ಕನ್ನಡ ವ್ಯಾಕರಣ – ವರ್ಣಮಾಲೆ
ಭಾಷೆ
ಭಾಷೆ ಒಂದು ಸಂವಹನ ಮಾಧ್ಯಮ. ಅದು ಮಾತು ಮತ್ತು ಬರಹ ರೂಪದಲ್ಲಿ ಅಭಿವ್ಯಕ್ತವಾಗುತ್ತದೆ.
ಮಾತು ಅಮೂರ್ತ ರೂಪ, ಬರಹ ಮೂರ್ತರೂಪ. ಇದನ್ನು ಶ್ರವಣ, ಚಾಕ್ಷುಷ ಎಂದು ಪರಿಗಣಿಸಲಾಗಿದೆ. ಮಾತಿನ ಸಾಂಕೇತಿಕ ರೂಪವೇ ಬರಹ.
ಭಾಷೆ ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಮತ್ತು ವಿಚಾರ ವಿನಿಮಯ ಮಾಡುವುದಕ್ಕೆ ಒಂದು ಅಮೂಲ್ಯ ಸಾಧನ. ಪ್ರಪಂಚದಲ್ಲಿ ಸಾವಿರಾರು ಭಾಷೆಗಳು ಇವೆ ಎಂದು ತಿಳಿದು ಬಂದಿದೆ.
ಇವುಗಳಲ್ಲಿ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು, ಕರ್ನಾಟಕದ ಮಾತೃಭಾಷೆಯಾಗಿದೆ. ಕರ್ನಾಟಕ ರಾಜ್ಯದ ಜನರ ವ್ಯವಹಾರ ಭಾಷೆಯೂ ಆಗಿದೆ.
ನಾವು ಬರಹದ ಮೂಲಕ ಕನ್ನಡ ಭಾಷೆಯನ್ನು ತಿಳಿಯಬೇಕಾದರೆ. ಲಿಪಿಯ ರೂಪದಲ್ಲಿರುವ ವರ್ಣಮಾಲೆಯನ್ನು ತಿಳಿಯಬೇಕಾಗುತ್ತದೆ.
ಕನ್ನಡ ವರ್ಣಮಾಲೆ (ಒಟ್ಟು 49 ಅಕ್ಷರಗಳು)
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಈ ಅಕ್ಷರಗಳನ್ನು ವರ್ಣಗಳೆಂದು ಕರೆಯುತ್ತಾರೆ.
ಈ ಅಕ್ಷರಗಳ/ವರ್ಣಗಳ ಕ್ರಮಬದ್ಧ ಜೋಡಣೆಗೆ ‘ವರ್ಣಮಾಲೆ’ ಅಥವಾ ‘ಅಕ್ಷರಮಾಲೆ’ ಎಂದು ಹೆಸರು.
ನಾನು ಶಾಲೆಗೆ ಹೋಗಿ ಬಂದೆನು ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬಂದೆನು ನಾಲ್ಕು ಅರ್ಥಪೂರ್ಣ ಪದಗಳಿವೆ. ಒಂದೊಂದು ಪದದಲ್ಲಿಯೂ ಬೇರೆ ಬೇರೆ ಅಕ್ಷರಗಳಿವೆ.
ಉದಾ:
- ನಾನು ಪದದಲ್ಲಿ ನ್ ಆ ನ್ ಉ ಎಂಬ ನಾಲ್ಕು ಅಕ್ಷರಗಳಿವೆ.
- ಬಂದೆನು ಪದದಲ್ಲಿ ಬ್ ಅ ನ್ ದ್ ಎ ನ್ ಉ ಎಂಬ ಏಳು ಅಕ್ಷರಗಳಿವೆ.
ಈ ಎರಡು ಪದಗಳಲ್ಲಿರುವ ನ್ ಬ್ ದ್ ಎಂಬ ಅಕ್ಷರಗಳನ್ನು ಉಚ್ಚರಿಸುವಾಗ ಧ್ವನ್ಯಂಗದ ಅಡೆತಡೆಯೊಂದಿಗೆ ಉಚ್ಚರಿಸಬೇಕಾಗುತ್ತದೆ. ಇವೇ ವ್ಯಂಜನಾಕ್ಷರಗಳು.
