ಗಂಗರು

ಗಂಗರು

ಗಂಗರಾಜ ವಂಶದ ಉನ್ನತಿ ಮತ್ತು ಅವನತಿ ಕರ್ನಾಟಕದ ಇತಿಹಾಸದ ಆದಿಭಾಗದ ಒಂದು ಮುಖ್ಯ ಅಧ್ಯಾಯವಾಗಿದೆ. ಗಂಗವಂಶದ ಸಂಸ್ಥಾಪಕರು ತಮ್ಮನ್ನು ಇಕ್ಷ್ವಾಕು ವಂಶದವರೆಂದು ಹೇಳಿಕೊಂಡರು. ಕುವಲಾಲ, ತಲಕಾಡು ಹಾಗೂ ಮಾನ್ಯಪುರ (ಈಗಿನ ಮಣ್ಣೆ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಗಳಿಂದ ರಾಜ್ಯವಾಳಿದರು.

 

ದಡಿಗನಿಂದ ಪ್ರಾರಂಭವಾದ ಗಂಗವಾಡಿ ರಾಜ್ಯವು ಸುಮಾರು 27 ಮಂದಿ ರಾಜರುಗಳಿಂದ ಆಳಲ್ಪಟ್ಟಿತು.

 

ದುರ್ವಿನೀತನು ಗಂಗರಸರಲ್ಲಿ ಪ್ರಸಿದ್ಧನಾದವನು.

ಅಪ್ರತಿಮ ವೀರ ಹಾಗೂ ವಿದ್ವಾಂಸ. ದೀರ್ಘಕಾಲ ಆಳಿದ ಇವನು ತನ್ನ ರಾಜ್ಯವನ್ನು ಬಲಪಡಿಸಿಕೊಳ್ಳಲು ಪುನ್ನಾಟವನ್ನು ಗೆದ್ದುಕೊಂಡನು. ಇವನು ಅನೇಕ ಕೆರೆಗಳನ್ನು ನೀರಾವರಿಗಾಗಿ ಕಟ್ಟಿಸಿದನೆಂದು ನಲ್ಲಾಳ ತಾಮ್ರ ಪಟಗಳಿಂದ ತಿಳಿದುಬರುತ್ತದೆ. ಈತನು ಸಾಹಿತ್ಯ ಪ್ರೇಮಿಯಾಗಿದ್ದನಲ್ಲದೆ ಸ್ವತಃ ಸಂಸ್ಕೃತ  ಮತ್ತು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾನೆ. ಗುಣಾಢ್ಯನ ವಡ್ಡಕಥಾ ಗ್ರಂಥವನ್ನು ಪ್ರಾಕೃತದಿಂದ ಸಂಸ್ಕೃತಕ್ಕೆ ಭಾಷಾಂತರಿಸಿದ್ದಾನೆ.

 

ಗಂಗರ ಕೊಡುಗೆಗಳು

ರಾಜನಿಗೆ ಸಹಾಯಕವಾಗಿ ಮಂತ್ರಾಲೋಚನೆ ಸಭೆಯಿತ್ತು. ಮಂತ್ರಿಗಳು ವಿವಿಧ ಆಡಳಿತ ಶಾಖೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರು. ಗ್ರಾಮಾಡಳಿತವು ಸುವ್ಯವಸ್ಥಿತವಾಗಿತ್ತು. ಗ್ರಾಮಸಭೆಯು ಭೂಕಂದಾಯ, ತೆರಿಗೆ, ನ್ಯಾಯ, ನೈರ್ಮಲ್ಯ, ರಕ್ಷಣೆಗಳನ್ನು ಗಮನಿಸುತ್ತಿದ್ದಿತು. ವ್ಯವಸಾಯವು ಮುಖ್ಯ ಕಸುಬಾಗಿದ್ದಿತು. ನೇಯ್ಗೆ, ಕಮ್ಮಾರಿಕೆ ಮುಂತಾದ ಕಸುಬುಗಳಿದ್ದವು. ಇತರ ರಾಷ್ಟ್ರಗಳೊಡನೆ ವ್ಯಾಪಾರ ಸಂಬಂಧವನ್ನಿಟ್ಟುಕೊಂಡಿದ್ದರು.

ಗಂಗರ ಕಾಲದ ಸಮಾಜ ಹಲವು ಪಂಗಡ ಜಾತಿಗಳಾಗಿ ವಿಭಜಿತವಾಗಿದ್ದರೂ ಪರಸ್ಪರಾವಲಂಬಿಗಳಾಗಿದ್ದರು. ಪಿತೃ ಪ್ರಧಾನ ಅವಿಭಕ್ತ ಕುಟುಂಬ ಪದ್ಧತಿ ಸಾಮಾನ್ಯವಾಗಿತ್ತು. ಸಮಾಜದಲ್ಲಿ ಸತ್ಯಶೀಲತೆ, ಸ್ವಾಮಿನಿಷ್ಠೆ, ಶೌರ್ಯ ಮತ್ತು ತಾಳ್ಮೆ ಎಂಬ ಸಾಮಾಜಿಕ ಮೌಲ್ಯಗಳು ಪ್ರಭಾವಿಯಾಗಿದ್ದವು.

