ಕನ್ನಡ ಕವಿಗಳು – ರನ್ನ

ಕನ್ನಡದ ರತ್ನತ್ರಯರಲ್ಲಿ

ಒಬ್ಬನೆಂದೂ, ಕವಿಚಿಕ್ರವರ್ತಿಯೆಂದೂ ಪರಿಗಣಿತನಾದ ಮಹಾಕವಿ ರನ್ನನ ಪ್ರಸಿದ್ದಿ

ನೆಲೆನಿಂತಿರುವುದು ‘ಸಾಹಸಭೀಮವಿಜಯ‘ ಎಂಬ ಕೃತಿಯಿಂದಲೆ ಎನ್ನಬಹುದು.

ರನ್ನ ಕವಿಯು ತನ್ನ ರಚನೆಗಳಾದ ‘ಅಜಿತಪುರಾಣ’ ದಲ್ಲಿಯೂ “ಗದಾಯುದ್ಧ’ದಲ್ಲಿಯೂ ತಿಳಿಸಿರುವ ಅಂಶಗಳನ್ನು ಕ್ರೋಡೀಕರಿಸಿ ನಾವು ಅವನ ಜೀವನವನ್ನು ಹೀಗೆ ಚಿತ್ರಿಸಿಕೊಳ್ಳಬಹುದು.

ಈಗ ಮುಧೋಳವೆಂದು ಹೆಸರಾದ ಮುದುವೊಳಲು ಎಂಬ ಊರಲ್ಲಿದ್ದ ಜಿನವಲ್ಲಭನೆಂದ ಬಳೆಗಾರನಿಗೆ ಮೂರನೆಯ ಮಗನಾಗಿ ಶಕ 871 ಅಂದರೆ ಕ್ರಿ.ಶ.949 ಹತ್ತನೆಯ ಶತಮಾನದ ಸೌಮ್ಯ ಸಂವತ್ಸರದಲ್ಲಿ ರನ್ನಕವಿ ಹುಟ್ಟಿದನು.

ಬಾಲ್ಯದಿಂದಲೂ ಈತನು ತೀವ್ರ ವಿದ್ಯಾಕಾಂಕ್ಷೆಯ ತುಡಿತದಿಂದ ಶ್ರವಣಬೆಳ್ಗೊಳದಲ್ಲಿ ತಾತ್ಕಾಲಿಕವಾಗಿ ನೆಲೆ ನಿಲ್ಲುತ್ತಾನೆ.

‘ದಾನಚಿಂತಾಮಣಿ’ ಬಿರುದಾಂಕಿತ ಅತ್ತಿಮಬ್ಬೆಯ ಪ್ರೋತ್ಸಾಹ ದೊರಕಿತು. ಅಜಿತಸೇನಾಚಾರ್ಯರಿಂದ ವಿದ್ಯೆ ಸಂಪಾದಿಸಿದನು. ಮೊದಲು ಗಂಗರ ಮಂತ್ರಿ ಚಾವುಂಡರಾಯನ ಆಶ್ರಯ ಪಡೆಯುತ್ತಾನೆ. ಗಂಗರ ಪತನಾನಂತರ ಚಾಲುಕ್ಯದೊರೆ ತೈಲಪ ಹಾಗೂ ಸತ್ಯಾಶ್ರಯ ಇರಿವಬೆಡಂಗ(ಬದ್ದೆಗ)ನ ಆಸ್ಥಾನ ಕವಿಯಾಗಿದ್ದನು.