ಆ ಅಕ್ಷರಗಳ ಹಿಂದೆ ಅಥವಾ ಮುಂದೆ ಆ ಉ ಎ ಮುಂತಾದವು ಧ್ವನ್ಯಂಗದ ಅಡೆತಡೆ ಇಲ್ಲದೆ ಉಚ್ಚರಿಸಬಹುದಾದ ಅಕ್ಷರಗಳಿವೆ. ಇವೇ ಸ್ವರಾಕ್ಷರಗಳು. ಇವು ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು.
ಹಾಗೆಯೇ ಬಂದೆನು ಎಂಬ ಪದದಲ್ಲಿರುವ ಂ ಎಂಬ ಅಕ್ಷರವನ್ನು ಉಚ್ಚರಿಸಲು ಆಗುವುದಿಲ್ಲ. ಇದರ ಹಿಂದೆ ಸ್ವರಾಕ್ಷರಗಳು ಬಂದಾಗ ಮಾತ್ರ ಉಚ್ಚರಿಸಬಹುದು. ಇದೇ ಯೋಗವಾಹ.
ಕನ್ನಡ ವರ್ಣಮಾಲೆಯನ್ನು ಪ್ರಧಾನವಾಗಿ ಸ್ವರ, ವ್ಯಂಜನ ಮತ್ತು ಯೋಗವಾಹ ಎಂಬ ಮೂರು ವಿಭಾಗ ಮಾಡಲಾಗಿದೆ.
- ಸ್ವರಗಳು (13 ಸ್ವರಗಳು)
- ಯೋಗವಾಹಗಳು (2 ಯೋಗವಾಹಗಳು) ಹಾಗೂ
- ವ್ಯಂಜನಗಳು (34 ವ್ಯಂಜನಗಳು)
ಸ್ವರಗಳು
ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.
ಸ್ವರಾಕ್ಷರಗಳು – ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಒಟ್ಟು ಸ್ವರಗಳ ಸಂಖ್ಯೆ 13.
ಸ್ವರಗಳನ್ನು ಹ್ರಸ್ವ ಸ್ವರ, ದೀರ್ಘ ಸ್ವರ ಮತ್ತು ಪ್ಲುತ ಸ್ವರವೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
1) ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹೃಸ್ವ ಸ್ವರಗಳು ಎನ್ನುವರು.
2) ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ದೀರ್ಘಸ್ವರಗಳು ಎನ್ನುವರು.
3) ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚುಕಾಲ ಎಳೆದು ಉಚ್ಚರಿಸಲ್ಪಡುವ ಸ್ವರಗಳೆಲ್ಲ ಪ್ಲುತ ಸ್ವರಗಳೆನಿಸುವುವು. ಸಂಬೋಧನೆ, ನಿರ್ದೇಶನ, ತೀವ್ರಭಾವನೆಗಳನ್ನು ವ್ಯಕ್ತಪಡಿಸುವಾಗ ಹಾಗೂ ಸಂಗೀತದದಲ್ಲಿ ಸ್ವರಗಳನ್ನು ಎಳೆದು ಹಾಡುವಾಗ ಪ್ಲುತ ಸ್ವರಗಳನ್ನು ಬಳಸುತ್ತಾರೆ.
ಯೋಗವಾಹಗಳು: (ಒಟ್ಟು 2 ಅಕ್ಷರಗಳಿವೆ)
‘ಯೋಗವಾಹ’ ಎಂದರೆ ಕೂಡಿಹೋಗು ಎಂದರ್ಥ.
ಯಾವುದಾದರೊಂದು ಅಕ್ಷರದ ಸಂಬಂಧದಿಂದ ಮಾತ್ರವೇ ಉಚ್ಚರಿಸಲಾಗುವ ಅಕ್ಷರಗಳೇ ಯೋಗವಾಹಗಳು.
