ಕನ್ನಡ ವ್ಯಾಕರಣ – ಕ್ರಿಯಾಪದ

ಕ್ರಿಯಾಪದ
ಕ್ರಿಯಾಪದ

ಕ್ರಿಯಾಪದ – ಪರಿಚಯಾತ್ಮಕ ಸ್ಥೂಲ ವಿವರ

— ತಾಯಿಯು ಅಡುಗೆಯನ್ನು ಮಾಡುತ್ತಾಳೆ.
— ತಂದೆಯು ಕೆಲಸವನ್ನು ಮಾಡಿದನು.
— ಅವನು ಊಟವನ್ನು ಮಾಡುವನು.
— ದೇವರು ಒಳ್ಳೆಯದನ್ನು ಮಾಡಲಿ.
ಈ ವಾಕ್ಯಗಳಲ್ಲಿ ಅಡಿಗೆರೆ ಎಳೆದಿರುವ ಪದಗಳು ಕ್ರಿಯೆ ಪೂರ್ಣಗೊಂಡಿರುವುದನ್ನು ಸೂಚಿಸುತ್ತವೆ.
ಹೀಗೆ ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸಬಲ್ಲ ಪದವೇ ಕ್ರಿಯಾಪದ.

ಈ ವಾಕ್ಯಗಳಲ್ಲಿರುವ ಎಲ್ಲ ಕ್ರಿಯಾಪದಗಳಿಗೂ ಮೂಲಪದ ಮಾಡು ಎಂಬುದು ಇಂತಹ ಮೂಲರೂಪ ಪದಗಳೇ ಕ್ರಿಯಾಪ್ರಕೃತಿ ಅಥವಾ ಧಾತು.

ಸೂತ್ರ : ಕ್ರಿಯಾರ್ಥವನ್ನು ಸೂಚಿಸುವ ಪ್ರತ್ಯಯವನ್ನು ಹೊಂದದಿರುವ ಪದವೇ ಕ್ರಿಯಾಪ್ರಕೃತಿ ಅಥವಾ ಧಾತು. ಕ್ರಿಯಾಪದದ ಮೂಲರೂಪವೇ ಧಾತು.

ಕ್ರಿಯಾಪದದ ಮೂಲ ರೂಪವನ್ನು ‘ಧಾತು’ (ಕ್ರಿಯಾಪ್ರಕೃತಿ) ಎಂದು ಕರೆಯಲಾಗಿದೆ. ಇವುಗಳಲ್ಲಿ ‘ಸಕರ್ಮಕ’ ಮತ್ತು ‘ಅಕರ್ಮಕ’ ಧಾತುಗಳೆಂದು ಎರಡು ವಿಧಗಳಿವೆ.


ಸಕರ್ಮಕ ಮತ್ತು ಅಕರ್ಮಕ ಧಾತುಗಳು

ಈ ವಾಕ್ಯಗಳನ್ನು ಗಮನಿಸಿ
— ರಾಮನು ಗಿಡವನ್ನು ನೆಟ್ಟನು.
— ಶಿಲ್ಪಿಗಳು ಗುಡಿಯನ್ನು ಕಟ್ಟಿದರು.
— ವಿದ್ಯಾರ್ಥಿಗಳು ಪಾಠವನ್ನು ಓದಿದರು.
ಮೂರು ವಾಕ್ಯಗಳಲ್ಲಿರುವ ನೆಟ್ಟನು, ಕಟ್ಟಿದರು, ಓದಿದರು ಎಂಬ ಕ್ರಿಯಾಪದಗಳಿಗೆ ಏನನ್ನು ಎಂಬ ಪ್ರಶ್ನೆ ಹಾಕಿದಾಗ ಅನುಕ್ರಮವಾಗಿ ಗಿಡವನ್ನು, ಗುಡಿಯನ್ನು, ಪಾಠವನ್ನು ಎಂಬ ಉತ್ತರ
ದೊರೆಯುವುದು. ಇಂತಹ ಪದಗಳೇ ಕರ್ಮಪದಗಳು.

ಇಲ್ಲಿರುವ ಮೂರು ಕ್ರಿಯಾಪದಗಳಲ್ಲಿ ಅನುಕ್ರಮವಾಗಿ ನೆಡು, ಕಟ್ಟು, ಓದು ಎಂಬ ಧಾತುಗಳಿವೆ.
ಎಲ್ಲಾ ಧಾತುಗಳಿಗೂ ಕರ್ಮಪದ ಬೇಕಾಗುತ್ತದೆ. ಇಲ್ಲವಾದಲ್ಲಿ ವಾಕ್ಯ ಪೂರ್ಣ ಅರ್ಥವನ್ನು ಕೊಡಲಾರದು.

