಡದಲ್ಲಿ ಗಾದೆಯಂತಿರುವ ಒಂದು ಸೂಕ್ತಿ. ಕಾವ್ಯಪ್ರಕಾರಗಳಲ್ಲಿ ನಾಟಕವೇ ಅತ್ಯಂತ ರಮ್ಯವಾದದ್ದು, ನಾಟಕದಲ್ಲಿ ಸಂಗೀತ, ಸಾಹಿತ್ಯ, ಅಭಿನಯಗಳ ಜೊತೆಗೆ ನರ್ತನವೂ ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದಿದೆ. “ನಾಟಕ’ವೆ೦ಬ ಪದವೇ ““ನಟ್‌’ ಎ೦ಬ ಧಾತುವಿನಿಂದ ಬ೦ದುದೆಂದೂ “ನಟ್‌’ ಎಂಬುದು ನೃತ್ಯ ಎಂಬುದರ ಪ್ರಾಕೃತ ರೂಪವೆಂದೂ ಹೇಳಲಾಗುತ್ತದೆ.

ಜಗತ್ತಿನಲ್ಲಿ ನಾಟಕ ಎ೦ದು ಹುಟ್ಟಿ ಬೆಳೆಯಿತು ಎಂಬುದು ಖಚಿತವಿಲ್ಲ. ಪ್ರಾಚೀನ ಅನಕ್ಷರಸ್ಥ ಜನಾಂಗಗಳಲ್ಲಿ ಪ್ರಚಲಿತವಾಗಿದ್ದ ಧಾರ್ಮಿಕ ಕ್ರಿಯೆಗಳಿಗೆ ಸಂಬಂಧಿಸಿದ ಕುಣಿತಗಳಲ್ಲಿ ನಾಟಕದ ಮೂಲವನ್ನು ಕಾಣಬಹುದೆಂಬ ಅಭಿಪ್ರಾಯವಿದೆ. ಗೊಂಬೆ ಆಟದಿಂದ ನಾಟಕ ಮೊದಲು ಹುಟ್ಟಿರಬೇಕೆಂದು ಕೆಲವು ತಜ್ಞರು ಊಹಿಸಿದ್ದಾರೆ.

ಕ್ರಿ.ಶ. 2000 ವರ್ಷಗಳ ಹಿಂದೆ ಈಜಿಪ್ತಿನಲ್ಲಿ ಒಸೈರಸ್‌ ದೇವತೆಯ ಉತ್ಸವ ಕಾಲದಲ್ಲಿ ನಡೆಸುತ್ತಿದ್ದ ಚಟುವಟಿಕೆಯೇ ನಾಟಕ ಕಲೆಗೆ ಮೂಲ ಎನ್ನುತ್ತಾರೆ. ನಾಟಕಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಾಚೀನ ಉಲ್ಲೇಖಗಳು ಬೈಬಲ್‌ನಲ್ಲಿ ಸಿಗುತ್ತವೆ. ಗ್ರೀಕ್‌ ದೇಶದಲ್ಲಿ ನಾಟಕ ಒಂದು ರಮ್ಯಕಲೆಯಾಗಿ ಅರಳಿದ್ದು ಧಾರ್ಮಿಕ ಉತ್ಸವಗಳ ಸಂಬ೦ಧದಲ್ಲೇ. ಡಯೊನಿಸನ್‌ ಎನ್ನುವ ದ್ರಾಕ್ಷಾರಸದ ದೇವತೆಯ ಪ್ರೀತ್ಯರ್ಥವಾಗಿ ನಡೆಯುತ್ತಿದ್ದ ಉತ್ಸವದಲ್ಲಿ ಸುಮಾರು 50 ಜನರ ಮೇಳ ಆ ದೇವತೆಯ ಚರಿತ್ರೆಯನ್ನು ಹಾಡುತ್ತಾ ಕುಣಿಯುತಿತ್ತು. ಥೆಸ್ಪೀಸ್‌ ಈ ಮೇಳದ ಪ್ರಮುಖ ನಾಯಕನಾಗಿ ಗ್ರೀಕ್‌ ರಂಗಭೂಮಿಯ ಪ್ರಥಮ ನಟನಾದ. ಧಾರ್ಮಿಕ ಉತ್ಸವಗಳ ಆವರಣದಲ್ಲಿ ಬೆಳೆದು ವಿಕಾಸಗೊಂಡ ನಾಟಕ ಕಲೆಗೆ ದೇವತೆಗಳ, ಮಹಾಪುರುಷರ ಜೀವನ ಕಥಾವಸ್ತುವಾಗಿತ್ತು.

