ಕದಂಬರು

ಕದಂಬರು

ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ಸ್ಥಳೀಯ ರಾಜವಂಶ ಇದಾಗಿದೆ.

 

ಕದಂಬರ ರಾಜಧಾನಿ ಬನವಾಸಿ, ಈಗಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

 

ಮಯೂರವರ್ಮನು ಈ ಸಂತತಿಯ ಸ್ಥಾಪಕ ಮತ್ತು ಶ್ರೇಷ್ಠನಾದ ರಾಜನು. ಪಲ್ಲವರಾಜ ಶಿವಸ್ಕಂದವರ್ಮನಿಂದ ಅಪಮಾನಗೊಂಡಾಗ ಮಯೂರಶರ್ಮ ತನ್ನ ವರ್ಣವನ್ನು ತ್ಯಜಿಸಿ ಕ್ಷತ್ರಿಯ ವರ್ಣ ಸ್ವೀಕರಿಸಿ ಮಯೂರವರ್ಮನಾದನು. ಪಲ್ಲವರನ್ನು ಸೋಲಿಸಿ ಕಾದಂಬರಾಜ್ಯ ಸ್ಥಾಪಿಸಿದನು. ಇವನು ಕನ್ನಡಿಗರ ಸ್ವಾಭಿಮಾನದ ಸಂಕೇತ.

ಕರ್ನಾಟಕ ಮತ್ತು ಭಾರತೀಯ ಸಂಸ್ಕøತಿಗೆ ಕದಂಬರ ಕೊಡುಗೆ ವೈಶಿಷ್ಟ್ಯಪೂರ್ಣವಾಗಿದೆ. ಕದಂಬರು ಆಳಿದ ಪ್ರದೇಶವು ಸುಮಾರು ಮೂರು ಶತಮಾನಗಳ ಕಾಲ ರಾಜಕೀಯ ಐಕ್ಯತೆಗೆ ಒಳಗಾಗಿತ್ತು.

ಆಡಳಿತದಲ್ಲಿ ಮಾಂಡಲಿಕರು, ರಾಜ ಪುರೋಹಿತರು, ಮಂತ್ರಿಗಳು, ಸೇನಾಧಿಪತಿಗಳು ಪ್ರಮುಖ ಪಾತ್ರವಹಿಸಿದ್ದರು. ಆಡಳಿತದ ಅನುಕೂಲಕ್ಕಾಗಿ ಪ್ರಾಂತಾಧಿಕಾರಿಗಳನ್ನು ಪ್ರಾಂತ್ಯವನ್ನು ನೋಡಿಕೊಳ್ಳುವಂತೆ ನೇಮಿಸುತ್ತಿದ್ದರು.

ಭೂಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು. ಬಡಗಿ, ಅಕ್ಕಸಾಲಿಗ, ಕಮ್ಮಾರ, ನೇಕಾರ, ಗಾಣಿಗ, ಕುಂಬಾರ ಮುಂತಾದ ಕಸುಬುಗಳು ಮುಖ್ಯವಾಗಿದ್ದವು.

 

ಚಿತ್ರದುರ್ಗದ ಚಂದ್ರವಳ್ಳಿಯ ಶಾಸನದ ಪ್ರಕಾರ ಮಯೂರವರ್ಮನು ಚಂದ್ರವಳ್ಳಿ ಕೆರೆಯ ಒಡ್ಡನ್ನು ಎತ್ತರಿಸಿದನೆಂದು ತಿಳಿದು ಬರುತ್ತದೆ.

 

ವ್ಯವಸಾಯ, ವ್ಯಾಪಾರಗಳಿಗೆ ಹೆಚ್ಚಿನ ಪ್ರೋತ್ಸಾಹವಿದ್ದಿತು. ಸಮಾಜದಲ್ಲಿ ಬಹುತೇಕ ಜನರು ವರ್ಣಾಶ್ರಮ ಧರ್ಮವನ್ನು ಪಾಲಿಸುತ್ತಿದ್ದರು. ಪಿತೃ ಪ್ರಧಾನವಾದ ಕುಟುಂಬ ಹಾಗೂ ಅವಿಭಕ್ತ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯವಿತ್ತು.