ಹೀಗೆ ತನ್ನ ಕವಿತ್ವ ಪಾಂಡಿತ್ಯಗಳೆರಡರಿಂದಲೂ ಉಭಯ ಕವಿಯೆಂದು ಪ್ರಸಿದ್ಧವಾಗಿ, ಸಾಮಂತರಾಜರಲ್ಲಿಯೂ, ಮಂಡಲೇಶ್ವರರಲ್ಲಿಯೂ ಆಶ್ರಯ ಪಡೆದು, ಕ್ರಮೇಣ ಅಭಿವೃದ್ಧಿ ಹೊಂದುತ್ತ, ಚಾಲುಕ್ಕ ಚಕ್ರವರ್ತಿ ತೈಲಪನ ಆಸ್ಥಾನದಲ್ಲಿ ಕವಿಚಕ್ರವರ್ತಿಯೆಂಬ ಬಿರುದನ್ನು ಪಡೆದನು. ಕವಿ ಕವಿರಾಜಶೇಖರ, ಕವಿಮುಖಚಂದ್ರ, ಕವಿರಾಜ, ಕವಿಜನಚೂಡಾರತ್ತ, ಕವಿತಿಲಕ, ಕವಿಚತುರ್ಮುಖ ಎಂಬ ಬಿರುದುಗಳನ್ನು ಹೇಳಿಕೊಂಡಿದ್ದಾನೆ. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡಿರು. ರಾಯ ಎಂಬ ಮಗನೂ ಅತ್ತಿಮಬ್ಬೆ ಎಂಬ ಮಗಳೂ ಇದ್ದರು.

ದಾನ ಚಿಂತಾಮಣಿ ಅತ್ತಿಮಬ್ಬೆಯು ಇವನಿಂದ ಅಜಿತ ತೀರ್ಥಂಕರ ಪುರಾಣವನ್ನು ಬರೆಯಿಸಿದಳು. ಪರಶುರಾಮ ಚರಿತ ಹಾಗೂ ಚಕ್ರೇಶ್ವರ ಚರಿತವೆಂಬ ಇನ್ನೆರಡು ಕೃತಿಗಳನ್ನು ರಚಿಸಿದ್ದೇನೆಂದು ರನ್ನನು ಹೇಳಿದ್ದಾನೆ. ಆದರೆ ಅವೆರಡೂ ಈವರೆಗೆ ದೊರೆತಿಲ್ಲ. ನಿಘಂಟಿನಂತೆ ರಚಿತವಾದ ರನ್ನಕಂದವೆಂಬ ಅಸಮಗ್ರ ಕೃತಿಯೊಂದು ಲಭ್ಯವಾಗಿದೆ. ಅದು ಈ ರನ್ನ ಕವಿಯಂದಲೆ ರಚಿತವಾಯಿತೊ ಇಲ್ಲವೊ ಎಂಬುದು ನಿರ್ಣಯವಾಗಿಲ್ಲ.

ಸಾಹಸ ಭೀಮ ವಿಜಯಂ’ ಅಥವಾ ‘ಗದಾಯುದ್ಧ’ ಇವನ ಒಂದು ಪ್ರಮುಖ ಹಾಗು ಪ್ರಸಿದ್ಧ ಗ್ರಂಥ. ಚಂಪೂ ಶೈಲಿಯ ಕೃತಿಗಳಲ್ಲೊಂದಾದ ‘ಸಾಹಸಭೀಮ ವಿಜಯಂ’ದಲ್ಲಿ ರನ್ನನು, ಪಂಪ ಕವಿಯು ಅರಿಕೇಸರಿಯನ್ನು ಸಮೀಕರಿಸಿ ಕಾವ್ಯ ರಚಿಸಿದಂತೆ, ‘ಸಾಹಸಭೀಮ’ ಬಿರುದಾಂಕಿತ ಇರಿವಬೆಡಂಗ ಸತ್ಯಾಶ್ರಯನನ್ನು ಭೀಮನೊಂದಿಗೆ ಸಮೀಕರಿಸಿದ್ದಾನೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ದೃಶ್ಯವೇ ಮುಖ್ಯ ಕಥಾವಸ್ತುವಾದರೂ, ಇಡೀ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸಿದ್ದಾನೆ. ಇವನ ಇಡೀ ಕಾವ್ಯದಲ್ಲಿ ನಾಟಕೀಯ ಶೈಲಿಯನ್ನು ಕಾಣಬಹುದು.

ಇವನಿಗೆ ತೈಲಪನು ‘ಕವಿಚಕ್ರವರ್ತಿ’ ಎಂಬ ಬಿರುದನ್ನು ಕೊಟ್ಟನು. ಈತನು ಕನ್ನಡದ ರತ್ನತ್ರಯರಲ್ಲಿ ಒಬ್ಬನು.

Spread the Knowledge

You may also like...

Leave a Reply

Your email address will not be published. Required fields are marked *