ಷಟ್ಪದಿ ಸಾಹಿತ್ಯ ಪ್ರಕಾರ

ಷಟ್ಪದಿ ಸಾಹಿತ್ಯ ಪ್ರಕಾರ
ಷಟ್ಪದಿ ಸಾಹಿತ್ಯ ಪ್ರಕಾರ

13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ :

ಮಂದರ ಧರಗಣ೦
ಬಂದಿರ್ಕಾರಂತ್ಯದೊಳ್‌
ಕುಂದದೆ ನೆಲಸುಗೆ ಮದನಹರಂ
ಇಂದುನಿಭಾನನೆ
ಮುಂದಣ ಪದವೀ
ಯಂದಮೆಯಾಗಕಲ್ಕೆ ಷಟ್ಪದಿಕೇಳ್‌

ಇದರ ಅರ್ಥ “ಆರು ಮಂದರ ಧರಗಣ (ವಿಷ್ಣು ಗಣಗಳು) ಬಂದು ಕೊನೆಯಲ್ಲಿ ಒಂದು ರುದ್ರ ಎ೦ಬ ಗಣ ತಪ್ಪದೆ ನೆಲೆಸಿರುತ್ತದೆ‘ ಎ೦ದು. ಮುಂದಿನ ಪದ್ಯಭಾಗವೂ ಇದೆ ನಿಯಮವನ್ನೊಳಗೊಂಡಿರುತ್ತದೆ. ಅದು ” ‘ಷಟ್ಪದಿ’ ಎ೦ದು ಹೇಳಿದ್ದಾನೆ. ಈ ಅಂಶಗಣಾನ್ಹಿತ ಷಟ್ಪದಿಯಲ್ಲಿ 6 ವಿಷ್ಣು ಗಣಗಳು, 1 ರುದ್ರಗಣವಿರುತ್ತದೆ. ಪೂರ್ವಾರ್ಧದಂತೆಯೇ ಉತ್ತರಾರ್ಧವಿರುತ್ತದೆ.

ಈ ಮೇಲಿನ ಲಕ್ಷಣ ನೋಡಿದಾಗ ಮೂಲದಲ್ಲಿ ಒಂದೇ ಷಟ್ಪದಿ ಇದ್ದಂತೆ ಕಾಣುತ್ತದೆ. ತೀ.ನಂ.ಶ್ರೀ. ಯವರು ಅಮ್ಮಿನಭಾವಿ ಶಾಸನದ ಆಧಾರದ ಮೇಲೆ ಇರುವುದೊಂದೆ ಷಟ್ಪದಿ ಎಂದು ಹೇಳಿದ್ದಾರೆ. 1129ರ 3ನೇ ಸೋಮೇಶ್ವರನ ‘ಮಾನಸೋಲ್ಪಾಸ’ದಲ್ಲಿ ಒಂದೇ ಒಂದು ಮೂಲ ಷಟ್ಪದಿಯ ಉಲ್ಲೇಖವಿದೆ. ಜಯಕೀರ್ತಿ ‘ಛಂದೋನುಶಾಸನ’ದ ಲಕ್ಷಣ ಪದ್ಯದಲ್ಲಿ ‘ಷಟ್ಪದಿಕಾ‘ ಎಂಬ ಪದ ದೊರೆಯುತ್ತದೆ.

