ಕಂಚಿಯ ಪಲ್ಲವರು (ಸಾ.ಶ. 350 – 895)

ಕಂಚಿಯ ಪಲ್ಲವರು (ಸಾ.ಶ. 350 – 895)

ದಕ್ಷಿಣ ಭಾರತ : ಸಾ.ಶ. 600
ಚಿತ್ರ ಕೃಪೆ : Thomas Lessman 

 

ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ

ಪಲ್ಲವರು ತಮಿಳುನಾಡಿನ ಪ್ರಪ್ರಥಮ ರಾಜರುಗಳು.

 

ದಕ್ಷಿಣ ಭಾರತವನ್ನು ಆಳಿದ ವಂಶಗಳಲ್ಲಿ ಇವರಿಗೆ ವಿಶೇಷ ಸ್ಥಾನವಿದೆ. ಸಾ.ಶ. 4ನೇ ಶತಮಾನದಿಂದ ಸಾ.ಶ. 9ನೇ ಶತಮಾನದವರೆಗೆ ಆಳಿದರು. ಪ್ರಾರಂಭದಲ್ಲಿ ಇವರು ಶಾತವಾಹನರ ಅಧಿಕಾರಿಗಳಾಗಿದ್ದರು. ಶಾತವಾಹನ ರಾಜ್ಯವು ಅವನತಿಯಾದಾಗ ಪಲ್ಲವರು ತಮ್ಮನ್ನು ತಾವೇ ಸ್ಥಳೀಯ ರಾಜರುಗಳೆಂದು ಘೋಷಿಸಿಕೊಂಡರು.

ಶಿವಸ್ಕಂದವರ್ಮನು ಈ ಸಂತತಿಯ ಮೊದಲ ದೊರೆಯಾಗಿದ್ದನು. ಪಲ್ಲವರು ಮತ್ತು ಕದಂಬರು ನಿರಂತರ ಶತ್ರುತ್ವ ಹೊಂದಿದ್ದರು. ಆನಂತರ ಚಾಲುಕ್ಯ ವಂಶದ ಇಮ್ಮಡಿ ಪುಲಿಕೇಶಿಯು ಪಲ್ಲವರ ಮಹೇಂದ್ರವರ್ಮನನ್ನು ಸೋಲಿಸಿದನು.

ಮುಂದೆ ಬಂದ ಪ್ರಥಮ ನರಸಿಂಹವರ್ಮನು ಪಲ್ಲವ ರಾಜರುಗಳಲ್ಲಿ ಅತ್ಯಂತ ಪ್ರಸಿದ್ಧನು. ತನಗೆ ಚಾಲುಕ್ಯರ ಮೇಲಿದ್ದ ಸೇಡನ್ನು ತೀರಿಸಿಕೊಂಡು ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ವಾತಾಪಿಯನ್ನು ವಶಪಡಿಸಿಕೊಂಡನು. ಇದರಿಂದ ಈತನು ‘ಮಹಾಮಲ್ಲ’ ಮತ್ತು ‘ವಾತಾಪಿಕೊಂಡ’ ಎಂಬ ಬಿರುದುಗಳನ್ನು ಹೊಂದಿದ್ದನು.

ಈತನ ಆಳ್ವಿಕೆಯ ಕಾಲದಲ್ಲಿ ಹ್ಯೂಯೆನ್‍ತ್ಸಾಂಗನು ಕಂಚಿಯನ್ನು ದರ್ಶಿಸಿದ್ದನು. ಕಂಚಿ ಬಳಿಯಲ್ಲಿನ ಸಮುದ್ರ ತೀರದಲ್ಲಿ ನರಸಿಂಹವರ್ಮನು ಒಂದು ನಗರವನ್ನು ನಿರ್ಮಿಸಿ, ಅದಕ್ಕೆ ‘ಮಹಾಬಲಿಪುರಂ’ ಎಂಬ ಹೆಸರನ್ನು ಇಟ್ಟನು. ಅನೇಕ ಏಕಶಿಲಾ ದೇವಾಲಯಗಳು ಈತನಿಂದ ನಿರ್ಮಾಣವಾದವು.

ಅಪರಾಜಿತ ಪಲ್ಲವನ ಆಳ್ವಿಕೆಯ ಕಾಲದಲ್ಲಿ ಪಲ್ಲವ ಸಾಮ್ರಾಜ್ಯ ಚೋಳರ ಆದಿತ್ಯನಿಂದ ಕೊನೆಗೊಂಡಿತು.

 

ಪಲ್ಲವರ ಕೊಡುಗೆಗಳು

 

ತಮಿಳುನಾಡಿನಲ್ಲಿ ಆಡಳಿತವನ್ನು ವ್ಯವಸ್ಥೆಗೊಳಿಸಿದ್ದರು. ಸಾಹಿತ್ಯ, ಧರ್ಮ, ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಶಿಕ್ಷಣಗಳಲ್ಲಿ ಇವರ ಕಾಣಿಕೆಯು ಗಮನಾರ್ಹವಾದುದು.

