ರಾಷ್ಟ್ರಕೂಟರು (ಸಾ.ಶ. 753 – 973)

ರಾಷ್ಟ್ರಕೂಟರು (ಸಾ.ಶ. 753 – 973)

 

 ರಾಷ್ಟ್ರಕೂಟರು ಕನ್ನಡಿಗರು.

 

ಪ್ರಾರಂಭದಲ್ಲಿ ಚಾಲುಕ್ಯರ ಸಾಮಂತರಾಗಿದ್ದವರು. ಅನಂತರ ಸ್ವತಂತ್ರರಾಗಿ ದಕ್ಷಿಣದಲ್ಲಿ ವಿಸ್ತಾರವಾದ ಸಾಮ್ರಾಜ್ಯದ ಒಡೆಯರಾಗಿ ಪ್ರಸಿದ್ಧರಾದವರು. ಕನ್ನಡನಾಡಿನ ಇತಿಹಾಸದಲ್ಲಿ ರಾಷ್ಟ್ರಕೂಟರ ಯುಗವು ಪ್ರಮುಖವಾದುದು. ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಪರಾಕಾಷ್ಠತೆಗೆತ್ತಿದ್ದ ಕೀರ್ತಿಯು ಇವರಿಗೆ ಸಲ್ಲುತ್ತದೆ.

 

ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೆ ಹರಡಿದ ಸಾಮ್ರಾಜ್ಯ, ಎಲ್ಲೋರಾದ ಕೈಲಾಸನಾಥ ದೇವಾಲಯ, ಕನ್ನಡದ ಮೊದಲ ಗ್ರಂಥ `ಕವಿರಾಜಮಾರ್ಗ’ ಇವೆಲ್ಲವೂ ಇವರನ್ನು ಅಜರಾಮರರನ್ನಾಗಿಸಿದೆ.

 

ದಂತಿದುರ್ಗನಿಂದ ಪ್ರಾರಂಭವಾದ ಸಾಮ್ರಾಜ್ಯ ಕೃಷ್ಣ, ಇಮ್ಮಡಿ ಗೋವಿಂದ, ಧ್ರುವ, ಮುಮ್ಮಡಿ ಗೋವಿಂದ, ಅಮೋಘವರ್ಷ ಮುಂತಾದವರಿಂದ ಮುಂದುವರೆದು, ಪರಾಕಾಷ್ಠತೆಯನ್ನು ಮುಟ್ಟಿತು.

ಅಮೋಘವರ್ಷನ ಪ್ರಾರಂಭಿಕ ಆಳ್ವಿಕೆಯು ಅನೇಕ ಅಡೆತಡೆಗಳಿಂದ ಕೂಡಿತ್ತು. ಆದರೆ ಕದನಗಳಲ್ಲಿ ಇಷ್ಟವಿಲ್ಲದ ಇವನು ಪ್ರಶಾಂತ ವಾತಾವರಣ ಬಯಸಿದನು. ಗಂಗರೊಡನೆ ಹಾಗೂ ಪಲ್ಲವರೊಡನೆ ವಿವಾಹ ಸಂಬಂಧದಿಂದ ವೈಷಮ್ಯವನ್ನು ನಿವಾರಿಸಿದನು. ಶಾಂತಿಪ್ರಿಯನಾದುದರಿಂದ ಉತ್ತರದ ಕೆಲವು ಸಾಮ್ರಾಜ್ಯಗಳನ್ನು ಕಳೆದುಕೊಂಡನು. ಪಶ್ಚಿಮ ಕರಾವಳಿಯಲ್ಲಿನ ಬಂದರುಗಳು ಮಹಾನ್ ವಾಣಿಜ್ಯ ಕೇಂದ್ರಗಳಾಗಿದ್ದುದರಿಂದ, ಪರ್ಶಿಯಾ, ಅರೇಬಿಯಾಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿ ಅಪಾರ ಐಶ್ವರ್ಯವನ್ನು ಗಳಿಸಿತು.