ಒಂದಿದ್ದ ಮೂಲ ಷಟ್ಪದಿ ಶರಣರ ಕಾಲಕ್ಕೆ ಆರಾಗಿದೆ. ಮೂಲತಃ ಅಂಶಗಣ ಘಟಿತವಾದುದು ಮುಂದೆ ಮಾತ್ರಾಗಣಕ್ಕೆ ತಿರುಗಿದೆ. 1224ರಲ್ಲಿದ್ದ ಪೊಲಾಳ್ವ ದಂಡನಾಥ ತನ್ನ “ಹರಿಚರಿತ್ರೆ’ಯಲ್ಲಿ ಹಾಗೂ 1275ರಲ್ಲಿದ್ದ ಕುಮುದೇಂದು ತನ್ನ ಕುಮುದೆಂದು “ರಾಮಾಯಣ’ ಅಂಶ ಗಣಾನ್ವಿತ ಷಟ್ಪದಿಯಲ್ಲಿ ಬರೆದಿದ್ದಾನೆ. ಮುಂದೆ ಹರಿಹರ ತನ್ನ ರಗಳೆಗಳಲ್ಲಿ ಬಳಸಿದ ಮಾತ್ರಾ ಛಂದಸ್ಸು, ರಾಘವಾಂಕನ ಮೇಲೆ ಪ್ರಭಾವವನ್ನುಂಟು ಮಾಡಿತು. ಹೀಗಾಗಿ ರಾಘವಾಂಕ ಮೊಟ್ಟಮೊದಲ ಬಾರಿಗೆ ವಾರ್ಧಕ ಷಟ್ಪದಿಯಲ್ಲಿ ಮಾತ್ರಾ ಛಂದಸ್ಸಿನ ಬಳಕೆ ಮಾಡಿ ಷಟ್ಟದಿ ಯುಗದ ಸ್ಥಾಪನಾಚಾರ್ಯನೆನಿಸಿದನು.

ಭೀಮಕವಿ ತನ್ನ “ಬಸವ ಪುರಾಣ’ ದಲ್ಲಿ ಭಾಮಿನಿ ಷಟ್ಪದಿ ಬಳಸಿ ಕಾವ್ಯ ರಚಿಸಿದನು. ಕುಮಾರವ್ಯಾಸನು “ಕರ್ಣಾಟ ಭಾರತ ಕಥಾಮಂಜರಿ’ಯನ್ನು, ಚಾಮರಸನು “ಪ್ರಭು ಲಿಂಗಲೀಲೆ’ಯನ್ನು, ಕನಕದಾಸನು “ರಾಮಧಾನ್ಯ ಚರಿತೆ’ ಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದರು. ಲಕ್ಷ್ಮೀಶ ತನ್ನ “ಜೈಮಿನಿ ಭಾರತ’ವನ್ನು ವಾರ್ಧಕದಲ್ಲಿ ರಚಿಸಿದನು. ರಾಘವಾಂಕ “ವೀರೇಶ ಚರಿತೆ’ಯನ್ನು ಉದ್ದಂಡ ಷಟ್ಪದಿಯಲ್ಲಿ ರಚಿಸಿದನು. ಇದೇ ಮಾದರಿಯಲ್ಲಿ ಬಸವಾಂಕನು ‘ಉದ್ಭಟದೇವ ಚರಿತೆ’ಯನ್ನು, ಸಿದ್ಧನಂಜೇಶನು ‘ರಾಘವಾಂಕ ಚರಿತ್ರೆಯನ್ನು’ ವಾರ್ಧಕ ಪಟ್ಟದಿಯಲ್ಲಿ ರಚಿಸಿದರು. ಆಧುನಿಕ ಕವಿಗಳಾದ ದ. ರಾ. ಬೇಂದ್ರೆ, ಅಡಿಗ, ಚೆನ್ನವೀರ ಕಣವಿ, ಕೆ.ಎಸ್‌.ನ ಮುಂತಾದವರು ಕೂಡ ತಮ್ಮ ಕೆಲವು ಕವಿತೆಗಳಲ್ಲಿ ಷಟ್ಪದಿಯನ್ನು ಬಳಸಿದ್ದಾರೆ. ಆಧುನಿಕ ಪುರಾಣ ಕಾವ್ಯಗಳು ಇಂದಿಗೂ ಷಟ್ಪದಿ ಛಂದಸ್ಸಿನಲ್ಲಿ ರಚನೆಯಾಗುತ್ತಿರುವುದನ್ನು ಕಾಣಬಹುದು.

Spread the Knowledge

You may also like...

Leave a Reply

Your email address will not be published. Required fields are marked *