 

ವಾತಾಪಿಯಲ್ಲಿ ಚಾಲುಕ್ಯರೂ, ಕಂಚಿಯಲ್ಲಿ ಪಲ್ಲವರೂ ಆಳುತ್ತಿದ್ದ ಕಾಲವೇ ದಕ್ಷಿಣದಲ್ಲಿ ವೀರಯುಗ.

 

ಇವರ ರಾಜ್ಯವು ಸದೃಢ, ಸುವ್ಯಸ್ಥಿತವಾಗಿದ್ದು, ಮಂತ್ರಿ ಮತ್ತು ಪ್ರಾಂತಾಧಿಕಾರಿಗಳಿದ್ದರು. ರಾಜ್ಯವನ್ನು ಮಂಡಲ, ನಾಡು, ಗ್ರಾಮಗಳಾಗಿ ವಿಭಾಗಿಸಿದ್ದರು. ಗ್ರಾಮಸಭೆಯು ಗ್ರಾಮದ ಸಮಸ್ಯೆಗಳನ್ನು ಗಮನಿಸುತ್ತಿದ್ದಿತು. ಗ್ರಾಮಭೋಜಕ ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದನು.

ಪಲ್ಲವರು ಸಂಸ್ಕೃತ ಮತ್ತು ತಮಿಳು ಭಾಷೆಗಳೆರಡಕ್ಕೂ ಪ್ರೋತ್ಸಾಹ ನೀಡಿದರು. ಕಂಚಿಯು ಸಂಸ್ಕೃತ ಸಾಹಿತ್ಯದ ಕೇಂದ್ರವಾಗಿತ್ತು. ಪಲ್ಲವರ ಆಸ್ಥಾನದಲ್ಲಿದ್ದ ಕವಿಗಳು ಭಾರವಿ (ಕಿರಾತಾರ್ಜುನೀಯ) ಹಾಗೂ ದಂಡಿ (ದಶಕುಮಾರ ಚರಿತ). ರಾಜ ಮಹೇಂದ್ರವರ್ಮನು ಸ್ವತಃ ‘ಮತ್ತ ವಿಲಾಸ ಪ್ರಹಸನ’ ಎಂಬ ಸಾಮಾಜಿಕ ನಾಟಕವನ್ನು ಹಾಗೂ ‘ಭಗವದುಜ್ಜುಕ’ ಗ್ರಂಥವನ್ನು ರಚಿಸಿದ್ದಾನೆ. ಪಲ್ಲವರು ಎಲ್ಲಾ ಮತಗಳಿಗೂ ಪ್ರೋತ್ಸಾಹ ನೀಡಿದರು. ಮೊದಲು ಪಲ್ಲವ ದೊರೆಗಳು ಬೌದ್ಧಮತೀಯರಾಗಿದ್ದರು. ನಳಂದ ವಿಶ್ವವಿದ್ಯಾನಿಲಯದ ಮಹಾನ್ ವಿದ್ವಾಂಸ ಧರ್ಮಪಾಲನು ಕಂಚಿಯಲ್ಲಿ ಜನಿಸಿದವನು. ಮಹೇಂದ್ರವರ್ಮನು ಜೈನ ಮತಾವಲಂಬಿಯಾದುದರಿಂದ ನಾಡಿನಲ್ಲಿ ಅನೇಕ ಜೈನರಿದ್ದರು.

 

7ನೇ ಶತಮಾನದಲ್ಲಿಶೈವ- ವೈಷ್ಣವ ಭಕ್ತಿ ಪಂಥಗಳು ಜನಪ್ರಿಯವಾದವು. ನಾಯನ್ಮಾರರು ಎಂಬ 63 ಯತಿ ಶ್ರೇಷ್ಠರು ಶೈವ ಮತವನ್ನು ಪ್ರಚಾರಗೊಳಿಸಿದರು. 12 ಮಂದಿ ಆಳ್ವಾರರುಗಳು ವೈಷ್ಣವ ಮತವನ್ನು ಪ್ರಚಾರಗೊಳಿಸಿದರು.

 

ಈ ಯುಗವು ಭಕ್ತಿ ಚಳುವಳಿಯ ಉದಯವನ್ನು ಕಂಡಿತು. ವೈದಿಕ ಧರ್ಮದ ಪುನರುಜ್ಜೀವನಕ್ಕೂ ಸಹಾಯ ಮಾಡಿತು. ತಮಿಳಿನಲ್ಲಿ ಶ್ಲೋಕಗಳು ರಚನೆಯಾದವು. ಇದೇ ತಮಿಳು ಸಾಹಿತ್ಯದ ನಿಧಿಯಾಗಿದೆ.

