ಚೋಳರು (ಸಾ.ಶ. 850 – 1279)
ಇವರು ತಮಿಳುನಾಡಿನ ಪಲ್ಲವರ ನಂತರ ದಕ್ಷಿಣದಲ್ಲಿ 9ನೇ ಶತಮಾನದಿಂದ 13ನೆಯ ಶತಮಾನದವರೆಗೆ ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದ ಅನೇಕ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ, ಭಾರತೀಯ ಸಂಸ್ಕøತಿಯು ವಿದೇಶಗಳಲ್ಲಿ ಹರಡಲು ಕಾರಣವಾದರು. ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ‘ಬೃಹದೀಶ್ವರ’ ದೇವಾಲಯ ಇವರ ಕೊಡುಗೆ. ತಮಿಳು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿ ಪ್ರಸಿದ್ಧರಾದರು.
ಚೋಳರು ಪಲ್ಲವರ ಆಶ್ರಯದಲ್ಲಿದ್ದು, ಆನಂತರ ಸ್ವತಂತ್ರರಾದವರು. ಸಂಗಮ್ ಸಾಹಿತ್ಯದ ಪ್ರಕಾರ ಕರಿಕಾಲ ಚೋಳನು ಈ ವಂಶದ ಮೂಲಪುರುಷ. ವಿಜಯಾಲಯ ಚೋಳ ರಾಜ್ಯವನ್ನು ಪುನರುಜ್ಜೀವನಗೊಳಿಸಿ ತಂಜಾವೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.
ಚೋಳರ ಪ್ರಮುಖ ರಾಜ ಒಂದನೆಯ ರಾಜರಾಜ. ಶೂರ, ಶ್ರೇಷ್ಠ ಯೋಧ ಹಾಗೂ ದಕ್ಷ ಆಡಳಿತಗಾರನಾಗಿದ್ದನು. ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಭದ್ರಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. ಚೇರರನ್ನು, ಗಂಗರನ್ನು ಮತ್ತು ಪಾಂಡ್ಯರನ್ನು ಸೋಲಿಸಿದನು. ನೌಕಾ ಸೈನ್ಯವನ್ನು ನಿರ್ಮಿಸಿ ಶ್ರೀಲಂಕಾವನ್ನು ವಶಪಡಿಸಿಕೊಂಡನು. ಮಲೇಶಿಯಾ, ಸಿಂಗಪುರಗಳಲ್ಲಿ ಇಂದಿಗೂ ತಮಿಳರ ಪ್ರಾಬಲ್ಯವನ್ನು ಗಮನಿಸಬಹುದು. ಅಲ್ಲದೆ ಅವರು ರಾಜಕೀಯ, ಆರ್ಥಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪ್ರಭಾವಶಾಲಿಗಳಾಗಿರುವುದನ್ನು ನೀವು ಗಮನಿಸಬಹುದು. ಈ ಮೂಲಕ ಸಾಗರೋತ್ತರ ವಾಣಿಜ್ಯ ವ್ಯವಹಾರಗಳನ್ನು ಪ್ರಾರಂಭಿಸಿ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ಈತನು ಕಟ್ಟಿದ ತಂಜಾವೂರಿನ ಬೃಹದೀಶ್ವರ ದೇವಾಲಯವು ಅತ್ಯಂತ ಪ್ರಸಿದ್ಧವಾದುದು. ಮೂರನೆಯ ರಾಜೇಂದ್ರನ ಕಾಲದಲ್ಲಿ ಚೋಳ ರಾಜ್ಯವು ಕ್ಷೀಣಿಸಿ, ಪಾಂಡ್ಯರು ಮೇಲುಗೈ ಸಾಧಿಸಿದರು.
ಚೋಳರ ಕೊಡುಗೆಗಳು
ಚೋಳರು ಉತ್ತಮವಾದ ಹಾಗೂ ದಕ್ಷ ಆಡಳಿತ ವ್ಯವಸ್ಥೆಯನ್ನು ತಮ್ಮ ರಾಜ್ಯದಲ್ಲಿ ಏರ್ಪಡಿಸಿದ್ದರು. ರಾಜ್ಯವನ್ನು ಮಂಡಲಂ, ಕೊಟ್ವಂಗಿ, ನಾಡು, ಕುರ್ರಂ ಅಥವಾ ಗ್ರಾಮ ಸಮುದಾಯ ಹಾಗೂ ತರ-ಕುರಂ ಎಂದು ವಿಭಾಗಿಸಲಾಗಿತ್ತು. ಪ್ರತಿ ಗ್ರಾಮದಲ್ಲೂ ‘ಊರ್’ ಎಂಬ ಪ್ರಜೆಗಳ ಸಭೆ ಇತ್ತು.