ಚೈತ್ಯಾಲಯ, ದೇವಾಲಯ, ಮಠ ಹಾಗೂ ಅಗ್ರಹಾರಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದವು. ಉನ್ನತ ವಿದ್ಯಾಭ್ಯಾಸಕ್ಕೆ ಬ್ರಹ್ಮಪುರಿ ಮತ್ತು ಘಟಿಕ ಸ್ಥಾನಗಳಿದ್ದವು. ತಲಕಾಡು, ಶ್ರವಣಬೆಳಗೊಳ, ಬಂಕಾಪುರ ಮತ್ತು ಪೆರೂರುಗಳನ್ನು ಜ್ಞಾನಾರ್ಜನೆಯ ಕೇಂದ್ರಗಳೆಂದು ಹೆಸರಿಸಲಾಗಿದೆ.

ಗಂಗರು ಜೈನ ಮತಾವಲಂಬಿಗಳಾದುದರಿಂದ ಜೈನಮತವು ಅಭಿವೃದ್ಧಿಗೆ ಬಂದಿತು. ಪೂಜ್ಯಪಾದ, ವಜ್ರನಂದಿ, ಅಜಿತಸೇನ ಮುಂತಾದವರುಗಳಿಂದ ಈ ಧರ್ಮವು ಜನಪ್ರಿಯವಾಯಿತು. ಅಲ್ಲದೆ ಶ್ರವಣಬೆಳಗೊಳದಲ್ಲಿ 58 ಅಡಿ ಏಕಶಿಲಾ ಗೊಮ್ಮಟೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪನೆಗೊಳಿಸಿ ಅದನ್ನು ಅತ್ಯಂತ ಪ್ರಸಿದ್ಧ ಕೇಂದ್ರವನ್ನಾಗಿ ಮಾರ್ಪಡಿಸಿದರು. ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಗೊಮ್ಮಟೇಶ್ವರನಿಗೆ ಇಂದಿಗೂ ನಡೆಯುತ್ತಿರುವುದನ್ನು ನೀವು ಗಮನಿಸಿದ್ದೀರಲ್ಲವೇ ?

 

ಬಾಹುಬಲಿ – ಗೊಮ್ಮಟೇಶ್ವರ

ಶ್ರವಣಬೆಳಗೊಳದ ಗೊಮ್ಮಟೇಶ್ವರ (ಬಾಹುಬಲಿ) ಮೂರ್ತಿಯು ವಿರಕ್ತ ಶ್ರವಣಬೆಳಗೊಳದ ಗೊಮ್ಮಟೇಶ್ವರ ಜೀವನದ ಸಂಕೇತವಾಗಿದೆ. ನಾಲ್ಕನೇ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯನು ಇದನ್ನು ನಿರ್ಮಿಸಿದವನು. 100 ಜನ ಸಹೋದರರಲ್ಲಿ ಭರತ ಹಿರಿಯವ, ಬಾಹುಬಲಿ ಕಿರಿಯವ. ಭರತನಿಗೆ ರಾಜ್ಯಾಭಿಷೇಕವಾದ ಮೇಲೆ ಒಂದು ಚಕ್ರರತ್ನ ದೊರಕಿ ಎಲ್ಲಾ ರಾಜ್ಯಗಳನ್ನು ಗೆದ್ದು ಚಕ್ರಾಧಿಪತಿಯಾಗುತ್ತಾನೆ. ಅದಕ್ಕೂ ಮೊದಲು ಎಲ್ಲಾ ತಮ್ಮಂದಿರೂ ಅವನ ಅಧಿಪತ್ಯವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬಾಹುಬಲಿ ಒಪ್ಪದಿದ್ದಾಗ, ಯುದ್ಧಕ್ಕೆ ಅಣಿಯಾಗುತ್ತಾರೆ. ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧದಲ್ಲಿ ಭರತ ಸೋಲುತ್ತಾನೆ. ಮಲ್ಲಯುದ್ಧದ ಅಂತ್ಯದಲ್ಲಿ ಬಾಹುಬಲಿ ಭರತನನ್ನು ಚಕ್ರದಂತೆ ತಿರುಗಿಸಿ ಇನ್ನೇನು ಬಿಸಾಡಬೇಕು ಎನ್ನುವಷ್ಟರಲ್ಲಿ ಬಾಹುಬಲಿಯ ಮನದಲ್ಲಿ ವಿರಕ್ತಿ ಉಂಟಾಗಿ, ಅಣ್ಣನನ್ನು ಕೆಳಗಿಳಿಸಿ ನಮಸ್ಕಾರ ಮಾಡಿ ನಿರ್ವಾಣಕ್ಕೆ ಹೋಗಿ ನಿಂತೇ ತಪಸ್ಸು ಮಾಡುತ್ತಾನೆ. ಆದರೂ ಮುಕ್ತಿಯಾಗದಿದ್ದಾಗ, ಬಾಹುಬಲಿಯು ತನ್ನ ಅಣ್ಣನ ಸಾಮ್ರಾಜ್ಯದಲ್ಲಿ ನಿಂತು ತಪಸ್ಸು ಮಾಡುತ್ತಿರುವುದರಿಂದ ಅವನಿಗೆ ನಿರ್ವಾಣ ದೊರಕುತ್ತಿಲ್ಲವೆಂದು ತಿಳಿಯುತ್ತದೆ. ಆಗ ಭರತನೇ ಬಂದು ಬಾಹುಬಲಿಗೆ ಇಡೀ ಸಾಮ್ರಾಜ್ಯವೇ ಬಾಹುಬಲಿಯದೆಂದೂ, ಅದನ್ನು ಆಳುತ್ತಿರುವವನು ತಾನೆಂದು ತಿಳಿಸಿದಾಗ ಮೋಕ್ಷ ಲಭಿಸುತ್ತದೆ.