ಪಲ್ಲವರು ಕಲೆ ಮತ್ತು ವಾಸ್ತುಶಿಲ್ಪದ ಪ್ರೇಮಿಗಳಾಗಿದ್ದರು. ತಮ್ಮ ರಾಜ್ಯದಲ್ಲಿ ಇವರು ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಈ ದೇವಾಲಯಗಳಲ್ಲಿ ಅತ್ಯುತ್ತಮ ಕಲಾಕೌಶಲತೆಯನ್ನು ಕಾಣಬಹುದು. ಪಲ್ಲವರ ವಾಸ್ತುಶಿಲ್ಪವನ್ನು ಕಲ್ಲಿನಲ್ಲಿ ಕೊರೆದು ಮಾಡಿದ ದೇವಾಲಯಗಳು ಮತ್ತು ರಚನಾ ವಿನ್ಯಾಸದ ದೇವಾಲಯಗಳು ಎಂಬುದಾಗಿ ವಿಂಗಡಿಸಬಹುದು.

ಮಹಾಬಲಿಪುರದಲ್ಲಿ ಕಲ್ಲಿನಲ್ಲಿ ಕೊರೆದು ಮಾಡಿದ ಅನೇಕ ದೇವಾಲಯಗಳನ್ನು ಕಾಣಬಹುದು. ಏಕಶಿಲೆಗಳಲ್ಲಿ ಅದ್ಭುತ ವಿಗ್ರಹಗಳನ್ನು ಕೆತ್ತಿ, ಬಿಡಿಸಲಾಗಿದೆ. ಇವುಗಳು ಮಹಾಭಾರತದ ಹಾಗೂ ಭಾಗವತದ ಕಥೆಗಳನ್ನು ಹೊಂದಿವೆ. ಇಲ್ಲಿನ ಪಂಚ ರಥಗಳು ಸುಪ್ರಸಿದ್ಧ ಏಕಶಿಲಾ ದೇವಾಲಯಗಳಾಗಿವೆ.

‘ಅರ್ಜುನನ ತಪಸ್ಸು’ ಎನ್ನುವ ಕೆತ್ತನೆ ದೃಶ್ಯವು ಅತ್ಯುತ್ತಮ ಕಲಾಕೃತಿಯಾಗಿದೆ. ಕಂಚಿಯಲ್ಲಿನ ಕೈಲಾಸನಾಥ, ಏಕಾಂಬರನಾಥ ಮತ್ತು ವೈಕುಂಠ ಪೆರುಮಾಳರ ದೇವಾಲಯಗಳು, ಮಹಾಬಲಿಪುರದ ಕಡಲದಂಡೆಯ ದೇವಾಲಯ ಪ್ರಾಚೀನ ಭಾರತ ವಾಸ್ತುಶಿಲ್ಪದ ಅತ್ಯುತ್ತಮ ನಿದರ್ಶನಗಳಾಗಿವೆ.

ದೇವಾಲಯಗಳು ಧಾರ್ಮಿಕ ಹಾಗೂ ಕಲಾತ್ಮಕ ಚಟುವಟಿಕೆಗಳ ಕೇಂದ್ರಗಳಾದವು. ದೇವಾಲಯದ ಅಂಗಳಗಳಲ್ಲಿ ಸಂಜೆ ಸಮಯದಲ್ಲಿ ಗ್ರಾಮೀಣ ಜನರು ಕಲೆತು ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು. ವಿರಾಮ ವೇಳೆಯಲ್ಲಿ ಜನರು ಇಲ್ಲಿ ಸಭೆ ಸೇರುತ್ತಿದ್ದು, ಪುರಾಣ ಶ್ರವಣ ಅಥವಾ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಹೀಗಾಗಿ ದೇವಾಲಯಗಳು ಸಾಮಾಜಿಕ, ಶೈಕ್ಷಣಿಕ ಕೇಂದ್ರಗಳಾಗಿದ್ದವು. ಪಲ್ಲವರು ಒಳ್ಳೆಯ ನೌಕಾಬಲವನ್ನು ಹೊಂದಿದ್ದರು. ಇಲ್ಲಿನ ವರ್ತಕರು ಮಲಯ, ಇಂಡೋನೇಷಿಯಾ ಹಾಗೂ ಇತರೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಡನೆ ವಾಣಿಜ್ಯ ಸಂಬಂಧಗಳನ್ನು ಹೊಂದಿದ್ದರು. ಭಾರತೀಯ ಭಾಷೆ ಮತ, ಸಂಪ್ರದಾಯ, ಸಂಸ್ಕøತಿಗಳು ಆ ದೇಶಗಳಲ್ಲಿಯೂ ಪ್ರಭಾವ ಬೀರಿರುವುದನ್ನು ಕಾಣಬಹುದು.

ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ

You may also like...