ಸೂತ್ರ: ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು

ಈ ವಾಕ್ಯಗಳನ್ನು ಗಮನಿಸಿ
— ಕೂಸು ಮಲಗಿತು.
— ಅವನು ಬದುಕಿದನು.
— ಆಕಾಶ ಹೊಳೆಯುತ್ತಿದೆ.
ಇಲ್ಲಿ ಮಲಗಿತು, ಬದುಕಿದನು, ಹೊಳೆಯುತ್ತಿದೆ ಎಂಬ ಪದಗಳು ಕ್ರಿಯಾಪದಗಳು. ಈ ಕ್ರಿಯಾಪದಗಳಿಗೆ ಏನನ್ನು ಎಂದು ಪ್ರಶ್ನೆ ಹಾಕಲು ಸಾಧ್ಯವಿಲ್ಲ. ಹಾಗಾಗಿ ಈ ಕ್ರಿಯಾಪದಗಳಲ್ಲಿರುವ ಮಲಗು, ಬದುಕು, ಹೊಳೆಯು ಎಂಬ ಧಾತುಗಳು ಕರ್ಮಪದವನ್ನು ಬಯಸುವುದಿಲ್ಲ.


ಸೂತ್ರ: ಕರ್ಮಪದವನ್ನು ಬಯಸದೇ ಇರುವ ಧಾತುಗಳೇ ಅಕರ್ಮಕ ಧಾತುಗಳು.

ಇದನ್ನೂ ಓದಿರಿ : ಕಾಲ ಸೂಚಕ ಕ್ರಿಯಾಪದ


ಕರ್ತರಿ ಮತ್ತು ಕರ್ಮಣಿ ಪ್ರಯೋಗ :

ಈ ವಾಕ್ಯಗಳನ್ನು ಗಮನಿಸಿ:
ಗುಂಪು -1
— ಅಣ್ಣ ಅನ್ನವನ್ನು ಉಂಡನು.
— ಕೃಷ್ಣ ಕಾಳಿಂಗವನ್ನು ಮರ್ದಿಸಿದನು.
— ಅಕ್ಕ ತಂಗಿಯನ್ನು ಕರೆದಳು.
ಗುಂಪು – 2
— ಅಣ್ಣನಿಂದ ಅನ್ನವು ಉಣ್ಣಲ್ಪಟ್ಟಿತು.
— ಕೃಷ್ಣನಿಂದ ಕಾಳಿಂಗವು ಮರ್ದಿಸಲ್ಪಟ್ಟಿತು.
— ಅಕ್ಕನಿಂದ ತಂಗಿಯು ಕರೆಯಲ್ಪಟ್ಟಳು.

ಮೊದಲ ಗುಂಪಿನಲ್ಲಿರುವ ಧಾತುಗಳಿಗೆ ಲಿಂಗ ಮತ್ತು ವಚನವಾಚಕಗಳು ಸೇರಿ ಪೂರ್ಣ ವಾಕ್ಯವಾಗಿವೆ. ಇವೇ ಕರ್ತರಿ ಪ್ರಯೋಗ ವಾಕ್ಯಗಳು.
ಧಾತುಗಳಿಗೆ ಲಿಂಗವಾಚಕ ಮತ್ತು ವಚನವಾಚಕಗಳು ಸೇರಿ ಒಂದು ಪೂರ್ಣವಾಕ್ಯವಾದಾಗ ಅದು ‘ಕರ್ತರಿ ಪ್ರಯೋಗದ’ ವಾಕ್ಯವೆನಿಸುತ್ತದೆ

ಸೂತ್ರ: ಕ್ರಿಯಾಪದಕ್ಕೆ ಕರ್ತರಿ ಪ್ರಯೋಗದಲ್ಲಿ ಕರ್ತೃವಿನ ಲಿಂಗ, ವಚನಗಳು ಬರುತ್ತವೆ.

ಎರಡನೆಯ ಗುಂಪಿನಲ್ಲಿರುವ ಧಾತುಗಳಿಗೆ -ಅಲ್ಪಡು ಪ್ರತ್ಯಯ ಸೇರಿದೆ. ಇವೇ ಕರ್ಮಣಿ ಪ್ರಯೋಗ ವಾಕ್ಯಗಳು.