ಕದಂಬರು ವೈದಿಕ ಧರ್ಮಾನುಯಾಯಿ ಗಳಾದರೂ ಜೈನ ಮತ್ತು ಬೌದ್ಧಧರ್ಮ ಗಳನ್ನು ಪ್ರೋತ್ಸಾಹಿಸಿದರು. ಹಾನಗಲ್, ಪುಲಿಗೆರೆ ಮುಂತಾದ ಸ್ಥಳಗಳಲ್ಲಿ ಜೈನ ದೇವಾಲಯಗಳಿಗೆ ಮತ್ತು ವಿದ್ವಾಂಸರುಗಳಿಗೆ ದಾನದತ್ತಿಗಳನ್ನು ನೀಡಿ ಕರ್ನಾಟಕದಲ್ಲಿ ಜೈನ ಸಂಸ್ಕೃತಿಯು  ಹರಡಲು ಉತ್ತೇಜನ ನೀಡಿದರು.

ಕದಂಬರ ನಾಡಿನಲ್ಲಿ ಬೌದ್ಧ ಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದು ಎರಡು ಪ್ರಮುಖ ಕೇಂದ್ರಗಳಾದ ಅಜಂತ ಮತ್ತು ಬನವಾಸಿಯನ್ನು ಒಳಗೊಂಡಿತ್ತು. ದೇವಾಲಯಗಳು ಹಬ್ಬ, ಉತ್ಸವಗಳ ಕೇಂದ್ರವಾಗಿದ್ದವು. ಪ್ರಾಕೃತ-ಸಂಸ್ಕೃತ  ಭಾಷೆಗೆ ಪ್ರೋತ್ಸಾಹ ನೀಡಿದ್ದು, ಮೊದಲು ಪ್ರಾಕೃತ ನಂತರ ಸಂಸ್ಕೃತ  ರಾಜಭಾಷೆಯಾಯಿತು. ಕನ್ನಡವೂ ಜನರ ಭಾಷೆ ಆಗಿತ್ತು. ಅತ್ಯಂತ ಪ್ರಾಚೀನವಾದ ಹಲ್ಮಿಡಿ ಶಾಸನವು ಐದನೆಯ ಶತಮಾನದಲ್ಲಿ ರೂಢಿಯಲ್ಲಿದ್ದ ಕನ್ನಡ ಭಾಷೆಯ ಸ್ವರೂಪವನ್ನು ತೋರಿಸಿಕೊಡುತ್ತದೆ. ಇದೇ ಕನ್ನಡದಲ್ಲಿ ದೊರೆತ ಮೊದಲ ಶಾಸನವಾಗಿದೆ.

ಕರ್ನಾಟಕದಲ್ಲಿ ವಾಸ್ತುಶಿಲ್ಪ ಕಲೆಗೆ ತಳಹದಿಯನ್ನು ಕದಂಬರು ಹಾಕಿದರು. ಬನವಾಸಿಯಲ್ಲಿ ಅನೇಕ ದೇವಾಲಯಗಳನ್ನು ಮತ್ತು ಬಸದಿಗಳನ್ನು ನಿರ್ಮಿಸಿದರು. ಕದಂಬರ ಕಾಲದಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಅಭಿವೃದ್ಧಿಗೊಂಡು ಶಿಕ್ಷಣ ಕೇಂದ್ರಗಳಾದ ಅಗ್ರಹಾರಗಳು, ಬ್ರಹ್ಮಪುರಿಗಳು ಮತ್ತು ಘಟಿಕ ಸ್ಥಾನಗಳು ಸ್ಥಾಪನೆಗೊಂಡವು. ಆ ಕಾಲದ ಪ್ರಮುಖ ಅಗ್ರಹಾರಗಳು ತಾಳಗುಂದ ಮತ್ತು ಬಳ್ಳಿಗಾವೆಯಲ್ಲಿದ್ದವು. ಅಗ್ರಹಾರಗಳು ಗುರುಕುಲಗಳಾಗಿದ್ದು ವಸತಿ ಶಾಲೆಗಳಂತೆ ನಡೆಯುತ್ತಿದ್ದವು.

 

ಮಳವಳ್ಳಿ ಶಾಸನವು ಪ್ರಾಕೃತ ಭಾಷೆಯ ಪರಿಚಯ ನೀಡುತ್ತದೆ. ತಾಳಗುಂದ ಶಾಸನವು ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕೃತ  ಶಾಸನವಾಗಿದೆ.

 

You may also like...