ಬಾದಾಮಿಯ ಚಾಳುಕ್ಯರು (ಸಾಶ. 540 – 753)

ಬಾದಾಮಿಯ ಚಾಳುಕ್ಯರು (ಸಾಶ. 540 – 753)

 

ಸಾ.ಶ. 6ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಮಹಾನ್ ಶಕ್ತಿಶಾಲಿ ರಾಜರುಗಳು ಆಳಿದರು. ಅವರೇ ಬಾದಾಮಿಯ ಚಾಳುಕ್ಯರು.

 

ಕರ್ನಾಟಕದಲ್ಲಿ ತಮ್ಮ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಿ ಸುಮಾರು ಎರಡು ಶತಮಾನಗಳ ಕಾಲ ಅವಿಚ್ಛಿನ್ನವಾಗಿ, ಅಪಾರ ವೈಭವದಿಂದ ರಾಜ್ಯಭಾರ ಮಾಡಿದರು. ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಚಾಳುಕ್ಯ ರಾಜ ಮನೆತನವು ಭಾರತದ ಪ್ರಬಲ ರಾಜಮನೆತನಗಳಲ್ಲೊಂದು.

ಚಾಳುಕ್ಯರ ಆಳ್ವಿಕೆ ಆರನೆಯ ಶತಮಾನದಿಂದ ಆರಂಭಗೊಂಡು ಎಂಟನೆಯ ಶತಮಾನದ ಮಧ್ಯಭಾಗದಲ್ಲಿ ಕೊನೆಗೊಂಡಿತು.

ರಾಜಾ ಜಯಸಿಂಹನು ಈ ವಂಶದ ಸಂಸ್ಥಾಪಕನು.

ಈ ರಾಜವಂಶದ ಅತ್ಯಂತ ಶಕ್ತಿಶಾಲಿ ಮತ್ತು ಹೆಸರಾಂತ ಚಕ್ರವರ್ತಿಯೆಂದರೆ ಇಮ್ಮಡಿ ಪುಲಿಕೇಶಿ.

ಗಂಗರು, ಕದಂಬರು ಮತ್ತು ಅಳುಪರನ್ನು ಗೆದ್ದು, ಈತನು ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿದನು.

ದಕ್ಷಿಣ ದಖ್ಖನ್ನಿನಲ್ಲಿ ಪಲ್ಲವರು ತಮ್ಮ ವೈಭವ ಕಾಲದಲ್ಲಿದ್ದರು. ದೊರೆ ಮಹೇಂದ್ರವರ್ಮನು ಪುಲಿಕೇಶಿಯ ಪರಮಾಧಿಕಾರತ್ವವನ್ನು ಒಪ್ಪಿಕೊಳ್ಳದ ಕಾರಣ ಪುಲಿಕೇಶಿಯು ಆತನನ್ನು ಸೋಲಿಸಿದನು. ಉತ್ತರ ಭಾರತವನ್ನು ಆಳುತ್ತಿದ್ದ ಹರ್ಷವರ್ಧನನನ್ನು ನರ್ಮದಾ ನದಿಯ ದಂಡೆಯಲ್ಲಿ ತಡೆಗಟ್ಟಿ ಸೋಲಿಸಿ, ‘ದಕ್ಷಿಣಾ ಪಥೇಶ್ವರ’, ‘ತ್ರಿಸಾಗರಗಳಿಂದಾವೃತವಾದ ಪ್ರದೇಶದ ಅಧಿಪತಿ’ ಎಂಬ ಬಿರುದಾಂಕಿತನಾದನು.

ಇಮ್ಮಡಿ ಪುಲಿಕೇಶಿಗೆ ತನ್ನ ಚಕ್ರಾಧಿಪತ್ಯವೆಲ್ಲವನ್ನೂ ಒಂದೇ ಕೇಂದ್ರದಿಂದ ಆಳಲು ಸಾಧ್ಯವಾಗಲಿಲ್ಲ. ಆದುದರಿಂದ ತನ್ನ ತಮ್ಮನಾದ ಕುಬ್ಜ ವಿಷ್ಣುವರ್ಧನನನ್ನು ವೆಂಗಿ ಮತ್ತು ಜಯಸಿಂಹನನ್ನು ಗುಜರಾತ್ ಪ್ರಾಂತ್ಯದ ಅಧಿಕಾರಿಗಳನ್ನಾಗಿ ನೇಮಿಸಿದನು. ಮುಂದಿನ ವರ್ಷಗಳಲ್ಲಿ ಇದು ವೆಂಗಿಯ ಚಾಳುಕ್ಯರು ಎನ್ನುವ ಹೆಸರಿನಲ್ಲಿ ಸುಮಾರು ಐದು ಶತಮಾನಗಳ ಕಾಲ ರಾಜ್ಯಭಾರ ನಡೆಸಿತು.