ಜಗತ್ತಿನ ನಾಟಕ ಕ್ಷೇತ್ರಕ್ಕೆ ಶೇಕ್ಸ್‌ಪಿಯರ್‌ (1533-1603) ಅಮೂಲ್ಯ ಕೊಡುಗೆ ನೀಡಿದ. 19ನೆಯ ಶತಮಾನದ ಉತ್ತರಾರ್ಧ; 20ನೆಯ ಶತಮಾನದ ಪೂರ್ವಾರ್ಧದಲ್ಲಿ ಯುರೋಪಿನಲ್ಲಿ ರೊಮ್ಯಾಂಟಿಕ್‌ ನಾಟಕಗಳು ಜನಪ್ರಿಯವಾದವು. ಸಾಂಕೇತಿಕ ಅಭಿವ್ಯಕ್ತಿ ಪ್ರಧಾನ ನಾಟಕಗಳು ರಂಗಭೂಮಿಯ ಮೇಲೆ ಬಂದವು. ಅಸಂಗತ ನಾಟಕಗಳು ಐರೋಪ್ಯ ರಂಗಭೂಮಿಯ ಮೇಲೆ ಅಭಿನಯಿಸಲ್ಪಟ್ಟವು.

ಭಾರತದಲ್ಲಿ ನಾಟಕ ಮೊದಲು ರೂಪುಗೊಂಡದ್ದು ಸಂಸ್ಕೃತದಲ್ಲಿ. ಸುಮಾರು ಒಂದನೆಯ ಶತಮಾನದ್ದೆಂದು ಪರಿಗಣಿಸಲಾಗಿರುವ ಭರತನ ‘ನಾಟ್ಯಶಾಸ್ತ್ರ’ವು ನಾಟಕ ಕುರಿತ ಮೊದಲ ಕೃತಿಯಾಗಿದೆ ಎಂದು ಹೇಳಲಾಗುತ್ತದೆ. ಇದು ನಮ್ಮ ಬಯಲಾಟ, ಕಥಕ್ಕಳಿ, ತೆರುಕ್ಕೂಟಂ, ಬೀದಿ ನಾಟಕ ಮೊದಲಾದವುಗಳ ಲಕ್ಷಣವನ್ನು ಹೋಲುತ್ತದೆ.

ಕನ್ನಡದಲ್ಲಿ ನಾಟಕ ಸಾಹಿತ್ಯ 1680ರಲ್ಲಿ ಕಂಡುಬರುತ್ತದೆ. ಚಿಕ್ಕದೇವರಾಜ ಒಡೆಯರ ಆಸ್ಥಾನದ ಕವಿ ಸಿಂಗರಾರ್ಯನಿಂದ ರಚಿತವಾದ “ಮಿತ್ರವಿಂದ ಗೋವಿಂದ’ ಕನ್ನಡದ ಮೊದಲ ನಾಟಕವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದು ಶ್ರೀಹರ್ಷನಿಂದ ಸಂಸ್ಕೃತದಲ್ಲಿ ರಚಿತವಾದ ‘ರತ್ನಾವಳಿ’ ನಾಟಕದ ಕನ್ನಡ ಅನುವಾದ. ಆದರೂ ಇದು ಒಂದು ರೀತಿಯಲ್ಲಿ ಸ್ವತಂತ್ರಕೃತಿ ಎನ್ನುವಂತೆಯೇ ಇದೆ. ಭಾಗವತದಲ್ಲಿರುವ ಕೃಷ್ಣನ ಕಥೆ “ಮಿತ್ರವಿಂದ ಗೋವಿಂದ’ ನಾಟಕಕ್ಕೆ ಮೂಲ.