ಅನೇಕ ಪ್ರವಾಸಿಗರು, ವರ್ತಕರು ಈ ಸಂದರ್ಭದಲ್ಲಿ ಚಕ್ರಾಧಿಪತ್ಯವನ್ನು ಸಂದರ್ಶಿಸಿದರು. ಅವರಲ್ಲಿ ಪ್ರಮುಖನಾದವನು ಅರಬ್ ಯಾತ್ರಿಕ ಸುಲೈಮಾನ್. ಇವನು ಅಮೋಘವರ್ಷನನ್ನು ಕುರಿತು, `ಜಗತ್ತಿನ ನಾಲ್ವರು ಪ್ರಬಲ ಚಕ್ರವರ್ತಿಗಳಲ್ಲಿ ಒಬ್ಬನೆಂದಿದ್ದಾನೆ’.

ಅಮೋಘವರ್ಷನು ಶೂರನೂ ಹಾಗೂ ಶಾಂತಿಪ್ರಿಯನು. ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದನು.

ಇವನ ನಂತರ ಇಮ್ಮಡಿ ಕೃಷ್ಣ, ಮುಮ್ಮುಡಿ ಇಂದ್ರ, ಮುಮ್ಮುಡಿ ಕೃಷ್ಣ ಆಳ್ವಿಕೆ ನಡೆಸಿದರು. ಎರಡನೇ ಕರ್ಕನ ಕಾಲದಲ್ಲಿನ ಆಡಳಿತ ದುರ್ಬಲತೆಯು ಸಾಮಂತರಾಗಿದ್ದ ಕಲ್ಯಾಣ ಚಾಲುಕ್ಯ ಎರಡನೇ ತೈಲಪನ ಉದಯಕ್ಕೆ ದಾರಿಯಾಗಿ ಇದು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗೊಳಿಸಿತು.

 

ರಾಷ್ಟ್ರಕೂಟರ ಕೊಡುಗೆಗಳು

 

ರಾಷ್ಟ್ರಕೂಟರ ರಾಜತ್ವವು ವಂಶಪಾರಂಪರ್ಯವಾಗಿತ್ತು.

ಅರಸರಿಗೆ ಸಹಾಯ ಮಾಡಲು ಮಂತ್ರಿ ಮಂಡಲವಿರುತ್ತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶೀ ವ್ಯವಹಾರ ನೋಡಿಕೊಳ್ಳುವ ಮಹಾ ಸಂಧಿವಿಗ್ರಹಿಯೆಂಬ ಗಣ್ಯನು ಇದ್ದನು.

ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯ ವನ್ನು ರಾಷ್ಟ್ರ (ಮಂಡಲ), ವಿಷಯ, ನಾಡು, ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ. ಗ್ರಾಮ ಲೆಕ್ಕಿಗ ಈತನ ಸಹಾಯಕ. ಗ್ರಾಮ ಸಭೆಗಳೂ ಇದ್ದವು.

ನಾಡುಗಳಲ್ಲಿ ನಾಡಗಾವುಂಡ ಎಂಬ ಅಧಿಕಾರಿ ಇರುತ್ತಿದ್ದನು. ಇದೇ ರೀತಿ ವಿಷಯ ಮತ್ತು ರಾಷ್ಟ್ರಗಳ ಮೇಲೂ ಅಧಿಕಾರಿಗಳಿದ್ದರು. ವಿಷಯಪತಿ ಮತ್ತು ರಾಷ್ಟ್ರಪತಿ ಜಿಲ್ಲೆ ಅಥವಾ ವಿಷಯಕ್ಕೂ ಹಾಗೂ ರಾಷ್ಟ್ರಕ್ಕೂ ಅಧಿಕಾರಿಗಳಾಗಿದ್ದರು.

ಭೂಕಂದಾಯ, ಸರಕು, ಮನೆ, ಅಂಗಡಿಗಳ ಮೇಲಿನ ಸುಂಕ, ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೊದಲಾದವು ರಾಜ್ಯದ ಆದಾಯವಾಗಿದ್ದವು.

ವಿದೇಶಿ ವ್ಯಾಪಾರದಿಂದ ರಾಜ್ಯಕ್ಕೆ ಅಪಾರ ಸುಂಕ ಬರುತ್ತಿತ್ತು.