 

ಹ್ಯೂಯೆನ್‍ತ್ಸಾಂಗನು ಚಾಳುಕ್ಯ ರಾಜಧಾನಿಗೆ ಭೇಟಿ ನೀಡಿದ್ದನು.

 

ಇಮ್ಮಡಿ ಪುಲಿಕೇಶಿ ಮತ್ತು ಚಾಳುಕ್ಯ ರಾಜ್ಯದ ಬಗ್ಗೆ ವಿವರಣೆಗಳನ್ನು ನೀಡಿದ್ದಾನೆ. ದೊರೆಯು ನ್ಯಾಯವಾದಿ ಹಾಗೂ ಕರುಣಾಳುವಾಗಿದ್ದನು. ಸೈನ್ಯವು ಶಿಸ್ತಿನಿಂದ ಕೂಡಿದ್ದು, ಸೈನಿಕರು ಮರಣಕ್ಕೆ ಹೆದರದೆ ಮೈಮರೆತು ಕಾದಾಡುವ ಯೋಧರಾಗಿದ್ದರು. ಪ್ರಜೆಗಳು ಸತ್ಯಪ್ರಿಯರಾಗಿದ್ದರು. ಸಂತೋಷಚಿತ್ತರು, ಸ್ವಾಭಿಮಾನಿಗಳು, ಸಂಪದ್ಭರಿತರೂ, ಗೌರವ ಪ್ರಿಯರು ಮತ್ತು ರಾಜನಿಷ್ಠರಾಗಿದ್ದರು. ರಾಜನಲ್ಲಿ ಅತ್ಯಂತ ಗೌರವ, ಅಂತೆಯೇ ರಾಜನಿಗೆ ಪ್ರಜೆಗಳಲ್ಲಿ ಅಪಾರ ಪ್ರೀತಿ ಇದ್ದಿತು ಎಂದು ಬರೆದಿದ್ದಾನೆ.

ಇಮ್ಮಡಿ ಪುಲಿಕೇಶಿಯು ಆಶಾವಾದಿ ಚಕ್ರವರ್ತಿ ಆಗಿದ್ದನು. ವಿದೇಶಿ ದೊರೆಗಳೊಂದಿಗೂ ಕೂಡ ಸ್ನೇಹಮಯ ಸಂಬಂಧಗಳನ್ನು ಈತನು ಹೊಂದಿದ್ದನು.

ಪರ್ಶಿಯನ್ ದೊರೆಯಾದ ಇಮ್ಮಡಿ ಖುಸ್ರುವಿನೊಡನೆ ರಾಯಭಾರಿ ಸಂಬಂಧಗಳನ್ನು ಹೊಂದಿದ್ದನೆಂದು ಅರಬ್ ಇತಿಹಾಸಕಾರರು ತಿಳಿಸುತ್ತಾರೆ. ಕೆಲವು ವರ್ಷಗಳ ನಂತರ ತನ್ನ ತಂದೆಯಾದ ಮಹೇಂದ್ರವರ್ಮನಿಗೆ ಉಂಟಾದ ಸೋಲಿಗೆ ಪಲ್ಲವರ ದೊರೆಯಾದ ಪ್ರಥಮ ನರಸಿಂಹವರ್ಮನು ಚಾಳುಕ್ಯರ ಮೇಲೆ ಸೇಡು ತೀರಿಸಿಕೊಂಡನು. ಚಾಳುಕ್ಯ ರಾಜ್ಯವನ್ನು ಆಕ್ರಮಿಸಿ ವಾತಾಪಿಯನ್ನು ವಶಪಡಿಸಿಕೊಂಡನು.

ಚಾಲುಕ್ಯರ ಕಡೆಯ ದೊರೆ ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರು ಈ ಸಾಮ್ರಾಜ್ಯವನ್ನು ಆಕ್ರಮಿಸಿದರು.