ಅವುಗಳೆಂದರೆ:
೧. ಅನುಸ್ವಾರ – ಅಂ (ಂ)
೨. ವಿಸರ್ಗ – ಅಃ (ಃ)
ಅನುಸ್ವಾರ ವಿಸರ್ಗಗಳೆರಡೂ ಇರುವ ಪದಕ್ಕೆ ಉದಾಹರಣೆ: ತೇಜಃಪುಂಜ, ಅಂತಃಕರಣ.
ವ್ಯಂಜನಗಳು
ಸ್ವರಗಳ ಸಹಾಯದಿಂದ ಮಾತ್ರ ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುವ ಅಕ್ಷರಗಳ ಗುಂಪಿಗೆ ‘ವ್ಯಂಜನಗಳು’ ಎಂದು ಕರೆಯಲಾಗುತ್ತದೆ.
ವರ್ಣಮಾಲೆಯಲ್ಲಿ ಕ ಯಿಂದ ಳ ವರೆಗೆ ಒಟ್ಟು 34 ಅಕ್ಷರಗಳಿದ್ದು, ಇವುಗಳನ್ನು ವ್ಯಂಜನಗಳು ಎನ್ನುತ್ತಾರೆ.
ಇವುಗಳನ್ನು ‘ವರ್ಗೀಯ ವ್ಯಂಜನಗಳು’ ಮತ್ತು ‘ಅವರ್ಗೀಯ ವ್ಯಂಜನಗಳು’ ಎಂದು ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ.
ವರ್ಗೀಯ ವ್ಯಂಜನಗಳು – (ಒಟ್ಟು 25 ಅಕ್ಷರಗಳಿವೆ)
‘ಕ್’ ಕಾರದಿಂದ ‘ಳ್’ ಕಾರದವರೆಗಿನ 34 ವ್ಯಂಜನಗಳಲ್ಲಿ ಮೊದಲಿನ 25 ವ್ಯಂಜನಗಳನ್ನು (‘ಕ್ ಕಾರದಿಂದ ‘ಮ್’ ಕಾರದವರೆಗೆ) ಐದೈದರ ಐದು ವರ್ಗಗಳನ್ನಾಗಿ ಬರೆಯುತ್ತೇವೆ. ಆದ್ದರಿಂದ ಇವನ್ನು ‘ವರ್ಗೀಯ ವ್ಯಂಜನಗಳು’ ಎಂದು ಕರೆಯುತ್ತೇವೆ.
ಕೊಟ್ಟಿರುವ ಕ್ ದಿಂದ ಮ್ ವರೆಗಿನ ೨೫ ಅಕ್ಷರಗಳನ್ನು ಉಚ್ಚರಿಸುವಾಗ ಅವು ಹುಟ್ಟುವ ಸ್ಥಳವನ್ನು ಆಧರಿಸಿ ಅವನ್ನು ೫ ವರ್ಗಗಳಾಗಿ ವಿಂಗಡಿಸಲಾಗಿದೆ. ಅವೇ ವರ್ಗೀಯ ವ್ಯಂಜನಗಳು. ಅವು ಇಂತಿವೆ:
- ಕವರ್ಗದ ಅಕ್ಷರಗಳು ಕಂಠಭಾಗದಲ್ಲಿ ಹುಟ್ಟುವುದರಿಂದ ಅವು ಕಂಠ್ಯ ಅಕ್ಷರಗಳು.
- ಚವರ್ಗದ ಅಕ್ಷರಗಳು ತಾಲುವಿನ (ದವಡೆಯ) ಸಹಾಯದಿಂದ ಹುಟ್ಟುವುದರಿಂದ ಅವು ತಾಲವ್ಯ ಅಕ್ಷರಗಳು.
- ಟವರ್ಗದ ಅಕ್ಷರಗಳು ಮೂರ್ಧಭಾಗದಲ್ಲಿ ಅಂದರೆ ನಾಲಿಗೆಯನ್ನು ಹಿಂದೆ ಚಾಚಿ ಬಾಯಿಯ ಮೇಲ್ಭಾಗವನ್ನು ಸ್ಪರ್ಶಿಸಿದಾಗ ಉಚ್ಚಾರಗೊಳ್ಳುವುದರಿಂದ ಅವು ಮೂರ್ಧನ್ಯ ಅಕ್ಷರಗಳು.