ಸೂತ್ರ: ಧಾತುಗಳಿಗೆ – ‘ಅಲ್ಪಡು’ ಎಂಬ ಪ್ರತ್ಯಯ ಸೇರಿ ಅದಕ್ಕೆ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಸೇರಿದಾಗ ಕರ್ಮಣಿ ಪ್ರಯೋಗದ ವಾಕ್ಯಗಳಾಗುತ್ತವೆ.


ನಾನಾ ಕ್ರಿಯಾರ್ಥಕಗಳು ( ಅರ್ಥರೂಪ ಕ್ರಿಯಾಪದಗಳು )

ವಿಧ್ಯರ್ಥಕ ಕ್ರಿಯಾಪದಗಳು

ಈ ವಾಕ್ಯಗಳನ್ನು ಗಮನಿಸಿ:
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
ಅವರು ಪಾಠವನ್ನು ಓದಲಿ.
ಭೀಮನಿಗೆ ಜಯವಾಗಲಿ.
ಈ ಮೂರು ವಾಕ್ಯಗಳಲ್ಲಿ ಮಾಡಲಿ, ಓದಲಿ, ಆಗಲಿ ಎಂಬ ಕ್ರಿಯಾಪದಗಳಿವೆ. ಮಾಡಲಿ ಎಂಬಲ್ಲಿ ಹಾರೈಕೆಯೂ ಓದಲಿ ಎಂಬಲ್ಲಿ ಸಮ್ಮತಿಯೂ ಆಗಲಿ ಎಂಬಲ್ಲಿ ಆಶೀರ್ವಾದವೂ ಇದೆ.

ಸೂತ್ರ: ಆಶೀರ್ವಾದ, ಅಪ್ಪಣೆ, ಆಜ್ಞೆ , ಹಾರೈಕೆ, ಸಮ್ಮತಿ ಇತ್ಯಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳೇ ವಿಧ್ಯರ್ಥಕ ಕ್ರಿಯಾಪದಗಳು.

ನಿಷೇಧಾರ್ಥಕ ಕ್ರಿಯಾಪದಗಳು

ಈ ವಾಕ್ಯಗಳನ್ನು ಗಮನಿಸಿ:
ಕೃಷ್ಣನು ಹಣ್ಣನ್ನು ತಿನ್ನನು.
ಕಮಲೆಯು ಆಟಕ್ಕೆ ಬಾರಳು.
ಇಲ್ಲಿ ತಿನ್ನನು ಎಂಬ ಕ್ರಿಯಾಪದ ತಿನ್ನುವುದಿಲ್ಲ ಎಂಬ ಅರ್ಥವನ್ನೂ ಬಾರಳು ಎಂಬ ಕ್ರಿಯಾಪದ ಬರುವುದಿಲ್ಲ ಎಂಬ ಅರ್ಥವನ್ನೂ ಸೂಚಿಸುತ್ತವೆ.

ಸೂತ್ರ: ಕ್ರಿಯೆ ನಡೆಯುವುದಿಲ್ಲ ಎಂಬ ಅರ್ಥವನ್ನು ಸೂಚಿಸುವ ಕ್ರಿಯಾಪದಗಳೇ ನಿಷೇಧಾರ್ಥಕ ಕ್ರಿಯಾಪದಗಳು.

ಸಂಭಾವನಾರ್ಥಕ ಕ್ರಿಯಾಪದಗಳು

ಈ ವಾಕ್ಯಗಳನ್ನು ಗಮನಿಸಿ:
ಅವರು ನಾಳೆ ಬಂದಾರು.
ಚೆಂಡು ಮೇಲಕ್ಕೆ ಹೋದೀತು.
ಈ ವಾಕ್ಯಗಳಲ್ಲಿರುವ ಬಂದಾರು, ಹೋದೀತು ಎಂಬ ಕ್ರಿಯಾಪದಗಳು ಸಂಶಯ ಅಥವಾ ಊಹೆಯನ್ನು ಸೂಚಿಸುತ್ತವೆ.

ಸೂತ್ರ: ಕ್ರಿಯೆ ನಡೆಯುವ ಬಗ್ಗೆ ಸಂಶಯ ಅಥವಾ ಊಹೆಯನ್ನು ವ್ಯಕ್ತಪಡಿಸುವಂತಹ ಪದಗಳೇ ಸಂಭಾವನಾರ್ಥಕ ಕ್ರಿಯಾಪದಗಳು.


Spread the Knowledge

You may also like...

Leave a Reply

Your email address will not be published. Required fields are marked *