 

ಚಾಳುಕ್ಯರ ಕೊಡುಗೆಗಳು

 

ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಬೆಳೆಸಿ, ಪೋ ಷಿಸಿ, ರಕ್ಷಿಸಿ, ಧರ್ಮ, ಸಾಹಿತ್ಯ, ಕಲೆ, ವಾಸ್ತುಶಿಲ್ಪದಲ್ಲಿ ಅಗಾಧ ಕೊಡುಗೆ ನೀಡಿದವರು. ಈ ದೇಶಕ್ಕೆ ‘ಕರ್ನಾಟಕ’ ಎಂಬ ಹೆಸರು ಕೊಟ್ಟವರು ಇವರೇ.

 

ಕರ್ನಾಟಕ ಚರಿತ್ರೆಯಲ್ಲಿ ಬಾದಾಮಿ ಚಾಳುಕ್ಯರ ಆಳ್ವಿಕೆ ಅತ್ಯಂತ ಶ್ರೇಷ್ಠವೂ ವೈಭವಯುಕ್ತವೂ ಆದ ಒಂದು ಯುಗ.

 

ಈ ಯುಗವು ಸೈನಿಕ ಕ್ಷೇತ್ರದಲ್ಲಿ ಅಲ್ಲದೆ ಕಲೆ ಮತ್ತು ಸಾಹಿತ್ಯ ರಂಗಗಳಲ್ಲಿಯೂ ಹಾಗೆಯೇ ಗಮನಾರ್ಹವಾದುದು.

ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದರು. ರಾಜ ಸಕ್ರಿಯವಾಗಿ ಆಡಳಿತದಲ್ಲಿ ಭಾಗವಹಿಸುತ್ತಿದ್ದನು. ರಾಜ್ಯವನ್ನು ವಿಷಯ (ಜಿಲ್ಲೆ) ಎಂಬುದಾಗಿ ವಿಂಗಡಿಸಿ ವಿಷಯಾಧಿಪತಿಯು ನೋಡಿಕೊಳ್ಳುತ್ತಿದ್ದನು. ಗ್ರಾಮವು ಆಡಳಿತ ಘಟಕಗಳಲ್ಲಿ ಅತ್ಯಂತ ಚಿಕ್ಕದು. ಗ್ರಾಮ ಮುಖ್ಯಸ್ಥರು ಲೆಕ್ಕಪತ್ರಗಳ ವಹಿವಾಟನ್ನು ನೋಡಿಕೊಳ್ಳುತ್ತಿದ್ದರು. ಚಾಳುಕ್ಯರು ಶೈವ, ವೈಷ್ಣವ, ಜೈನ ಮುಂತಾದ ಎಲ್ಲ ಪಂಥಗಳ ಸಂಪ್ರದಾಯಗಳನ್ನು ಪ್ರೋತ್ಸಾಹಿಸಿದರು. ಜೈನ ದೇವಾಲಯಗಳ ನಿರ್ಮಾಣಕ್ಕೆ ಇವರು ಪ್ರೋತ್ಸಾಹ ನೀಡಿದರು. ಬೌದ್ಧ ವಿಹಾರಗಳೂ ಕೂಡ ಪ್ರೋತ್ಸಾಹಿಸಲ್ಪಟ್ಟವು.

ಬಾದಾಮಿಯ ಚಾಳುಕ್ಯರು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ಹಾಗೂ ಸಂಸ್ಕೃತ ಭಾಷೆಗಳು ಚೆನ್ನಾಗಿ ಬೆಳೆದವು. ಕನ್ನಡವು ಅವರ ದೇಶ ಭಾಷೆಯಾಗಿತ್ತು.