- ತವರ್ಗದ ಅಕ್ಷರಗಳು ಹಲ್ಲುಗಳ ಬಳಿ ಹುಟ್ಟುವುದರಿಂದ ಅವು ದಂತ್ಯ ಅಕ್ಷರಗಳು.
- ಪವರ್ಗದ ಅಕ್ಷರಗಳು ತುಟಿಗಳ ಸಹಾಯದಿಂದ ಉಚ್ಚರಿಸಲ್ಪಡುವುದರಿಂದ ಅವು ಓಷ್ಠಯಾ ಅಕ್ಷರಗಳು.
ಈ ವರ್ಗೀಯ ವ್ಯಂಜನಗಳನ್ನು ಅಲ್ಪಪ್ರಾಣ, ಮಹಾಪ್ರಾಣ ಮತ್ತು ಅನುನಾಸಿಕ ಅಕ್ಷರಗಳೆಂದು ವಿಭಾಗಿಸಲಾಗಿದೆ.
ಪ್ರಾಣ ಎಂದರೆ ಉಸಿರು ಎಂದರ್ಥ.
ಕಡಿಮೆ ಪ್ರಾಣದಿಂದ (ಉಸಿರಿನಿಂದ) ಉಚ್ಚರಿಸಲ್ಪಡುವ ಕ್ ಚ್ ಟ್ ತ್ ಪ್ ಗ್ ಜ್ ಡ್ ದ್ ಬ್ ಅಕ್ಷರಗಳು ಅಂದರೆ ಪ್ರತಿ ವರ್ಗದ ಒಂದು ಮತ್ತು ಮೂರನೆಯ ಅಕ್ಷರಗಳು ಅಲ್ಪಪ್ರಾಣ ಅಕ್ಷರಗಳು.
ಹೆಚ್ಚು ಪ್ರಾಣದಿಂದ (ಉಸಿರು) ಉಚ್ಚರಿಸಲ್ಪಡುವ ಖ್ ಛ್ ಠ್ ಥ್ ಫ್ ಘ್ ಝ್ ಢ್ ಧ್ ಭ್ ಅಕ್ಷರಗಳು ಅಂದರೆ ಪ್ರತಿ ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳು ಮಹಾಪ್ರಾಣ ಅಕ್ಷರಗಳು.
ಮೂಗಿನ (ನಾಸಿಕದ) ಸಹಾಯದಿಂದ ಉಚ್ಚರಿಸಲ್ಪಡುವ ಙ್ ಞ್ ಣ್ ನ್ ಮ್ ಅಕ್ಷರಗಳು ಅಂದರೆ ವರ್ಗದ ಕೊನೆಯ ಅಕ್ಷರಗಳು ಅನುನಾಸಿಕ ಅಕ್ಷರಗಳು.
ಉಳಿದ ಒಂಬತ್ತು ಅಕ್ಷರಗಳು (ಯ್ ದಿಂದ ಳ್ ವರೆಗಿನ) ಬೇರೆ ಬೇರೆ ಸ್ಥಳಗಳಲ್ಲಿ ಹುಟ್ಟುವುದರಿಂದ ವರ್ಗಗಳಾಗಿ ವಿಂಗಡಿಸಲು ಸಾಧ್ಯವಿಲ್ಲ. ಹಾಗಾಗಿ ಅವು ಅವರ್ಗೀಯ ವ್ಯಂಜನಗಳು.
ಈ ವರ್ಗೀಯ ವ್ಯಂಜನಗಳಲ್ಲಿ ‘ಅಲ್ಪಪ್ರಾಣ’, ‘ಮಹಾಪ್ರಾಣ’ ಮತ್ತು ‘ಅನುನಾಸಿಕ’ ಎಂಬ ಮೂರು ರೀತಿಯ ಅಕ್ಷರಗಳಿವೆ.