ದುರ್ಗಸಿಂಹನ ಪಂಚತಂತ್ರದಲ್ಲಿಯೂ ನಾಟಕದ ಅಂಶಗಳನ್ನು ಕಾಣುತ್ತೇವೆ. ಹಳೆಗನ್ನಡ ಕಾವ್ಯಗಳಲ್ಲಿ “ನಾಟಕ ಶಾಲೆ’, “ನಾಟಕ’ ಎಂಬ ಪದ ಪ್ರಯೋಗ ಆಗಿರುವುದನ್ನು ಗಮನಿಸಬಹುದು. ರತ್ನಾಕರವರ್ಣಿ ತನ್ನ “ಭರತೇಶ ವೈಭವ’ದಲ್ಲಿ “ನಾಟಕ’ ಎಂಬ ಶಬ್ದ ಬಳಸಿದ್ದಾನೆ. ಪಂಪ, ಪೊನ್ನ, ರನ್ನ ಇವರುಗಳು ನಾಟಕ ಹಾಗೂ ನಾಟಕಕ್ಕೆ ಸಂಬಂಧಿಸಿದ ಹಲವು ಮಾತುಗಳನ್ನು ತಮ್ಮ ಕಾವ್ಯದಲ್ಲಿ ಆಡಿದ್ದಾರೆ. ಪಂಪ “ಕೃತಾನುಕರಣಮೆ ನಾಟ್ಯಂ’ ಎಂದಿದ್ದಾನೆ.

ಕನ್ನಡಕ್ಕೆ ನಾಟಕಗಳು ಅನುವಾದದ ಮೂಲಕವೇ ಬ೦ದವು. ಷೇಕ್ಸ್‌ಪಿಯರನ ಒಥೆಲೊ, ರೋಮಿಯೋ ಜೂಲಿಯೆಟ್‌, ಟೆಂಪೆಸ್ಟ್‌ ನಾಟಕಗಳು ಮೊದಲು ಕನ್ನಡಕ್ಕೆ ಬಂದವು. ಮಾಸ್ತಿಯವರು “ಒಥೆಲೊ’ ನಾಟಕವನ್ನು “ಶೂರಸೇನ ಚರಿತೆ’ ಎಂಬ ಹೆಸರಿನಲ್ಲಿ ಅನುವಾದಿಸಿದರು. ಹೊಸಗನ್ನಡ ಸಾಹಿತ್ಯ ಸ೦ದರ್ಭದಲ್ಲಿ ಲಂಕೇಶ್‌ ಅವರು “ಈಡಿಪಸ್‌’ ಹಾಗೂ “ಅಂತಿಗೊನೆ’ ನಾಟಕಗಳು ಅನುವಾದ ಮಾಡಿದವುಗಳಲ್ಲಿ ಮುಖ್ಯವಾದವು. ಹೀಗೆ ಬೆಳೆದು ಬ೦ದ ನಾಟಕಕ್ಕೆ ಹೊಸರೂಪು ಕೊಟ್ಟವರು ಟಿ.ಪಿ. ಕೈಲಾಸಂ, ಶ್ರೀರಂಗ ಮತ್ತು ಪರ್ವತವಾಣಿ ಮುಂತಾದವರು. ನ೦ತರ ಕುವೆಂಪು, ಬೇಂದ್ರೆ, ಗಿರೀಶ್‌ ಕಾರ್ನಾಡ್‌, ಚ೦ದ್ರಶೇಖರ ಕಂಬಾರ, ಪಿ. ಲಂಕೇಶ್‌, ಎಚ್‌.ಎಸ್‌. ಶಿವಪ್ರಕಾಶ್‌, ಚ೦ದ್ರಶೇಖರ ಪಾಟೀಲ ಮುಂತಾದವರು ಉತ್ತಮ ನಾಟಕಗಳನ್ನು ರಚಿಸಿ ಕನ್ನಡ ನಾಟಕ ಕ್ಷೇತ್ರವನ್ನು ಶ್ರೀಮ೦ತಗೊಳಿಸಿದ್ದಾರೆ.

ಶಿವ
(ಗಂಭೀರವಾಗಿ)
ಅಂಜದಿರು,
ಸೋದರನೆ, ಅಂಜದಿರು; ನಾ ನಿನ್ನ ಬಂಧು!

ಜಲಗಾರ
(ವಿಸ್ಮಿತನಾಗಿ)
ಏನು? ನೀನೆನ್ನ ಬಂಧು? ನಾನರಿಯದಿಹ ಬಂಧು!

ಶಿವ
ನಾ ನಿನ್ನ ಜಾತಿ!

ಜಲಗಾರ
ನೀನೆನ್ನ ಜಾತಿ?
ಊರ ಜಲಗಾರನು ನೀನು?

ಕುವೆಂಪುರವರ ‘ಜಲಗಾರ’ ನಾಟಕದಿಂದ …
Spread the Knowledge

You may also like...

Leave a Reply

Your email address will not be published. Required fields are marked *