ರಾಷ್ಟ್ರಕೂಟರ ಕಾಲದಲ್ಲಿ ರಾಜರು ಕನ್ನಡ ಮತ್ತು ಸಂಸ್ಕೃತ ಎರಡಕ್ಕೂ ಪ್ರೋತ್ಸಾಹ ನೀಡಿದ್ದರು. ಸಂಸ್ಕೃತದಲ್ಲಿ ಅತ್ಯುತ್ತಮ ಗ್ರಂಥಗಳು ರಚನೆಯಾದವು.

ತ್ರಿವಿಕ್ರಮನು ‘ನಳಚಂಪು’ ಎಂಬ ಸಂಸ್ಕೃತ ಸಾಹಿತ್ಯದ ಪ್ರಥಮ ಚಂಪೂಕೃತಿಯನ್ನು ರಚಿಸಿದನು.

ಹಲಾಯುಧನು ‘ಕವಿರಹಸ್ಯ’ವನ್ನು ಬರೆದನು, ಜಿನಸೇನ, ಗಣಿತಜ್ಞ ಮಹಾವೀರಾಚಾರ್ಯ, ವ್ಯಾಕರಣ ಶಾಸ್ತ್ರಜ್ಞನಾದ ಶಕಟಾಯನ, ಗುಣಭದ್ರ, ವೀರಸೇನ, ಅಮೋಘವರ್ಷನ ಆಸ್ಥಾನದಲ್ಲಿದ್ದರು. ಆದಿಕವಿ ಪಂಪನು ‘ಆದಿಪುರಾಣ’, `ವಿಕ್ರಮಾರ್ಜುನ ವಿಜಯ’ವನ್ನು ಕನ್ನಡದಲ್ಲಿ ಬರೆದನು. ಉಭಯಕವಿ ಚಕ್ರವರ್ತಿ ಪೊನ್ನನು ‘ಶಾಂತಿಪುರಾಣ’ವನ್ನು ರಚಿಸಿದನು.

 

ಅಮೋಘವರ್ಷನ ಆಸ್ಥಾನದಲ್ಲಿದ್ದ ಶ್ರೀ ವಿಜಯ ‘ಕವಿರಾಜಮಾರ್ಗ’ವನ್ನು ರಚಿಸಿದನು. ಇದು ಕನ್ನಡದ ಮೇರುಕೃತಿಯಾಗಿದೆ.

 

ಇದರಿಂದ ಕನ್ನಡ ಸಾಹಿತ್ಯವು ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವುದನ್ನು ತಿಳಿಯಬಹುದು.

 

ಆದಿಕವಿ ಪಂಪನ ಹೆಸರಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು, ‘ನಾಡೋಜ’ ಎಂಬ ಪ್ರಶಸ್ತಿಯನ್ನು ಕರ್ನಾಟಕದ ಹಿರಿಯ ಸಾಧಕರಿಗೆ ನೀಡುತ್ತಾ ಬಂದಿದೆ.

 

ರಾಷ್ಟ್ರಕೂಟರ ಕಾಲದ ಇನ್ನೊಂದು ಸಂಪನ್ನವಾದ ಗದ್ಯಕೃತಿ ‘ವಡ್ಡಾರಾಧನೆ’, ಶಿವಕೋಟ್ಟಾಚಾರ್ಯ ಇದರ ಕರ್ತೃ. ಇದು ಜೈನ ಧಾರ್ಮಿಕ ಕಥೆಗಳ ಸಂಗ್ರಹ.

 

ಇಲ್ಲಿ ಕನ್ನಡ ದೇಸಿಗೆ ವಿಶೇಷ ಪ್ರಾಧಾನ್ಯತೆ ದೊರಕಿದೆ. ಸನ್ನಿವೇಶ, ರಚನೆ, ಪಾತ್ರಸೃಷ್ಟಿ, ಸಂವಾದಗಳಲ್ಲಿ ಸಜೀವತೆ ಇದೆ. ಪಂಪ ಪೂರ್ವಯುಗದ ಶ್ರೇಷ್ಠ ಗದ್ಯ ಗ್ರಂಥವಾಗಿದ್ದು, ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಂತರವಾಗಿ ನಿಲ್ಲತಕ್ಕ ಕೃತಿಯಾಗಿದೆ.