ಅಲ್ಪ ಪ್ರಾಣಾಕ್ಷರಗಳು(ಒಟ್ಟು 10 ಅಕ್ಷರಗಳಿವೆ):
ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸುವ ಪ್ರತಿಯೊಂದು ವರ್ಗದ 1 ಮತ್ತು 3 ನೆಯ ವ್ಯಂಜನಗಳೇ ಅಲ್ಪಪ್ರಾಣಗಳು.
ಅವುಗಳೆಂದರೆ : ಕ್, ಚ್, ಟ್, ತ್, ಪ್
ಗ್, ಜ್, ಡ್, ದ್, ಬ್
ಮಹಾ ಪ್ರಾಣಾಕ್ಷರಗಳು(ಒಟ್ಟು 10 ಅಕ್ಷರಗಳಿವೆ):
ಹೆಚ್ಚು ಉಸಿರಿನಿಂದ ಉಚ್ಚರಿಸುವ ಪ್ರತಿಯೊಂದು ವರ್ಗದ 2 ಮತ್ತು 4ನೆಯ ವ್ಯಂಜನಗಳು ಮಹಾಪ್ರಾಣಗಳು.
ಅವುಗಳೆಂದರೆ: ಖ್, ಛ್, ಠ್, ಥ್, ಫ್
ಘ್, ಝ್, ಢ್, ಧ್, ಭ್
ಅನುನಾಸಿಕಾಕ್ಷರಗಳು (ಒಟ್ಟು 5 ಅಕ್ಷರಗಳಿವೆ):
ಮೂಗಿನ
ಸಹಾಯದಿಂದ ಉಚ್ಚರಿಸುವ ಪ್ರತಿಯೊಂದು ವರ್ಗದ 5ನೆಯ ವ್ಯಂಜನವು ಅನುನಾಸಿಕ ಎನಿಸುವುದು.
ಅವುಗಳೆಂದರೆ: ಙ್, ಞ್, ಣ್, ನ್, ಮ್
ಅವರ್ಗೀಯವ್ಯಂಜನಗಳು – (ಒಟ್ಟು 9 ಅಕ್ಷರಗಳಿವೆ)
‘ಯ್’ಕಾರ ದಿಂದ ‘ಳ್’ಕಾರದವರೆಗಿರುವ 9 ವ್ಯಂಜನಗಳನ್ನು ಯಾವುದೇ, ರೀತಿ ವರ್ಗೀಕರಿಸಲು ಆಗುವುದಿಲ್ಲವಾದ್ದರಿಂದ ಅವುಗಳನ್ನು ಅವರ್ಗೀಯ ವ್ಯಂಜನಗಳು ಎನ್ನುವರು.
ಯ್, ರ್, ಲ್, ವ್, ಶ್, ಷ್, ಸ್, ಹ್, ಳ್ ಇವು ಒಂಬತ್ತು ‘ಅವರ್ಗೀಯ’ ವ್ಯಂಜನಗಳಾಗಿವೆ.
ಗುಣಿತಾಕ್ಷರಗಳು
ದ್ ವ್ ರ್ ವ್ಯಂಜನಾಕ್ಷರಗಳನ್ನು ಸೇರಿಸಿ ಬರೆದರೆ ಪದ ರಚನೆಯಾಗುವುದಿಲ್ಲ.
ಅದರ ಬದಲಿಗೆ ದ್ + ಏ = ದೇ , ವ್ + ಅ = ವ, ರ್ + ಉ = ರು ಈ ರೀತಿ ಸ್ವರಾಕ್ಷರಗಳನ್ನು ಸೇರಿಸಿ ಬರೆದರೆ ಅರ್ಥಪೂರ್ಣವಾದ ದೇವರು ಎಂಬ ಪದ ರಚನೆ ಆಗುತ್ತದೆ.
ಹೀಗೆ ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರವೇ ಗುಣಿತಾಕ್ಷರ.
