ಶಾತವಾಹನರು

ಶಾತವಾಹನರು

ಶಾತವಾಹನ ವಂಶವು ದಖನ್‍ನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶವಾಗಿದೆ. ಚಂದ್ರಗುಪ್ತಮೌರ್ಯನ ಕಾಲದಲ್ಲಿ ಗೋದಾವರಿ, ಕೃಷ್ಣಾ ನದಿಗಳ ಮಧ್ಯೆ ನೆಲೆಸಿದ್ದು, ಸಾಮಂತರಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಾ, ಸಾ.ಶ.ಪೂ. 220ರ ವೇಳೆಗೆ ಸಿಮುಖನು ಸ್ವತಂತ್ರನಾಗಿ ಶ್ರೀಕಾಕುಲಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.

ಗೌತಮಿಪುತ್ರ ಶಾತಕರ್ಣಿ 

ಈ ವಂಶದ ಪ್ರಮುಖ ದೊರೆ ಗೌತಮಿಪುತ್ರ ಶಾತಕರ್ಣಿ. ಸಾಮ್ರಾಜ್ಯಕ್ಕೆ ಕಂಠಕರಾಗಿದ್ದ ಶಖರನ್ನು ಭಾರತದ ಗಡಿಯಿಂದ ಹೊರಗಟ್ಟಿ ಸಾಹಸವನ್ನು ಮೆರೆದನು. ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತೆಂದು ನಂಬಲಾಗಿದೆ. ಕೊಂಕಣ, ಬೀರಾರ್, ಸೌರಾಷ್ಟ್ರ, ಮಾಳವಗಳಲ್ಲದೆ ಅನೇಕ ಹೊಸ ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಇವನಿಗೆ ತ್ರೈ ಸಮುದ್ರತೋಯಪೀತವಾಹನ, ಶಾತವಾಹನ ಕುಲಯಶಃ ಪ್ರತಿಷ್ಠಾಪನಕರ ಎಂಬ ಬಿರುದುಗಳಿದ್ದವು.

ಯಜ್ಞ ಶ್ರೀ ಶಾತಕರ್ಣಿಯು ಈ ವಂಶದ ಕೊನೆಯರಸ. ಅವನ ಕಾಲದಲ್ಲಿ ಶಕಷತ್ರಪರವು ನಿರಂತರ ದಾಳಿಯಿಂದಾಗಿ ಸಾಮ್ರಾಜ್ಯವು ಪತನಗೊಂಡಿತು.

ಶಾತವಾಹನರ ಕಾಲದಲ್ಲಿ ರಾಜನೇ ರಾಜ್ಯದ ಸರ್ವೋಚ್ಚ ಅಧಿಕಾರಿ. ಆಡಳಿತದ ಅನುಕೂಲತೆಗಾಗಿ ರಾಜ್ಯವನ್ನು ಜನಪದ ಎಂಬ ಜಿಲ್ಲೆಗಳನ್ನಾಗಿ ವಿಭಾಗಿಸಿ, ಅವುಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿತ್ತು. ನಗರ ಮತ್ತು ಗ್ರಾಮಗಳ ವ್ಯವಸ್ಥೆಯನ್ನು ಸ್ವಯಮಾಡಳಿತ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಸಮಾಜದಲ್ಲಿ ವರ್ಣಭೇದವಿರಲಿಲ್ಲ. ಸ್ತ್ರೀಯರೂ ಸಹ ಉನ್ನತ ಅಧಿಕಾರ ಸ್ಥಾನಮಾನಗಳನ್ನು ಹೊಂದಿದ್ದರು. ರೈತ, ವ್ಯಾಪಾರಿ, ಅಕ್ಕಸಾಲಿಗ, ಮೀನುಗಾರ, ಬಡಗಿ, ನೇಕಾರ, ಔಷಧ ತಯಾರಿಸುವವ ಮುಂತಾದ ಕಸುಬುದಾರರಿದ್ದರು. ಕಸುಬುದಾರರ ಸಂಘಗಳು ಇದ್ದವು. ಇದೇ ಮುಂದೆ ವಾಣಿಜ್ಯ ಮತ್ತು ವ್ಯಾಪಾರಿ ಸಂಘಗಳಾಗಿ ಕಾರ್ಯ ನಿರ್ವಹಿಸಿದವು. ವಿದೇಶೀ ವ್ಯಾಪಾರಕ್ಕೂ ಪ್ರೋತ್ಸಾಹ ನೀಡಿದ್ದರಲ್ಲದೆ, ನಾಸಿಕ್, ಕಲ್ಯಾಣ್, ಬ್ರೋಚ್, ಭಟ್ಕಳ ವ್ಯಾಪಾರ ಕೇಂದ್ರಗಳಾಗಿದ್ದವು.

ವೈದಿಕ ಮತಸ್ಥರಾದ ಶಾತವಾಹನರು ಇತರೆ ಧರ್ಮಗಳಾದ ಬೌದ್ಧ ಹಾಗೂ ಜೈನಮತಕ್ಕೂ ಪ್ರೋತ್ಸಾಹ ನೀಡಿ ಸಹಮತ ಭಾವನೆಯಿಂದ ಬಾಳುತ್ತಿದ್ದರು. ಕಲೆ, ಸಾಹಿತ್ಯ, ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರು. ವಿದ್ವಾಂಸರ ಹಾಗೂ ಸಾಮಾನ್ಯ ಜನರ ಭಾಷೆಯಾಗಿದ್ದ ಪ್ರಾಕೃತ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಯಿತು. ಹಾಲನು ಬರೆದ ಗ್ರಂಥ ಗಾಥಾ ಸಪ್ತಶತೀ ಇದಕ್ಕೆ ಉದಾಹರಣೆಯಾಗಿದೆ.

ಇವರ ಕಾಲದಲ್ಲಿ ಅಜಂತ ಮತ್ತು ಅಮರಾವತಿಯ ಚಿತ್ರಕಲೆಗಳು ರಚನೆಗೊಂಡವು. ದೇವಾಲಯ, ವಿಹಾರ ಮತ್ತು ಚೈತ್ಯಾಲಯಗಳನ್ನು ಕಟ್ಟಲಾಯಿತು. ಕಾರ್ಲೆಯಲ್ಲಿ ಚೈತ್ಯಾಲಯವನ್ನು ಬನವಾಸಿಯ ಶ್ರೀಮಂತ ವರ್ತಕ ಭೂತಪಾಲನು ನಿರ್ಮಿಸಿದನು. ಒಟ್ಟಿನಲ್ಲಿ ಶಾತವಾಹನರ ಕಾಲದಲ್ಲಿ ಕನ್ನಡ ನಾಡು ಸಮೃದ್ಧಿಯಿಂದ ಕೂಡಿತ್ತು ಮತ್ತು ಇವರು ಸಾಹಸಿಗಳೂ, ಸಮರ್ಥ ಆಡಳಿತಗಾರರಾಗಿದ್ದು, ಭಾರತದ ಸಂಸ್ಕøತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿ ಶ್ರೀಮಂತಗೊಳಿಸಿದ್ದಾರೆ.

You may also like...