ಈ ಕಾಲದ ಕಾವ್ಯದಲ್ಲಿ ತ್ರಿಪದಿ ಶೈಲಿಯು ಬೆಳವಣಿಗೆಯಾಯಿತು. ಕನ್ನಡದಲ್ಲಿ ಕೃತಿಗಳು ಇಲ್ಲವಾದರೂ ಅನೇಕ ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಒಂದು ಪದ್ಯವು ತ್ರಿಪದಿ ಶೈಲಿಯಲ್ಲಿರುವುದು ಕಂಡುಬರುತ್ತದೆ. ಈ ಕಾಲದ ಸಂಸ್ಕøತ ವಿದ್ವಾಂಸರುಗಳೆಂದರೆ ರವಿಕೀರ್ತಿ, ವಿಜ್ಜಿಕ ಮತ್ತು ಅಕಳಂಕರು. ಎರಡನೇ ಪುಲಿಕೇಶಿಯ ಸೊಸೆಯಾದ ವಿಜ್ಜಿಕ ಎಂಬ ಕವಿಯತ್ರಿಯು ಬರೆದ ‘ಕೌಮುದೀಮಹೋತ್ಸವ’, ಶಿವಭಟ್ಟಾರಕನ ‘ಹರ ಪಾರ್ವತೀಯ’ ಮುಖ್ಯವಾದ ಸಂಸ್ಕøತ ನಾಟಕಗಳಾಗಿವೆ.

ಬಾದಾಮಿಯ ಚಾಳುಕ್ಯರು ಮಹಾನ್ ನಿರ್ಮಾಪಕರು ಹಾಗೂ ಕಲಾ ಪ್ರೇಮಿಗಳೂ ಆಗಿದ್ದರು. ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಸೊಗಸಾದ ಅತ್ಯುತ್ಕೃಷ್ಟವಾದ ದೇವಾಲಯಗಳನ್ನು ನಿರ್ಮಿಸಿದರು.

 

ಇವರು ‘ಚಾಳುಕ್ಯ ಶೈಲಿ’ ಎಂಬ ವಿಶಿಷ್ಟ ಶಿಲ್ಪಕಲಾ ಶೈಲಿಯನ್ನು ಭಾರತೀಯ ವಾಸ್ತುಶಿಲ್ಪದಲ್ಲಿ ಪ್ರಾರಂಭಿಸಿದರು.

 

ಬಾದಾಮಿಯಲ್ಲಿರುವ ಶಿಲೆಯಲ್ಲಿ ಕೊರೆದ ಗುಹಾಂತರ ದೇವಾಲಯಗಳನ್ನು ಇವರು ನಿರ್ಮಿಸಿದರು. ಅನೇಕ ಕಲಾವಿದರು ಮತ್ತು ಶಿಲ್ಪಕಾರರಿಗೆ ಇವರು ಪ್ರೋತ್ಸಾಹ ನೀಡಿದರು.

ಚಾಳುಕ್ಯ ಶೈಲಿಯ ಅತ್ಯುತ್ತಮ ದೇವಾಲಯಗಳು ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿವೆ. ದೇವಾಲಯ ವಾಸ್ತುಶಿಲ್ಪದ ತೊಟ್ಟಿಲುಗಳಲ್ಲಿ ಐಹೊಳೆಯು ಒಂದಾಗಿದೆ. ದೇವಾಲಯ ವಾಸ್ತುಶಿಲ್ಪದ ಕ್ರಮಸರಣಿಯ ವಿಕಾಸದಲ್ಲಿನ ಪ್ರಯೋಗಗಳನ್ನು ಇಲ್ಲಿ ನಡೆಸಲಾಯಿತು. ಈ ಶೈಲಿಯು ಪಟ್ಟದಕಲ್ಲಿನಲ್ಲಿ ಸಂಪೂರ್ಣ ವಿಕಾಸ ಹೊಂದಿತು. ಅಂತೆಯೇ ಅಲ್ಲಿ ಲೋಕೇಶ್ವರ (ವಿರೂಪಾಕ್ಷ) ಮತ್ತು ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ಮುಂತಾದ ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು.

ಬಾದಾಮಿಯ ಗುಹೆಗಳಲ್ಲಿರುವ ವಿಷ್ಣು, ವರಾಹ, ಹರಿಹರ, ಅರ್ಧನಾರೀಶ್ವರರ ಎತ್ತರದ ವಿಗ್ರಹಗಳು ಚಾಳುಕ್ಯರ ಕಲಾತ್ಮಕ ಸಾಧನೆಯ ಅತ್ಯುತ್ತಮ ಕುರುಹುಗಳಾಗಿವೆ. ಚಿತ್ರಕಲೆಗೂ ಇಲ್ಲಿ ಪ್ರೋತ್ಸಾಹ ಸಿಕ್ಕಿತು.

 

ಈ ಕಾಲದ ಅಜಂತ ಕಲೆಯು ಲೋಕ ವಿಖ್ಯಾತವಾದುದು.

 

You may also like...