 

ಗಂಗರಾಜರು ಕಲೆ ಮತ್ತು ವಾಸ್ತುಶಿಲ್ಪಗಳಿಗೆ ಪ್ರೋತ್ಸಾಹ ನೀಡಿದ್ದರು. ಇವರು ಸುಂದರ ದೇವಾಲಯಗಳನ್ನು, ಬಸದಿಗಳನ್ನು ಕಟ್ಟಿಸಿದರು. ಮಣ್ಣೆಯಲ್ಲಿರುವ ಕಪಿಲೇಶ್ವರ ದೇವಸ್ಥಾನ, ತಲಕಾಡಿನ ಪಾತಾಳೇಶ್ವರ ಮತ್ತು ಮರುಳೇಶ್ವರ, ಕೋಲಾರದ ಕೋಲಾರಮ್ಮ, ಬೇಗೂರಿನ ನಾಗರೇಶ್ವರ, ಶ್ರವಣಬೆಳಗೊಳದ ಗೊಮ್ಮಟೇಶ್ವರ ಮುಂತಾದವು. ಗಂಗರ ವಿಶಿಷ್ಟ ಕೊಡುಗೆಯೆಂದರೆ ಎತ್ತರದ ಮಾನಸ್ತಂಭ ಮತ್ತು ಬ್ರಹ್ಮ ಮಾನಸ್ತಂಭಗಳು.

ಸಾಹಿತ್ಯಾಭಿಮಾನಿಗಳಾದ ಗಂಗರಾಜರು ಸಂಸ್ಕøತ, ಪ್ರಾಕೃತ ಮತ್ತು ಕನ್ನಡ ಭಾಷೆಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಗ್ರಂಥ ರಚನೆಗಳಾದುವು. ಇಮ್ಮಡಿ ಮಾಧವನು ‘ದತ್ತಕ ಸೂತ್ರ’ಕ್ಕೆ ಟಿಪ್ಪಣಿ ಬರೆದನು. ದುರ್ವಿನೀತನು ‘ಶಬ್ದಾವತಾರ’ ಸಂಸ್ಕೃತ ಕೃತಿಯನ್ನು ರಚಿಸಿದನಲ್ಲದೇ, ಗುಣಾಢ್ಯನ ‘ವಡ್ಡಕತೆ’ಯನ್ನು ಸಂಸ್ಕೃತಕ್ಕೆ ಅನುವಾದ ಮಾಡಿದನು. ಶ್ರೀ ಪುರುಷನು ‘ಗಜಶಾಸ್ತ್ರ’ವನ್ನು, ಎರಡನೇ ಶಿವಮಾಧವನು ‘ಗಜಾಷ್ಟಕ’ ಕನ್ನಡ ಕೃತಿಯನ್ನು ರಚಿಸಿದನು. ಕವಿ ಹೇಮಸೇನನು ‘ರಾಘವ ಪಾಂಡವೀಯ’ವನ್ನು, ವಾದೀಬಸಿಂಹನು ‘ಗದ್ಯ ಚಿಂತಾಮಣಿ’ ಮತ್ತು ‘ಷಾತ್ರ ಚೂಡಾಮಣಿ’ಯನ್ನು, ನೇಮಿಚಂದ್ರನು ‘ದ್ರವ್ಯಸಾರ ಸಂಗ್ರಹ’ವನ್ನು, ಚಾವುಂಡರಾಯನು ‘ಚಾವುಂಡ ಪುರಾಣ’ವನ್ನು ರಚಿಸಿ ಪ್ರಸಿದ್ಧರಾದರು.

You may also like...