ಒಂದು ವ್ಯಂಜನಕ್ಕೆ ಆ ದಿಂದ ಔ ವರೆಗಿನ 13 ಸ್ವರಗಳು ಸೇರಿದರೆ 13 ಗುಣಿತಾಕ್ಷರಗಳಾಗುತ್ತವೆ. 34 ವ್ಯಂಜನಗಳಿಗೆ ತಲಾ 13 ಸ್ವರಾಕ್ಷರಗಳನ್ನು ¸ 442 ಗುಣಿತಾಕ್ಷರಗಳನ್ನುರಚಿಸಬಹುದು.
ಅದೇ ರೀತಿ ಯೋಗವಾಹಗಳನ್ನು ಸೇರಿಸಿ ಗುಣಿತಾಕ್ಷರಗಳನ್ನು ಮಾಡಬಹುದು.
ಗುಣಿತಾಕ್ಷರಗಳನ್ನು ‘ಬಳ್ಳಿ’ ಎಂದೂ ಕರೆಯುತ್ತಾರೆ.
ಉದಾ : ಕ್+ಅ= ಕ ; ಕ್+ಆ=ಕಾ ; ಯ್+ಉ=ಯು ಇತ್ಯಾದಿ.
ಸಂಯುಕ್ತಾಕ್ಷರಗಳು (ಒತ್ತಕ್ಷರಗಳು)
ಅಪ್ಪ ಅಮ್ಮ ಅಕ್ಷರ ಅಸ್ತ್ರ ಮುಂತಾದ ಪದಗಳನ್ನು ಬಳಸುತ್ತೇವೆ. ಅಪ್ಪ ಪದದಲ್ಲಿ ಅ ಪ್ ಪ್ ಅ ಎಂಬ ನಾಲ್ಕು ಅಕ್ಷರಗಳಿವೆ.
ಮೇಲ್ನೋಟಕ್ಕೆ ಎರಡೇ ಅಕ್ಷರಗಳು ಕಾಣುತ್ತವೆ. ಮೊದಲ ಅಕ್ಷರ ಸ್ವರಾಕ್ಷರ , ಎರಡನೆಯ ಅಕ್ಷರದಲ್ಲಿ ಪ್ ಪ್ ಅ ಎಂಬ ಮೂರೂ ಅಕ್ಷರಗಳಿವೆ.
ಅವುಗಳಲ್ಲಿ ಎರಡು ವ್ಯಂಜನಗಳು ಮತ್ತು ಒಂದು ಸ್ವರಾಕ್ಷರ.
ಅದೇ ರೀತಿ ಅಸ್ತ್ರ ಪದದಲ್ಲಿ ಅ ಸ್ ತ್ ರ್ ಅ ಎಂಬ ಐದು ಅಕ್ಷರಗಳಿವೆ. ಈ ಪದದ ಎರಡನೆಯ ಅಕ್ಷರ ಸ್ತ್ರ ದಲ್ಲಿ ಮೂರು ವ್ಯಂಜನ ಮತ್ತು ಒಂದು ಸ್ವರಾಕ್ಷರವಿದೆ.
ಇದನ್ನು ದ್ವಿತ್ವಾಕ್ಷರ/ ಒತ್ತಕ್ಷರ ಎಂತಲೂ ಕರೆಯುವರು.
‘ಸಂಯುಕ್ತ’ ಎಂದರೆ ಚೆನ್ನಾಗಿ ಸೇರಿಸಿದ ಎಂದು ಅರ್ಥ. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳು ಕಾಲ ವಿಳಂಬವಿಲ್ಲದೆ ಒಂದು ಸ್ವರದ ಜೊತೆ ಸೇರಿ ಆಗುವುದೇ ಸಂಯುಕ್ತಾಕ್ಷರ. (ಸಂ=ಚೆನ್ನಾಗಿ), (ಯುಕ್ತ=ಸೇರಿದ) ಎರಡನೆಯ ಮತ್ತು ಮೂರನೆಯ ವ್ಯಂಜನಗಳನ್ನು ಒತ್ತುಗಳಾಗಿ (ವ್ಯಂಜನ ಸಂಜ್ಞೆ) ಬರೆಯುತ್ತೇವೆ. ಸಂಯುಕ್ತಾಕ್ಷರಗಳನ್ನು ಒತ್ತಕ್ಷರಗಳೆಂದೂ ಕರೆಯುತ್ತಾರೆ.