ಚೋಳರ ಆಳ್ವಿಕೆಯ ಪ್ರಮುಖ ಲಕ್ಷಣವೆಂದರೆ ಗ್ರಾಮದ ಸ್ವಯಮಾಧಿಪತ್ಯದ ಬೆಳವಣಿಗೆ. ಗ್ರಾಮ ಸಭೆಗಳು ಪ್ರಥಮ ಸಭೆಗಳಾಗಿದ್ದವು. ತರ-ಕುರ್ರಂ ಒಂದು ಹಳ್ಳಿ. ಪ್ರತಿ ಕುರ್ರಂಗೂ ‘ಮಹಾಸಭಾ’ ಎನ್ನುವ ಗ್ರಾಮಸಭೆ ಇದ್ದಿತು. ಇದನ್ನು ‘ಪೆರುಂಗುರಿ’ ಎಂದು, ಅದರ ಸದಸ್ಯರನ್ನು ‘ಪೆರುಮಕ್ಕಳ್’ ಎಂದು ಕರೆಯಲಾಗುತ್ತಿತ್ತು. ಸದಸ್ಯರನ್ನು ಚುನಾವಣೆ ಮೂಲಕ ಆರಿಸಲಾಗುತ್ತಿತ್ತು. ಸಂಸ್ಕೃತ ವಿದ್ವಾಂಸರು ಹಾಗೂ ಶ್ರೀಮಂತರು ಮಾತ್ರ ಈ ಚುನಾವಣೆಗೆ ಅರ್ಹರಾಗಿದ್ದರು.
ಭೂ ಆದಾಯದ ಆರನೆಯ ಒಂದು ಭಾಗವನ್ನು ಕಂದಾಯವನ್ನಾಗಿ ವಸೂಲಿ ಮಾಡುತ್ತಿದ್ದರು. ನೀರಾವರಿ ವ್ಯವಸ್ಥೆಗೆ ವಿಶೇಷ ಗಮನ ಕೊಟ್ಟಿದ್ದರು. ಅನೇಕ ಕೆರೆಗಳನ್ನು ಕಟ್ಟಿಸಿದ್ದರು. ಬೆಂಗಳೂರು ಬಳಿಯ ಬೆಳ್ಳಂದೂರು ಕೆರೆ ಇವರ ರಚನೆಯಾಗಿದೆ. ಗಂಗೈಕೊಂಡ ಚೋಳಪುರದಲ್ಲಿ ಒಂದು ವಿಶಾಲ ಸರೋವರವನ್ನು ಕಟ್ಟಿಸಿದರು.
ಚೋಳರು ಶೈವರಾಗಿದ್ದು, ಇವರು ಅನೇಕ ಶಿವಾಲಯಗಳನ್ನು ಕಟ್ಟಿಸಿದರು. ತಂಜಾವೂರಿನ ಬೃಹದೀಶ್ವರ ಮಂದಿರ 500 ಅಡಿ ಉದ್ದ, 250 ಅಡಿ ಅಗಲದ ವಿಶಾಲ ಪ್ರಾಕಾರದಲ್ಲಿದೆ. ಅದರ ಶಿಖರ 200 ಅಡಿ ಎತ್ತರವಾಗಿದೆ. ರಾಜೇಂದ್ರನು ಕಟ್ಟಿಸಿದ ಚೋಳೇಶ್ವರ (ಗಂಗೈಕೊಂಡ ಚೋಳಪುರ), ಚನ್ನಪಟ್ಟಣ ಹತ್ತಿರದ ಅಪ್ರಮೇಯ, ಬೆಂಗಳೂರು ಬಳಿ ಬೇಗೂರಿನ ಚೋಳೇಶ್ವರ, ಬಿನ್ನಮಂಗಲದ ಮುಕ್ತೇಶ್ವರ ಕರ್ನಾಟಕದಲ್ಲಿನ ಇವರ ದೇವಾಲಯಗಳಾಗಿವೆ. ದೇವಾಲಯಗಳು ಆರ್ಥಿಕ, ಸಾಂಸ್ಕøತಿಕ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದವು. ಇವರ ಕಾಲದಲ್ಲಿನ ಶಿವ, ಗಣಪತಿ, ವಿಷ್ಣು, ದುರ್ಗೆ, ಕಾರ್ತಿಕೇಯರ ಮೂರ್ತಿಗಳು ಪ್ರಸಿದ್ಧವಾದವು.
ಚೋಳರು ವಿದ್ಯೆಗೆ ಪ್ರೋತ್ಸಾಹ ನೀಡಲು ಅನೇಕ ಅಗ್ರಹಾರಗಳನ್ನು ಸ್ಥಾಪಿಸಿದರು. ಉತ್ತರ ಮೇರೂರು ಅಗ್ರಹಾರ ಇದರಲ್ಲಿ ಪ್ರಸಿದ್ಧವಾದದು. ದೇವಾಲಯಗಳು ವಿದ್ಯಾಕೇಂದ್ರಗಳಾಗಿದ್ದವು. ಇವು ಧಾರ್ಮಿಕ ಚಟುವಟಿಕೆಗಳ ಕೇಂದ್ರಗಳಾಗಿದ್ದವು. ತಮಿಳು ಸಾಹಿತ್ಯದ ಸರ್ವತೋಮುಖ ಪ್ರಗತಿಯ ಕಾಲವಿದು.
ಕಂಬ ರಚಿಸಿದ ರಾಮಾಯಣ, ಸೆಕ್ಕಿಲರ್ ರಚಿಸಿದ ಪೆರಿಯ ಪುರಾಣ, ತಿರುಕ್ಕಾದೇವನ ಜೀವಕ ಚಿಂತಾಮಣಿ ಮುಂತಾದವುಗಳು ಪ್ರಮುಖವಾಗಿವೆ.