ಅಗ್ರಹಾರಗಳು, ಮಠಗಳು ಅಂದಿನ ಪ್ರಮುಖ ಶೈಕ್ಷಣಿಕ ಕೇಂದ್ರಗಳಾಗಿದ್ದವು. ಸಂಸ್ಕೃತ, ವೇದ, ಜ್ಯೋತಿಷ್ಯ, ತರ್ಕಶಾಸ್ತ್ರ, ಪುರಾಣಗಳಲ್ಲಿ ಶಿಕ್ಷಣ ನೀಡುತ್ತಿದ್ದರು. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೊಟಗಿ ಪ್ರಮುಖ ವಿದ್ಯಾ ಕೇಂದ್ರಗಳಲ್ಲೊಂದಾಗಿತ್ತು.

ರಾಷ್ಟ್ರಕೂಟ ಅರಸರು ಶಿವ ಮತ್ತು ವಿಷ್ಣುವಿನ ಆರಾಧಕರಾಗಿದ್ದರು. ಜೈನ ಮತ ರಾಜಾಶ್ರಯ ಪಡೆದ ಪ್ರಬಲ ಮತವಾಗಿತ್ತು. ಆದರೂ ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದ್ದರು. ಅನೇಕ ಶಿವ, ವಿಷ್ಣು ದೇವಾಲಯಗಳನ್ನು ನಿರ್ಮಿಸಿದ್ದಾರೆ.

ರಾಷ್ಟ್ರಕೂಟ ಅರಸರು ಕಲಾಪೋಷಕರಾಗಿದ್ದರು. ಎಲ್ಲೋರ ಮತ್ತು ಎಲಿಫೆಂಟಾಗಳಲ್ಲಿ ಕಲ್ಲಿನಲ್ಲಿ ಕೊರೆದು ಮಾಡಿರುವ ದೇವಾಲಯಗಳು ಭಾರತೀಯ ಕಲೆಗೆ ಇವರು ನೀಡಿರುವ ಮಹಾನ್‍ಕಾಣಿಕೆಗಳಾಗಿವೆ.

 

ಒಂದನೇ ಕೃಷ್ಣನು ಕೊರೆಸಿದ ಎಲ್ಲೋರಾದ ಕೈಲಾಸ ಮಂದಿರವು ಏಕಶಿಲೆಯ ಅದ್ಭುತ ರಚನೆಯಾಗಿದೆ.

 

100 ಅಡಿ ಎತ್ತರ, 276 ಅಡಿ ಉದ್ದ ಹಾಗೂ 154 ಅಡಿ ಅಗಲವಾಗಿದ್ದು, ಬೃಹತ್ ಬಂಡೆಯನ್ನು ಕೊರೆದು ಕಟ್ಟಲಾಗಿದೆ. ಅಲ್ಲಿಯೇ ಪ್ರಸಿದ್ಧ ದಶಾವತಾರ ಗುಹಾಲಯವಿದೆ. ಮುಂಬೈ ಬಳಿಯ ಎಲಿಫೆಂಟಾದ ಗುಹೆಗಳಲ್ಲಿಯ ಶಿಲ್ಪಕಲೆಯು ರಾಷ್ಟ್ರಕೂಟರ ಕಾಲದ ಶಿಲ್ಪಕಲೆಗೆ ಮುಕುಟಪ್ರಾಯವಾಗಿದೆ. ಅರ್ಧನಾರೀಶ್ವರ, ಮಹೇಶಮೂರ್ತಿ (ತ್ರಿಮುಖ) ವಿಗ್ರಹಗಳನ್ನು ಸೊಗಸಾಗಿ ಕೆತ್ತಲಾಗಿದೆ. ರಾಯಚೂರು ಜಿಲ್ಲೆ ಶಿರವಾಳದಲ್ಲಿ ಇವರ ಕಾಲದ ದೇವಾಲಯಗಳಿವೆ. ಪಟ್ಟದಕಲ್ಲಿನಲ್ಲಿ ಸುಂದರ ಜಿನದೇವಾಲಯವಿದೆ.

You may also like...