ಸಂಯುಕ್ತಾಕ್ಷರದಲ್ಲಿ ಸಜಾತೀಯ ಹಾಗೂ ವಿಜಾತೀಯ ಎಂಬೆರಡು ವಿಧಗಳಿವೆ.
ಸಜಾತೀಯ ಸಂಯುಕ್ತಕ್ಷರ:
ಅಪ್ಪ, ಅಮ್ಮ, ಲೆಕ್ಕ, ಕಗ್ಗ ಪದಗಳನ್ನು ಗಮನಿಸಿದಾಗ ಇಲ್ಲಿರುವ ಪ್ರತಿಯೊಂದು ಸಂಯುಕ್ತಾಕ್ಷರದಲ್ಲೂ ಆಯಾ ಜಾತಿಯ ಎರಡೆರಡು ವ್ಯಂಜನಗಳಿವೆ.
ಹೀಗೆ – ಒಂದೇ ಜಾತಿಯ ಎರಡು ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ಸಜಾತೀಯ ಸಂಯುಕ್ತಾಕ್ಷರ.
ಉದಾಹರಣೆ: ಕ್ಕ, ಗ್ಗೆ, ಯ್ಯೋ, ಮ್ಮಿ, ಲ್ಲಿ, ರ‍್ರ ಮುಂತಾದವು.
ಕ್+ಕ್+ಅ, ಗ್+ಗ್+ಎ, ಯ್+ಯ್+ಓ, ಮ್+ಮ್+ಇ, ಲ್+ಲ್+ಇ, ರ್+ರ್+ಅ ಮುಂತಾದವು
ವಿಜಾತೀಯ ಸಂಯುಕ್ತಕ್ಷರ:
ಅಷ್ಟ, ಆರ್ಯ, ಅಸ್ತ್ರ ಪದಗಳಲ್ಲಿರುವ ಪ್ರತಿಯೊಂದು ಸಂಯುಕ್ತಾಕ್ಷರದಲ್ಲೂ ಬೇರೆ ಬೇರೆ ಜಾತಿಯ ವ್ಯಂಜನಗಳಿವೆ.
ಹೀಗೆ – ಬೇರೆ ಬೇರೆ ಜಾತಿಯ ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ವಿಜಾತೀಯ ಸಂಯುಕ್ತಾಕ್ಷರ.
ಉದಾಹರಣೆ: ಕ್ಷ, ರ್ಯ, ಗ್ನಿ, ಸ್ತ್ರೀ, ತ್ರ್ಯಾ ಮುಂತಾದವು.
ಕ್+ಷ್+ಅ, ರ್+ಯ್+ಅ, ಗ್+ನ್+ಇ, ಸ್+ತ್+ಈ, ತ್+ರ್+ಯ್+ಆ ಮುಂತಾದವು.
ಕನ್ನಡ ಅಂಕಿಗಳು
ಭಾರತೀಯ ಭಾಷೆಗಳಲ್ಲಿ ಬಹುತೇಕ ಭಾಷೆಗಳು ಸ್ವಂತ ಅಂಕಿಗಳನ್ನು ಹೊಂದಿವೆ.
೧, ೨, ೩, ೪, ೫, ೬, ೭, ೮, ೯, ೧೦ ಇತ್ಯಾದಿಗಳು ಕನ್ನಡದ ಅಂಕಿಗಳು.
ಹಾಗೆಯೇ ಕಾಲು, ಅರ್ಧ, ಮುಕ್ಕಾಲು ಎಂಬುದನ್ನು ಸೂಚಿಸಲೂ ಕನ್ನಡದಲ್ಲಿ ಪ್ರತ್ಯೇಕ ಸಂಕೇತಗಳಿವೆ.